“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”

ಶ್ರೀರಾಮ ಮಂದಿರ ಟ್ರಸ್ಟ್‌ನ ಕೋಶಾಧಿಕಾರಿ ಹುದ್ದೆಯ ರಾಜೀನಾಮೆ ಕುರಿತು ಪ.ಪೂ. ಸ್ವಾಮಿ ಗೋವಿಂದದೇವ ಗಿರಿಯವರ ಹೇಳಿಕೆ

ಪ.ಪೂ. ಗೋವಿಂದ್ ದೇವ್ ಗಿರಿ ಮಹಾರಾಜ್

ಪುಣೆ ,ಜುಲೈ 14 (ವಾರ್ತೆ) “ನಿನ್ನೆಯಿಂದ ಸಾಮಾಜಿಕ ಮಾಧ್ಯಮಗಳು ಮತ್ತು ಸುದ್ದಿವಾಹಿನಿಗಳಲ್ಲಿ ನನ್ನ ರಾಜೀನಾಮೆಯ ವದಂತಿಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಆ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಕಲ್ಪಿತವಾಗಿವೆ. ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ನ ಕೋಶಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವ ಆಲೋಚನೆಯನ್ನೂ ನಾನು ಮಾಡಿಲ್ಲ. ನಾನು ರಣರಂಗ ಬಿಟ್ಟು ಓಡಿಹೋಗುವವನಲ್ಲ, ಕೊನೆಯವರೆಗೂ ಹೋರಾಡುತ್ತೇನೆ. ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿ” ಎಂದು ಅಯೋಧ್ಯೆಯ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ನ ಕೋಶಾಧಿಕಾರಿಗಳಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿಯವರು ಪುಣೆಯ ‘ಧರ್ಮಶ್ರೀ’ಯ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ.ಪೂ. ಸ್ವಾಮಿ ಗೋವಿಂದದೇವ ಗಿರಿಯವರು ಮಂಡಿಸಿದ  ಅಂಶಗಳು –

1. ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವವರೆಲ್ಲರೂ ಎಸ್‌.ಬಿ.ಐ. (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಬ್ಯಾಂಕಿನ ನೌಕರರಾಗಿದ್ದಾರೆ. ಇದರಲ್ಲಿ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ನ ಯಾವುದೇ ಉದ್ಯೋಗಿ ಅಥವಾ ಪದಾಧಿಕಾರಿಯ ಕೈವಾಡವಿಲ್ಲ. ದೇಣಿಗೆ ಹಣದ ಎಣಿಕೆ ಮತ್ತು ಅದರ ನಿರ್ವಹಣೆಯ ಜವಾಬ್ದಾರಿಯನ್ನು ಎಸ್‌.ಬಿ.ಐ.ಗೆ ವಹಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಕೆಲಸ ಮಾಡುವ ನೌಕರರನ್ನು ಎಸ್‌.ಬಿ.ಐ. ಸಂಸ್ಥೆಯೇ ನೇಮಕ ಮಾಡಿದೆ.

2. ⁠‘ಎಸ್‌.ಐ.ಟಿ.’ (ವಿಶೇಷ ತನಿಖಾ ದಳ) ಈಗಾಗಲೇ ಮಧ್ಯಂತರ ವರದಿಯನ್ನು ನೀಡಿದೆ; ಆದರೆ ಅಂತಿಮ ವರದಿಯ ನಂತರ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೈಕೋರ್ಟ್ ಮತ್ತು ಎಸ್‌.ಐ.ಟಿ. ನಡೆಸುತ್ತಿರುವ ತನಿಖೆಯ ಬಗ್ಗೆ ನನಗೆ ತೃಪ್ತಿಯಿದೆ.

3. ಕೆಲವು ತಿಂಗಳುಗಳ ಹಿಂದೆ ‘ರಾಮಮಂದಿರದ ಅಮೂಲ್ಯ ವಸ್ತುಗಳು, ಬೆಳ್ಳಿಯ ಇಟ್ಟಿಗೆಗಳು ಕಳ್ಳತನವಾಗಿವೆ’ ಎಂಬ ವದಂತಿ ಹರಡಿತ್ತು. ಆ ಸಮಯದಲ್ಲಿ ಟ್ರಸ್ಟಿಗಳು ಭಕ್ತರು ದೇಣಿಗೆ ನೀಡಿದ್ದ 2,926 ರಷ್ಟು ಅಮೂಲ್ಯ ವಸ್ತುಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಸತ್ಯಾಂಶವನ್ನು ಬಹಿರಂಗಪಡಿಸಿದ್ದರು.

4. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಚಂಪತ ರಾಯ ಮತ್ತು ಡಾ. ಅನಿಲ ಮಿಶ್ರಾರವರ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಚಂಪತ ರಾಯ ರವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಟ್ರಸ್ಟ್‌ನ ನಿಯಮಾವಳಿಗಳ ಪ್ರಕಾರ ರಾಜೀನಾಮೆ ನೀಡಲಾಗಿದೆ ಎಂದರೆ ಅದನ್ನು ಅಂಗೀಕರಿಸಲಾಗಿದೆ ಎಂದೇ ಅರ್ಥ.

5. ‘ಶ್ರೀರಾಮ ಮಂದಿರ ಟ್ರಸ್ಟ್’ನ ಕೋಶಾಧಿಕಾರಿಯಾಗಿ ಈ ಇಡೀ ಘಟನೆಯ ನೈತಿಕ ಜವಾಬ್ದಾರಿ ನನ್ನ ಮೇಲಿದೆ ಎಂಬುದು ಖಚಿತ. ಈ ಘಟನೆಯ ಬಗ್ಗೆ ನನಗೆ ತೀವ್ರ ಬೇಸರ ಮತ್ತು ದುಃಖವಾಗಿದೆ. ತಲೆ ತಗ್ಗಿಸುವಂತಹ ಘಟನೆ ಇದಾಗಿದೆ. ನಾನು ಕೋಶಾಧಿಕಾರಿಯಾಗಿದ್ದೇನೆ ಎಂದ ಮಾತ್ರಕ್ಕೆ ಈ ಪ್ರಕರಣದ ಮೇಲೆ ಪ್ರಭಾವ ಬೀರುವ ಅಥವಾ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ.

6. ಶ್ರೀರಾಮ ಮಂದಿರದಲ್ಲಿ ನಡೆದ ಕಳ್ಳತನದ ಘಟನೆಯ ನಂತರ, ಮಂದಿರದ ಪಾವಿತ್ರ್ಯತೆಗಾಗಿ 70 ಪುರೋಹಿತರ ನೇತೃತ್ವದಲ್ಲಿ ‘ಸ್ಥಾನ ನಾಮಜಪ ಯಜ್ಞ’ದಂತಹ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.

ರಾಜಕೀಯ ಆರೋಪಗಳನ್ನು ತಳ್ಳಿಹಾಕಿದರು

“ಅಪರಾಧಿಗಳು ಯಾರೇ ಆಗಿದ್ದರೂ ಅವರು ಸಾರ್ವಜನಿಕರ ಮುಂದೆ ಬರಬೇಕು ಮತ್ತು ಅವರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಯಾವುದೇ ಘಟನೆಯಲ್ಲಿ ರಾಜಕಾರಣ ಮಾಡುವುದು ಭಾರತೀಯ ರಾಜಕಾರಣದ ಸ್ವಭಾವವಾಗಿದೆ. ವಿರೋಧ ಪಕ್ಷಗಳು ರಾಮಮಂದಿರದ ಕಳ್ಳತನದ ವಿಷಯದಲ್ಲೂ ರಾಜಕೀಯ ಮಾಡುತ್ತಿವೆ. ಈ ಕಳ್ಳತನಕ್ಕೂ ಯಾವುದೇ ರಾಜಕೀಯ ಪಕ್ಷ, ಸಂಸ್ಥೆ ಅಥವಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ.”

₹3 ಕೋಟಿ ವಂಚನೆಯ ಅಂದಾಜು!

“ಮೌಲ್ಯಯುತ ವಸ್ತುಗಳು ಅಥವಾ ಚಿನ್ನಾಭರಣಗಳು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗಿವೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು. ನನ್ನ ಅಂದಾಜಿನ ಪ್ರಕಾರ ಸುಮಾರು 3 ಕೋಟಿ ರೂಪಾಯಿಗಳಷ್ಟು ಹಣ ದುರುಪಯೋಗವಾಗಿರುವ ಸಾಧ್ಯತೆಯಿದೆ. ರಾಮಮಂದಿರದ ಹುಂಡಿಗೆ ಬರುವ ಹಣವು ಯಾವುದೇ ಹಿಂದೂ-ಮುಸ್ಲಿಂ ಅಥವಾ ಜಾತಿ-ಭೇದಕ್ಕೆ ಸೇರಿದ್ದಲ್ಲ. ಅದು ಕೇವಲ ಶ್ರೀರಾಮ ಭಕ್ತರ ಕಾಣಿಕೆಯಾಗಿದೆ.”

ನನ್ನ ಹೆಸರಿನಲ್ಲಿ ಕೇವಲ ಬ್ಯಾಂಕ್ ಖಾತೆಯಿದೆ

ಪತ್ರಿಕಾಗೋಷ್ಠಿಯನ್ನು ‘ಧರ್ಮಶ್ರೀ’ ಆವರಣದಲ್ಲಿ ನಡೆಸಲು ಕಾರಣವನ್ನು ಸ್ಪಷ್ಟಪಡಿಸಿದ ಅವರು, “ಈ ಸೊಸೈಟಿಯಲ್ಲಿ ಒಟ್ಟು 10 ಫ್ಲಾಟ್‌ಗಳಿವೆ. ಅವುಗಳಲ್ಲಿ 5 ಫ್ಲಾಟ್‌ಗಳು ನಮ್ಮ ಟ್ರಸ್ಟ್‌ಗೆ ಸೇರಿವೆ. ಮೂರು ಫ್ಲಾಟ್‌ಗಳಿಂದ ಟ್ರಸ್ಟ್‌ನ ಕಚೇರಿ ಕೆಲಸಗಳು ನಡೆಯುತ್ತವೆ, ಒಂದು ಫ್ಲಾಟ್‌ನಲ್ಲಿ ನಾನು ವಾಸಿಸುತ್ತೇನೆ ಮತ್ತು ಮತ್ತೊಂದು ಫ್ಲಾಟ್ ಅನ್ನು ಅತಿಥಿಗಳಿಗಾಗಿ ಕಾಯ್ದಿರಿಸಲಾಗಿದೆ. ವೈಯಕ್ತಿಕವಾಗಿ ನನ್ನ ಹೆಸರಿನಲ್ಲಿ ಕೇವಲ ಒಂದು ಬ್ಯಾಂಕ್ ಖಾತೆಯಿದೆಯೇ ಹೊರತು ಯಾವುದೇ ಫ್ಲಾಟ್, ಜಮೀನು, ಚಿನ್ನ ಅಥವಾ ಯಾವುದೇ ಅಮೂಲ್ಯ ವಸ್ತುಗಳಿಲ್ಲ” ಎಂದರು.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು –

1. ಖಿಸೆಯಿಲ್ಲದ ಸಮವಸ್ತ್ರ: ದೇಣಿಗೆ ಹಣ ಎಣಿಸುವ ಸಮಯದಲ್ಲಿ ಅಲ್ಲಿನ ನೌಕರರಿಗೆ ವಿಶೇಷ ಸಮವಸ್ತ್ರವನ್ನು (ಡ್ರೆಸ್ ಕೋಡ್) ನೀಡಲಾಗುವುದು. ಅದಕ್ಕೆ ಯಾವುದೇ ರೀತಿಯ ಜೇಬುಗಳು ಇರುವುದಿಲ್ಲ.

2. ⁠ಸಂಪೂರ್ಣ ಹಣದ ಎಣಿಕೆಯು ಸಿಸಿಟಿವಿ ಕ್ಯಾಮೆರಾಗಳ ಮುಂದೆಯೇ ನಡೆಯಲಿದ್ದು, ಯಾವುದೇ ರೀತಿಯ ಮರೆಮಾಚುವಿಕೆಗೆ ಅವಕಾಶವಿರುವುದಿಲ್ಲ.

3. ಇನ್ಮುಂದೆ ಹಣವನ್ನು ಜಮಖಾನದ ಮೇಲೆ ಹಾಕಿ ಎಣಿಸಲಾಗುವುದು. ಆ ಸಮಯದಲ್ಲಿ ಟ್ರಸ್ಟ್‌ನ ಇಬ್ಬರು ಪ್ರತಿನಿಧಿಗಳು ಹಾಗೂ ಎಸ್‌.ಬಿ.ಐ. ಬ್ಯಾಂಕಿನ ಇಬ್ಬರು ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರುತ್ತಾರೆ.

4. ಎಣಿಕೆಯ ಸಮಯದಲ್ಲಿ ಒಳಗೆ ಬರುವ ಮತ್ತು ಹೊರಗೆ ಹೋಗುವ ಪ್ರತಿಯೊಬ್ಬ ನೌಕರರನ್ನು ಪ್ರತಿದಿನ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುವುದು.