ವಕ್ಫ್ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸಿ; ಸರಕಾರ ಸ್ವಾಧೀನಪಡಿಸಿಕೊಂಡ ದೇವಾಲಯಗಳನ್ನು ಮುಕ್ತಗೊಳಿಸಿ !

  • ಮಹಾಕುಂಭಮೇಳದಲ್ಲಿ ಅಖಿಲ ಭಾರತ ಸಂತರ ಸಮಿತಿಯು ಸರ್ವಾನುಮತದಿಂದ ಆಗ್ರಹ !

  • ದೇಶಾದ್ಯಂತ 167 ಸಂಪ್ರದಾಯಗಳನ್ನು ಪ್ರತಿನಿಧಿಸುವ ಸಮಿತಿ !

ಪ್ರಯಾಗರಾಜ್ (ಉತ್ತರ ಪ್ರದೇಶ), ಜನವರಿ 22 (ಸುದ್ದಿ.) – ಮಹಾಕುಂಭ ಮೇಳದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಸಂತರ ಸಮಿತಿಯ ಸಭೆಯಲ್ಲಿ ವಕ್ಫ್ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸುವುದು ಮತ್ತು ಸರಕಾರವು ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಹಿಂದೂ ಧಾರ್ಮಿಕ ಸ್ಥಳಗಳನ್ನು ತಕ್ಷಣ ಮುಕ್ತಗೊಳಿಸುವಂತಹ ಪ್ರಮುಖ ಬೇಡಿಕೆಗಳನ್ನು ಸರ್ವಾನುಮತದಿಂದ ಮಾಡಲಾಯಿತು. ಸಮಿತಿಯ ರಾಷ್ಟ್ರೀಯ ಅಧ್ಯಕ್ಷರ ಜಗದ್ಗುರು ಸ್ವಾಮಿ ಅವಿಚಲ ದೇವಾಚಾರ್ಯ ಮಹಾರಾಜ್ ನೇತೃತ್ವದ ಕೇಂದ್ರ ಸಮಿತಿಯ ಕಾರ್ಯನಿರ್ವಹಣೆಯನ್ನು ಮುಂದುವರಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಮಿತಿಯು ಮುಂದಿನ 4 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಈ ಸಭೆಯಲ್ಲಿ ಅಖಿಲ ಭಾರತ ಸಂತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಮಹಾರಾಜ್, ಸಂಯುಕ್ತ ಪ್ರಧಾನ ಕಾರ್ಯದರ್ಶಿ ರಾಧೆ ರಾಧೆ ಬಾಬಾ, ಖಜಾಂಚಿ ಮಹಾಮಂಡಲೇಶ್ವರ ಜನಾರ್ದನ ಹರಿಜಿ ಮಹಾರಾಜ್ ಹಾಗೂ ಎಲ್ಲಾ ರಾಜ್ಯದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಸಹಿತ ದೇಶಾದ್ಯಂತದ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಅಖಿಲ ಭಾರತ ಸಂತ ಸಮಿತಿಯು ದೇಶದ 167 ಸಂಪ್ರದಾಯಗಳೊಂದಿಗೆ ಸಂಬಂಧ ಹೊಂದಿದೆ.

ಈ ಸಭೆಯ ಕುರಿತು ಹೆಚ್ಚಿನ ಮಾಹಿತಿ ನೀಡುತ್ತಾ ಜಗದ್ಗುರು ಸ್ವಾಮಿ ಅವಿಚಲ ದೇವಾಚಾರ್ಯ ಮಹಾರಾಜ್ ಇವರು, “ಕೆಲವು ರಾಜಕೀಯ ಪಕ್ಷಗಳು ಭಾಷೆ, ಪ್ರದೇಶ ಮತ್ತು ಜಾತಿಯ ಆಧಾರದ ಮೇಲೆ ಭಾರತವನ್ನು ವಿಭಜಿಸಲು ಪಿತೂರಿ ನಡೆಸುತ್ತಿವೆ”. ಅಖಿಲ ಭಾರತೀಯ ಸಂತ ಸಮಿತಿಯು ಉತ್ತರ ಮತ್ತು ದಕ್ಷಿಣ ಭಾರತದ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತದೆ. ಈ ಸಂತರ ಸಮ್ಮೇಳನದಲ್ಲಿ ದಕ್ಷಿಣ ಭಾರತದ ಸಂತರು ಸಹ ಇದ್ದಾರೆ. ಭಾರತದಾದ್ಯಂತ ಸಂತರನ್ನು ಸಂಘಟಿಸುವುದು ಅವಶ್ಯಕವಾಗಿದೆ. ಅಖಾಡವು ಪಶ್ಚಿಮ ಭಾರತವನ್ನು ತಲುಪಿತು; ಆದರೆ ದಕ್ಷಿಣ ಭಾರತದ ಹಿಂದೂಗಳಲ್ಲಿ ಧರ್ಮದ ಬಗ್ಗೆ ನಿರೀಕ್ಷಿತ ಅರಿವು ಮೂಡಿಲ್ಲ. ಮೊಘಲರು ಉತ್ತರ ಭಾರತದಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಾಶಪಡಿಸಿದರು. ಆದ್ದರಿಂದ, ಅಲ್ಲಿನ ಹಿಂದೂಗಳು ಸಂಘಟಿತರಾದರು. ಆದರೆ ದಕ್ಷಿಣ ಭಾರತದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳು ಸುರಕ್ಷಿತವಾಗಿವೆ. ಇದರಿಂದಾಗಿಯೇ ದಕ್ಷಿಣ ಭಾರತದ ಹಿಂದೂಗಳು ಸಂಘಟನೆಯಿಂದ ಪ್ರತ್ಯೇಕವಾಗಿ ಉಳಿದರು. ಕೆಲವರು ಭಾರತವನ್ನು ‘ಉತ್ತರ ಭಾರತ’ ಮತ್ತು ‘ದಕ್ಷಿಣ ಭಾರತ’ ಎಂದು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ, ಅಖಿಲ ಭಾರತೀಯ ಸಂತರ ಸಮಿತಿಯ ಉತ್ತರ ಭಾರತದಲ್ಲಿನ ಸಂತರು ದಕ್ಷಿಣ ಭಾರತಕ್ಕೆ ಹೋಗುತ್ತಾರೆ ಮತ್ತು ದಕ್ಷಿಣ ಭಾರತದಿಂದ ಬಂದ ಸಂತರು ಉತ್ತರ ಭಾರತಕ್ಕೆ ಹೋಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಾರೆ.” ಎಂದು ಹೇಳಿದರು.

ವಕ್ಫ್ ಕಾಯ್ದೆಯನ್ನು ತಕ್ಷಣ ರದ್ದುಗೊಳಿಸಬೇಕು ! – ಜಗದ್ಗುರು ಸ್ವಾಮಿ ಅವಿಚಲ ದೇವಾಚಾರ್ಯ ಮಹಾರಾಜ್, ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ಸಂತ ಸಮಿತಿ

ವಕ್ಫ್ ಕಾಯ್ದೆಯ ಮೂಲಕ ಹಿಂದೂಗಳು ಮತ್ತು ಸರಕಾರಕ್ಕೆ ಸೇರಿದ ಲಕ್ಷಾಂತರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ವಕ್ಫ್ ಕಾಯ್ದೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಈ ಕಾಯ್ದೆಯಡಿ ವಶಪಡಿಸಿಕೊಂಡ ಭೂಮಿಯನ್ನು ತಕ್ಷಣವೇ ಮುಕ್ತ ಮಾಡಬೇಕೆಂದು ಅಖಿಲ ಭಾರತ ಸಂತರ ಸಮಿತಿ ಒತ್ತಾಯಿಸಿದೆ. ನರಸಿಂಹರಾವ್ ಪ್ರಧಾನಿಯಾಗಿದ್ದ ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ’ ಮೂಲಕ ಹಿಂದೂಗಳ ದೇವಾಲಯಗಳ ಮೇಲಿನ ಅತಿಕ್ರಮಣಗಳನ್ನು ಹಾಗೇ ಇಡಲಾಗಿದೆ. ಈ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು. ಇದಕ್ಕಾಗಿ ಅಖಿಲ ಭಾರತೀಯ ಸಂತರ ಸಮಿತಿ ಕಾನೂನು ಹೋರಾಟ ನಡೆಸುತ್ತಿದೆ.

ಎಲ್ಲಾ ಸಂತರು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸುತ್ತಾರೆ !

ಎಲ್ಲಾ ಸಂತರು ಭಾರತ ಹಿಂದೂ ರಾಷ್ಟ್ರವಾಗಬೇಕೆಂದು ಒತ್ತಾಯಿಸುತ್ತಾರೆ. ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಅದಕ್ಕೂ ಮುನ್ನ ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ವಿವಿಧ ಜಿಹಾದ್‌ಗಳನ್ನು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು, ಹಿಂದೂಗಳಿಗೆ ಸಂಸ್ಕೃತಿಯ ಮಹತ್ವದ ಬಗ್ಗೆ ತಿಳಿಸುವುದು ಅವಶ್ಯಕವಾಗಿದೆ. ಈ ಕಾರ್ಯವನ್ನು ಸಂತರು ಮಾಡಬೇಕು ಎಂದು ಪೂ. ಅವಿಚಲ ದೇವಾಚಾರ್ಯ ಮಹಾರಾಜರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಲು ಪ್ರಸ್ತಾವನೆ !

ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾಕುಂಭವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮತ್ತು ಸಂತರನ್ನು ಒಟ್ಟುಗೂಡಿಸುವಲ್ಲಿ ಅವರ ಸಹಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸುವ ನಿರ್ಣಯವನ್ನು ಅಖಿಲ ಭಾರತೀಯ ಸಂತ ಸಮಿತಿಯ ಈ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.