|
ಬ್ರಹ್ಮದೇವನ ೧೦ ಮಾನಸಪುತ್ರರಲ್ಲಿ ಮರೀಚಿ ಒಬ್ಬರು! ಮರೀಚಿ ಮತ್ತು ಕರ್ದಮ ಪುತ್ರಿ ‘ಕಲಾ’ ಅವರ ಪುತ್ರರೇ ಮಹರ್ಷಿ ಕಶ್ಯಪ! ಮಹರ್ಷಿ ಕಶ್ಯಪರು ಪ್ರಸ್ತುತ ನಡೆಯುತ್ತಿರುವ ವೈವಸ್ವತ ಮನ್ವಂತರದ ಸಪ್ತರ್ಷಿಗಳಲ್ಲಿ ಪ್ರಥಮ ಋಷಿಯಾಗಿದ್ದಾರೆ. |
ಈಗಿನ ಮನ್ವಂತರದಲ್ಲಿ ಸೃಷ್ಟಿಯ ಉತ್ಪತ್ತಿಯ ಕಾರ್ಯವು ಮಹರ್ಷಿ ಕಶ್ಯಪರಿಂದ ಪ್ರಾರಂಭವಾಗಿತ್ತು. ಮಹರ್ಷಿ ಕಶ್ಯಪರ ವಿವಾಹವು ದಕ್ಷ ಪ್ರಜಾಪತಿಯ ಪುತ್ರಿಯರೊಂದಿಗೆ ಆಯಿತು. ಈ ಪತ್ನಿಯರಿಂದ ಕಶ್ಯಪರಿಗೆ ಲಭಿಸಿದ ಸಂತತಿಯೇ ಸಮಸ್ತ ಸಜೀವ ಸೃಷ್ಟಿಯಾಗಿದೆ. ಕಶ್ಯಪರ ಪತ್ನಿ ‘ಅದಿತಿ’ಯಿಂದ ಇಂದ್ರಾದಿ ಅನೇಕ ದೇವತೆಗಳು ಉತ್ಪನ್ನರಾದರು. ಇನ್ನೋರ್ವ ಬಲಶಾಲಿ ಪತ್ನಿ ‘ದಿತಿ’ಯಿಂದ ಹಿರಣ್ಯಕಶ್ಯಪು, ಹಿರಣ್ಯಾಕ್ಷನಂತಹ ದೈತ್ಯರು, ಕಶ್ಯಪರ ಮೂರನೆ ಪತ್ನಿ ‘ದನು’ವಿನಿಂದ ದಾನವರು ಹುಟ್ಟಿದರು. ಪತ್ನಿ ‘ಕ್ರೋಧಾ’ಳ ಪುತ್ರಿಯರಿಂದ ಹಸು, ಕುದುರೆ, ಸಿಂಹ, ಹುಲಿ, ವಾನರ, ಕಿನ್ನರ, ಶ್ವಾನ ಹಾಗೂ ನವಿಲು, ಹಂಸ ಮುಂತಾದ ಎಲ್ಲ ಪ್ರಾಣಿಸೃಷ್ಟಿಯು ಉದಯಿಸಿತು. ಇವರಲ್ಲಿನ ವಾನರರ ವಂಶಪರಂಪರೆಯಲ್ಲಿ ಮುಂದೆ ಅಂಜನಿಯು ವಾಯುವಿನಿಂದ ಮಹಾಬಲಿ ಹನುಮಂತನಿಗೆ ಜನ್ಮ ನೀಡಿದಳು. ಭಾರವನ್ನು ಸಹಿಸುವ ಪತ್ನಿ ‘ವಿನತಾ’ಳಿಂದ ಗರುಡ, ಅರುಣ ಮುಂತಾದ ೬ ಪುತ್ರರು ಹುಟ್ಟಿದರು. ‘ಕದ್ರು’ವಿನಿಂದ ಸರ್ಪಗಳು ಹಾಗೂ ಶೇಷನಾಗ, ವಾಸುಕಿ ಮುಂತಾದ ೯ ನಾಗಗಳ ಉತ್ಪತ್ತಿ ಆಯಿತು. ‘ಸುಪರ್ಣಾ’ ಸಮಸ್ತ ಪಕ್ಷಿಗಳ ಜನನಿಯಾಗಿದ್ದಳು. ಪರೋಪಕಾರಿ ಪತ್ನಿ ‘ಇರಾ’ಳ ವಂಶದಲ್ಲಿ ಮುಂದೆ ಸಸ್ಯಗಳು, ವೃಕ್ಷ-ಬಳ್ಳಿಗಳ ಉತ್ಪನ್ನವಾದವು. ಕಶ್ಯಪ ಋಷಿಗಳ ಇತರ ಪತ್ನಿಯರಿಂದಲೂ ವಿವಿಧ ರೀತಿಯ ಜೀವಸೃಷ್ಟಿಯು ನಿರ್ಮಾಣವಾಯಿತು. ಇದರಲ್ಲಿ ಮನುಷ್ಯರು, ಗಂಧರ್ವರು, ನಭಚರರು, ಜಲಚರರು, ಸಸ್ಯಗಳು ಕೂಡ ಸೇರಿವೆ. ಮಹರ್ಷಿ ಕಶ್ಯಪರಿಂದ ಸೃಷ್ಟಿ ನಿರ್ಮಾಣವಾಗಿರುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಒಂದು ನಿಯಮವಿದೆ, ಯಾರಿಗಾದರೂ ತಮ್ಮ ಗೋತ್ರ ನೆನಪಿಲ್ಲದಿದ್ದರೆ ಅಥವಾ ತಿಳಿದಿಲ್ಲದಿದ್ದರೆ, ಅವರು ತಮ್ಮ ಗೋತ್ರವನ್ನು ‘ಕಶ್ಯಪ’ ಎಂದು ಹೇಳಬಹುದು.
(ಉಲ್ಲೇಖ : ಭಕ್ತಿಸತ್ಸಂಗ, ಸನಾತನ ಸಂಸ್ಥೆ)

ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಶ್ರೀರಾಮನ ಮೇಲಿನ ಆಘಾತ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !