ಸದ್ಯ ಭಾರತದಲ್ಲಿ ‘ಜಂಗಲಿ ರಮ್ಮಿ ಈ ‘ಆನ್‌ಲೈನ್ ಜೂಜಾಟದಂತಹ ಆಟವು ಹೆಚ್ಚುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಈ ಆನ್‌ಲೈನ್ ಆಟಕ್ಕೆ ‘ಕೌಶಲ್ಯದ ಆಟ’ವೆಂದು ಮಾನ್ಯತೆಯನ್ನು ನೀಡಿದೆ. ಆದುದರಿಂದ ಈ ಜೂಜಾಟದಂತಹ ಆಟ ‘ಇದು ಜೂಜಾಟವಲ್ಲ, ಎಂದು ಮುಕ್ತಾವಕಾಶವನ್ನು ಪಡೆದು
ಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ೮ ಕೋಟಿಗಿಂತ ಹೆಚ್ಚು ಜನರು ಜಂಗಲಿ ರಮ್ಮಿಯನ್ನು ಆಡುತ್ತಾರೆ. ದಿನದಿಂದ ದಿನಕ್ಕೆ ಈ ಆಟವನ್ನು ಆಡುವವರ ಸಂಖ್ಯೆ ಆಶ್ಚರ್ಯ ರೀತಿ ಯಲ್ಲಿ ಹೆಚ್ಚಾಗುತ್ತಿದೆ. ಅಕ್ಟೋಬರ್ ೧ ರಿಂದ ೩೧ ಈ ಒಂದು ತಿಂಗಳ ಅವಧಿಯಲ್ಲಿ ಈ ಆನ್‌ಲೈನ್ ಆಟದಿಂದ ೩೮ ಕೋಟಿಗೂ ಹೆಚ್ಚು ಬಹುಮಾನಗಳನ್ನು ವಿತರಿಸಲಾಗಿದೆ ಎಂದು ಈ ಆಪ್‌ನ ಜಾಲತಾಣದಲ್ಲಿ ನೀಡಲಾಗಿದೆ. ಇದಲ್ಲದೇ ದೀಪಾವಳಿಯ ಹಿನ್ನೆಲೆಯಲ್ಲಿ ೫ ಲಕ್ಷದಿಂದ ೨೫ ಲಕ್ಷ ರೂಪಾಯಿಗಳ ಬಹುಮಾನಸಹಿತ ಸ್ಪರ್ಧೆಗಳನ್ನು ಘೋಷಿಸಲಾಗಿದೆ. ಇದರಿಂದ ಮುಂದಿನ ಕೆಲ ಕಾಲಾವಧಿಯಲ್ಲಿ ಈ ಜೂಜಾಟದಂತಹ ಆಟವನ್ನು ಆಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಆಟದ ವ್ಯಾಪ್ತಿ ಹೀಗೆ ಬೆಳೆಯುತ್ತಾ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಅನೇಕ ಯುವಕರಿಗೆ ಈ ಜೂಜಾಟದ ವ್ಯಸನ ತಟ್ಟವುದು.
ಈ ಆಟವು ವೇಗವಾಗಿ ಬೆಳೆಯಲು ಕಾರಣವೆಂದರೆ ಪ್ರಸಿದ್ಧ ಕ್ರಿಕ್ರೆಟ್ ಕ್ರೀಡಾಪಟುಗಳನ್ನು, ಹಿಂದಿ ಮತ್ತು ಮರಾಠಿ ಚಲನಚಿತ್ರೋದ್ಯಮದ ಪ್ರಸಿದ್ಧ ಕಲಾವಿದರನ್ನು ಈ ‘ಜಂಗಲಿ ರಮ್ಮಿಯ ಜಾಹೀರಾತುಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಹಿಂದಿ ಚಲನಚಿತ್ರೋದ್ಯಮದ ಕಲಾವಿದರ ದೊಡ್ಡ ಪಾಲಿದೆ. ಯಾವುದಾದರೂ ಹಿಂದಿ ಚಲನಚಿತ್ರವು ಪ್ರಸಿದ್ಧಿ ಪಡೆದ ನಂತರ ಕೆಲವು ದಿನಗಳಲ್ಲಿಯೇ ಆ ಚಲನಚಿತ್ರದ ನಟ ಮತ್ತು ನಟಿಯರು ‘ಜಂಗಲಿ ರಮ್ಮಿಯ ಜಾಹೀರಾತಿನಲ್ಲಿ ಕಾಣಸಿಕೊಳ್ಳುತ್ತಾರೆ. ಇದರಿಂದ ಈ ಜೂಜಾಟದಂತಹ ಆಟದಿಂದ ಎಷ್ಟು ಹಣ ಸಂಗ್ರಹವಾಗುತ್ತಿದೆ ಎಂಬುದನ್ನು ಕಲ್ಪಿಸಬಹುದು. ಹೆಚ್ಚಿನ ಕಲಾವಿದರಿಗೆ ಕೋಟ್ಯಂತರ ರೂಪಾಯಿಗಳ ಸಂಭಾವನೆ ನೀಡಿ ಅವರನ್ನು ಜಾಹೀರಾತಿನಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಕಲಾವಿದರ ಕೋಟ್ಯಂತರ ಅಭಿಮಾನಿಗಳು ಅವರನ್ನು ಅನುಸರಿಸುತ್ತಾರೆ. ಇದರಿಂದ ಯುವಪೀಳಿಗೆ ಸ್ವಯಂಚಾಲಿತರಾಗಿ ‘ಜಂಗಲಿ ರಮ್ಮಿಯತ್ತ ಸೆಳೆಯಲ್ಪಡುತ್ತಿದೆ. ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿನ ಜೂಜಾಟದ ಅಂಕಿಅಂಶಗಳನ್ನು ಕದ್ದುಮುಚ್ಚಿ ನೋಡಲಾಗುತ್ತಿತ್ತು. ಹೆಚ್ಚು ಹಣ ಸಿಗುತ್ತಿದ್ದರೂ ಸಾಂಪ್ರದಾಯಿಕ ಪತ್ರಿಕೆಗಳು ಸಾರ್ವಜನಿಕ ಮುಜುಗುರದ ಭಯದಿಂದ ಜೂಜಾಟದ ಅಂಕಿಅಂಶಗಳನ್ನು ಪ್ರಕಟಿಸಲು ಹಿಂಜರಿಯುತ್ತಿದ್ದವು. ಪ್ರಸ್ತುತ ಯುವಪೀಳಿಗೆಯು ತಮ್ಮ ಆದರ್ಶವೆಂದು ತಿಳಿಯುವ ಪ್ರಮುಖ ಸಿನೆಮಾ ನಟರು ‘ಜಂಗಲಿ ರಮ್ಮಿಯಂತಹ ಜೂಜಾಟದಂತಹ ಆಟಕ್ಕೆ ಜನಪ್ರಿಯತೆ ಮತ್ತು ಪ್ರತಿಷ್ಠೆಯನ್ನು ದೊರಕಿಸಿ ಕೊಡುವ ಪಾಪವನ್ನು ಮಾಡುತ್ತಿದ್ದಾರೆ. ಇದರಿಂದ ಈ ಜೂಜಾಟದಂತಹ ‘ಜಂಗಲಿ ರಮ್ಮಿಯ ಜಾಹೀರಾತುಗಳು, ದಿನಪತ್ರಿಕೆಗಳು, ವಾರ್ತಾವಾಹಿನಿಗಳಿಗೆ ಸಾಮಾಜಿಕ ಮಾಧ್ಯಮಗಳಿಗೆ ನಿತ್ಯದ ಮಾತಾಗಿವೆ. ‘ಜಂಗಲಿ ರಮ್ಮಿ ಆಪ್’ ನ ಜಾಲತಾಣದಲ್ಲಿ ಅತ್ಯಧಿಕ ಮೊತ್ತದ ವಿಜೇತರ ಪ್ರತಿಕ್ರಿಯೆಗಳನ್ನು ಅವರ ಛಾಯಾಚಿತ್ರಗಳೊಂದಿಗೆ ಪ್ರಕಟಿಸಲಾಗುತ್ತದೆ. ಅವರು ಗೆದ್ದ ಮೊತ್ತ ಕೋಟ್ಯಂತರ ರೂಪಾಯಿ ಗಳಷ್ಟಿರುತ್ತದೆ. ಯುವಪೀಳಿಗೆಯು ‘ಜಂಗಲಿ ರಮ್ಮಿಯ’ ಕಡೆಗೆ ಆಕರ್ಷಿತರಾಗಲು ಇದೂ ಒಂದು ಕಾರಣವಾಗಿದೆ. ಇದರಿಂದ ಸದ್ಯದ ಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಷ್ಟೇ ಅಲ್ಲ, ಆದರೆ ಸರಕಾರಿ ಕಾರ್ಯಾಲಯಗಳಲ್ಲಿಯೂ ಬಿಡುವಿನ ಸಮಯದಲ್ಲಿ ಸಿಬ್ಬಂದಿಗಳು ‘ಜಂಗಲಿ ರಮ್ಮಿ ಆಡುವುದು ಕಂಡು ಬರುತ್ತದೆ. ಇದರಲ್ಲಿ ಪೊಲೀಸರೂ ಹಿಂದೆ ಉಳಿದಿಲ್ಲ. ‘ಜಂಗಲಿ ರಮ್ಮಿಯ ಜಾಹೀರಾತಿನ ಕೊನೆಗೆ ‘ಈ ಆಟವು ವ್ಯಸನವನ್ನುಂಟು ಮಾಡ ಬಹುದು. ಆದುದರಿಂದ ಜವಾಬ್ದಾರಿಯಿಂದ ಆಟವಾಡಿ’, ಎಂಬ ಟಿಪ್ಪಣಿಯನ್ನು ಬರೆಯಲಾಗುತ್ತದೆ. ಯಾವ ರೀತಿ ಸಿಗರೇಟ್ ಪಾಕೀಟಿನ ಮೇಲೆ ‘ಸಿಗರೇಟ್ ಸೇದುವುದರಿಂದ ಅರ್ಬುದ ರೋಗವಾಗಬಹುದು’, ಎಂದು ಛಾಯಾಚಿತ್ರದೊಂದಿಗೆ ಪ್ರಕಟಿಸ ಲಾಗುತ್ತದೆ, ಅದರಂತೆ ‘ಜಂಗಲಿ ರಮ್ಮಿಯ ಜಾಹೀರಾತಿನಲ್ಲಿ ‘ವ್ಯಸನಕಾರಿಯಾಗಬಹುದು’, ಎಂಬ ಔಪಚಾರಿಕತೆಯನ್ನು ತೋರಿಸಲಾಗುತ್ತದೆ. ಇದನ್ನು ನೋಡಿಯೂ ‘ಜಂಗಲಿ ರಮ್ಮಿಯನ್ನು ಆಡುವವರಿಗೆ ವ್ಯಸನವೇ ತಗಲಿರುತ್ತದೆ.
ಆದಾಯಕ್ಕಿಂತ ಭವಿಷ್ಯ ಮುಖ್ಯ !
‘ಜಂಗಲಿ ರಮ್ಮಿಯಲ್ಲಿ ತಕ್ಷಣ ಹಣ ಸಿಗುತ್ತದೆಯೆಂದಾದರೆ, ಅದರಲ್ಲಿ ಅಯೋಗ್ಯವೇನಿದೆ ?’, ಎಂದು ಕೆಲವರಿಗೆ ಅನಿಸ ಬಹುದು; ಆದರೆ ತ್ವರಿತವಾಗಿ ಸಿಗುವ ಹಣದಿಂದ ವ್ಯಕ್ತಿಯು ಅಡ್ಡ ದಾರಿಗೆ ಹೋಗಬಹುದಾದ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಸದ್ಯ ಈ ಜೂಜಾಟದಂತಹ ಆಟಕ್ಕೆ ತುತ್ತಾಗಿರುವ ನಾಗರಿಕರಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಆದುದರಿಂದ ದೇಶದ ಭಾವಿ ಪೀಳಿಗೆಯು ಇದಕ್ಕೆ ವ್ಯಸನಿಯಾಗುತ್ತಿದೆ ಎಂಬುದು ದೇಶಕ್ಕೆ ಇದು ದೊಡ್ಡ ಆಘಾತವಾಗಿದೆ. ಸದ್ಯದ ಸ್ಥಿತಿಯಲ್ಲಿ ೮ ಕೋಟಿ ಆಟಗಾರರಿದ್ದು ಈ ಸಂಖ್ಯೆ ಹೆಚ್ಚಾಗುತ್ತಿರುವ ರೀತಿಯನ್ನು ನೋಡಿದರೆ, ಬರುವ ಕೆಲವು ವರ್ಷಗಳಲ್ಲಿಯೇ ದೇಶದ ಕೋಟ್ಯವದಿ ಯುವಕ-ಯುವತಿಯರು ಈ ಆಟದಲ್ಲಿ ಸಿಲುಕುವ ಭಯವಿದೆ. ಒಂದು ಆನ್‌ಲೈನ್ ಜೂಜಾಟದ ಜಾಹೀರಾತಿನಲ್ಲಿ ಓರ್ವ ನಿರುದ್ಯೋಗಿ ಮಗನಿಗೆ ಅವನ ತಂದೆ ನೌಕರಿಯ ಬಗ್ಗೆ ಕೇಳಿದಾಗ, ಅವನು ‘ಆನ್‌ಲೈನ್ ಜೂಜಾಟದಿಂದ ಹಣವನ್ನು ಗಳಿಸುತ್ತಿದ್ದೇನೆ’, ಎಂದು ಹೇಳುತ್ತಾನೆ ಮತ್ತು ಅದನ್ನು ಕೇಳಿ ತಂದೆ ಸಂತೋಷಪಡುವುದನ್ನು ತೋರಿಸಲಾಗಿದೆ. ಇದರಿಂದ ಯುವಕರ ಕ್ರಿಯಾಶಕ್ತಿ ಈ ಜೂಜಾಟದಂತಹ ಆಟದಲ್ಲಿ ಖರ್ಚಾಗುತ್ತಿರುವುದು ಕಂಡು ಬರು ತ್ತಿದೆ. ಆದುದರಿಂದ ದೇಶದ ಪ್ರಗತಿಯಾಗುವಂತಹ ಧನಾರ್ಜನೆ ಇರಬೇಕು. ಜೂಜಿನಿಂದ ದೊರಕಿದ ಹಣವು ಹೇಗೆ ವ್ಯಕ್ತಿಯನ್ನು ಕೆಟ್ಟ ಮಾರ್ಗಕ್ಕೆ ಕೊಂಡೊಯ್ಯುತ್ತದೆಯೋ, ಅದೇ ರೀತಿ ಜೂಜಾಟದಿಂದ ದೊರಕಿದ ಆದಾಯವೂ ದೇಶವನ್ನು ಅವನತಿಗೆ ಕೊಂಡೊಯ್ಯುತ್ತದೆ. ಆದುದರಿಂದ ‘ಜಂಗಲಿ ರಮ್ಮಿಯಿಂದ ಅಪಾರ ಆದಾಯ ದೊರಕುತ್ತ್ತದೆಯೆಂದು, ಈ ಜೂಜಾಟದಂತಹ ಆಟಕ್ಕೆ ಮುಕ್ತಾವಕಾಶ ನೀಡುವುದು ಸಾಮಾಜಿಕ ದೃಷ್ಟಿಯಿಂದ ಅಪಾಯಕಾರಿಯಾಗಿದೆ.
ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಮದ್ಯ, ಜೂಜು, ಮಾದಕದ್ರವ್ಯಗಳು ಇತ್ಯಾದಿಗಳನ್ನು ತಡೆಯುವುದು ಸರಕಾರದ ನಿಲುವಾಗಬೇಕು. ಇತರ ವ್ಯವಹಾರಗಳಿಗೆ ಹೋಲಿಸಿದರೆ ಮದ್ಯದಂಗಡಿಗಳು, ಜೂಜಾಟಗಳಿಂದ ಬರುವ ಆದಾಯವು ಅನೇಕ ಪಟ್ಟು ಹೆಚ್ಚಿರುತ್ತದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಾಗ ಮದ್ಯ ಮಾರಾಟದಿಂದ ಆರ್ಥಿಕತೆಯನ್ನು ಉಳಿಸಲಾಯಿತು ಎಂಬ ಪ್ರಚಾರವನ್ನು ಮಾಡ ಲಾಯಿತು. ಪ್ರಸ್ತುತ ಮದ್ಯ ಮಾರಾಟವನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳಲ್ಲಿ ಸ್ವತಂತ್ರ ಅಬಕಾರಿ ಇಲಾಖೆಗಳನ್ನು ಸ್ಥಾಪಿಸಲಾಗಿದೆ. ಈ ವಿಭಾಗದ ಕೆಲಸ ಮದ್ಯ ಮಾರಾಟದ ಮೇಲಿನ ತೆರಿಗೆ ವಸೂಲಿ, ತೆರಿಗೆ ಸಂಗ್ರಹಿಸುವುದು, ಅಕ್ರಮಗಳನ್ನು ತಡೆಗಟ್ಟುವುದು ಇವುಗಳ ಮಟ್ಟಿಗೆ ಸೀಮಿತವಾಗಿರುವುದು ಆವಶ್ಯಕವಾಗಿತ್ತು. ಆದರೆ ಪ್ರಸ್ತುತ ಈ ಇಲಾಖೆಯು ಮದ್ಯದಿಂದ ಹೆಚ್ಚೆಚ್ಚು ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಮದ್ಯದಿಂದ ಬರುವ ಆದಾಯವನ್ನು ಅಭಿವೃದ್ಧಿಯ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ. ಅಭಿವೃದ್ಧಿ ಇನ್ನೂ ನಡೆಯುತ್ತಿದೆ; ಆದರೆ ನೈತಿಕತೆ ಉಳಿದಿಲ್ಲ ಮತ್ತು ನೈತಿಕತೆ ಇಲ್ಲದ ಅಭಿವೃದ್ಧಿ ಸಮಾಜವನ್ನು ಯಾಂತ್ರಿಕತೆಯತ್ತ ಕೊಂಡೊಯ್ಯುತ್ತಿದೆ. ಆದುದರಿಂದ ಸರಕಾರ ಆದಾಯದ ಹಿಂದೆ ಬೀಳದೇ ಜೂಜಾಟದಂತಹ ‘ಜಂಗಲಿ ರಮ್ಮಿಯಂತಹ ಆಟವನ್ನು ಸಕಾಲದಲ್ಲಿ ನಿಯಂತ್ರಿಸಬೇಕು. ಅದಕ್ಕಾಗಿ ಕಾನೂನಿನಲ್ಲಿ ಆವಶ್ಯಕ ಬದಲಾವಣೆಯನ್ನು ಮಾಡ
ಬೇಕು. ಕೊನೆಗೆ ನೈತಿಕತೆ ಉಳಿದರೆ, ಆರ್ಥಿಕ ಪ್ರಗತಿಗೆ ಒಂದು
ಅರ್ಥ ಉಳಿಯುತ್ತದೆ. ಪತಿವ್ರತೆಯಾಗಿ ಸ್ತ್ರೀತ್ವದ ಜೋಪಾಸನೆಯು ಮಹಿಳೆಯನ್ನು ಗೌರವಕ್ಕೆ ಅರ್ಹವಾಗಿಸುತ್ತದೆ. ಹಾಗಾಗಿ ಆನ್‌ಲೈನ್ ರಮ್ಮಿಯಂತಹ ವ್ಯಭಿಚಾರಿ ಮಾರ್ಗವನ್ನು ಅವಲಂಬಿಸಿಕೊಂಡು ಧನಾರ್ಜನೆಯ ಮಾರ್ಗವನ್ನು ದುರ್ಬಳಕೆ ಮಾಡಿಕೊಳ್ಳುವ ಬದಲು ಶ್ರಮವಹಿಸಿ ದುಡಿಯಲು ಮತ್ತು ತಮ್ಮ ಬುದ್ಧಿವಂತಿಕೆ ಯನ್ನು ಸಮಾಜ ಮತ್ತು ರಾಷ್ಟ್ರದ ಕಾರ್ಯಕ್ಕಾಗಿ ವಿನಿಯೋಗಿಸಲು ಯುವಕರನ್ನು ಪ್ರೋತ್ಸಾಹಿಸುವುದು ಪೋಷಕರಾದ ಸರಕಾರದ ಜವಾಬ್ದಾರಿಯಾಗಿದೆ. ಕೊನೆಗೆ ‘ಜಂಗಲಿ ರಮ್ಮಿಯಂತಹ ಆನ್‌ಲೈನ್ ಜೂಜಾಟದಿಂದ ಸಮಾಜವು ರೂಪುಗೊಳ್ಳುವುದೋ, ಅಥವಾ ಹಾಳಾಗುವುದೋ ? ಎಂಬ ವಿಚಾರವನ್ನು ಸರಕಾರ ಮಾಡಬೇಕು. ಆದಾಯಕ್ಕಿಂತ ಸುಸಂಸ್ಕೃತ ಸಮಾಜ ರೂಪುಗೊಳ್ಳುವುದು ಮಹತ್ವದ್ದಾಗಿದೆ, ಎಂಬುದನ್ನು ಸರಕಾರ ಸಕಾಲದಲ್ಲಿ ಗಮನದಲ್ಲಿಡಬೇಕು ಮತ್ತು ‘ಜಂಗಲಿ ರಮ್ಮಿಯಂತಹ ಆನ್‌ಲೈನ್ ಜೂಜಾಟವನ್ನು ಸಕಾಲದಲ್ಲಿ ನಿಯಂತ್ರಿಸಬೇಕು !