ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ಕ್ರಮಾಂಕ ೯
ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವಾಗ ಹಿಂದಿನ ಲೇಖನಗಳಲ್ಲಿ ನಾವು, ‘ಭೂರೇವ ಮುಖ್ಯಂ ವಾಸ್ತು’ (ಸಂದರ್ಭ : ‘ಸಮರಾಂಗಣಸೂತ್ರಧಾರ’ ಗ್ರಂಥ), ಅಂದರೆ ಭೂಮಿಯೇ ಮುಖ್ಯ ವಾಸ್ತುವಾಗಿದೆ’, ಎಂಬುದನ್ನು ತಿಳಿದುಕೊಂಡೆವು. ಆದ್ದರಿಂದ ಕಟ್ಟಡವನ್ನು ನಿರ್ಮಿಸುವ ಮೊದಲು ಭೂಮಿಯು ನಿರ್ದೋಷವಾಗಿರುವುದು ಮಹತ್ವದ್ದಾಗಿದೆ. ಅದರ ಆಕಾರ, ವರ್ಣ, ಗುಣಮಟ್ಟವು ಆ ಕಟ್ಟಡದ ಮಾದರಿ ಮತ್ತು ಅಲ್ಲಿ ವಾಸಿಸುವ ವ್ಯಕ್ತಿಗಳ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿದೆ. ಇದಕ್ಕಾಗಿ ಭೂಮಿಯ ವಿಧಗಳು ಅವುಗಳ ವೈಶಿಷ್ಟ್ಯಗಳು, ಭೂಮಿ ಪರೀಕ್ಷೆ ಮತ್ತು ಭೂಮಿಯ ಆಯ್ಕೆ ಇವುಗಳ ವಿಷಯದಲ್ಲಿ ಶಾಸ್ತ್ರಕಾರರು ಆಳವಾಗಿ ಬರೆದಿದ್ದಾರೆ. ಅದರಲ್ಲಿ ಭೂಮಿಯನ್ನು ಅದರ ಗುಣಕ್ಕನುಸಾರ ೪ ವರ್ಣಗಳಲ್ಲಿ ವಿಭಜಿಸಲಾಗಿದೆ.
ಈ ಹಿಂದಿನ ಲೇಖನ ಕ್ರಮಾಂಕ -೮ ನ್ನು ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/171461.html
೧. ನಾಲ್ಕು ವರ್ಣ ಮತ್ತು ಅವುಗಳ ಗುಣ-ಕರ್ಮಗಳ ಮಾಹಿತಿ !
ಮೊತ್ತಮೊದಲಿಗೆ ನಾವು ೪ ವರ್ಣಗಳ ಬಗ್ಗೆ ತಿಳಿದುಕೊಳ್ಳೋಣ ಭಗವಂತನು ‘ಶ್ರೀಮದ್ಭಗವದ್ಗೀತೆ’ ಯಲ್ಲಿ ಹೀಗೆ ಹೇಳಿದ್ದಾನೆ, ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ |’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೧೩) ಅಂದರೆ ಗುಣ ಮತ್ತು ಕರ್ಮಕ್ಕನುಸಾರ ೪ ವರ್ಣಗಳನ್ನು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ) ನಾನೇ ಸೃಷ್ಟಿಸಿದ್ದೇನೆ.
ಮನುಷ್ಯನ ಪ್ರಗತಿಯಲ್ಲಿ ಈ ೪ ವರ್ಣಗಳ ಮಹತ್ವದ ಸಹಭಾಗವಿದೆ. ಈ ೪ ವರ್ಣಗಳು ಜಾತಿವ್ಯವಸ್ಥೆಗೆ ಸಂಬಂಧಿಸಿರದೇ ಗುಣ ಮತ್ತು ಕರ್ಮಕ್ಕನುಸಾರ ಆಗಿವೆ. ಭಗವಂತನು ಪ್ರತಿಯೊಂದು ವರ್ಣಕ್ಕನುಸಾರ ಅದರ ನಿಯಮ, ಕರ್ತವ್ಯ ಮತ್ತು ಕರ್ಮವನ್ನು ನಿಶ್ಚಯಿಸಿಕೊಟ್ಟಿದ್ದಾನೆ. ವ್ಯಕ್ತಿಯು ಅದಕ್ಕನುಸಾರ ಆಚರಣೆ ಮಾಡಿದರೆ ಅವನಿಗೆ ಪ್ರಗತಿಪಥದಲ್ಲಿ ಸಾಗಲು ಸಹಾಯವಾಗುತ್ತದೆ. ಈ ವರ್ಣವ್ಯವಸ್ಥೆಯು ಸಮಾಜದಲ್ಲಿ ಭೇದವನ್ನು ಸೃಷ್ಟಿಸಲು ಅಲ್ಲ, ಬದಲಾಗಿ ಸಮಾಜದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಗುಣ ಮತ್ತು ಕರ್ಮಕ್ಕನುಗುಣವಾಗಿ ಸಮತೋಲನವನ್ನು ಕಾಯ್ದುಕೊಳ್ಳಲು ಭಗವಂತನು ನಿರ್ಮಿಸಿದ್ದಾನೆ. ಪ್ರತಿಯೊಂದು ಜೀವದಲ್ಲಿರುವ ರಜ-ತಮ ಗುಣಗಳ ಪ್ರಭಾವವು ಅದರ ಕರ್ಮದ ಮೇಲೆ ಕಂಡುಬರುತ್ತದೆ. ಕೆಲವು ಕಾರ್ಯಗಳಿಗಾಗಿ ಸತ್ತ್ವಗುಣದ, ಇನ್ನು ಕೆಲವು ಕಾರ್ಯಗಳಿಗಾಗಿ ರಜ-ತಮ ಗುಣಗಳ ಅವಶ್ಯಕತೆಯಿರುತ್ತದೆ. ಇದಕ್ಕಾಗಿಯೇ ಭಗವಂತನು ಈ ೩ ಗುಣಗಳ ಆಧಾರದ ಮೇಲೆ ೪ ವರ್ಣಗಳಿಗೆ ಅವುಗಳ ಕರ್ಮಗಳನ್ನು ನಿಶ್ಚಯಿಸಿಕೊಟ್ಟಿದ್ದಾನೆ.

ಅ. ಬ್ರಾಹ್ಮಣನ ಸ್ವಾಭಾವಿಕ ಕರ್ಮಗಳು ಮತ್ತು ಬ್ರಾಹ್ಮಣ ಭೂಮಿಯ ಗುಣ
ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ |
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೮, ಶ್ಲೋಕ ೪೨
ಅರ್ಥ : ಅಂತಃಕರಣದ ನಿಗ್ರಹ, ಇಂದ್ರಿಯಗಳ ದಮನ, ಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು, ಅಂತರ್ಬಾಹ್ಯ ಶುದ್ಧವಾಗಿರುವುದು, ಕ್ಷಮಾಶೀಲತೆ, ಸರಳತೆ, ವೇದಶಾಸ್ತ್ರಗಳ ಅಧ್ಯಯನ-ಅಧ್ಯಾಪನ; ಈಶ್ವರ, ಶಾಸ್ತ್ರ ಮತ್ತು ಪರಮತತ್ತ್ವ ಇವುಗಳಲ್ಲಿ ಶ್ರದ್ಧೆ, ಇವು ಬ್ರಾಹ್ಮಣನ ಸ್ವಾಭಾವಿಕ ಕರ್ಮಗಳಾಗಿವೆ.
ಯಾವುದಾದರೊಂದು ಭೂಮಿಯು ಬ್ರಾಹ್ಮಣ ತತ್ತ್ವದ ಗುಣಗಳಿಂದ ಕೂಡಿದ್ದರೆ, ಆ ಭೂಮಿಯಲ್ಲಿ ವಾಸಿಸುವವರಿಗೆ ಮೇಲೆ ಹೇಳಿದಂತಹ ಬ್ರಾಹ್ಮಣ ವರ್ಣದ ಕರ್ಮಗಳನ್ನು ಮಾಡುವಾಗ ಯಶಸ್ಸು ಪ್ರಾಪ್ತಿಯಾಗುತ್ತದೆ. ಈ ಬ್ರಾಹ್ಮಣ ವರ್ಣದ ಭೂಮಿಯಲ್ಲಿ ವಾಸಿಸುವವರು ಸಜ್ಜನರು, ವಿದ್ವಾಂಸರು, ಸಂಯಮಿಗಳು, ಸದಾಚಾರಿಗಳು ಮತ್ತು ಚಾರಿತ್ರ್ಯವಂತ ರಾಗಿರುತ್ತಾರೆ. ಈ ಭೂಮಿಯಲ್ಲಿ ಭೌತಿಕ ಸುಖಸೌಲಭ್ಯಗಳು ಸಿಕ್ಕೇ ಸಿಗುತ್ತವೆ ಎಂದೇನಿಲ್ಲ; ಆದರೆ ಆಧ್ಯಾತ್ಮಿಕತೆ, ಹಾಗೆಯೇ ಸಮಾಜದಲ್ಲಿ ಮಾನಸನ್ಮಾನ ಮತ್ತು ಆದರ ಇತ್ಯಾದಿ ವಿಷಯಗಳು ಪ್ರಾಪ್ತವಾಗುತ್ತವೆ.
ಆ. ಕ್ಷತ್ರಿಯನ ಸ್ವಾಭಾವಿಕ ಕರ್ಮಗಳು ಮತ್ತು ಕ್ಷತ್ರಿಯ ಭೂಮಿಯ ಗುಣ
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ |
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೮, ಶ್ಲೋಕ ೪೩
ಅರ್ಥ : ಶೌರ್ಯ, ತೇಜ, ಧೈರ್ಯ, ಚಾತುರ್ಯ, ಯುದ್ಧದಲ್ಲಿ ಪಲಾಯನ ಮಾಡದಿರುವುದು, ದಾನ ನೀಡುವುದು ಮತ್ತು ಸ್ವಾಮಿತ್ವ, ಇವು ಕ್ಷತ್ರಿಯರ ಸ್ವಾಭಾವಿಕ ಕರ್ಮಗಳಾಗಿವೆ.
ದಷ್ಟಪುಷ್ಟ ಶರೀರವಿರುವುದು ಸಹ ಕ್ಷತ್ರಿಯನ ದೃಷ್ಟಿಯಿಂದ ಅವಶ್ಯಕವಾಗಿರುತ್ತದೆ. ಸಜ್ಜನರ ಮತ್ತು ಧರ್ಮದ ರಕ್ಷಣೆ, ಹಾಗೆಯೇ ಸಮಾಜದ ಮೇಲೆ ನಿಯಂತ್ರಣ ಇಡುವುದು ಇತ್ಯಾದಿ ಕರ್ಮಗಳನ್ನು ಕ್ಷತ್ರಿಯರು ಮಾಡಬೇಕಾಗುತ್ತದೆ. ಕ್ಷತ್ರಿಯ ವರ್ಣದ ಭೂಮಿ ಇದ್ದರೆ ಅಲ್ಲಿ ವಾಸಿಸುವ ಕುಟುಂಬದ ಮುಂದಿನ ಪೀಳಿಗೆಗಳಿಗೆ ಶಿಕ್ಷಣ, ವ್ಯವಸ್ಥಾಪನೆ, ಬುದ್ಧಿ, ಶಕ್ತಿಯಿಂದ ಕೂಡಿದ ಕಾರ್ಯಕ್ಷೇತ್ರ, ರಾಜಕಾರಣ, ಯುದ್ಧಕಲೆ, ಶಸ್ತ್ರಕಲೆ, ಸಮಾಜದ ರಕ್ಷಣೆ ಮತ್ತು ದಾನಶೂರತ್ವ ಇತ್ಯಾದಿ ಗುಣಗಳ ಲಾಭವಾಗುತ್ತದೆ. ಭೌತಿಕ ಸುಖಸೌಲಭ್ಯಗಳು ಉತ್ತಮ ರೀತಿಯಲ್ಲಿ ಸಿಗುತ್ತವೆ; ಆದರೆ ಆಧ್ಯಾತ್ಮಿಕತೆ ಸಿಕ್ಕೇ ಸಿಗುತ್ತದೆ ಎಂದು ಹೇಳಲು ಬರುವುದಿಲ್ಲ.
ಇ. ವೈಶ್ಯ ಮತ್ತು ಶೂದ್ರರ ಸ್ವಾಭಾವಿಕ ಕರ್ಮಗಳು ಮತ್ತು ಅವರ ಭೂಮಿಯ ಗುಣ
ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ |
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೮, ಶ್ಲೋಕ ೪೪
ಅರ್ಥ : ಕೃಷಿಕರ್ಮ, ಗೋಪಾಲನೆ ಮತ್ತು ವ್ಯಾಪಾರ ಇವು ವೈಶ್ಯರ ಸ್ವಾಭಾವಿಕ ಕರ್ಮಗಳಾಗಿವೆ, ಇನ್ನು ಸೇವೆ ಮತ್ತು ಶುಶ್ರೂಷೆಯು ಶೂದ್ರ ವರ್ಣದ ಸ್ವಾಭಾವಿಕ ಕರ್ಮಗಳಾಗಿವೆ.
ಮೇಲಿನ ಶ್ಲೋಕದಲ್ಲಿ ವೈಶ್ಯರ ಕರ್ಮವನ್ನು ಹೇಳಲಾಗಿದೆ. ಮನುಷ್ಯರ ಭೌತಿಕ ಸಾಧನಗಳನ್ನು ಪೂರೈಸುವ ಕಾರ್ಯವು ವೈಶ್ಯ ವರ್ಣದ ಬಳಿಯಿರುತ್ತದೆ. ಈ ವರ್ಣದ ಭೂಮಿಯಲ್ಲಿ ನಿವಾಸ ಮಾಡುವ ಕುಟುಂಬಕ್ಕೆ ಕೃಷಿ, ವ್ಯಾಪಾರ, ವಾಣಿಜ್ಯ ಕರ್ಮ ಇತ್ಯಾದಿ ವಿಷಯಗಳಲ್ಲಿ ಲಾಭ ಸಿಗುತ್ತದೆ. ಭೌತಿಕ ಸುಖದ ದೃಷ್ಟಿಯಿಂದ ಈ ಭೂಮಿಯು ಲಾಭದಾಯಕವಾಗಿರುತ್ತದೆ; ಆದರೆ ಆರೋಗ್ಯ, ಧೈರ್ಯ, ಬುದ್ಧಿ ಮತ್ತು ಉತ್ತಮ ಚಾರಿತ್ರ್ಯ ಈ ವಿಷಯಗಳು ಈ ಭೂಮಿಯಲ್ಲಿ ಲಭಿಸುತ್ತವೆ ಎಂದು ಹೇಳಲು ಬರುವುದಿಲ್ಲ.
೩ ವರ್ಣಗಳಂತೆ ಕಾರ್ಯ ಮಾಡುವ ಸಮಾಜದ ಸೇವೆ ಮತ್ತು ಶುಶ್ರೂಷೆ ಈ ಕರ್ಮಗಳನ್ನು ಶೂದ್ರ ವರ್ಣಕ್ಕೆ ನೀಡಲಾಗಿದೆ. ಶೂದ್ರ ವರ್ಣದ ಭೂಮಿಯು ಪ್ರಾಪ್ತವಾದರೆ, ಅವರ ಮುಂದಿನ ಪೀಳಿಗೆಗಳ ಬೌದ್ಧಿಕ ವಿಕಾಸವು ದಿನೇ ದಿನೇ ಕುಂಠಿತವಾಗುತ್ತಾ ಹೋಗುತ್ತದೆ. ಭೌತಿಕ ಸುಖದಲ್ಲಿಯೂ ದಿನೇ ದಿನೇ ಕೊರತೆಯುಂಟಾಗುತ್ತದೆ. ದೈಹಿಕ ಕಷ್ಟದ ಕಾರ್ಯಕ್ಷೇತ್ರಗಳು ಈ ಭೂಮಿಯಲ್ಲಿ ವಾಸಿಸುವವರಿಗೆ ಪ್ರಾಪ್ತವಾಗುತ್ತವೆ.
ವೇದಗಳಲ್ಲಿ ೪ ವರ್ಣಗಳನ್ನು ಮಾನವ ಶರೀರದ ೪ ಭಾಗಗಳೆಂದು ವರ್ಣಿಸಲಾಗಿದೆ. ಶರೀರಕ್ಕಾಗಿ ನಾಲ್ಕೂ ಭಾಗಗಳು ಮಹತ್ವದ್ದಾಗಿರುತ್ತವೆ. ಒಂದು ಭಾಗವು ಕಡಿಮೆಯಾದರೂ ಶರೀರಕ್ಕೆ ಹಾನಿಯಾಗುತ್ತದೆ ಮತ್ತು ಸಮತೋಲನ ಇರುವುದಿಲ್ಲ, ಅದೇ ರೀತಿ ಸಮಾಜರೂಪಿ ಪುರುಷನ ಶರೀರವು ಸಮತೋಲನದಲ್ಲಿರಲು ನಾಲ್ಕೂ ವರ್ಣಗಳು ಮಹತ್ವದ್ದಾಗಿವೆ. ಪ್ರತಿಯೊಂದು ವರ್ಣದ ವ್ಯಕ್ತಿಗಳು ತಮ್ಮ ಕರ್ಮವನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಮಾಡಿದರೆ ಖಂಡಿತವಾಗಿಯೂ ಸಮಾಜದ ಸ್ವಾಸ್ಥ್ಯವು ಚೆನ್ನಾಗಿದ್ದ್ತು ಎಲ್ಲರ ಆಧ್ಯಾತ್ಮಿಕ ಉನ್ನತಿಯೂ ಸಾಧ್ಯವಾಗುತ್ತದೆ.
೨. ಭೂಮಿ ಪರಿಗ್ರಹ (ಸ್ಥಳದ ಆಯ್ಕೆ ಮತ್ತು ಸ್ವೀಕಾರ)
ವರ್ಣಕ್ಕನುಸಾರ ಭೂಮಿಯ ವೈಶಿಷ್ಟ್ಯಗಳನ್ನು ನಾವು ತಿಳಿದು ಕೊಂಡೆವು. ಪ್ರತಿಯೊಂದು ವರ್ಣಕ್ಕನುಸಾರ ಭೂಮಿಯನ್ನು ಗುರುತಿಸಲು ಶಾಸ್ತ್ರಕಾರರು ಕೆಲವು ನಿಯಮಗಳನ್ನು ನೀಡಿದ್ದಾರೆ. ಪಂಚಜ್ಞಾನೇಂದ್ರಿಯಗಳಿಂದ ಭೂಮಿಯ ಶಬ್ದ, ಸ್ಪರ್ಶ, ರಸ, ಗಂಧ ಮತ್ತು ವರ್ಣಗಳಿಗನುಸಾರ ಅದು ಯಾವ ವರ್ಣದ್ದಾಗಿದೆ ಎಂಬ ಬಗೆಗಿನ ಅಂಶಗಳನ್ನು ನೀಡಲಾಗಿದೆ. ಭೂಮಿಯ ಆಕಾರ ಮತ್ತು ಬಣ್ಣಗಳ ಅಧ್ಯಯನವೂ ಮಹತ್ವದ್ದಾಗಿದೆ. ವಾಸ್ತುಶಾಸ್ತ್ರದಲ್ಲಿ ಭೂಮಿಯ ಇಳಿಜಾರಿನ ಅಧ್ಯಯನಕ್ಕೂ ಮಹತ್ವ ನೀಡಲಾಗಿದೆ. ಇಳಿಜಾರನ್ನೇ ‘ಪ್ಲವ’ ಎಂದೂ ಕರೆಯುತ್ತಾರೆ. ಮೇಲಿನ ಅಂಶಗಳನ್ನು ಅಧ್ಯಯನ ಮಾಡಿ ಭೂಮಿಯ ವರ್ಣವನ್ನು ನಿರ್ಧರಿಸಿ ಭೂಮಿಯನ್ನು ಆಯ್ಕೆ ಮಾಡಬೇಕು.
ಅ. ಬ್ರಾಹ್ಮಣ ವರ್ಣದ ಭೂಮಿ
ಚತುರಶ್ರಂ ದ್ವಿಜಾತೀನಾಂ ವಸ್ತು ಶ್ವೇತಮನಿಂದಿತಮ್ |
ಉದುಂಬರದ್ರುಮೋಪೇತಮ್ ಉತ್ತರಪ್ರವಣಂ ವರಮ್ |
– ಮಯಮತಮ್, ಅಧ್ಯಾಯ ೨, ಶ್ಲೋಕ ೧೦
ಅರ್ಥ : ಬ್ರಾಹ್ಮಣವರ್ಣಕ್ಕಾಗಿ (ಬುದ್ಧಿಜೀವಿಗಳಿಗಾಗಿ) ಚೌಕಾಕಾರದ (ನಾಲ್ಕೂ ಬದಿ ಸಮಾನ) ಸ್ಥಳ, ಯಾವುದರಲ್ಲಿ ಔದುಂಬರ ಮರವಿದ್ದು ಭೂಮಿಯ ಬಣ್ಣವು ಬಿಳಿಯಾಗಿದೆಯೋ, ಯಾವ ಭೂಮಿಯ ಇಳಿಜಾರು ಉತ್ತರದ ಕಡೆಗಿದೆಯೋ, ಇಂತಹ ಮಧುರ ರುಚಿಯ ಸುಗಂಧಿತ ಸ್ಥಳವು ಬ್ರಾಹ್ಮಣ ವರ್ಣಕ್ಕಾಗಿ ಉತ್ತಮ ಮತ್ತು ಸುಖಪ್ರದವಾಗಿರುತ್ತದೆ. ‘ಘೃತಗಂಧಾ ಭವೇದ್ವಿಪ್ರೀ’, ಎಂದೂ ಶಾಸ್ತ್ರದಲ್ಲಿ ಹೇಳಲಾಗಿದೆ, ಅಂದರೆ ತುಪ್ಪದ ವಾಸನೆಯಿರುವ ಭೂಮಿಯು ಬ್ರಾಹ್ಮಣ ವರ್ಣಕ್ಕೆ ಉತ್ತಮವಾಗಿರುತ್ತದೆ.
ಆ. ಕ್ಷತ್ರಿಯ ವರ್ಣದ ಭೂಮಿ
ಕಷಾಯಮಧುರಂ ಸಮ್ಯಕ್ ಕಥಿತಂ ತತ್ ಸುಖಪ್ರದಮ್ |
ವ್ಯಾಸಾಷ್ಟಾಂಶಾಧಿಕಾಯಾಮಂ ರಕ್ತಂ ತಿಕ್ತರಸಾನ್ವಿತಮ್ ||
ಪ್ರಾಂಙ್ನಿಮ್ನಂ ತತ್ ಪ್ರವಿಸ್ತೀರ್ಣಮಶ್ವತ್ಥದ್ರುಮಸಂಯುತಮ್ |
ಪ್ರಶಸ್ತಂ ಭೂಭೃತಾ ವಸ್ತು ಸರ್ವಸಂಪತ್ಕರಂ ಸದಾ ||
– ಮಯಮತಮ್, ಅಧ್ಯಾಯ ೨, ಶ್ಲೋಕ ೧೧ ಮತ್ತು ೧೨
ಅರ್ಥ : ಕ್ಷತ್ರಿಯರಿಗಾಗಿ (ಕ್ಷತ್ರಿಯ ವರ್ಣದಂತೆ ಕಾರ್ಯಕ್ಷೇತ್ರ ವಿರುವವರಿಗಾಗಿ) ಆಯತಾಕಾರದ ಸ್ಥಳ ಯಾವುದರ ಉದ್ದವು ಅಗಲಕ್ಕಿಂತ ಎಂಟನೇ ಒಂದು ಭಾಗದಷ್ಟು ಹೆಚ್ಚಾಗಿದೆ (ಉದಾಹರಣೆಗೆ ಒಂದು ಸ್ಥಳದ ಅಗಲ ೪೦ ಮೀಟರ್ ಇದ್ದರೆ, ಅದರ ಉದ್ದವು ೪೫ ಮೀಟರ್‌ಗಿಂತ ಹೆಚ್ಚಿದ್ದರೆ), ಅದು ಕಡುಕೆಂಪು ಬಣ್ಣದಾಗಿದ್ದು, ರುಚಿಯಲ್ಲಿ ಕಹಿ ಅಥವಾ ಖಾರವಾಗಿದ್ದು ಇಳಿಜಾರು ಪೂರ್ವ ದಿಕ್ಕಿಗಿರುತ್ತದೆ, ಅಶ್ವತ್ಥ ಮರದ ಸಾನ್ನಿಧ್ಯವು ಆ ಸ್ಥಳಕ್ಕಿದ್ದರೆ, ಅಂತಹ ಸ್ಥಳವು ಕ್ಷತ್ರಿಯರಿಗೆ ಪ್ರಶಸ್ತವಾಗಿದ್ದು ಸರ್ವ ವೈಭವವನ್ನು ನೀಡುವಂತದ್ದಾಗಿದೆ.
ಇ. ವೈಶ್ಯ ವರ್ಣದ ಭೂಮಿ
ಷಡಂಶೇನಾಧಿಕಾಯಾಮಂ ಪೀತಮಮ್ಲರಸಾನ್ವಿತಮ್ |
ಪ್ಲಕ್ಷದ್ರುಮಯುತಂ ಪೂರ್ವಾವನತಂ ಶುಭದಂ ವಿಶಾಮ್ ||
– ಮಯಮತಮ್, ಅಧ್ಯಾಯ ೨, ಶ್ಲೋಕ ೧೩
ಅರ್ಥ : ಆಯತಾಕಾರದ ಸ್ಥಳ ಯಾವುದರ ಉದ್ದವು ಅಗಲಕ್ಕಿಂತ ಆರನೇ ಒಂದು ಭಾಗದಷ್ಟು ಹೆಚ್ಚಿದೆಯೋ (ಉದಾಹರಣೆಗೆ ಒಂದು ಸ್ಥಳದ ಅಗಲ ೪೦ ಮೀಟರ್ ಇದ್ದರೆ ಉದ್ದ ೪೬.೬ ಮೀಟರ್‌ಗಿಂತ ಹೆಚ್ಚಿದ್ದರೆ) ಯಾವುದರ ಬಣ್ಣ ತಿಳಿಹಳದಿಯಾಗಿದ್ದು ಹುಳಿ ರುಚಿ ಇರುವ ಕಲ್ಲಿತ್ತಿ ಮರ(ಕಲ್ಲಿನ ಸಂದುಗಳಲ್ಲಿ ಬೆಳೆಯುವ ಮರ)ಗಳಿಂದ ಯುಕ್ತವಾಗಿದ್ದು ಪೂರ್ವದ ಕಡೆಗೆ ಇಳಿಜಾರು ಇದ್ದರೆ ವೈಶ್ಯ ವರ್ಣಕ್ಕಾಗಿ ಈ ಭೂಮಿಯು ಉತ್ತಮವಾಗಿರುತ್ತದೆ.
ಈ. ಶೂದ್ರ ವರ್ಣದ ಭೂಮಿ
ಚತುರಂಶಾಧಿಕಾಯಾಮಂ ವಸ್ತು ಪ್ರಾಕ್ ಪ್ರವಣಾನ್ವಿತಮ್ |
ಕೃಷ್ಣಂ ತತ್ ಕಟುಕರಸಂ ನ್ಯಗ್ರೋಧದ್ರುಮಸಂಯುತಮ್ ||
ಪ್ರಶಸ್ತಂ ಶೂದ್ರ ಜಾತೀನಾಂ ಧನಧಾನ್ಯಸಮೃದ್ಧಿದಮ್ |
– ಮಯಮತಮ್, ಅಧ್ಯಾಯ ೨, ಶ್ಲೋಕ ೧೪, ೧೫
ಅರ್ಥ : ಶೂದ್ರ ವರ್ಣಕ್ಕಾಗಿ ಆಯತಾಕಾರದ ಸ್ಥಳ ಯಾವುದರ ಉದ್ದವು ಅಗಲಕ್ಕಿಂತ ನಾಲ್ಕನೇ ಒಂದು ಭಾಗದಷ್ಟು ಹೆಚ್ಚಿದೆಯೋ (ಉದಾ. ಅಗಲ ೪೦ ಮೀಟರ್ ಇದ್ದರೆ ಉದ್ದ ೫೦ ಮೀಟರ್‌ಗಿಂತ ಹೆಚ್ಚಿದ್ದರೆ) ಪೂರ್ವ ದಿಕ್ಕಿನ ಕಡೆಗೆ ಇಳಿಜಾರು ಇದೆ ಮತ್ತು ಬಣ್ಣದಲ್ಲಿ ಕಪ್ಪಾಗಿದ್ದು, ಕಹಿ ರುಚಿಯ, ಹಾಗೆಯೇ ಆಲದ ಮರದ ಸಾನ್ನಿಧ್ಯವಿರುವ ಭೂಮಿಯು ಸೇವಾಕಾರ್ಯ ಮತ್ತು ಶುಶ್ರೂಷೆ ಮಾಡುವವರಿಗೆ ಅನುಕೂಲವೆಂದು ಹೇಳಲಾಗಿದೆ.
ಮೇಲಿನ ಶ್ಲೋಕಗಳಲ್ಲಿ ವಿವಿಧ ವರ್ಣದ ಭೂಮಿಗಳ ಲಕ್ಷಣಗಳನ್ನು ಹೇಳಲಾಗಿದೆ. ಅವುಗಳಲ್ಲಿ ಕಡಿಮೆಪಕ್ಷ ೪ ವಿಷಯಗಳು ಹೊಂದಾಣಿಕೆಯಾಗುತ್ತಿದ್ದರೆ, ಅದನ್ನು ಆ ವರ್ಣವೆಂದು ತಿಳಿಯಬೇಕು. ಆಯ್ಕೆ ಮಾಡುವ ಭೂಮಿಗಳಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಣದ ಭೂಮಿಯನ್ನು ನಾವು ಆರಿಸಿಕೊಂಡರೆ, ಅವರ ಮುಂದಿನ ಪೀಳಿಗೆಯವರೂ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂಬುದು ಖಚಿತ.
೩. ಇತರ ಅಂಶಗಳು
ಭೂಮಿಯು ಕೀಟಗಳು, ಬಿಳಿ ಇರುವೆಗಳು (ಗೆದ್ದಲು), ಇಲಿಗಳು, ಬುರುಡೆಗಳು, ಮೂಳೆಗಳು, ಶಂಖಗಳು, ರಂಧ್ರಗಳು ಇತ್ಯಾದಿಗಳಿಂದ ಮುಕ್ತವಾಗಿದ್ದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಇಲ್ಲದಿದ್ದರೆ ಈ ಶಲ್ಯದೋಷಗಳಿಂದ ವಾಸ್ತುಮಾಲೀಕನು ವಿವಿಧ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಸ್ಥಳವು ಸಮತೋಲನವಾಗಿದ್ದರೆ ಉತ್ತಮ; ಆದರೆ ಏರಿಳಿತಗಳಿದ್ದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕು ಎತ್ತರವಾಗಿರಬೇಕು ಮತ್ತು ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಇಳಿಜಾರು ಇರಬೇಕು.
(ಆಧಾರ : ಗ್ರಂಥ ‘ಶ್ರೀಮದ್ಭಗವದ್ಗೀತೆ’ ಮತ್ತು ‘ಮಯಮತಮ್’)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೮.೧.೨೦೨೬)

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು