‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್‌ ಪ್ಯಾಕ್ ನಲ್ಲಿ ಕಪ್ಪು ಪಾಚಿ !

ಗ್ರಾಹಕ ವೇದಿಕೆಯಿಂದ ಡಾಬರ್ ಸಂಸ್ಥೆಗೆ ೭೦ ಸಾವಿರ ರೂಪಾಯಿ ದಂಡ

ಶಿಮ್ಲಾ (ಹಿಮಾಚಲ ಪ್ರದೇಶ) – ಗ್ರಾಹಕರೊಬ್ಬರಿಗೆ ಪ್ಯಾಕ್ ಮಾಡಿದ ಹಣ್ಣಿನ ರಸದಲ್ಲಿ (ಜ್ಯೂಸ್‌ನಲ್ಲಿ) ಕಪ್ಪು ಪಾಚಿ ಪತ್ತೆಯಾಗಿದ್ದರಿಂದ ಮತ್ತು ಅದರಿಂದಾಗಿ ಅವರ ಉಪವಾಸ ಭಂಗವಾದ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ಗ್ರಾಹಕ ವೇದಿಕೆಯು ‘ಡಾಬರ್ ಇಂಡಿಯಾ ಲಿಮಿಟೆಡ್’ ಸಂಸ್ಥೆಗೆ ಸಂತ್ರಸ್ತ ಗ್ರಾಹಕರಿಗೆ ೭೦ ಸಾವಿರ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಏನಿದು ಪ್ರಕರಣ?

೨೬ ಜುಲೈ ೨೦೨೪ ರಂದು ಗ್ರಾಹಕರೊಬ್ಬರು ಶ್ರಾವಣ ಮಾಸದ ಉಪವಾಸದ ವೇಳೆ ಡಾಬರ್ ಸಂಸ್ಥೆಯ ‘ರಿಯಲ್ ಫ್ರೂಟ್ ಪವರ್ ಮೋಸಂಬಿ’ಯ ೧ ಲೀಟರ್ ಜ್ಯೂಸ್ ಖರೀದಿಸಿದ್ದರು. ಜ್ಯೂಸ್ ಕುಡಿಯುವಾಗ ಅವರಿಗೆ ಅದರ ರುಚಿ ಸ್ವಲ್ಪ ವಿಭಿನ್ನ ಮತ್ತು ಸಂಶಯಾಸ್ಪದ ಎನಿಸಿತು. ಅವರು ಆ ಜ್ಯೂಸ್‌ನ ‘ಪ್ಯಾಕ್’ ಅನ್ನು ಕತ್ತರಿಸಿ ಒಳಗೆ ನೋಡಿದಾಗ, ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಪಾಚಿ ತೇಲುತ್ತಿರುವುದು ಕಂಡು ಬಂದಿತು. ಇದರ ನಂತರ ಅವರು ಗ್ರಾಹಕ ವೇದಿಕೆಗೆ ದೂರು ದಾಖಲಿಸಿದರು.

ಗ್ರಾಹಕ ವೇದಿಕೆಯ ಮೇಲ್ವಿಚಾರಣೆಯಲ್ಲಿ ಜ್ಯೂಸ್‌ನ ಮಾದರಿಗಳನ್ನು ಸರಕಾರಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಯಿತು. ಈ ಪರೀಕ್ಷೆಯಲ್ಲಿ ಜ್ಯೂಸ್‌ನಲ್ಲಿ ಮಾನವನ ಆರೋಗ್ಯಕ್ಕೆ ಮಾರಕವಾದ ಪಾಚಿ ಇರುವುದು ದೃಢಪಟ್ಟಿತು.

ಡಾಬರ್ ಸಂಸ್ಥೆಯು ಮಾತ್ರ ತನ್ನ ಪರವಾಗಿ ವಾದ ಮಂಡಿಸುತ್ತಾ, ತಮ್ಮ ಉತ್ಪನ್ನದಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಹೇಳಿದೆ. ಒಂದೇ ಬ್ಯಾಚ್‌ನ ೧ ಲಕ್ಷದ ೮ ಸಾವಿರಕ್ಕೂ ಹೆಚ್ಚು ಪ್ಯಾಕೆಟ್‌ಗಳು ಮಾರಾಟವಾಗಿದ್ದು, ಎಲ್ಲೂ ಇಂತಹ ದೂರು ಬಂದಿಲ್ಲ ಎಂದು ವಾದಿಸಿದೆ.

ಇದಕ್ಕೆ ಗ್ರಾಹಕ ವೇದಿಕೆಯು, ‘ಸಂತ್ರಸ್ತ ಗ್ರಾಹಕರಿಗೆ ಉಂಟಾದ ಮಾನಸಿಕ ಕಿರುಕುಳಕ್ಕಾಗಿ ೬೦ ಸಾವಿರ ರೂಪಾಯಿ ಮತ್ತು ಕಾನೂನು ವೆಚ್ಚಕ್ಕಾಗಿ ೧೦ ಸಾವಿರ ರೂಪಾಯಿಗಳನ್ನು ೪೫ ದಿನಗಳ ಒಳಗಾಗಿ ನೀಡಬೇಕು. ಹಾಗೆಯೇ ನಿರ್ಲಕ್ಷ್ಯಕ್ಕಾಗಿ ಗ್ರಾಹಕ ಕಲ್ಯಾಣ ನಿಧಿಗೆ ೩೦ ಸಾವಿರ ರೂಪಾಯಿಗಳನ್ನು ಜಮಾ ಮಾಡಬೇಕು’ ಎಂದು ಡಾಬರ್ ಸಂಸ್ಥೆಗೆ ಆದೇಶ ನೀಡಿದೆ.