ಹೋಮಿಯೋಪಥಿ ಉಪಚಾರದ ಲಾಭಗಳು ಮತ್ತು ‘ಸ್ವಉಪಚಾರ’ ದ ಬಗ್ಗೆ ಮಾರ್ಗದರ್ಶಕ ಅಂಶಗಳು
ಇಂದಿನ ಒತ್ತಡಮಯ ಜೀವನದಲ್ಲಿ ಪ್ರತಿಯೊಬ್ಬರು ಮತ್ತು ಯಾವುದೇ ಸಮಯದಲ್ಲಿ ಸೋಂಕುರೋಗಗಳನ್ನು ಅಥವಾ ಇತರ ಯಾವುದಾದರೂ ರೋಗಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ತಜ್ಞವೈದ್ಯಕೀಯ ಸಲಹೆ ಸಿಗಬಹುದೆಂದು ಹೇಳಲು ಆಗುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ (ಎಸಿಡಿಟಿ) ಇಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗುತ್ತದೆ. ಹೋಮಿಯೋಪಥಿ ಚಿಕಿತ್ಸಾಪದ್ಧತಿ ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿದೆ. ಇದನ್ನು ಮನೆಯಲ್ಲಿ ಹೇಗೆ ಉಪಯೋಗಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ?
ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ‘ಸನಾತನ ಪ್ರಭಾತ’ದ ವಾಚಕ ರೊಂದಿಗೆ ಸಾಧಕರು, ಕಾರ್ಯಕರ್ತರು, ಹಿತಚಿಂತಕರು ಮುಂತಾದವರೆಲ್ಲರಿಗೂ ಇದರಿಂದ ಲಾಭವಾಗಬಹುದು. ೨೪/೫೧ ರ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ‘ಹೋಮಿಯೋಪಥಿ ಚಿಕಿತ್ಸಾಪದ್ಧತಿಯ ಮೂಲಭೂತ ತತ್ತ್ವಗಳು’, ಎಂಬ ವಿಷಯವನ್ನು ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ನೋಡೋಣ. – ಭಾಗ ೪
ನಾವು ಸನಾತನ ಪ್ರಭಾತದ ಈ ಹಿಂದಿನ ೨೪/೫೦, ೨೪/೫೧ ಮತ್ತು ೨೫/೧ ರ ಸಂಚಿಕೆಯಲ್ಲಿ ಮುದ್ರಣವಾದ ಲೇಖನಗಳಲ್ಲಿ ‘ಹೋಮಿಯೋಪಥಿ ಎಂದರೇನು ?’, ಹೋಮಿಯೋಪಥಿ ಉಪಚಾರಪದ್ಧತಿಯ ಮೂಲಭೂತ ತತ್ತ್ವಗಳು’ ಇತ್ಯಾದಿ ಅಂಶಗಳನ್ನು ತಿಳಿದುಕೊಂಡೆವು. ಅವುಗಳನ್ನು ಇದುವರೆಗೆ ಓದಿರದಿದ್ದರೆ, ಅವುಗಳನ್ನು ಅವಶ್ಯ ಓದಿ ತಿಳಿದುಕೊಳ್ಳಬೇಕು. ಅವುಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಮೇಲೆ ಹಾಗೂ ನಮ್ಮ ಕುಟುಂಬದವರಿಗೆ ಉಪಚಾರ ಮಾಡುವುದರ ಹಿಂದಿನ ಮೂಲತತ್ತ್ವಗಳನ್ನು ತಿಳಿದುಕೊಳ್ಳಲು ಸುಲಭವಾಗುವುದು.
೫ ಆ ೩. ನಮ್ಮ ಕಾಯಿಲೆಯನ್ನು ಗುಣಪಡಿಸಲು ಯೋಗ್ಯ ಔಷಧವನ್ನು ಹುಡುಕುವುದು : ‘ಹೋಮಿಯೋಪಥಿ’ಯ ವಿಷಯದಲ್ಲಿ ಪ್ರಕಟಿಸಲಿರುವ ಗ್ರಂಥದಲ್ಲಿ ಪ್ರತಿಯೊಂದು ಕಾಯಿಲೆಯ ಸಂಕ್ಷಿಪ್ತ ಮಾಹಿತಿಯ ನಂತರ ಆ ಕಾಯಿಲೆಯನ್ನು ಗುಣಪಡಿಸುವಂತಹ ಹೋಮಿಯೋಪಥಿ ಔಷಧಗಳ ಮಾಹಿತಿ ಯನ್ನು ನೀಡಲಾಗಿದೆ. ಅದರಲ್ಲಿ ಪ್ರತಿಯೊಂದು ಔಷಧದ ಗುಣಧರ್ಮಗಳನ್ನು (ಅಂದರೆ ಆ ಔಷಧವನ್ನು ಆರೋಗ್ಯಶಾಲಿ ವ್ಯಕ್ತಿಗೆ ನೀಡಿದಾಗ ಅವನಲ್ಲಿ ನಿರ್ಮಾಣವಾಗುವ ಲಕ್ಷಣಗಳು) ಸ್ವಲ್ಪದರಲ್ಲಿ ನೀಡಲಾಗಿದೆ. ಈ ಗುಣಧರ್ಮಗಳನ್ನು ಓದಿ ನಮ್ಮ ಲಕ್ಷಣಗಳೊಂದಿಗೆ ಹೋಲಿಕೆಯಿರುವ ಗುಣಧರ್ಮಗಳಿರುವ ಔಷಧವನ್ನು ಆರಿಸಲಿಕ್ಕಿದೆ. ಉದಾ. ನಮಗೆ ಜ್ವರ ಬಂದಿರುವಾಗ ಅದರ ಜೊತೆಗೆ ನಮ್ಮ ಮನಸ್ಸು ಅಸ್ವಸ್ಥವಾಗಿರುವುದು ಹಾಗೂ ತುಂಬಾ ಬಾಯಾರಿಕೆ ಆಗುವುದು ಮತ್ತು ತುಂಬಾ ತಣ್ಣಗಿನ ನೀರು (ಐಸ್‌ಕೋಲ್ಡ್) ಕುಡಿಯುವುದು, ಇಂತಹ ಲಕ್ಷಣಗಳಿದ್ದರೆ, ‘ಅದಕ್ಕೆ (Aconite Napellus)’, ಈ ಔಷಧವನ್ನು ತೆಗೆದುಕೊಳ್ಳಲಿಕ್ಕಿರುತ್ತದೆ; ಆದರೆ ಜ್ವರದೊಂದಿಗೆ ಮುಖ ಕೆಂಪಾಗಿದ್ದು ಊದಿಕೊಂಡಿದ್ದರೆ, ಜ್ವರ ಬಂದಿರುವಾಗ ಬಾಯಾರಿಕೆಯೇ ಆಗದಿರುವುದು, ಇಂತಹ ಲಕ್ಷಣಗಳಿದ್ದರೆ ಅದಕ್ಕೆ ‘ಬೆಲಾಡೋನಾ (Belladona)’, ಈ ಔಷಧವನ್ನು ತೆಗೆದುಕೊಳ್ಳಲಿಕ್ಕಿರುತ್ತದೆ.
ಇದರಿಂದ ತಿಳಿಯುವುದೇನೆಂದರೆ ಕೇವಲ ಜ್ವರ ಈ ಒಂದೇ ಮುಖ್ಯ ಲಕ್ಷಣದ ಆಧಾರದಲ್ಲಿ ಔಷಧವನ್ನು ಆರಿಸಲಿಕ್ಕಿ ರುವುದಿಲ್ಲ, ಆ ಕಾಯಿಲೆಗೆ ಸಂಬಂಧಿಸಿದ ಯಾವ ಔಷಧದ ವಿಶಿಷ್ಟ ಲಕ್ಷಣದೊಂದಿಗೆ ನಮ್ಮಲ್ಲಿನ ಲಕ್ಷಣಗಳು ಅತಿ ಹೆಚ್ಚು ಹೊಂದಾಣಿಕೆಯಾಗುತ್ತವೆ, ಎಂಬುದನ್ನು ನೋಡಿ ಆ ಔಷಧವನ್ನು ತೆಗೆದುಕೊಳ್ಳಲಿಕ್ಕಿರುತ್ತದೆ.
ಜ್ವರ ಬಂದಾಗ ನಮ್ಮಲ್ಲಿ ಕಾಣಿಸುವ ವಿವಿಧ ಲಕ್ಷಣಗಳು ಹಾಗೂ ಆ ಪ್ರಕರಣದಲ್ಲಿ ನೀಡಿರುವ ಯಾವುದಾದರೊಂದು ಔಷಧದ ಗುಣಧರ್ಮಗಳೊಂದಿಗೆ ಎಲ್ಲಿ ಹೆಚ್ಚೆಚ್ಚು ಹೋಲಿಕೆ ಕಾಣಿಸುತ್ತದೆಯೋ, ಆ ಔಷಧದ ಹೆಸರನ್ನು ನಮ್ಮ ಕಾಗದದ ಮೇಲೆ ಬರೆಯಬೇಕು. ಒಂದು ವೇಳೆ ೨-೩ ಔಷಧಗಳೊಂದಿಗೆ ಹೋಲಿಕೆ ಕಾಣಿಸಿದರೆ, ಪುನಃ ಎಲ್ಲ ಔಷಧಗಳ ಗುಣಧರ್ಮ ಗಳನ್ನು ಓದಿ ಅದರಲ್ಲಿನ ಯಾವ ಔಷಧದೊಂದಿಗೆ ನಮ್ಮಲ್ಲಿನ ಲಕ್ಷಣಗಳು ಅತಿ ಹೆಚ್ಚು ಹೊಂದಾಣಿಕೆಯಿದೆ ಎಂದು ನೋಡಬೇಕು.
೫ ಆ ೪. ಒಂದೇ ಔಷಧ ತೆಗೆದುಕೊಳ್ಳುವುದು : ಒಂದು ವೇಳೆ ನಮ್ಮ ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳ ೨-೩ ಔಷಧಗಳ ಗುಣಧರ್ಮಗಳು ಸಮಾನವಾಗಿದ್ದರೂ ಅದರಲ್ಲಿ ಅತಿ ಹೆಚ್ಚು ಲಕ್ಷಣಗಳು ಸಮಾನವಾಗಿರುವ ಒಂದೇ ಔಷಧ ತೆಗೆದುಕೊಳ್ಳಬೇಕು.
೫ ಆ ೫. ಕೆಲವು ಕಾಯಿಲೆಗಳ ವಿಷಯದಲ್ಲಿ ಆರಂಭದಲ್ಲಿ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುವ ಔಷಧಗಳನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿರುತ್ತದೆ : ಕೆಲವು ಕಾಯಿಲೆಗಳ ವಿಷಯದಲ್ಲಿ, ಉದಾ. ‘ಹೊಟ್ಟೆನೋವು’, ಈ ಕಾಯಿಲೆಯಲ್ಲಿ ‘ಹೊಟ್ಟೆಯಲ್ಲಿ ವೇದನೆಗಳು ಆಗುತ್ತಿರುವಾಗ ತಕ್ಷಣ ಅವುಗಳನ್ನು ನಿಲ್ಲಿಸಲು ಮ್ಯಾಗ್ನೇಶಿಯಮ್ ಫಾಸ್ಫೋರಿಕಮ್ (Magnesium Phosporicum) ಈ ಔಷಧದ ೪ ಮಾತ್ರೆಗಳನ್ನು ಅರ್ಧ ಕಪ್ ಉಗುರು ಬಿಸಿನೀರಿನಲ್ಲಿ ಕರಗಿಸಿ ಅದರಲ್ಲಿನ ಒಂದು ಚಮಚ ನೀರನ್ನು ೧೫ ನಿಮಿಷಕ್ಕೊಮ್ಮೆ ವೇದನೆ ನಿಲ್ಲುವವರೆಗೆ ತೆಗೆದುಕೊಳ್ಳಬೇಕು.’ ಅದೇ ರೀತಿ ಯಾವ ಕಾಯಿಲೆಯ ವಿಷಯ ದಲ್ಲಿ ಹೇಳಲಾಗಿದೆಯೊ, ಅಲ್ಲಿ ಆ ಕಾಯಿಲೆಯ ಲಕ್ಷಣಗಳು ಆರಂಭವಾದಾಗ ಉಪಚಾರದ ಮೊದಲು ಆ ಔಷಧವನ್ನು ತೆಗೆದುಕೊಳ್ಳಬೇಕು. ಅನಂತರ ‘ಅಂಶ ಕ್ರ. ೫ ಆ ೩’ ರಲ್ಲಿ ಹೇಳಿದಂತೆ ನಮ್ಮ ಲಕ್ಷಣಗಳು ಆ ಕಾಯಿಲೆಯ ಗುಣಕಾರಿ ಔಷಧಗಳಲ್ಲಿ ಯಾವ ಔಷಧದ ಗುಣಧರ್ಮಗಳೊಂದಿಗೆ ಅತಿ ಹೆಚ್ಚು ಹೊಂದುತ್ತದೆಯೋ, ಆ ಔಷಧವನ್ನು ಆರಂಭಿಸಬೇಕು.
೫ ಆ ೬. ಔಷಧವನ್ನು ತಯಾರಿಸುವ ಪದ್ಧತಿ : ಮುಂದೆ ‘ಅಂಶ ಕ್ರ. ೭’ರಲ್ಲಿ ಹೇಳಿದಂತೆ ಪೇಟೆಯಲ್ಲಿ ಸಿಗುವ ಹೋಮಿಯೋಪಥಿ ಔಷಧಕ್ಕಾಗಿ ಉಪಯೋಗಿಸುವ ಸಣ್ಣ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ‘೪೦’ ಕ್ರಮಾಂಕದ ಸಕ್ಕರೆಯ ಮಾತ್ರೆಗಳನ್ನು ತುಂಬಿಸಿ ಅದರಲ್ಲಿ ನಾವು ಆರಿಸಿದ ಔಷಧದ ೩-೪ ಹನಿಗಳನ್ನು ಹಾಕಿ ಅದಕ್ಕೆ ಮುಚ್ಚಳ ಹಾಕಿ ಬಾಟ್ಲಿಯಲ್ಲಿನ ಮಾತ್ರೆಗಳನ್ನು ಮೇಲೆ ಕೆಳಗೆ ಮಾಡಬೇಕು. ಇದರಿಂದ ಔಷಧವು ಎಲ್ಲ ಮಾತ್ರೆಗಳ ಮೇಲೆ ಸಮನಾಗಿ ಹರಡುತ್ತದೆ, ಅನಂತರ ಅದರಲ್ಲಿನ ೪ ಮಾತ್ರೆಗಳನ್ನು ನಾಲಿಗೆಯ ಕೆಳಗೆ ಇಟ್ಟುಕೊಳ್ಳಬೇಕು. ಈ ಬಾಟ್ಲಿಗಳು ಮತ್ತು ಸಕ್ಕರೆಯ ಮಾತ್ರೆಗಳು ಹೋಮಿಯೋಪಥಿ ಔಷಧಿ ಅಂಗಡಿಯಲ್ಲಿ ಸಿಗುತ್ತವೆ.
ಪೇಟೆಯಲ್ಲಿ ಅನೇಕ ‘ಪೋಟೆನ್ಸಿ’ಯ (ಶಕ್ತಿಯ) ಔಷಧಗಳು ಸಿಗುತ್ತವೆ; ಆದರೆ ಸ್ವಉಪಚಾರಕ್ಕಾಗಿ ನಾವು ಸಾಮಾನ್ಯವಾಗಿ ಕೇವಲ ‘೩೦’ ಪೋಟೆನ್ಸಿಯ ಔಷಧಿಯನ್ನೇ ಉಪಯೋಗಿಸ ಬೇಕು. ಇದಕ್ಕಿಂತ ಬೇರೆ ಯಾವುದೇ ‘ಪೊಟೆನ್ಸಿ’ಯ ಔಷಧವನ್ನು ಉಪಯೋಗಿಸಲಿಕ್ಕಿದ್ದರೆ, ಅಲ್ಲಿ ನಾವು ಅದನ್ನು ನೀಡಿದ್ದೇವೆ; ಬೇರೆ ಪೊಟೆನ್ಸಿಯ ಔಷಧವನ್ನು ಕೇವಲ ಹೋಮಿಯೋಪಥಿ ತಜ್ಞ ವೈದ್ಯರ ಸಲಹೆಯಿಂದಲೇ ತೆಗೆದುಕೊಳ್ಳಬೇಕು.
೫ ಆ ೭. ಔಷಧಗಳ ಬಾಟ್ಲಿಗಳ ಮೇಲೆ ವ್ಯಕ್ತಿ ಮತ್ತು ಔಷಧದ ಹೆಸರಿನ ಲೇಬಲ್ ಹಚ್ಚಬೇಕು : ಮನೆಯಲ್ಲಿ ಒಂದೇ ಬಾರಿ ೨-೩ ಜನರಿಗೆ ಹೋಮಿಯೋಪಥಿ ಔಷಧ ನೀಡುತ್ತಿದ್ದರೆ, ಆಗ ಪ್ರತಿಯೊಬ್ಬರ ಔಷಧವನ್ನು ತಯಾರಿಸುವ ಮೊದಲು ಆ ವ್ಯಕ್ತಿ ಮತ್ತು ಔಷಧದ ಹೆಸರನ್ನು ಬಾಟ್ಲಿಯ ಮೇಲೆ ಬರೆದು ಅನಂತರವೇ ಅದರಲ್ಲಿ ಸಕ್ಕರೆಯ ಮಾತ್ರೆಗಳನ್ನು ಹಾಕಿ ಔಷಧವನ್ನು ತಯಾರಿಸಬೇಕು.
೫ ಆ ೮. ಔಷಧವನ್ನು ತೆಗೆದುಕೊಳ್ಳುವ ಪದ್ಧತಿ : ಔಷಧವನ್ನು ಸೇವಿಸುವಾಗ ಬಾಟ್ಲಿಯಿಂದ ೪ ಮಾತ್ರೆಗಳನ್ನು ಬಾಟ್ಲಿಯ ಮುಚ್ಚಳದಲ್ಲಿ ಹಾಕಿ ಮುಚ್ಚಳದಿಂದಲೇ ನೇರವಾಗಿ ನಾಲಿಗೆಯ ಅಡಿಯಲ್ಲಿಟ್ಟುಕೊಳ್ಳಬೇಕು. ಅವು ತನ್ನಿಂತಾನೇ ಕರಗುತ್ತವೆ. ಮಾತ್ರೆಗಳನ್ನು ನುಂಗಬಾರದು. ಔಷಧವನ್ನು ಸಾಮಾನ್ಯವಾಗಿ ನಾಲಿಗೆಯ ಕೆಳಗಿಟ್ಟುಕೊಳ್ಳಲಾಗುತ್ತದೆ; ಆದರೆ ನವಜಾತ ಶಿಶು ಗಳಿಗೆ ಮುಂಗೈ ಮೇಲೆ, ಕಾಲುಗಳ ಪಾದಗಳಿಗೆ ಅಥವಾ ಹೆಬ್ಬೆರಳಿನ ಮಡಿಕೆಯಲ್ಲಿ (big toe skin fold) ಹಚ್ಚಬಹುದು. ಪ್ರೌಢರಲ್ಲಿ ಯಾರಿಗೆ ಮಾತ್ರೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೋ, ಉದಾ. ಕೋಮಾದಲ್ಲಿರುವ ವ್ಯಕ್ತಿ, ಇಂತಹವರಿಗೆ ಔಷಧವನ್ನು ಮೂಸಲು ಕೊಡಬಹುದು. ಇಲ್ಲಿ ಔಷಧದ ಮುಚ್ಚಳವನ್ನು ತೆಗೆದ ಬಾಟ್ಲಿಯನ್ನು ರೋಗಿಯ ಮೂಗಿನ ಕೆಳಗೆ ೩೦ ಸೆಕೆಂಡ್ ಹಿಡಿಯಬೇಕು.
೫ ಆ ೯. ಔಷಧಗಳನ್ನು ತೆಗೆದುಕೊಳ್ಳುವಾಗ ವಹಿಸಬೇಕಾದ ಕಾಳಜಿ
ಅ. ಔಷಧಗಳನ್ನು ತೆಗೆದುಕೊಳ್ಳುವ ೧೫ ನಿಮಿಷ ಮೊದಲು ಮತ್ತು ಔಷಧ ತೆಗೆದುಕೊಂಡ ನಂತರ ೧೫ ನಿಮಿಷ ಏನನ್ನೂ ತಿನ್ನುವುದು ಕುಡಿಯುವುದು ಮಾಡಬಾರದು
ಆ. ಅತ್ತರ (ಸುಗಂಧದ್ರವ್ಯ), ಕರ್ಪೂರ, ಗರಮ್ ಮಸಾಲೆ (ಮೆಣಸಿನಕಾಳು, ಏಲಕ್ಕಿ), ಇತ್ಯಾದಿ ಉಗ್ರ ವಾಸನೆಗಳಿಂದ ಹಾಗೂ ಸೂರ್ಯಪ್ರಕಾಶದಿಂದ ಔಷಧಿಗಳನ್ನು ದೂರವಿಡಬೇಕು.
ಇ. ಔಷಧ ತೆಗೆದುಕೊಳ್ಳುವ ಮೊದಲು ಮತ್ತು ನಂತರ ೧ ಗಂಟೆ ಟೂತ್‌ಪೇಸ್ಟ್ (ಅದರಲ್ಲಿರುವ ಪುದಿನಾದಿಂದ (mint)) ಉಪಯೋಗಿಸಬಾರದು. ನೆಗಡಿಗೆ ಹೊಟ್ಟೆಗೆ ತೆಗೆದುಕೊಳ್ಳುವ ಮತ್ತು ಚರ್ಮದ ಮೇಲೆ ಹಚ್ಚುವ ‘ವಿಕ್ಸ್ ವೇಪರಬ್’ನಂತಹ ಔಷಧಗಳನ್ನು (ಅದರಲ್ಲಿರುವ ಕರ್ಪೂರ, ಮೆಂಥೋಲ್, ನೀಲಗಿರಿ ಎಣ್ಣೆ ಇವುಗಳಿಂದ) ಉಪಯೋಗಿಸಬಾರದು.
೫ ಆ ೧೦. ಔಷಧವನ್ನು ಪ್ರತಿದಿನ ಎಷ್ಟು ಸಲ ಸೇವಿಸಬೇಕು ? : ಸಾಮಾನ್ಯವಾಗಿ ಔಷಧವನ್ನು ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ, ಹೀಗೆ ೩ ಸಲ ತೆಗೆದುಕೊಳ್ಳುವುದಿರುತ್ತದೆ; ಆದರೆ ಜ್ವರ, ಭೇದಿಯಂತಹ ಕಾಯಿಲೆಗಳಿದ್ದರೆ (acute illness) ಆವಶ್ಯಕತೆಗನುಸಾರ ದಿನಕ್ಕೆ ೩ ರಿಂದ ೮ ಸಲ ಕೂಡ ತೆಗೆದುಕೊಳ್ಳಬೇಕಾಗುತ್ತದೆ. ಅಪಘಾತವಾಗಿ ಗಾಯಗಳಾಗಿದ್ದರೆ ಪ್ರತಿ ಗಂಟೆಗೆ ಒಂದು ಸಲ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
೫ ಆ ೧೧. ಔಷಧದ ಪರಿಣಾಮವಾಗುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ? : ಹೋಮಿಯೋಪಥಿ ಔಷಧಿ ಗಳಿಂದ ಬೇರೆ ಬೇರೆ ವ್ಯಕ್ತಿಗಳ ಮೇಲೆ ಬೇರೆ ಬೇರೆ ಪರಿಣಾಮ ಆಗಿರಬಹುದು. ಕೆಲವರಲ್ಲಿ ಔಷಧ ಆರಂಭಿಸಿದ ತಕ್ಷಣ ಲಕ್ಷಣಗಳು ಕಡಿಮೆಯಾಗುವುದು ಕಾಣಿಸುತ್ತದೆ. ಕೆಲವರಲ್ಲಿ ಲಕ್ಷಣ ಕಡಿಮೆಯಾಗುವ ಮೊದಲು ಅವರಲ್ಲಿ ಸ್ವಲ್ಪ ಹೆಚ್ಚಳವಾಗಿರುವುದು ಕಾಣಿಸಬಹುದು. ಕೆಲವರಲ್ಲಿ ಅವರ ಕಾಯಿಲೆಯ ವಿಶಿಷ್ಟ ಲಕ್ಷಣ ಗಳಲ್ಲಿ (ಉದಾ. ಚರ್ಮದ ಮೇಲಿನ ಬೊಕ್ಕೆಗಳು) ಹೆಚ್ಚೇನೂ ಬದಲಾವಣೆಯಾಗದೆ, ಅವರಿಗೆ ಸಂಪೂರ್ಣ ಶರೀರ ಮತ್ತು ಮನಸ್ಸಿನ ಸ್ತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕಾರಾತ್ಮಕ ಬದಲಾವಣೆ ಕಾಣಿಸುತ್ತದೆ. ಹೋಮಿಯೋಪಥಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಒಳ್ಳೆಯ ಲಕ್ಷಣವೆಂದು ತಿಳಿಯಲಾಗುತ್ತದೆ. ಏಕೆಂದರೆ ಈ ಔಷಧ ಕಾಯಿಲೆಯ ಅತ್ಯಂತ ಮೂಲಭೂತ ಸ್ತರದಲ್ಲಿ ಕಾರ್ಯ ಮಾಡುತ್ತಿದೆ ಎಂಬುದರ ಸೂಚಕವಾಗಿರುತ್ತದೆ. ಅರ್ಥಾತ ಎಲ್ಲ ಲಕ್ಷಣಗಳು ಹೋಗುವುದು ಅಪೇಕ್ಷಿತವಾಗಿರುತ್ತದೆ, ಮುಂದೆ ಅದು ಹಾಗೆಯೇ ಆಗುತ್ತದೆ.
‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !’ ಎಂಬ ಮುಂಬರುವ ಗ್ರಂಥದಿಂದ ಆಯ್ದು ಕೊಂಡಿರುವ ಕೆಲವೊಂದು ಭಾಗವನ್ನು ಪ್ರತಿವಾರ ಲೇಖನದ ರೂಪದಲ್ಲಿ ಪ್ರಕಾಶಿಸಲಾಗುವುದು. ಆದರೂ ಸ್ವಉಪಚಾರ ಮಾಡುವ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. |