ಹಾರ್ಮುಜ್‌: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು

ಬಹರೇನ್, ಜೋರ್ಡಾನ್‌ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ; ಅಮೆರಿಕದಿಂದ ಪ್ರತ್ಯುತ್ತರ

​ಟೆಹರಾನ್ (ಇರಾನ್) – ಸಂಯುಕ್ತ ಅರಬ್ ಎಮಿರೇಟ್ಸ್‌ ನ (ಯುಎಇ) ರಕ್ಷಣಾ ಸಚಿವಾಲಯವು ನೀಡಿರುವ ಮಾಹಿತಿಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಒಮನ್ ಜಲಪ್ರದೇಶದ ಬಳಿ ಅಮೆರಿಕದ ಎರಡು ತೈಲ ನೌಕೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ‘ಮೊಂಬಾಸಾ’ ಮತ್ತು ‘ಅಲ್ ಬಾಹಿಯಾ’ ಎಂಬ ಈ ನೌಕೆಗಳ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಮೃತಪಟ್ಟಿದ್ದು, ೭ ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಇರಾನ್‌ ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ ಕ್ಷಿಪಣಿಗಳು ಮತ್ತು ಡ್ರೋನ್‌ ಗಳನ್ನು ಬಳಸಿ ಬಹರೇನ್‌ ನಲ್ಲಿರುವ ‘ಅಲ್-ಜುಫೈರ್’ ಸೇನಾ ನೆಲೆ ಮತ್ತು ಅಮೆರಿಕದ ‘೫ನೇ ನೌಕಾಪಡೆ’ಯ ಪ್ರಧಾನ ಕಛೇರಿಯ ಮೇಲೆ ಆಕ್ರಮಣ ಮಾಡಿರುವುದಾಗಿ ಹೇಳಿದೆ. ಇದಲ್ಲದೇ ಜೋರ್ಡಾನ್‌ ನಲ್ಲಿರುವ ವಾಯುಸೇನಾ ನೆಲೆಯೊಂದರ ಮೇಲಿದ್ದ ಅಮೆರಿಕದ ಸೈನಿಕರು ಮತ್ತು ಪ್ರಮುಖ ಸೇನಾ ಸಂಸ್ಥೆಗಳನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ಉಡಾಯಿಸಿದೆ.

​ಅಮೆರಿಕದ ‘ಸೆಂಟ್ರಲ್ ಕಮಾಂಡ್’ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಮೇಲೆ ನಡೆಸಲಾದ ದಾಳಿಯಲ್ಲಿ ಬುಶೆಹರ್, ಚಾಬಹಾರ್, ಜಾಸ್ಕ್, ಕೊನಾರಕ್, ಅಬು ಮೂಸಾ ಮತ್ತು ಅಬ್ಬಾಸ್ ಬಂದರಿನಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಲಾಗಿದೆ. ಸದ್ಯಕ್ಕೆ ಕೊಲ್ಲಿ ಪ್ರದೇಶದಲ್ಲಿ ಅಮೆರಿಕದ ೫೦,೦೦೦ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ.

ಸಂಯುಕ್ತ ಅರಬ್ ಎಮಿರೇಟ್ಸ್‌ ನಿಂದ ತೀವ್ರ ಖಂಡನೆ!

​ಸಂಯುಕ್ತ ಅರಬ್ ಎಮಿರೇಟ್ಸ್ ಇರಾನ್‌ ನ ಈ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಮತ್ತು ಪ್ರಾದೇಶಿಕ ಭದ್ರತೆಗೆ ಧಕ್ಕೆಯಾಗಿದೆ ಎಂದು ಹೇಳಿದೆ. ಈ ಹೆಚ್ಚುತ್ತಿರುವ ಆಕ್ರಮಣಕಾರಿ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ ಎಂದು ಎಮಿರೇಟ್ಸ್ ಸ್ಪಷ್ಟಪಡಿಸಿದೆ.​

ಇರಾನ್ ಅಧಿಕಾರಿಗಳಿಗೆ ಭಾರತ ಸಮನ್ಸ್

ಇರಾನ್ ನಡೆಸಿದ ಈ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯ ಮರಣದ ನಂತರ ಭಾರತದ ವಿದೇಶಾಂಗ ಸಚಿವಾಲಯವು ಇರಾನ್‌ ನ ರಾಜತಾಂತ್ರಿಕ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿದೆ. ಭಾರತವು ಇರಾನ್ ರಾಯಭಾರ ಕಚೇರಿಯಿಂದ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಈ ದಾಳಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.

​ಹಾರ್ಮುಜ್‌ ನಿಂದ ಹಾದುಹೋಗುವ ನೌಕೆಗಳಿಂದ ಶೇ. ೨೦% ರಷ್ಟು ತೆರಿಗೆ ವಸೂಲಿ ಮಾಡಲಾಗುವುದು! – ಟ್ರಂಪ್ ಘೋಷಣೆ

​ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಹಾರ್ಮುಜ್ ಜಲಸಂಧಿಯು (ಎರಡು ಜಲರಾಶಿಗಳನ್ನು ಜೋಡಿಸುವ ಜಲಮಾರ್ಗ) ಮುಕ್ತವಾಗಿರುತ್ತದೆ ಮತ್ತು ಅದರ ಭದ್ರತೆಯ ಜವಾಬ್ದಾರಿ ಅಮೆರಿಕದ್ದಾಗಿರುತ್ತದೆ ಎಂದು ಹೇಳಿದ್ದಾರೆ. ತಮ್ಮನ್ನು ತಾವು ‘ಹಾರ್ಮುಜ್ ಜಲಸಂಧಿಯ ರಕ್ಷಕ’ ಎಂದು ಹೇಳಿಕೊಂಡ ಟ್ರಂಪ್, ರಕ್ಷಣೆಯ ವೆಚ್ಚವನ್ನು ಸರಿದೂಗಿಸಲು ಜಲಸಂಧಿಯ ಮೂಲಕ ಹಾದುಹೋಗುವ ಎಲ್ಲಾ ಸರಕುಗಳ ಮೇಲೆ ಶೇ. ೨೦% ರಷ್ಟು ತೆರಿಗೆ ವಿಧಿಸಲಾಗುವುದು ಎಂದು ತಿಳಿಸಿದರು. ಇರಾನ್‌ ನ ನೌಕೆಗಳು ಮತ್ತು ಗ್ರಾಹಕರ ಮೇಲಿನ ನಿರ್ಬಂಧ ಮುಂದುವರಿಯಲಿದೆ; ಆದರೆ ಉಳಿದ ಎಲ್ಲಾ ದೇಶಗಳ ನೌಕೆಗಳು ಯಾವುದೇ ಅಡೆತಡೆಯಿಲ್ಲದೆ ಹಾರ್ಮುಜ್ ಮೂಲಕ ಸಾಗಬಹುದು. ಈ ನೂತನ ವ್ಯವಸ್ಥೆಗಾಗಿ ತಕ್ಷಣ ಕೆಲಸ ಪ್ರಾರಂಭಿಸಲಾಗುವುದೆಂದು ಟ್ರಂಪ್ ಹೇಳಿದರು.

ಹಾರ್ಮುಜ್ ನಿಯಂತ್ರಣವನ್ನು ಬಿಟ್ಟುಕೊಡುವುದಿಲ್ಲ! – ಇರಾನ್

​ಟ್ರಂಪ್ ಅವರ ಘೋಷಣೆಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಇರಾನ್ ಸೇನೆಯ ‘ಖಾತಮ್ ಅಲ್-ಅಂಬಿಯಾ’ ಪ್ರಧಾನ ಕಚೇರಿಯ ವಕ್ತಾರರು ಮಾತನಾಡಿ, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಯಾವುದೇ ಹಸ್ತಕ್ಷೇಪವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ಸಮುದ್ರ ಮಾರ್ಗದ ರಕ್ಷಣೆ ಮತ್ತು ನಿರ್ವಹಣೆಯ ಹಕ್ಕು ಇರಾನ್‌ ಗಿದೆ ಮತ್ತು ಅದರ ರಕ್ಷಣೆಗಾಗಿ ಇರಾನ್ ಪ್ರತಿ ಹೆಜ್ಜೆ ಇಡಲಿದೆ. ನಾವು ಹಾರ್ಮುಜ್ ಮೇಲಿನ ನಮ್ಮ ನಿಯಂತ್ರಣವನ್ನು ಕಾಯ್ದುಕೊಳ್ಳುತ್ತೇವೆ. ಅಮೆರಿಕದ ಹಸ್ತಕ್ಷೇಪ ಮತ್ತು ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು.

ಅಮೆರಿಕ-ಇರಾನ್ ಯುದ್ಧದ ಭೀತಿ; ಕಚ್ಚಾ ತೈಲ ಬೆಲೆಯಲ್ಲಿ ಶೇ. ೩% ರಷ್ಟು ಹೆಚ್ಚಳ

​ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜುಲೈ ೧೩ ರಂದು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಶೇ. ೩% ಕ್ಕಿಂತ ಅಧಿಕ ಹೆಚ್ಚಾಗಿದೆ. ಮಧ್ಯಾಹ್ನದ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ಗೆ ಸುಮಾರು ೭೮ ಡಾಲರ್‌ ತಲುಪಿತು.