ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ದಾವೆ

ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚ್ ಸ್ವಾತಂತ್ರ್ಯ ಹೋರಾಟಗಾರರಿಗೆ ಈಗ ಇಸ್ರೇಲಿ ಸಂಸ್ಥೆಗಳಿಂದ ಹಣ, ತಂತ್ರಜ್ಞಾನ ಮತ್ತು ಆಧುನಿಕ ಸಂವಹನ ಸಾಧನಗಳು ಸಿಗುತ್ತಿವೆ ಎಂದು ಪಾಕಿಸ್ತಾನದ ಗುಪ್ತಚರ ಮೂಲಗಳು ದಾವೆ ಮಾಡಿದೆ. ಅವರ ನೆಲೆಗಳು ಮತ್ತು ಚಲನವಲನಗಳಿಗಾಗಿ ಅಫ್ಘಾನಿಸ್ತಾನದ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಬಲೂಚಿಸ್ತಾನದ ಜಿಯಾರತ್‌ನಲ್ಲಿರುವ ಮಾಂಗಿ ಡ್ಯಾಮ್ ಪಂಪಿಂಗ್ ಸ್ಟೇಷನ್‌ನ ಪೊಲೀಸ್ ಚೌಕಿಯ ಮೇಲೆ ದಾಳಿ ನಡೆಯಿತು. ಇದರಲ್ಲಿ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು 9 ಪೊಲೀಸರನ್ನು ಕೊಂದರು ಮತ್ತು 18 ಜನರನ್ನು ಅಪಹರಿಸಿದರು. ನಂತರ ಈ ಎಲ್ಲರ ಶವಗಳು ಬೆಟ್ಟದ ಪ್ರದೇಶದಲ್ಲಿ ಪತ್ತೆಯಾದವು. ಈ ಘಟನೆಯ ನಂತರ ಪಾಕಿಸ್ತಾನದ ಗುಪ್ತಚರರು ಈ ವಾದವನ್ನು ಮಾಡಿರುವುದರಿಂದ ಇದಕ್ಕೆ ಮಹತ್ವ ಬಂದಿದೆ.

ಬಲೂಚ್ ಜನರಲ್ಲಿ ಆಕ್ರೋಶ

ಬಲೂಚಿಸ್ತಾನವನ್ನು ಪಾಕಿಸ್ತಾನವು 1948 ರಲ್ಲಿ ಬಲವಂತವಾಗಿ ವಶಪಡಿಸಿಕೊಂಡ ಪ್ರದೇಶವಾಗಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಇದರ ಪಾಲು ಕೇವಲ ಶೇ. 6 ರಷ್ಟಿದೆ. ಇಲ್ಲಿ ತಾಮ್ರ, ಚಿನ್ನ, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದ ದೊಡ್ಡ ನಿಕ್ಷೇಪಗಳಿವೆ. ಆದರೆ ಇದರಿಂದ ಬರುವ ಆದಾಯದ ಬಹುಪಾಲು ಹಣ ಪಾಕಿಸ್ತಾನ ಸರಕಾರ, ಸೇನೆ ಮತ್ತು ಚೀನಾ ಕಂಪನಿಗಳಿಗೆ ಹೋಗುತ್ತಿದೆ ಎಂಬ ಆರೋಪವಿದೆ. ಇದರಿಂದಾಗಿ ಬಲೂಚ್ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಪಾದಕೀಯ ನಿಲುವು

ನಿನ್ನೆಯವರೆಗೆ ಇದೇ ರೀತಿಯ ಆರೋಪವನ್ನು ಭಾರತದ ಮೇಲೆ ಮಾಡಲಾಗುತ್ತಿತ್ತು, ಈಗ ಅದನ್ನು ಇಸ್ರೇಲ್ ಸಂಸ್ಥೆಗಳ ಮೇಲೆ ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನು ಮಾಡುವ ಬದಲು ಪಾಕಿಸ್ತಾನವು ಬಲೂಚ್ ಜನರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಬೇಕು!