ಅಪಹೃತ ಹಡಗನ್ನು ಭಾರತೀಯ ನೌಕಾದಳ ಬಿಡುಗಡೆಗೊಳಿಸಿದ್ದಕ್ಕೆ ಬಲ್ಗೇರಿಯಾ ರಾಷ್ಟ್ರಪತಿಗಳಿಂದ ಕೃತಜ್ಞತೆ ಸಲ್ಲಿಕೆ !

ನವದೆಹಲಿ – ಭಾರತೀಯ ನೌಕಾದಳದವರು ಏಡನ್ ಕೊಲ್ಲಿಯಲ್ಲಿ ಬಲ್ಗೇರಿಯಾದ ವ್ಯಾಪಾರಿ ಹಡಗನ್ನು ಕಡಲ್ಗಳ್ಳರಿಂದ ಬಿಡುಗಡೆಗೊಳಿಸಿದ್ದರು. ಇದಕ್ಕೆ ಬಲ್ಗೇರಿಯಾದ ರಾಷ್ಟ್ರಪತಿ ರುಮೆನ ರಾದೇವ ಅವರು ಭಾರತೀಯ ನೌಕಾದಳ ಮತ್ತು ಪ್ರಧಾನಮಂತ್ರಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಹಡಗಿನಲ್ಲಿ ಬಲ್ಗೇರಿಯಾದ 7 ನಾಗರಿಕರು ಕೆಲಸ ಮಾಡುತ್ತಿದ್ದರು. 3 ತಿಂಗಳ ಹಿಂದೆ ಈ ಹಡಗನ್ನು ಅಪಹರಿಸಲಾಗಿತ್ತು.

ಭಾರತವು ಕಡಲ್ಗಳ್ಳರು ಮತ್ತು ಭಯೋತ್ಪಾದಕರ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಲಿದೆ! – ಪ್ರಧಾನಮಂತ್ರಿ ಮೋದಿ

ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ನಾವು ನಿಮ್ಮ ಸಂದೇಶವನ್ನು ಪ್ರಶಂಸಿಸುತ್ತೇವೆ. ಹಡಗಿನಲ್ಲಿದ್ದ ಎಲ್ಲಾ ಉದ್ಯೋಗಿಗಳು ಸುರಕ್ಷಿತರಾಗಿದ್ದಾರೆ ಮತ್ತು ಅವರು ಆದಷ್ಟು ಬೇಗನೆ ತಮ್ಮ ಮನೆಗಳಿಗೆ ಮರಳುತ್ತಾರೆ ಎಂಬುದು ನನಗೆ ಸಂತೋಷವಾಗಿದೆ. ಹಿಂದೂ ಮಹಾಸಾಗರದ ಕಡಲ್ಗಳ್ಳರು ಮತ್ತು ಭಯೋತ್ಪಾದಕರ ವಿರುದ್ಧ ಭಾರತ ತನ್ನ ಹೋರಾಟ ಮುಂದುವರಿಸಲಿದೆ ಎಂದು ಅವರು ಹೇಳಿದರು.

ಭಾರತೀಯ ಸೇನೆಯಿಂದಾಗಿ ಹಡಗಿನಲ್ಲಿದ್ದ ಎಲ್ಲಾ ಉದ್ಯೋಗಿಗಳು ಸುರಕ್ಷಿತ

ಬಲ್ಗೇರಿಯಾದ ವಿದೇಶಾಂಗ ಸಚಿವೆ ಮಾರಿಯಾ ಗೇಬ್ರಿಯಲ್ ಅವರು ಭಾರತೀಯ ರಾಯಭಾರಿ ಸಂಜಯ ರಾಣಾ ಅವರನ್ನು ಭೇಟಿಯಾದರು. ಮಾರಿಯಾ ಅವರು ಭಾರತದ ಈ ಕಾರ್ಯಾಚರಣೆಗಾಗಿ ನೌಕಾದಳಕ್ಕೆ ಕೃತಜ್ಞತೆ ಅರ್ಪಿಸಿದರು. ‘ಎಕ್ಸ್’ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಮಾರಿಯಾ, ಭಾರತೀಯ ನೌಕಾದಳದಿಂದಾಗಿಯೇ ಹಡಗಿನಲ್ಲಿದ್ದ ಎಲ್ಲ ಉದ್ಯೋಗಿಗಳು ಸುರಕ್ಷಿತರಾಗಿದ್ದಾರೆ. ಅವರು ಶೀಘ್ರದಲ್ಲಿಯೇ ಸ್ವದೇಶಕ್ಕೆ ಮರಳುವರು ಎಂದು ಬರೆದಿದ್ದಾರೆ.

ಮಾರಿಯಾ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು, ‘ಸ್ನೇಹಿತರು ಇರುವುದೇ ಇದಕ್ಕಾಗಿ(ಸಹಾಯ ಮಾಡಲು)’ ಎಂದು ಬರೆದಿದ್ದಾರೆ