ಎಲ್ಲಾ ಧರ್ಮಗಳ ಧಾರ್ಮಿಕ ಆಸ್ತಿಗಳ ನಿರ್ವಹಣೆಗೆ ಒಂದೇ ಕಾನೂನನ್ನು ರಚಿಸಿ ! – ವಿನೋದ್ ಬನ್ಸಾಲ್, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ

ವಕ್ಫ್ ಕಾನೂನಿನ ಜಂಟಿ ಸಂಸದೀಯ ಸಮಿತಿಗೆ ವಿಶ್ವ ಹಿಂದೂ ಪರಿಷತ್ತಿನ ಸೂಚನೆ !

ವಿನೋದ್ ಬನ್ಸಾಲ್

ನವದೆಹಲಿ – ವಕ್ಫ್ ತಿದ್ದುಪಡಿ ಕಾಯ್ದೆಯ ವಿಚಾರ ಮಾಡಲು ರಚಿಸಲಾದ ಜಂಟಿ ಸಂಸದೀಯ ಸಮಿತಿಗೆ (‘ಜೆಪಿಸಿ’) ಬರೆದ ಪತ್ರದಲ್ಲಿ, ವಿಶ್ವ ಹಿಂದೂ ಪರಿಷತ್, ಮುಸ್ಲಿಮರಿಗೆ ಮಾತ್ರವಲ್ಲದೆ, ದೇಶದಲ್ಲಿರುವ ಎಲ್ಲಾ ಧರ್ಮಗಳ ಧಾರ್ಮಿಕ ಆಸ್ತಿಗಳ ನಿರ್ವಹಣೆಗೆ ಒಂದೇ ಕಾನೂನನ್ನು ಜಾರಿಗೆ ತರುವಂತೆ ಸೂಚಿಸಿದೆ. ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಜಂಟಿ ಸಂಸದೀಯ ಸಮಿತಿಗೆ ಬರೆದ ಪತ್ರದಲ್ಲಿ, ವಿಹಿಂಪ,

1. ‘ವಕ್ಫ್’ ಎಂದರೆ ಪವಿತ್ರ, ಧಾರ್ಮಿಕ ಅಥವಾ ದತ್ತಿ ಎಂದು ಪರಿಗಣಿಸಲಾದ ಯಾವುದೇ ಸ್ಥಿರ ಅಥವಾ ಚರ ಆಸ್ತಿಯನ್ನು ಅಲ್ಲಾಹನ ಚರಣಗಳಿಗೆ ಶಾಶ್ವತವಾಗಿ ಸಮರ್ಪಿಸುವುದು. ಯಾವುದೇ ಆಸ್ತಿಯನ್ನು ಈ ರೀತಿ ಸಮರ್ಪಿಸಿದರೆ, ಅದು ಸರ್ವಶಕ್ತ ದೇವರ ಆಸ್ತಿಯಾಗುತ್ತದೆ ಮತ್ತು ಅವನಲ್ಲಿ ಉಳಿಯುತ್ತದೆ.

2. ಹಿಂದೂಗಳು ತಮ್ಮ ದೇವಾಲಯಗಳ ನಿರ್ವಹಣೆಗಾಗಿ ಮತ್ತು ಧಾರ್ಮಿಕ ಅಥವಾ ದತ್ತಿಗಾಗಿ ದೇವರುಗಳಿಗೆ ಸ್ಥಿರ ಅಥವಾ ಚರ ಆಸ್ತಿಯನ್ನು ಅರ್ಪಿಸುತ್ತಾರೆ.

3. ಕ್ರೈಸ್ತರು, ಬೌದ್ಧರು, ಜೈನರು ಮತ್ತು ಸಿಖ್ಖರು ಸೇರಿದಂತೆ ಇತರ ಧರ್ಮಗಳ ಅನುಯಾಯಿಗಳು ತಮ್ಮ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಎಂದು ಕರೆಯಲ್ಪಡುವ ಉದ್ದೇಶಗಳಿಗಾಗಿ ಅರ್ಪಿಸುತ್ತಾರೆ.

4. ಭಾರತದ ಸಂವಿಧಾನದ 44ನೇ ವಿಧಿಯಲ್ಲಿ, ಇಡೀ ಭಾರತದ ನಾಗರಿಕರಿಗೆ ‘ಸಮಾನ ನಾಗರಿಕ ಸಂಹಿತೆ’ಯನ್ನು ಸುರಕ್ಷಿತವಾಗಿರಿಸುವ ವ್ಯವಸ್ಥೆ ಒದಗಿಸುತ್ತದೆ.

5. ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ಧಾರ್ಮಿಕ ಮತ್ತು ದತ್ತಿ ದೇಣಿಗೆಗಳ ಕುರಿತು ಸಮಾನ ಕಾನೂನು ಇರಬೇಕೇ ಎಂದು ಪರಿಗಣಿಸುವ ಸಮಯ ಇಂದು ಬಂದಿದೆ. ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳಿಗೆ ವಿರುದ್ಧವಾಗಿ ನಡೆದು, ನಿರ್ದಿಷ್ಟ ಧರ್ಮದ ಧಾರ್ಮಿಕ ಮತ್ತು ದತ್ತಿ ದೇಣಿಗೆಗಳಿಗೆ ಮಾತ್ರ ಕಾನೂನುಗಳನ್ನು ಜಾರಿಗೊಳಿಸುವುದು ಸರಿಯಲ್ಲ.

6. ‘ವಿಹಿಂಪ’ನ ಅಧ್ಯಕ್ಷ ಅಲೋಕ್ ಕುಮಾರ್ ಮೂಲಕ ಸಂಸದೀಯ ಸಮಿತಿಗೆ ಕಳುಹಿಸಲಾದ ಪತ್ರದಲ್ಲಿ, ವಿವಿಧ ಧಾರ್ಮಿಕ ಸಮುದಾಯಗಳ ಆಸ್ತಿಯ ನಿಯಂತ್ರಣ ಮತ್ತು ನಿರ್ವಹಣೆಗೆ ಪ್ರತ್ಯೇಕ ಕಾನೂನುಗಳನ್ನು ಮಾಡುವ ಬದಲು, ದೇಶದಲ್ಲಿರುವ ಎಲ್ಲಾ ಧಾರ್ಮಿಕ ಆಸ್ತಿಗಳಿಗೆ ಒಂದೇ ಕಾನೂನು ಇರಬೇಕು ಎಂದು ಸೂಚಿಸಲಾಗಿದೆ.