ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ

ನವ ದೆಹಲಿ – ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ?, ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ. – ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ) ಜಾರಿಗೆ ತಂದಿರುವ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಲು ನಿರಾಕರಿಸಿದೆ. ಈ ನೀತಿಯನ್ನು ಪ್ರಸಕ್ತ ೨೦೨೬-೨೭ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗಿದೆ.

ಅರ್ಜಿದಾರರು ಮಾತನಾಡಿ, ಹೊಸ ನೀತಿಯ ಪ್ರಕಾರ ವಿದ್ಯಾರ್ಥಿಗಳು ೨ ಭಾರತೀಯ ಭಾಷೆಗಳನ್ನು ಕಲಿಯಬೇಕಾಗುತ್ತದೆ. ಅವರು ೫ ನೇ ತರಗತಿಯಿಂದ ನಿರಂತರವಾಗಿ ಕಲಿಯುತ್ತಿದ್ದ ಭಾಷೆಗಳನ್ನು ಬಿಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ಇಂಗ್ಲಿಷ್ ಭಾಷೆಯನ್ನು ‘ಸ್ಥಳೀಯವಲ್ಲದ’ (ಅನ್ಯ) ಭಾಷೆ ಎಂದು ಪರಿಗಣಿಸಲಾಗಿದೆ. ಹಾಗೂ ಮೂಲ ಭಾರತೀಯ ಭಾಷೆಗಳಿಗೆ ಶಿಕ್ಷಕರು ಮತ್ತು ಪಠ್ಯಪುಸ್ತಕಗಳ ಲಭ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸುತ್ತಾ, ಇಂಗ್ಲಿಷ್ ಕಳೆದ ೩೦೦ ವರ್ಷಗಳಿಂದ ಭಾರತದಲ್ಲಿ ಮಾತನಾಡಲ್ಪಡುತ್ತಿರುವ ಭಾಷೆಯಾಗಿದೆ. ನಾಗಾಲ್ಯಾಂಡ್ ಮತ್ತು ಮೇಘಾಲಯದಂತಹ ರಾಜ್ಯಗಳ ಅಧಿಕೃತ ರಾಜಭಾಷೆಯೂ ಇದಾಗಿದೆ. ದೇಶದಲ್ಲಿನ ಎಲ್ಲಾ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನ ಕಾರ್ಯಕಲಾಪಗಳು ಸಹ ಇಂಗ್ಲಿಷ್‌ನಲ್ಲೇ ನಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಅನ್ನು ಸಂಪೂರ್ಣವಾಗಿ ವಿದೇಶಿ ಭಾಷೆ ಎಂದು ಪರಿಗಣಿಸಿ ಕಡೆಗಣಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು, ಇಂದು ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಇಂಗ್ಲೀಷ್ ಮಾತನಾಡುವ ದೇಶಗಳಲ್ಲಿ ೨ ನೇ ದೇಶವಾಗಿದೆ. ಆದ್ದರಿಂದ ‘ಸ್ಥಳೀಯ ಭಾಷೆ’ ಎಂಬ ವ್ಯಾಖ್ಯಾನವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದೆ.

ಕಾಗದದ ಮೇಲೆ ೨೨ ಭಾಷೆಗಳು; ಆದರೆ ಪಠ್ಯಪುಸ್ತಕಗಳು ಕೇವಲ ೩ ಭಾಷೆಗಳಲ್ಲಿ ಮಾತ್ರ!

ನಿಯಮಗಳ ಪ್ರಕಾರ, ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಿರುವ ೨೨ ಅಧಿಕೃತ ಭಾರತೀಯ ಭಾಷೆಗಳಲ್ಲಿ ಯಾವುದೇ ಭಾಷೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಾಗದದ ಮೇಲೆ ನೀಡಲಾಗಿದೆ. ಆದರೆ ವಾಸ್ತವದಲ್ಲಿ ರಾಷ್ಟ್ರೀಯ ಶೈಕ್ಷಣೀಯ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ   (ಎನ್.ಸಿ.ಇ.ಆರ್.ಟಿ. -ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ) ಅಧಿಕೃತ ಜಾಲತಾಣದಲ್ಲಿ ಸದ್ಯ ಕೇವಲ ೩ ಭಾಷೆಗಳಲ್ಲಿ ಮಾತ್ರ ಪಠ್ಯಪುಸ್ತಕಗಳು ಲಭ್ಯವಿವೆ. ಅಗತ್ಯ ಮೂಲಸೌಕರ್ಯ ಮತ್ತು ಶಿಕ್ಷಕರು ಲಭ್ಯವಿಲ್ಲದಿದ್ದಾಗ ಈ ನೀತಿಯನ್ನು ಅವಸರದಲ್ಲಿ ಜಾರಿಗೆ ತಂದರೆ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನಷ್ಟವಾಗಬಹುದು ಎಂಬ ಅಂಶವನ್ನು ನ್ಯಾಯಾಲಯದಲ್ಲಿ ಮಂಡಿಸಲಾಯಿತು.