ಪ್ರವೇಶದ್ವಾರದ ಸ್ಥಾನ ಮತ್ತು ಇತರ ನಿಯಮಗಳು

ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ಸಂಖ್ಯೆ ೧೭

ಈ ಹಿಂದಿನ ಲೇಖನದಲ್ಲಿ ನಾವು ‘ದ್ವಾರವೇಧ’ದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು. ಈ ವಾರ ನಾವು ದ್ವಾರದ ಸರಿಯಾದ ಸ್ಥಾನ ಎಲ್ಲಿರಬೇಕು ? ಮತ್ತು ದ್ವಾರಕ್ಕೆ ಸಂಬಂಧಿಸಿದ ಇತರ ಕೆಲವು ನಿಯಮಗಳನ್ನು ತಿಳಿದುಕೊಳ್ಳೋಣ.

ಈ ಹಿಂದಿನ ಲೇಖನ ೧೬ ಓದಲು ಈ ಲಿಂಕ್‌ಮೇಲೆ ಕ್ಲಿಕ್‌ ಮಾಡಿ :  https://sanatanprabhat.org/kannada/178301.html 

೧. ದ್ವಾರದ ಸ್ಥಾನ

‘ಮಯಮತಮ್’ ಎಂಬ ವಾಸ್ತುಶಾಸ್ತ್ರದ ಗ್ರಂಥದ ಪ್ರಕಾರ, ನಾಲ್ಕೂ ದಿಕ್ಕುಗಳಲ್ಲಿ ದ್ವಾರವನ್ನು ಇರಿಸಲು ಅವಕಾಶವಿದೆ; ಆದರೆ ಅದು ‘ನಾವು ಮನೆಯ ಮಧ್ಯಭಾಗದಲ್ಲಿ ನಿಂತಾಗ, ಮಧ್ಯರೇಖೆಯ ಎಡಭಾಗದ ಎರಡು ಪದಗಳಲ್ಲಿ (ಭಾಗಗಳಲ್ಲಿ) ಇರಬೇಕು’ ಎಂದು ಹೇಳಲಾಗಿದೆ. ಈ ಸ್ಥಾನಗಳು ದ್ವಾರಕ್ಕೆ ಯೋಗ್ಯವಾಗಿವೆ. ಹೊರಗಿನಿಂದ ಮನೆಗೆ ಪ್ರವೇಶಿಸುವಾಗ ಇದೇ ಭಾಗವು ಮಧ್ಯರೇಖೆಯ ಬಲಭಾಗಕ್ಕೆ ಬರುತ್ತದೆ.

ವಾಸಗೇಹಾನಿ ಸರ್ವೇಷಾಂ ಪ್ರವಿಶೇದ್ ದಕ್ಷಿಣೇನ ತು |

ದ್ವಾರಾಣಿ ತು ಪ್ರವಕ್ಷ್ಯಾಮಿ ಪ್ರಶಸ್ತಾನೀಹ ಯಾನಿ ತು ||

ಪೂರ್ವೇಣೇಂದ್ರಂ ಜಯಂತಂ ಚ ದ್ವಾರಂ ಸರ್ವತ್ರ ಶಸ್ಯತೇ |

ಯಾಮ್ಯಂ ಚ ವಿತಥಂ ಚೈವ ದಕ್ಷಿಣೇನ ವಿದುರ್ಬುಧಾಃ ||

ಪಶ್ಚಿಮೇ ಪುಷ್ಪದಂತಂ ಚ ವಾರುಣಂ ಚ ಪ್ರಶಸ್ಯತೇ |

ಉತ್ತರೇಣ ತು ಭಲ್ಲಾಟಂ ಸೌಮ್ಯಂ ತು ಶುಭದಂ ಭವೇತ್ ||

– ಮತ್ಸ್ಯಪುರಾಣ, ಅಧ್ಯಾಯ ೨೫೫, ಶ್ಲೋಕ ೭ ರಿಂದ ೯

ಅರ್ಥ : ಎಲ್ಲರ ಮನೆಗಳಿಗೂ ಹೊರಗಿನಿಂದ ಬಲಭಾಗದ ಮೂಲಕ ಪ್ರವೇಶಿಸಬೇಕು. ಪೂರ್ವ ದಿಕ್ಕಿನಲ್ಲಿ ‘ಮಹೇಂದ್ರ’ ಮತ್ತು ‘ಜಯಂತ’ ಪದಗಳ ಮೇಲೆ ನಿರ್ಮಿಸಿದ ದ್ವಾರವನ್ನು ಪ್ರಶಸ್ತವೆಂದು ನಂಬಲಾಗಿದೆ. ಬುದ್ಧಿವಂತ ಜನರು ದಕ್ಷಿಣ ದಿಕ್ಕಿನಲ್ಲಿ ‘ಯಾಮ್ಯ’ ಮತ್ತು ‘ವಿತಥ’ ಪದಗಳ ಮೇಲೆ ನಿರ್ಮಿಸಿದ ದ್ವಾರವನ್ನು ಆಯೋಜನೆ ಮಾಡುತ್ತಾರೆ. ಪಶ್ಚಿಮದಲ್ಲಿ ದ್ವಾರವು ‘ಪುಷ್ಪದಂತ’ ಮತ್ತು ‘ವರುಣ’ ಪದಗಳಲ್ಲಿ ಪ್ರಶಸ್ತವಾಗಿದೆ ಮತ್ತು ಉತ್ತರ ದಿಕ್ಕಿನಲ್ಲಿ ‘ಭಲ್ಲಾಟ’ ಹಾಗೂ ‘ಸೋಮ’ ಪದಗಳಲ್ಲಿ ದ್ವಾರವು ಶುಭದಾಯಕವಾಗಿದೆ.

ಇದರ ಪ್ರಕಾರ ನಮಗೆ ತಿಳಿಯುವುದೇನೆಂದರೆ, ಮನೆಗೆ ಮುಖ್ಯ ಪ್ರವೇಶದ್ವಾರವು ನಾಲ್ಕೂ ದಿಕ್ಕುಗಳಲ್ಲಿ ಇರಬಹುದು; ಆದರೆ ಮನೆಯ ಮಧ್ಯಭಾಗದಿಂದ ನೋಡಿದಾಗ ಅದು ಮಧ್ಯರೇಖೆಯ ಎಡಭಾಗದಲ್ಲಿರಬೇಕು.

೨. ದ್ವಾರದ ಅಳತೆ (ದ್ವಾರಮಾನ)

ಶ್ರೀ. ಶ್ರೇಯಸ್ ಪಿಸೋಳಕರ

ವಾಸ್ತುಶಾಸ್ತ್ರಜ್ಞರ ಪ್ರಕಾರ, ಮನುಷ್ಯರು ವಾಸಿಸುವ ಮನೆಯ ಮುಖ್ಯ ಪ್ರವೇಶದ್ವಾರದ ಅಳತೆಯನ್ನು ನಿರ್ಧರಿಸಲು, ಮನೆಯ ಕಂಬದ ಎತ್ತರವನ್ನು ಎಂಟರಿಂದ ಭಾಗಿಸಬೇಕು. ಬರುವ ಎಂಟು ಭಾಗಗಳಲ್ಲಿ ೬.೫ ಭಾಗದಷ್ಟು ದ್ವಾರದ ಎತ್ತರವಿರಬೇಕು.

ಉದಾ : ಮನೆಯ ಕಂಬದ ಎತ್ತರ ೧೬ ಅಡಿ ಇದ್ದರೆ, ಅದನ್ನು ಎಂಟು ಭಾಗ ಮಾಡಿದರೆ (೧೬/೮ = ೨), ಪ್ರತಿ ಭಾಗವು ೨ ಅಡಿಗಳಾಗುತ್ತದೆ. ದ್ವಾರದ ಎತ್ತರ ೬.೫ ಭಾಗ ಎಂದರೆ ೬.೫ x ೨ = ೧೩ ಅಡಿ, ಅಂದರೆ ಮುಖ್ಯ ಪ್ರವೇಶದ್ವಾರದ ಎತ್ತರವು ೧೩ ಅಡಿ ಇರಬೇಕು.

ದ್ವಾರದ ಅಗಲವನ್ನು ನಿರ್ಧರಿಸುವಾಗ ದ್ವಾರದ ಎತ್ತರವನ್ನು ಸಮನಾದ ೯ ಭಾಗಗಳಾಗಿ ಮಾಡಬೇಕು. ಅದರಲ್ಲಿ ಅರ್ಧ ಭಾಗವನ್ನು ತೆಗೆದು ಉಳಿದ ೮.೫ ಭಾಗಗಳ ಅರ್ಧದಷ್ಟು ದ್ವಾರದ ಅಗಲವಿರಬೇಕು.

ಉದಾಹರಣೆಗೆ ದ್ವಾರದ ಎತ್ತರ ೧೩ ಅಡಿ ಇದ್ದರೆ, ಅದನ್ನು ೯ ಭಾಗ ಮಾಡಿದರೆ (೧೩ /೯ = ೧.೪೪) ಅಡಿ. ಪ್ರತಿ ಭಾಗವು ೧.೪೪ ಅಡಿಯದ್ದಾಗುತ್ತದೆ. ೧.೪೪ ರ ಅರ್ಧ ಎಂದರೆ ೦.೭೨. ಒಟ್ಟು ೮.೫ ಭಾಗಗಳ ಅಳತೆ ೧೩ – ೦.೭೨ = ೧೨.೨೮ ಆಗುತ್ತದೆ. ಅದರ ಅರ್ಧ ಭಾಗ ಎಂದರೆ ೧೨.೨೮/೨ = ೬.೧೪, ಅಂದರೆ ದ್ವಾರದ ಅಗಲ ೬.೧೪ ಅಡಿ ಇರಬೇಕು.

೩. ಬಾಗಿಲನ್ನು ಚೌಕಟ್ಟಿನ ಮೇಲೆ ಎಲ್ಲಿ ಕೂರಿಸಬೇಕು ?

ಹಿಂದಿನ ಕಾಲದಲ್ಲಿ ಗೋಡೆಗಳು ತುಂಬಾ ದಪ್ಪಗಿರುತ್ತಿದ್ದವು. ೩ ರಿಂದ ೪ ಅಡಿಗಳ ವರೆಗೆ ಅಗಲ ಇರುತ್ತಿದ್ದವು, ಆಗ ನಿರ್ದಿಷ್ಟವಾಗಿ ಗೋಡೆಯ ಅಗಲದ ಸ್ಥಳದಲ್ಲಿ ಬಾಗಿಲ ಚೌಕಟ್ಟು ಮತ್ತು ಬಾಗಿಲು ಎಲ್ಲಿರಬೇಕು, ಎಂಬ ಬಗ್ಗೆಯೂ ಶಾಸ್ತ್ರಕಾರರು ಹೇಳಿದ್ದಾರೆ. ಗೋಡೆಯ ಒಟ್ಟು ಅಗಲವನ್ನು ಸಮನಾಗಿ ೧೨ ಭಾಗಗಳಾಗಿ ಮಾಡಬೇಕು. ಅದರಲ್ಲಿ ಹೊರಭಾಗಕ್ಕೆ ೫ ಮತ್ತು ಒಳಭಾಗಕ್ಕೆ ೭ ಭಾಗಗಳನ್ನು ಮಾಡುವ ರೇಖೆಯ ಮೇಲೆ ಚೌಕಟ್ಟಿನ ಮಧ್ಯರೇಖೆ ಇರಬೇಕು.

ಉದಾಹರಣೆಗೆ – ಗೋಡೆಯ ಅಗಲ ೪ ಅಡಿ ಇದ್ದರೆ, ಅದರ ಸಮಾನ ೧೨ ಭಾಗಗಳೆಂದರೆ ೪ / ೧೨ = ೦.೩೩ ಅಡಿ. ಇದರಲ್ಲಿ ಹೊರಭಾಗದಿಂದ ೫ ಭಾಗಗಳನ್ನು ಬಿಡಬೇಕು, ಅಂದರೆ ೦.೩೩ x ೫ = ೧.೬೫ ಅಡಿ. ಹೊರಭಾಗದಿಂದ ಇಷ್ಟು ಜಾಗವನ್ನು ಬಿಟ್ಟು ರೇಖೆಯನ್ನು ಎಳೆಯಬೇಕು. ಆ ರೇಖೆಯ ಮೇಲೆ ಮಧ್ಯಭಾಗದಲ್ಲಿ ದ್ವಾರದ ಚೌಕಟ್ಟನ್ನು ಅಳವಡಿಸಬೇಕು. ಪ್ರಸ್ತುತ ಗೋಡೆಗಳು ಅಷ್ಟು ದಪ್ಪ ಇರುವುದಿಲ್ಲ; ಆದರೂ ನಾವು ೧ ರಿಂದ ೨ ಅಡಿ ದಪ್ಪದ ಗೋಡೆಗಳಲ್ಲೂ ಈ ನಿಯಮವನ್ನು ಪರಿಗಣಿಸಬಹುದು.

೪. ಮುಖ್ಯ ಪ್ರವೇಶಕ್ಕೆ ಒಂದು ಬಾಗಿಲೋ ಅಥವಾ ಎರಡೋ ?

ಮುಖ್ಯ ಪ್ರವೇಶಕ್ಕೆ ಒಂದೇ ಬಾಗಿಲು ಇರಬೇಕೇ ಅಥವಾ ಎರಡು ? ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ಆ ಬಗ್ಗೆ ನಮ್ಮ ಶಾಸ್ತ್ರದಲ್ಲಿ ಕೆಳಗಿನಂತೆ ಹೇಳಲಾಗಿದೆ.

ಕವಾಟಬಹಲಂ ಪ್ರೋಕ್ತಂ ದೇವದ್ವಿಜಮಹೀಭೃತಾಮ್ ||

ದ್ವಿಕವಾಟವಿಶೇಷೇಣ ಏಕ ಏವ ಪ್ರಕೀರ್ತಿತಃ |

ಸಾಮಂತಪ್ರಮುಖಾದೀನಾಂ ದ್ವೀಕವಾಟಂ ಪ್ರಶಸ್ಯತೇ ||

– ಮಯಮತಮ್, ಅಧ್ಯಾಯ ೩೦, ಶ್ಲೋಕ ೧೩, ೧೪

ಅರ್ಥ : ಯಾವುದೇ ಅಂತಸ್ತಿನ ಬಾಗಿಲಿನ ಆಯೋಜನೆಯಲ್ಲಿ, ಆ ಅಂತಸ್ತಿನ ಎತ್ತರಕ್ಕೆ ಅನುಗುಣವಾಗಿ ಇರುವ ಬಾಗಿಲಿಗೆ ಒಂದೇ ಕವಾಡ (ಬಾಗಿಲ ಪಲ್ಲೆ) ಇಡಬಹುದು. ಆದರೆ ದೇವಸ್ಥಾನಗಳು, ಬ್ರಾಹ್ಮಣ ಮತ್ತು ಕ್ಷತ್ರಿಯರಿಗಾಗಿ ಎರಡು ಕವಾಡಗಳ (ಎರಡು ಪಲ್ಲೆಗಳ) ಬಾಗಿಲು ಇರಬೇಕು. ಸಾಮಂತರು (ಆಡಳಿತಾಧಿಕಾರಿಗಳು) ಮತ್ತು ಪ್ರಮುಖರಿಗಾಗಿ ಎರಡು ಕವಾಡಗಳಿರುವುದು ಪ್ರಶಸ್ತವೆಂದು ಪರಿಗಣಿಸಬೇಕು.

ಬಾಗಿಲಿಗೆ ಎರಡು ಕವಾಡಗಳಿರುವಾಗ (ಬಾಗಿಲುಗಳು), ಅವುಗಳಲ್ಲಿ ಎಡಭಾಗದ ಕವಾಡವು ದೊಡ್ಡದಾಗಿರಬೇಕು ಮತ್ತು ಇನ್ನೊಂದು ಚಿಕ್ಕದಾಗಿರಬೇಕು. ದೊಡ್ಡ ಕವಾಡಲಕ್ಕೆ ಮಾತೃ ಕವಾಡ ಎಂದೂ, ಸಣ್ಣ ಕವಾಡಕ್ಕೆ ಪುತ್ರಿಕಾ ಕವಾಡ ಎಂಬ ಸಂಜ್ಞೆ ಇದೆ.

೫. ದ್ವಾರದ ಆಕಾರಕ್ಕನುಸಾರ ಅದರ ಫಲಗಳು

ಅ. ಚೌಕಾಕಾರ : ಲಾಭದಾಯಕ.

ಆ. ತ್ರಿಕೋನಾಕಾರ : ಸ್ತ್ರೀಯರಿಗೆ ಪೀಡೆ.

ಇ. ಬಂಡಿಯ ಆಕಾರ (ಶಕಟಾಕಾರ) : ಯಜಮಾನನ ಮೃತ್ಯು.

ಈ. ಮೊರದ ಆಕಾರ (ಸೂಪಾಕಾರ) : ಗೃಹ ಕಲಹ.

. ವರ್ತುಲಾಕಾರ (ವೃತ್ತಾಕಾರ) : ಹೆಣ್ಣು ಮಕ್ಕಳ ಸಂಖ್ಯೆ ವೃದ್ಧಿ.

ಊ. ಮಧ್ಯಭಾಗದಲ್ಲಿ ತಗ್ಗು ಇರುವ : ಶೋಕ ಪ್ರಾಪ್ತಿ.

೬. ದ್ವಾರಕ್ಕೆ ಸಂಬಂಧಿಸಿದ ಇತರ ನಿಯಮಗಳು

ಅ. ಬೃಹತ್ಸಂಹಿತೆಯ ಪ್ರಕಾರ, ಮುಖ್ಯ ಪ್ರವೇಶದ್ವಾರವು ಮನೆಯ ಇತರ ಬಾಗಿಲುಗಳಂತೆ ಇರಬಾರದು. ಅದು ಇತರ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು.

ಆ. ಮುಖ್ಯ ಪ್ರವೇಶದ್ವಾರದ ಮೇಲೆ ಕಲಶ, ತೆಂಗಿನಕಾಯಿ, ಎಲೆಗಳು, ಬಳ್ಳಿಗಳು ಮುಂತಾದ ಮಂಗಳಕರ ಚಿಹ್ನೆಗಳಿರಬೇಕು.

ಇ. ಮುಚ್ಚುವಾಗ ಶಬ್ದ ಮಾಡುವ ಬಾಗಿಲು ಇರಬಾರದು. ಅದು ಭಯಾನಕವಾಗಿದ್ದು ಗರ್ಭಪಾತಕ್ಕೆ ಕಾರಣವಾಗಬಹುದು.

ಈ. ಪ್ರಸ್ತುತ ಅನೇಕ ಫ್ಲಾಟ್‌ಗಳಲ್ಲಿ ಹಾಲ್‌ನಲ್ಲಿ ‘ಓಪನ್ ಗ್ಯಾಲರಿ’ (ತೆರೆದ ಬಾಲ್ಕನಿ) ಇಡಲಾಗುತ್ತದೆ. ಅದರ ಬಾಗಿಲು ಸಹ ಮನೆಯ ಮುಖ್ಯ ಪ್ರವೇಶದ್ವಾರಕ್ಕಿಂತ ದೊಡ್ಡದಾಗಿರುತ್ತದೆ. ಆದ್ದರಿಂದ ಶಾಸ್ತ್ರದಲ್ಲಿ ಹೇಳಲಾದ ನಿಯಮಕ್ಕನುಸಾರ ಅದನ್ನು ‘ಸಿಂಹದ್ವಾರ’ವೆಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮವೆಂದು ಯಜಮಾನನು ಅದರ ಫಲವನ್ನು ಭೋಗಿಸ ಬೇಕಾಗುತ್ತದೆ. ನಮ್ಮ ಮನೆಯ ಮುಖ್ಯದ್ವಾರವು ಪೂರ್ವ ದಿಕ್ಕಿಗಿದೆ; ಎಂದು ನಾವು ಭಾವಿಸುತ್ತೇವೆ; ಆದರೆ ‘ಓಪನ್ ಗ್ಯಾಲರಿ’ಯ ಬಾಗಿಲು ಆಕಾರದಲ್ಲಿ ಎಲ್ಲಕ್ಕಿಂತ ದೊಡ್ಡದಾಗಿದ್ದರೆ ಅದರ ದೃಷ್ಟಿಯಿಂದಲೇ ಫಲಿತಾಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ಮನೆಯಲ್ಲಿ ಮುಖ್ಯ ಪ್ರವೇಶದ್ವಾರಕ್ಕಿಂತ ಇತರ ಯಾವುದೇ ಬಾಗಿಲು ದೊಡ್ಡದಾಗಿ ಇರಬಾರದು.

(ಆಧಾರ ಗ್ರಂಥ : ‘ವಿಶ್ವಕರ್ಮಪ್ರಕಾಶ’, ‘ಮಯಮತಮ್’, ‘ಮತ್ಸ್ಯಪುರಾಣ’, ‘ಬ್ರಹತ್ಸಂಹಿತಾ’)

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೧೩.೩.೨೦೨೬)