Manmohan sing : ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ನಿಧನ!

ನವ ದೆಹಲಿ – ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಡಿಸೆಂಬರ್ 26ರ ರಾತ್ರಿ 10 ಗಂಟೆಯ ಸುಮಾರಿಗೆ ನಿಧನರಾದರು. ಅವರು 92 ವರ್ಷ ವಯಸ್ಸಿನವರಾಗಿದ್ದರು. ವೃದ್ಧಾಪ್ಯದಿಂದಾಗಿ ಕೆಲವು ಶಾರೀರಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಡಿಸೆಂಬರ್ 26ರ ಸಂಜೆ ಅವರು ಪ್ರಜ್ಞಾಹೀನರಾಗಿದ್ದರಿಂದ ಅವರನ್ನು ತಕ್ಷಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ರಾತ್ರಿ 9:51 ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮನಮೋಹನ್ ಸಿಂಗ್ ಅವರು 1932ರಲ್ಲಿ ಹಳೆಯ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. 1972ರಲ್ಲಿ ಕೇಂದ್ರ ಆರ್ಥಿಕ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 1982 ರಿಂದ 1985ರವರೆಗೆ ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು. ಅಕ್ಟೋಬರ್ 1992ರಲ್ಲಿ ಅವರು ರಾಜ್ಯಸಭೆಯ ಸಂಸದರಾಗಿಯೂ ಆಯ್ಕೆಯಾದರು. ಕಳೆದ 33 ವರ್ಷಗಳ ಕಾಲ, ಏಪ್ರಿಲ್ 2024ರವರೆಗೆ ಅವರು ಸಂಸದರಾಗಿದ್ದರು. 2004 ರಿಂದ 2014ರ ವರೆಗೆ, 10 ವರ್ಷಗಳ ಕಾಲ ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದರು. ಭಾರತದಲ್ಲಿ ಆರ್ಥಿಕ ಉದಾರೀಕರಣದ ಜನಕನಾಗಿ ಅವರನ್ನು ಪರಿಗಣಿಸಲಾಗುತ್ತದೆ.