ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !

ಗೌತಮ ಮಹರ್ಷಿಯವರು ಇಡೀ ಮಾನವ ಮತ್ತು ಸಮಾಜವನ್ನು ಶಿಸ್ತು ಬದ್ಧವಾಗಿಡಲು ನ್ಯಾಯಶಾಸ್ತ್ರವನ್ನು ರಚಿಸಿದರು. ಮಹರ್ಷಿ ಗೌತಮರನ್ನು ನ್ಯಾಯಶಾಸ್ತ್ರದ ಪ್ರವರ್ತಕರೆಂದು ಪರಿಗಣಿಸಲಾಗುತ್ತದೆ. ಮಹರ್ಷಿ ಗೌತಮರು ವೈದಿಕ ಕಾಲದ ಮಂತ್ರದ್ರಷ್ಟ ಋಷಿಯಾಗಿದ್ದರು. ಋಗ್ವೇದದಲ್ಲಿ ಅವರ ಹೆಸರಿನಲ್ಲಿ ಅನೇಕ ಸೂಕ್ತಗಳಿವೆ. ಮಹರ್ಷಿ ಗೌತಮರಂತಹ ತ್ಯಾಗ ಮತ್ತು ತಪಸ್ಸು ನಮಗೆ ಬೇರೆಲ್ಲೂ ನೋಡಲು ಸಿಗುವುದಿಲ್ಲ !

ಮಹರ್ಷಿ ಗೌತಮರ ಭಕ್ತಿಯಿಂದ ಅವತರಿಸಿದ ತ್ರ್ಯಂಬಕೇಶ್ವರ !

ನಾಶಿಕದ ಹತ್ತಿರವಿರುವ ಬ್ರಹ್ಮಗಿರಿ ಪರ್ವತವನ್ನು ಮಹರ್ಷಿ ಗೌತಮರ ತಪೋಭೂಮಿ ಎಂದು ಪರಿಗಣಿಸ ಲಾಗುತ್ತದೆ. ವೈದಿಕ ಕಾಲದಲ್ಲಿ ಒಮ್ಮೆ ಮಹಾಭಯಂಕರ ಭೀಕರ ಬರಗಾಲ ಬಂದಿತ್ತು, ಆದರೂ ಮಹರ್ಷಿ ಗೌತಮರ ಆಶ್ರಮದ ಪರಿಸರದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇತ್ತು. ಅವರ ಆಶ್ರಮ ಹಾಗೂ ಆಶ್ರಮದ ಸುತ್ತಮುತ್ತಲಿನ ಪರಿಸರದಲ್ಲಿ ಬರಗಾಲ ಎಂಬುದು ಎಲ್ಲೂ ಹುಡುಕಿದರೂ ಸಿಗುತ್ತಿರಲಿಲ್ಲ. ಆಶ್ರಮದ ಆವರಣದಲ್ಲಿ ಮತ್ತು ಸುತ್ತಮುತ್ತ ಹಸಿರು ತುಂಬಿತ್ತು. ಹಸಿರು ಗಿಡಮರಗಳು ಕಂಗೊಳಿಸುತ್ತಿದ್ದವು. ಆಶ್ರಮದ ಹತ್ತಿರದಲ್ಲೇ ಇದ್ದ ಸರೋವರವು ನೀರಿನಿಂದ ತುಂಬಿ ತುಳುಕುತ್ತಿತ್ತು. ಇದು ಮಹರ್ಷಿಗಳ ತೇಜಸ್ಸು ಮತ್ತು ಆಧ್ಯಾತ್ಮಿಕ ಸಾಮರ್ಥ್ಯದ ಪ್ರಭಾವವಾಗಿತ್ತು. ದಯಾಳು ಹಾಗೂ ಉದಾರ ಹೃದಯದ ಮಹರ್ಷಿಗಳು ದೇಶ-ವಿದೇಶಗಳ ಮನುಷ್ಯರಿಗೆ ಮತ್ತು ಪಶು-ಪಕ್ಷಿಗಳಿಗೆ ಆಶ್ರಯ ನೀಡಿದ್ದರು.

ಗೋದಾವರಿಯ ಪ್ರಕಟೀಕರಣ

ಒಮ್ಮೆ ದುಷ್ಟ ಜನರ ಪಿತೂರಿಯಿಂದಾಗಿ ಮಹರ್ಷಿ ಗೌತಮರ ಮೇಲೆ ಗೋ ಹತ್ಯೆಯ ಅಪವಾದ ಬಂದಿತು. ಇದರಿಂದಾಗಿ ಮಹರ್ಷಿ ಗೌತಮರು ನಿರಪರಾಧಿಯಾಗಿದ್ದರೂ, ಭಗವಾನ್ ಶಿವನ ಕಠೋರ ಆರಾಧನೆ ಮಾಡಿದರು. ಮಹರ್ಷಿ ಗೌತಮರ ಕಠೋರ ತಪಸ್ಸಿಗೆ ಮೆಚ್ಚಿ ಸಾಕ್ಷಾತ್ ಭಗವಾನ್ ಶಿವನು ಪ್ರತ್ಯಕ್ಷನಾದನು. ಅದರೊಂದಿಗೆ ಆ ಪ್ರದೇಶದಲ್ಲಿ ಸಾಕ್ಷಾತ್ ಗಂಗೆಯೂ ಅವತರಿಸಿದಳು. ಗಂಗಾ ನದಿಯು ‘ಗೌತಮಿ ಎಂಬ ಹೆಸರಿನಿಂದ ಪ್ರವಹಿಸಿತು. ಇದೇ ಗೌತಮಿ ನದಿಯು ಮುಂದೆ ಗೋದಾವರಿ ಎಂದು ಪ್ರಸಿದ್ಧಿಯಾಯಿತು. ಗೋದಾವರಿಯನ್ನು ‘ದಕ್ಷಿಣದ ಗಂಗೆ ಎಂದು ಕರೆಯ ಲಾಗುತ್ತದೆ. ಅಲ್ಲಿನ ಚೈತನ್ಯವು ಇಂದಿಗೂ ಹಾಗೇ ಉಳಿದುಕೊಂಡಿದೆ; ಆದರೆ ಈ ಎಲ್ಲದರ ಶ್ರೇಯಸ್ಸು ಖಂಡಿತವಾಗಿಯೂ ಮಹರ್ಷಿ ಗೌತಮರಿಗೆ ಸಲ್ಲುತ್ತದೆ. ನಿಜಕ್ಕೂ ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಅವರು ಎಷ್ಟೊಂದು ಕಾರ್ಯ ಮಾಡಿದ್ದಾರೆ ! ಅಂತಹ ಮಹಾನ್ ಗೌತಮ ಋಷಿಗಳ ಚರಣಗಳಲ್ಲಿ ಮನಃಪೂರ್ವಕ ಕೃತಜ್ಞತೆಗಳು ! (ಸಂದರ್ಭ: ಭಕ್ತಿಸತ್ಸಂಗ, ಸನಾತನ ಸಂಸ್ಥೆ)