ಭಾರತದ ಮೇಲಾದ ವಿವಿಧ ಆಕ್ರಮಣಗಳ ಸಮಯದಲ್ಲಿ ದೇವಸ್ಥಾನಗಳು ಆಕ್ರಮಣದ ಕೇಂದ್ರಸ್ಥಾನಗಳಾಗಿದ್ದವು. ಕಾಸೀಮ್, ಗಝನಿ, ಘೋರಿ, ಖಿಲ್ಜೀ, ಬಾಬರ, ಔರಂಗಜೇಬ ಮುಂತಾದ ಮೊಗಲ ದಾಳಿಕೋರರು ಅಯೋಧ್ಯೆ, ಮಥುರೆ, ಸೋಮನಾಥ, ಕಾಶಿ, ಪುರಿ, ಭೋಜಶಾಲೆ ಇಂತಹ ಭಾರತದಾದ್ಯಂತದ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮೂರ್ತಿಗಳ ವಿಡಂಬನೆ ಮಾಡಿ ಅಲ್ಲಿಂದ ಧನ-ಸಂಪತ್ತನ್ನು ಕೊಳ್ಳೆಹೊಡೆದರು. ಅನಂತರ ಬ್ರಿಟೀಶರಿಗೆ ಗಮನಕ್ಕೆ ಬಂದ ಅಂಶವೆಂದರೆ ರಾಜರು ನೀಡುವ ದಾನದಿಂದ ಹಾಗೂ ಹಿಂದೂ ಸಮಾಜದ ಧಾರ್ಮಿಕ ಔದಾರ್ಯದಿಂದ ಹಿಂದೂಗಳ ದೇವಸ್ಥಾನಗಳು ಧನಸಂಪತ್ತಿನಿಂದ ತುಂಬಿ ತುಳುಕುತ್ತಿವೆ. ಅಷ್ಟು ಮಾತ್ರವಲ್ಲದೇ, ಆ ದೇವಸ್ಥಾನಗಳ ಮೂಲಕ ನಡೆಸಲ್ಪಡುವ ಗುರುಕುಲಗಳಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಹಿಂದೂಗಳಿಗೆ ಎಲ್ಲ ರೀತಿಯ ಶಿಕ್ಷಣವೂ ಸಿಗುತ್ತಿದೆ. ಹೀಗಿರುವಾಗ ಅವರ ಚರ್ಚ್‌ಗಳ ಮೂಲಕ ನಡೆಸಲ್ಪಡುವ ಕಾನ್ವೆಂಟ್ ಶಾಲೆಗಳು ಯಶಸ್ವಿಯಾಗಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ದೇವಸ್ಥಾನಗಳ ಮೇಲೆ ವಿವಿಧ ರೀತಿಯಲ್ಲಿ ಆಘಾತ ಮಾಡುವ ಆಯೋಜನೆ ಮಾಡಿದರು. ಅವರು ಮೊಗಲರ ಹಾಗೆ ದೇವಸ್ಥಾನಗಳನ್ನು ಧ್ವಂಸ ಮಾಡದೆ, ಅವುಗಳ ಸರಕಾರೀಕರಣದ ಷಡ್ಯಂತ್ರ ರಚಿಸಿದರು.
ಈಸ್ಟ್ ಇಂಡಿಯಾ ಕಂಪನಿಯಿಂದ ದೇವಸ್ಥಾನಗಳಿಗಾಗಿ ಕಾನೂನು
ಈಸ್ಟ್ ಇಂಡಿಯಾ ಕಂಪನಿಯು ದೇವಸ್ಥಾನಗಳ ಮೇಲೆ ಅಧಿಕಾರವನ್ನು ಸ್ಥಾಪಿಸಲು ೧೮೧೭ ರಲ್ಲಿ ‘ಮದ್ರಾಸ್ ರೆಗ್ಯುಲೇಶನ್ ಏಕ್ಟ್’ ಈ ಕಾನೂನನ್ನು ತಂದು ಎಲ್ಲ ಹಿಂದೂ ದೇವಸ್ಥಾನಗಳ ವ್ಯವಹಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಕ್ರೈಸ್ತ ಧರ್ಮದಲ್ಲಿ ಮೂರ್ತಿ ಪೂಜೆ ಇಲ್ಲದಿದ್ದರೂ ಆಂಗ್ಲ ಅಧಿಕಾರಿಗಳು ಹಿಂದೂ ದೇವಸ್ಥಾನಗಳ ವ್ಯವಸ್ಥಾಪನೆ ಮಾಡುತ್ತಿರುವುದನ್ನು ಭಾರತದಲ್ಲಿನ ಮಿಶನರಿಗಳು ವಿರೋಧಿಸಿದರು ಹಾಗೂ ಇಂಗ್ಲೆಂಡ್‌ನಲ್ಲಿ ಅದರ ವಿರುದ್ಧ ದೂರು ನೀಡಿದರು. ಆದ್ದರಿಂದ ೧೮೪೦ ರಲ್ಲಿ ಈ ಕಾನೂನನ್ನು ರದ್ದುಪಡಿಸಲಾಯಿತು; ಆದರೆ ದೇವಸ್ಥಾನಗಳು ಕೈ ತಪ್ಪಿ ಹೋಗುವುದರಿಂದಾಗುವ ಆರ್ಥಿಕ ಹಾನಿಯನ್ನು ಗಮನಿಸಿ ಆ ಮಿಶನರಿಗಳನ್ನು ಶಾಂತಗೊಳಿಸಲಾಯಿತು ಹಾಗೂ ೧೮೬೩ ರಲ್ಲಿ ‘ಎಡೋಮೆಂಟ್ ಏಕ್ಟ್’ ಹೆಸರಿನ ಕಾನೂನು ತಂದು ಪುನಃ ದೇವಸ್ಥಾನಗಳ ಸಂಪೂರ್ಣ ಅಧಿಕಾರವನ್ನು ಬ್ರಿಟೀಶರು ತಮ್ಮ ಸರಕಾರದ ವಶಕ್ಕೆ ತೆಗೆದುಕೊಂಡರು. ಅನಂತರ ದೇವಸ್ಥಾನಗಳಿಂದ ಸಿಗುವ ಹಣವನ್ನು ಗಮನಿಸಿ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಹೀಗೆ ಭಾರತದಲ್ಲಿನ ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸಲು ಆಂಗ್ಲ ಸರಕಾರ ೧೯೨೫ ರಲ್ಲಿ ‘ದ ಮದ್ರಾಸ್ ರಿಲಿಜಿಯನ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಏಕ್ಟ್’ ಈ ಕಾನೂನನ್ನು ಅನ್ವಯಗೊಳಿಸಿತು. ಈ ಕಾನೂನಿಗೆ ತೀವ್ರ ವಿರೋಧವಾಯಿತು. ಮುಸಲ್ಮಾನರು ಗಲಭೆ ಎಬ್ಬಿಸಿದರು ಹಾಗೂ ಕ್ರೈಸ್ತರು ಪದೇ ಪದೇ ಬ್ರಿಟೀಶ ಸರಕಾರಕ್ಕೆ ದೂರು ನೀಡುತ್ತಾ ವಿರೋಧಿಸಿದ ಕಾರಣ ಈ ಕಾನೂನಿಂದ ಮಸೀದಿ ಮತ್ತು ಚರ್ಚ್‌ಗಳನ್ನು ವರ್ಜಿಸಲಾಯಿತು ಹಾಗೂ ೧೯೨೭ ರಲ್ಲಿ ಕೇವಲ ಹಿಂದೂ ದೇವಸ್ಥಾನಗಳ ಸರಕಾರೀಕರಣ ಮಾಡುವ ‘ಮದ್ರಾಸ್ ಹಿಂದೂ ರಿಲಿಜಿಯನ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಏಕ್ಟ್ ೧೯೨೭’ ಅಸ್ತಿತ್ವಕ್ಕೆ ಬಂದಿತು. ಆ ಕಾನೂನಿನಲ್ಲಿಯೂ ೧೯೩೫ ರಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಯಿತು.
ಇದೇ ಸಮಯದಲ್ಲಿ ಆಂಗ್ಲರು ೧೯೨೫ ರಲ್ಲಿ ‘ಸಿಕ್ಖ್ ಗುರುದ್ವಾರಾ ಏಕ್ಟ್’ನ ಮೂಲಕ ಸಿಕ್ಖ್‌ರ ಗುರುದ್ವಾರ ಹಾಗೂ ಧಾರ್ಮಿಕ ಸಂಸ್ಥೆಗಳಿಗಾಗಿ ‘ಸಿಕ್ಖ್ ಗುರುದ್ವಾರ ಪ್ರಬಂಧಕ ಕಮಿಟಿ’ಯನ್ನು (ಶುಫ) ಸ್ಥಾಪಿಸಿ ಅವರಿಗೆ ಗುರುದ್ವಾರಗಳ ಸ್ವತಂತ್ರ ವ್ಯವಹಾರ ವನ್ನು ಒಪ್ಪಿಸಿದರು. ಇದರಲ್ಲಿ ಸ್ವತಂತ್ರ ಚುನಾವಣೆ ನಡೆಯುತ್ತದೆ; ಆದರೆ ಸರಕಾರ ಗುರುದ್ವಾರಗಳ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
ತಮಿಳುನಾಡು ಸರಕಾರದಿಂದ ದೇವಸ್ಥಾನಗಳ ನಿಯಂತ್ರಣಕ್ಕಾಗಿ ಕಾನೂನು
೧೯೪೭ ರಲ್ಲಿ ಭಾರತದಲ್ಲಿನ ಕ್ರಾಂತಿಕಾರಿಗಳು ಮಾಡಿದ ಬಲಿದಾನದಿಂದ ಆಂಗ್ಲರ ಆಡಳಿತ ಮುಗಿದು ದೇಶ ಸ್ವತಂತ್ರ ವಾಯಿತು; ಆದರೆ ದುರ್ಭಾಗ್ಯದಿಂದ ಹಿಂದೂಗಳ ದೇವಸ್ಥಾನಗಳು ಮಾತ್ರ ಸ್ವತಂತ್ರವಾಗಲಿಲ್ಲ. ಸ್ವಾತಂತ್ರ್ಯದ ನಂತರ ಭಾರತದಲ್ಲಿನ ಎಲ್ಲ ರಾಜರ ಸಂಸ್ಥಾನಗಳನ್ನು ರದ್ದುಗೊಳಿಸಲಾಯಿತು ಹಾಗೂ ಅವುಗಳ ಹಣ, ಭೂಮಿ ಎಲ್ಲವನ್ನೂ ಭಾರತ ಸರಕಾರದಲ್ಲಿ ವಿಲೀನಗೊಳಿಸಲಾಯಿತು. ಆದ್ದರಿಂದ ಹಿಂದೂ ರಾಜರಲ್ಲಿ ಈ ದೇವಸ್ಥಾನಗಳನ್ನು ನಡೆಸಲು ಹಣ ಇರಲಿಲ್ಲ ಹಾಗೂ ಇನ್ನೊಂದು ಕಡೆಯಲ್ಲಿ ಭಾರತೀಯ ಸಂವಿಧಾನ ಸೆಕ್ಯುಲರ್ ವಿಚಾರದ್ದಾಗಿದೆಯೆಂದು ಘೋಷಣೆ ಮಾಡಲಾಯಿತು. ಆದ್ದರಿಂದ ಹಿಂದೂ ದೇವಸ್ಥಾನಗಳಿಗೆ ಸರಕಾರದಿಂದ ಏನಾದರೂ ಸಹಾಯ ಸಿಗುವ ಸಾಧ್ಯತೆಯೂ ಇಲ್ಲದಂತಾಯಿತು. ಈ ಪರಿಸ್ಥಿತಿಯಲ್ಲಿ ೧೯೫೧ ರಲ್ಲಿ ತಮಿಳುನಾಡು ಸರಕಾರವು ‘ಹಿಂದೂ ರಿಲೀಜಿಯಸ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಏಕ್ಟ್’ ತಂದು ಅಲ್ಲಿನ ದೇವಸ್ಥಾನಗಳನ್ನು ನಿಯಂತ್ರಿಸಲು ಪ್ರಾರಂಭಿಸಿತು. ಈ ೧೯೫೧ ರ ಕಾನೂನು ಪ್ರಕಾರ ಸರಕಾರಕ್ಕೆ ಕಾನೂನು ತಂದು ದೇವಸ್ಥಾನಗಳನ್ನು ನಿಯಂತ್ರಿಸುವ ಅಧಿಕಾರ ಪ್ರಾಪ್ತಿಯಾಯಿತು. ಯಾರನ್ನು ಕೂಡ ದೇವಸ್ಥಾನದ ಅಧ್ಯಕ್ಷ ಅಥವಾ ವ್ಯವಸ್ಥಾಪಕನೆಂದು ನೇಮಕ ಮಾಡಬಹುದು. ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆದುಕೊಂಡು ಅದನ್ನು ಸರಕಾರದ ಉದ್ದೇಶಕ್ಕಾಗಿ ಖರ್ಚು ಮಾಡಬಹುದು. ದೇವಸ್ಥಾನಗಳ ಭೂಮಿಯನ್ನು ಮಾರಾಟ ಮಾಡಿ ಆ ಹಣವನ್ನು ಉಪಯೋಗಿಸಬಹುದು. ದೇವಸ್ಥಾನಗಳಲ್ಲಿನ ಧಾರ್ಮಿಕ ಪರಂಪರೆಗಳಲ್ಲಿ ಹಸ್ತಕ್ಷೇಪ ಮಾಡಿ ಅದನ್ನು ಬದಲಾಯಿಸಬಹುದು.
ದೇವಸ್ಥಾನಗಳ ಸಹಿತ ಧಾರ್ಮಿಕ ಸಂಸ್ಥೆಗಳನ್ನೂ ನಿಯಂತ್ರಿಸಿದ ಕಾಂಗ್ರೆಸ್
ಅನಂತರ ೧೯೫೯ ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಈ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಅದರಲ್ಲಿ ದೇವಸ್ಥಾನಗಳ ಸಹಿತ ಧಾರ್ಮಿಕ ಸಂಸ್ಥೆಗಳನ್ನು ಕೂಡ ಸಮಾವೇಶಗೊಳಿಸಿ ‘ಹಿಂದೂ ರಿಲಿಜಿಯಸ್ ಎಂಡ್ ಚಾರಿಟೇಬಲ್ ಎಂಡೋಮೆಂಟ್ ಏಕ್ಟ್’ ಮಾಡಿತು. ಇದರಿಂದ ಒಂದೇ ದಿನದಲ್ಲಿ ಹಿಂದೂಗಳ ೩೫ ಸಾವಿರ ಮಠ-ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಈ ಜಾತ್ಯತೀತ ಸರಕಾರದ ನಿಯಂತ್ರಣಕ್ಕೆ ಹೋದವು. ಇದರ ಮೂಲಕವೇ ನಂತರ ಉಳಿದ ರಾಜ್ಯಗಳಲ್ಲಿಯೂ ಹಿಂದೂ ದೇವಸ್ಥಾನಗಳನ್ನು ನಿಯಂತ್ರಿಸಲು ಆರಂಭವಾಯಿತು. ಇಂದು ಕೂಡ ಭಾರತದಲ್ಲಿ ಯಾವುದೇ ಹಿಂದೂ ದೇವಸ್ಥಾನ, ಧಾರ್ಮಿಕ ಸಂಸ್ಥೆಗಳ ಮೇಲೆ ಸರಕಾರದ ನಿಯಂತ್ರಣ ಬರಲು ಸಾಧ್ಯವಿದೆ; ಆದರೆ ಮಸೀದಿ, ಚರ್ಚ್ ಇವು ಸಂಪೂರ್ಣ ಆಯಾ ಧರ್ಮದ ಸಮಾಜಗಳಿಂದಲೇ ನಿಯಂತ್ರಿಸಲ್ಪಡುತ್ತವೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧಾರ್ಮಿಕ ವಿಚಾರಶೈಲಿಯ ವಿರುದ್ಧ ಸಾಮ್ಯವಾದಿಗಳ ಹಾಗೂ ದ್ರಾವಿಡ ವಿಚಾರವಾದಿ ಸರಕಾರ ಅಧಿಕಾರದಲ್ಲಿರುವುದರಿಂದ ದೇವಸ್ಥಾನಗಳ ಎಲ್ಲ ವ್ಯವಸ್ಥೆ ಅವರ ಕೈಗೆ ಹೋಗಿದೆ. ಆದ್ದರಿಂದ ಧಾರ್ಮಿಕತೆಯು ಮುಗಿದು ದೇವಸ್ಥಾನಗಳನ್ನು ಕೇವಲ ಆರ್ಥಿಕ ಲೂಟಿಗಾಗಿ ಉಪಯೋಗಿಸಲಾಗುತ್ತಿದೆ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.