‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ

ನವ ದೆಹಲಿ – ಪ್ರಯಾಣಿಕರಿಗೆ ಡಿಜಿಟಲ್ ಸೇವೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ‘ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮ’ದ (ಅಂದರೆ ‘ಇಂಡಿಯನ್ ರೈಲ್ವೆ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್’ ಅಥವಾ ‘ಐ.ಆರ್.ಸಿ.ಟಿ.ಸಿ.’) ಟಿಕೆಟ್ ಕಾಯ್ದಿರಿಸುವ ‘ಪೋರ್ಟಲ್’ನ ಹೊಸ ‘ಬೀಟಾ’ ಆವೃತ್ತಿಯನ್ನು ಕಾರ್ಯಾರಂಭಗೊಳಿಸಲಾಗಿದೆ. ಈ ಹೊಸ ಜಾಲತಾಣದಿಂದಾಗಿ ಈಗ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯು ಮೊದಲಿಗಿಂತಲೂ ಹೆಚ್ಚು ಸರಳ ಮತ್ತು ವೇಗವಾಗಲಿದೆ.

೨೦೦೨ ರಲ್ಲಿ ಪ್ರಾರಂಭವಾದ ‘ಐ.ಆರ್.ಸಿ.ಟಿ.ಸಿ.’ ಜಾಲತಾಣದ ಮೂಲಕ ಪ್ರತಿದಿನ ಸರಾಸರಿ ೧೪ ಲಕ್ಷ ೫ ಸಾವಿರ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತದೆ. ಬೃಹತ್ ಪ್ರಮಾಣದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ‘ಪೋರ್ಟಲ್’ ಅನ್ನು ಅತ್ಯಂತ ಸುಲಭವಾದ ‘ಇಂಟರ್ ಫೇಸ್’ನೊಂದಿಗೆ (ಬಳಕೆದಾರ ಸ್ನೇಹಿ ವಿನ್ಯಾಸ) ಸಿದ್ಧಪಡಿಸಲಾಗಿದೆ. ‘ಐ.ಆರ್.ಸಿ.ಟಿ.ಸಿ.’ ಹಳೆ ಜಾಲತಾಣದ ಮುಖಪುಟದಲ್ಲಿರುವ (ಹೋಮ್ ಪೇಜ್) ‘NEW’ ಆಯ್ಕೆಯ ಮೇಲೆ ‘ಕ್ಲಿಕ್’ ಮಾಡುವ ಮೂಲಕವೂ ಈ ಹೊಸ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.