ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!

ಧಾರಾಕಾರ ಮಳೆಯಲ್ಲೂ ೨ ಲಕ್ಷ ಭಕ್ತರ ಉಪಸ್ಥಿತಿ

ಪುರಿ (ಒಡಿಶಾ) – ಇಲ್ಲಿನ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಜುಲೈ ೧೬ ರಂದು ಪ್ರಾರಂಭವಾಯಿತು. ಸಾಂಪ್ರದಾಯಿಕ ‘ಪಾಹಂಡಿ’ ವಿಧಿಯಡಿಯಲ್ಲಿ ಎಲ್ಲಕ್ಕಿಂತ  ಮೊದಲು ಭಗವಾನ ಸುದರ್ಶನ, ತದನಂತರ ಭಗವಾನ ಬಲಭದ್ರ, ದೇವಿ ಸುಭದ್ರಾ ಮತ್ತು ಕೊನೆಯಲ್ಲಿ ಭಗವಾನ ಜಗನ್ನಾಥರನ್ನು ಗರ್ಭಗುಡಿಯಿಂದ ಹೊರಗೆ ತಂದು ಅವರ ಭವ್ಯ ರಥಗಳಾದ ನಂದಿಘೋಷ, ತಾಳಧ್ವಜ ಹಾಗೂ ದರ್ಪದಲನ ಭವ್ಯ ರಥಗಳವರೆಗೆ ತಲುಪಿಸಲಾಯಿತು. ರಥಗಳಲ್ಲಿ ವಿರಾಜಮಾನರಾಗುವ ಮುನ್ನ ಭಗವಾನ ಬಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ ಜಗನ್ನಾಥ ಈ ಮೂರೂ ದೇವತೆಗಳು ನೂತನ ರಥಗಳಿಗೆ ಪ್ರದಕ್ಷಿಣೆ ಹಾಕಿದರು. ‘ರಥ ಬೀಜೆ’ ವಿಧಿಯ ನಂತರ ಅವರನ್ನು ಸಿಂಹಾಸನದ ಮೇಲೆ ವಿರಾಜಮಾನಗೊಳಿಸಲಾಯಿತು. ಇದರ ನಂತರ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ವಿಶೇಷ ಪೂಜೆ-ಅರ್ಚನೆಗಳನ್ನು ನೆರವೇರಿಸಿದರು, ಹಾಗೆಯೇ ಪುರಿಯ ಗಜಪತಿ ಮಹಾರಾಜ ದಿವ್ಯಸಿಂಹ ದೇವ ಅವರು ಸಾಂಪ್ರದಾಯಿಕ ‘ಛೇರಾ ಪಹರಾ’ ವಿಧಿಯಡಿಯಲ್ಲಿ ಚಿನ್ನದ ಕಸಪೊರಕೆಯಿಂದ ಮೂರೂ ರಥಗಳನ್ನು ಸ್ವಚ್ಛಗೊಳಿಸಿ, ಅದರ ಮೇಲೆ ಸುಗಂಧಿತ ಪವಿತ್ರ ತೀರ್ಥವನ್ನು ಪ್ರೋಕ್ಷಿಸಿದರು. ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ ಮತ್ತು ರಥಗಳಿಗೆ ಮರದ ಕುದುರೆಗಳನ್ನು ಜೋಡಿಸಿದ ಬಳಿಕ ಭಕ್ತರು ರಥವನ್ನು ಎಳೆಯಲು ಪ್ರಾರಂಭಿಸಿದರು.

​ಸಂಪ್ರದಾಯದಂತೆ, ಮೊದಲು ಭಗವಾನ ಬಲಭದ್ರರ ‘ತಾಳಧ್ವಜ’ ರಥ, ನಂತರ ದೇವಿ ಸುಭದ್ರೆಯ ‘ದರ್ಪದಲನ’ ರಥ ಮತ್ತು ಕೊನೆಯಲ್ಲಿ ಭಗವಾನ ಜಗನ್ನಾಥರ ‘ನಂದಿಘೋಷ’ ರಥವು ಶ್ರೀ ಗುಂಡಿಚಾ ಮಂದಿರದ ಕಡೆಗೆ ಮಾರ್ಗಸ್ಥವಾದವು. ಒಡಿಶಾದ ಪುರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಅಂದಾಜು ೨ ಲಕ್ಷ ಭಕ್ತರು ಈ ಸಮಯದಲ್ಲಿ ಉಪಸ್ಥಿತರಿದ್ದರು.

​ಕರ್ಣಾವತಿ (ಗುಜರಾತ) ಇಲ್ಲಿ ಭಗವಾನ ಜಗನ್ನಾಥ ರಥಯಾತ್ರೆಗೆ ಚಾಲನೆ!

​ಗುಜರಾತ ರಾಜಧಾನಿ ಕರ್ಣಾವತಿಯಲ್ಲಿ ಜುಲೈ ೧೬ ರಂದು ಬೆಳಿಗ್ಗೆ ಭಗವಾನ ಜಗನ್ನಾಥರ ೧೪೯ ನೇ ರಥಯಾತ್ರೆಯು ಬಿಗಿ ಭದ್ರತೆಯ ನಡುವೆ ಪ್ರಾರಂಭವಾಯಿತು. ಈ ಯಾತ್ರೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಅವರು ಸಾಂಪ್ರದಾಯಿಕ ‘ಪಾಹಿಂದ ವಿಧಿ’ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಅವರು ಭಗವಾನ ಜಗನ್ನಾಥ, ಹಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯ ಮೂರೂ ರಥಗಳ ಮುಂಭಾಗದ ಮಾರ್ಗವನ್ನು ಚಿನ್ನದ ಕಸಪೊರಕೆಯಿಂದ ಸ್ವಚ್ಛಗೊಳಿಸಿದರು.