ವಂಚನೆ ಅಥವಾ ಬ್ಲ್ಯಾಕ್‌ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ಮದ್ರಾಸ್) – ಕೇವಲ ಮಹಿಳೆ ಮತ್ತು ಪುರುಷರ ನಡುವೆ ಪ್ರೀತಿ ಅಥವಾ ನಿಕಟ ಸಂಬಂಧವಿತ್ತು ಎಂಬ ಕಾರಣಕ್ಕೆ, ಪ್ರತಿಯೊಂದು ದೈಹಿಕ ಸಂಬಂಧವೂ ಸಹಮತಿಯಿಂದಲೇ ನಡೆಯಿತು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ವಂಚನೆ, ಬ್ಲ್ಯಾಕ್‌ ಮೇಲ್, ಬೆದರಿಕೆ ಅಥವಾ ಸುಳ್ಳು ಭರವಸೆಗಳ ಮೂಲಕ ಮಹಿಳೆಯ ಸಹಮತಿ ಪಡೆಯಲಾಗಿದ್ದರೆ, ಅದನ್ನು ಕಾನೂನಿನ ದೃಷ್ಟಿಯಲ್ಲಿ ಮಾನ್ಯ ಒಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ. ಪ್ರತಿಯೊಂದು ಪ್ರಕರಣದ ಸತ್ಯಾಸತ್ಯತೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದ್ದು, ಕೇವಲ ಸಂಬಂಧದ ಸ್ವರೂಪವನ್ನು ಆಧರಿಸಿ ಆರೋಪಿಗೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಪ್ರತಿಯೊಂದು ವಿಫಲ ಪ್ರೇಮ ಸಂಬಂಧ ಅಥವಾ ನಂತರ ಮದುವೆಯಾಗದಿರುವುದು ಸ್ವಯಂಚಾಲಿತವಾಗಿ ಬಲಾತ್ಕಾರದ ಪ್ರಕರಣವಾಗುವುದಿಲ್ಲ ಎಂಬುದನ್ನೂ ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆರೋಪಿಯ ಮನಸ್ಥಿತಿ ಮೊದಲಿನಿಂದಲೂ ವಂಚಿಸುವ ಉದ್ದೇಶ ಹೊಂದಿತ್ತೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಇಲ್ಲಿ ಅತ್ಯಗತ್ಯವಾಗಿರುತ್ತದೆ.

ಏನಿದು ಪ್ರಕರಣ?

ತಮಿಳುನಾಡಿನ ಒಂದು ನಗರದ ಸುಜಿ ಅಲಿಯಾಸ್ ಕಾಸಿ ಎಂಬ ಹೆಸರಿನ ಆರೋಪಿಯು ಫೇಸ್‌ ಬುಕ್ ಮೂಲಕ ಯುವತಿಯೊಬ್ಬಳನ್ನು ಸಂಪರ್ಕಿಸಿದ್ದನು. ನಂತರ ಆತ ಉದ್ಯೋಗ ಮತ್ತು ಮದುವೆಯ ಆಮಿಷ ತೋರಿಸಿ ಆಕೆಯ ವಿಶ್ವಾಸ ಗಳಿಸಿದನು. ಆರೋಪಿಯು ಮೊದಲ ಭೇಟಿಯಲ್ಲೇ ಸಂತ್ರಸ್ತೆಯ ವಿರೋಧದ ಹೊರತಾಗಿಯೂ ಆಕೆಯ ಲೈಂಗಿಕ ದೌರ್ಜನ್ಯ ಮಾಡಿದನು. ನಂತರ ಆತ ಕ್ಷಮೆ ಕೇಳಿ, ಉದ್ಯೋಗ ಮತ್ತು ಮದುವೆಯ ಭರವಸೆಯನ್ನು ಮರುಕಳಿಸಿ, ಆಕೆಯನ್ನು ಮತ್ತೆ ಭೇಟಿಯಾಗುವಂತೆ ಪ್ರೇರೇಪಿಸಿದನು.

ಇದರ ನಂತರ ಆತ ಪದೇ ಪದೇ ಆಕೆಯ ಲೈಂಗಿಕ ದೌರ್ಜನ್ಯ ಮಾಡಿದನು. ಕೊನೆಗೆ ಒಂದು ದಿನ ಕುಟುಂಬದವರು ನಿರಾಕರಿಸಿದ್ದಾರೆ ಎಂಬ ಕಾರಣ ನೀಡಿ ಆಕೆಯಿಂದ ದೂರ ಹೋದನು. ಈ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯವು ಸತ್ಯಾಸತ್ಯತೆಗಳ ಆಧಾರದ ಮೇಲೆ ಇದನ್ನು ಬಲಾತ್ಕಾರ ಎಂದು ಪರಿಗಣಿಸಿ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ವಿರುದ್ಧ ಆರೋಪಿಯು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದನು.