ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಪ್ರತಿಭಟನೆಗಳಿಗೆ ಅವಕಾಶ!
ಮುಂಬಯಿ – ಆಜಾದ ಮೈದಾನದಲ್ಲಿ ಮೆರವಣಿಗೆಗಳು, ಧರಣಿ, ಪ್ರತಿಭಟನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಅಂತಿಮ ನಿಯಮಗಳನ್ನು ಪ್ರಕಟಿಸಿದೆ. ಅದರಂತೆ, ಒಂದು ಬಾರಿಗೆ ಒಂದು ದಿನ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದು, ಅದೂ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ. ಈ ನಿಯಮಗಳನ್ನು ಏಪ್ರಿಲ್ ಎರಡನೇ ವಾರದಲ್ಲಿ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು.
ನಿಯಮಗಳು ಈ ಕೆಳಗಿನಂತಿವೆ
1. ರಸ್ತೆಗಳಲ್ಲಿ ಮೆರವಣಿಗೆ ನಡೆಸುವುದು, ಸಂಚಾರ ವ್ಯವಸ್ಥೆಗೆ ಅಡ್ಡಿಪಡಿಸುತ್ತಾ ಆಜಾದ ಮೈದಾನದತ್ತ ಹಾಗೂ ಆಜಾದ ಮೈದಾನದಿಂದ ಇತರೆಡೆ ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗುವುದು.
2. ಪ್ರತಿಭಟನೆ ಅಥವಾ ಸಭೆಯ ಆಯೋಜಕರಿಗೆ ಗರಿಷ್ಠ 5 ಸಾವಿರ ಜನರನ್ನು ಒಟ್ಟುಗೂಡಿಸಲು ಅವಕಾಶವಿರುತ್ತದೆ.
3. ಕಾರ್ಯಕ್ರಮದ ಅವಧಿಯುದ್ದಕ್ಕೂ ಆಯೋಜಕರು ಆಜಾದ ಮೈದಾನದ ಗೊತ್ತುಪಡಿಸಿದ ಪ್ರದೇಶದಲ್ಲಿ ಹಾಜರಿರುವುದು ಕಡ್ಡಾಯವಾಗಿರುತ್ತದೆ.
4. ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ಅಥವಾ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದ ಸೂಚನೆಗಳನ್ನು ಪಾಲಿಸದಿದ್ದರೆ, ಆಯೋಜಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
5. ಪ್ರತಿಭಟನೆಯಲ್ಲಿ ಭಾಗವಹಿಸುವವರು 9 x 6 ಅಡಿ ಎತ್ತರದ ಧ್ವಜಗಳನ್ನು, ಗರಿಷ್ಠ ಎರಡು ಅಡಿ ಎತ್ತರದ ಕಂಬದ ಮೇಲೆ ಅಳವಡಿಸಲಾದ ಫಲಕಗಳನ್ನು ತರಲು ಅನುಮತಿಸಲಾಗುವುದು.
6. ಸಭೆಗಳಲ್ಲಿ ವಿವಿಧ ಸಮುದಾಯಗಳು ಮತ್ತು ಗುಂಪುಗಳ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಪ್ರಚೋದನಕಾರಿ ಭಾಷಣಗಳು ಮತ್ತು ಸಾಮರಸ್ಯದ ವಾತಾವರಣವನ್ನು ಭಂಗಗೊಳಿಸುವ ಭಾಷೆಯ ಬಳಕೆಯನ್ನು ನಿಷೇಧಿಸಲಾಗುವುದು.
7. ಪ್ರತಿಭಟನೆಯಲ್ಲಿ ಭಾಗವಹಿಸುವವರು ಕೋಲುಗಳು, ಕತ್ತಿಗಳು, ಬಂದೂಕುಗಳು ಮತ್ತು ಸುಡುವ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
8. ಟ್ರ್ಯಾಕ್ಟರ್‌ಗಳು, ಎತ್ತಿನ ಬಂಡಿಗಳು, ಸೈಕಲ್ ರಿಕ್ಷಾಗಳು, ಕೈಗಾಡಿಗಳು ಮತ್ತು ಭಾರೀ ವಾಹನಗಳನ್ನು ನಿಷೇಧಿಸಲಾಗಿದೆ.