ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ದಿಕ್ಕುಗಳು ಮತ್ತು ವಾಸ್ತುಶಾಸ್ತ್ರ – ಭಾಗ ೩

ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ಕ್ರಮಾಂಕ ೮

ಈಶ್ವರನು ಸೃಷ್ಟಿಯನ್ನು ನಿರ್ಮಿಸಿದಾಗ, ಅದರಲ್ಲಿ ಯಾವುದಾದರೊಂದು ವಸ್ತುವಿನ ಸ್ಥಾನವನ್ನು ನಿಶ್ಚಿತಗೊಳಿಸಲು ಭಗವಂತನು ದಿಕ್ಕುಗಳನ್ನು ನಿರ್ಮಿಸಿದನು. ದಿಕ್ಕುಗಳಿಂದಾಗಿ ಯಾವುದಾದರೊಂದು ವಸ್ತು ನಿಖರವಾಗಿ ಎಲ್ಲಿದೆ ಎಂದು ನಾವು ಹೇಳಬಹುದು. ದಿಕ್ಕುಗಳ ಶುಭಾಶುಭತೆಗನುಸಾರ ಮನುಷ್ಯನಿಗೆ ಫಲವನ್ನು ಅನುಭವಿಸಲು ಬರುತ್ತದೆ. ಪ್ರತಿಯೊಂದು ದಿಕ್ಕಿಗೂ ಒಬ್ಬ ಪಾಲಕನಿದ್ದಾನೆ, ಅವನನ್ನು ನಾವು ‘ದಿಕ್ಪಾಲ’ ಎಂದು ಕರೆಯುತ್ತೇವೆ. ಈ ದಿಕ್ಪಾಲಕರು ಆಯಾ ದಿಕ್ಕಿನ ಅಧಿಪತಿಗಳಾಗಿದ್ದು ಆ ದಿಕ್ಕಿನ ಕಾರಕತ್ವಕ್ಕನುಸಾರ (ಗುಣಲಕ್ಷಣಗಳಿಗನುಸಾರ) ಫಲವನ್ನು ನೀಡುವ ಕಾರ್ಯವನ್ನು ಮಾಡುತ್ತಾರೆ. ವಾಸ್ತುಶಾಸ್ತ್ರದ ದೃಷ್ಟಿಯಿಂದ ಎಲ್ಲಿ ಏನಿರಬೇಕು ಅಥವಾ ಏನಿರಬಾರದು, ಎಂಬುದನ್ನು ತಿಳಿದುಕೊಳ್ಳುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ ಮತ್ತು ಕಾರಕತ್ವವನ್ನು ತಿಳಿದುಕೊಂಡರೆ, ವಾಸ್ತುವಿನ ನಿಯಮಗಳು ಹೇಗೆ ಸಿದ್ಧವಾದವು ಎಂಬುದು ನಮಗೆ ತಿಳಿಯುತ್ತದೆ. ನಾವು ಪ್ರತಿ ದಿಕ್ಕಿನ ವೈಶಿಷ್ಟ್ಯವನ್ನು ತಿಳಿದುಕೊಳ್ಳೋಣ. ಈ ಹಿಂದಿನ  ಪ್ರಕಟವಾದ ಲೇಖನದಲ್ಲಿ ನಾವು ‘ಪೂರ್ವ, ಆಗ್ನೇಯ, ದಕ್ಷಿಣ, ನೈಋತ್ಯ’ ಈ ದಿಕ್ಕುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೆವು. ಈ ವಾರ ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಈ ಹಿಂದಿನ ಲೇಖನ ಕ್ರಮಾಂಕ -೭ ನ್ನು ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ :  https://sanatanprabhat.org/kannada/169984.html

೫. ಪಶ್ಚಿಮ ದಿಕ್ಕು

ಅ. ದೇವತೆ : ಈ ದಿಕ್ಕಿನ ದೇವತೆ ಶನಿ. ಎಲ್ಲ ರೀತಿಯ ಅವನತಿ, ಕಷ್ಟ, ದಾರಿದ್ರ್ಯ ಇವು ಈ ದಿಕ್ಕಿನ ಕಾರಕತ್ವಗಳಾಗಿವೆ. ಈ ದಿಕ್ಕು ದೋಷಪೂರಿತವಾದರೆ ಶ್ರಮ, ಸಮಯ, ಹಣ ವ್ಯಯವಾಗುವುದು, ಬೌದ್ಧಿಕ ಕ್ಷಮತೆಯು ವ್ಯರ್ಥವಾಗುವುದು ಇತ್ಯಾದಿ ಪರಿಣಾಮಗಳು ಕಂಡುಬರುತ್ತವೆ. ಸೂರ್ಯನು ಮುಳುಗುವ ಕಡೆಗೆ ಈ ದಿಕ್ಕು ಇದ್ದರೆ ಇದು ಕ್ಷೀಣತೆಯನ್ನು ಉಂಟು ಮಾಡುವ ದಿಕ್ಕಾಗಿದೆ.

ಆ. ಪಾಲಕ : ಈ ದಿಕ್ಕಿನ ಪಾಲಕ ವರುಣನಾಗಿದ್ದಾನೆ. ಇವನು ವಿಲಕ್ಷಣ ಮತ್ತು ಅತ್ಯಂತ ಐಶ್ವರ್ಯವನ್ನು ಪ್ರತಿನಿಧಿಸುವ ದೇವತೆಯಾಗಿದ್ದಾನೆ; ಆದರೆ ಇದು ಶನಿಯ ದಿಕ್ಕಾಗಿರುವುದರಿಂದ ಅಷ್ಟೊಂದು ಶುಭ ಫಲಗಳು ದೊರೆಯುವುದಿಲ್ಲ. ದಿನನಿತ್ಯದ ಬಳಕೆಗೆ ಉಪಯೋಗವಿಲ್ಲದಿದ್ದರೂ, ಕೆಲವು ವಿಶಿಷ್ಟ ವ್ಯವಹಾರ ಗಳಿಗೆ ಈ ದಿಕ್ಕು ಲಾಭದಾಯಕವಾಗಿದೆ; ಆದರೆ ಇಲ್ಲಿ ಶ್ರೀಮಂತಿಕೆ ಎಷ್ಟು ಕಾಲ ಉಳಿಯುತ್ತದೆ, ಎಂದು ಹೇಳಲು ಬರುವುದಿಲ್ಲ.

ಇ. ಪತ್ನಿ, ನಗರ ಮತ್ತು ಆಯುಧ : ಕಾಲಿಕಾ ಇವಳು ವರುಣನ ಪತ್ನಿಯಾಗಿದ್ದು, ನೈಋತ್ಯ ದಿಕ್ಕಿನಂತೆಯೇ ನಕಾರಾತ್ಮಕತೆಯನ್ನು ಉತ್ತೇಜಿಸುವವಳಾಗಿದ್ದಾಳೆ. ಕತ್ತಲೆಯಲ್ಲಿ ನಡೆಯುವ ಕೃತ್ಯಗಳಿಗೆ ಈ ದಿಕ್ಕು ಸಹಾಯ ಮಾಡುತ್ತದೆ; ಆದರೆ ಸಮಾಜದ ಆರೋಗ್ಯದ ದೃಷ್ಟಿಯಿಂದ ಅವೆಲ್ಲವೂ ಅನೈತಿಕವಾಗಿರುತ್ತವೆ. ‘ಶ್ರದ್ಧಾವತಿ’ ಎಂಬುದು ಇಲ್ಲಿನ ನಗರವಾಗಿದ್ದು, ಜೀವನದಲ್ಲಿ ಸದ್ವಿವೇಕ ಬುದ್ಧಿಯಿಂದ ಆಚರಣೆ ಮಾಡಿದರೆ ಮತ್ತು ಧರ್ಮದ ಮೇಲೆ ಶ್ರದ್ಧೆಯಿಟ್ಟರೆ ಈ ದಿಕ್ಕಿನ ನಕಾರಾತ್ಮಕತೆ ಕಡಿಮೆಯಾಗಲು ಸಹಾಯವಾಗುತ್ತದೆ. ಮೊಸಳೆಯು ವರುಣನ ವಾಹನವಾಗಿದ್ದು, ಪಾಶವು ಆಯುಧವಾಗಿದೆ. ಈ ಎರಡೂ ವಿಷಯಗಳು ಬಂಧಿಸುವ ಗುಣವನ್ನು ಹೊಂದಿರುವುದರಿಂದ, ಈ ದಿಕ್ಕು ಅಶುಭವಾದರೆ ಮನುಷ್ಯನು ಎಲ್ಲಾ ಬದಿಗಳಿಂದ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ.

ಈ. ಲಾಭ : ಇದು ಗಜಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕು ಶುಭವಾಗಿದ್ದರೆ ಸಂಪತ್ತು ಲಭಿಸುತ್ತದೆ; ಆದರೆ ಅದು ಬಹಳ ನಿಧಾನಗತಿಯಲ್ಲಿ ಪ್ರಾಪ್ತವಾಗುತ್ತದೆ. ಶನಿಯು ಮಂದಗತಿಯ ಗ್ರಹವಾಗಿರುವುದರಿಂದ ಈ ದಿಕ್ಕು ಅಶುಭವಾಗಿದ್ದರೆ ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬವಾಗುತ್ತದೆ. ಈ ದಿಕ್ಕು ಮಹಿಳೆಯರ ದೃಷ್ಟಿಯಿಂದ ಲಾಭದಾಯಕವಾಗಿದೆ. ಆದ್ದರಿಂದ ಮಹಿಳೆಯರಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈ ದಿಕ್ಕು ಪ್ರಯೋಜನಕಾರಿಯಾಗಿದೆ.

ಶ್ರೀ. ಶ್ರೇಯಸ್ ಪಿಸೋಳಕರ

೬. ವಾಯವ್ಯ ದಿಕ್ಕು

ಅ. ದೇವತೆ : ಚಂದ್ರನು ಈ ದಿಕ್ಕಿನ ದೇವತೆಯಾಗಿದ್ದು, ಚಂಚಲತೆ ಮತ್ತು ಅಸ್ಥಿರತೆಯು ಈ ದಿಕ್ಕಿನಿಂದ ಪ್ರಾಪ್ತವಾಗುತ್ತದೆ. ಶುಭ-ಅಶುಭ ದಿಕ್ಕುಗಳ ಮಧ್ಯ ಭಾಗದಲ್ಲಿ ಈ ದಿಕ್ಕು ಬರುವುದರಿಂದ ಇದು ಎರಡೂ ರೀತಿಯ ಫಲಗಳನ್ನು ನೀಡುತ್ತದೆ.

ಆ. ಪಾಲಕ : ವಾಯುವು ಈ ದಿಕ್ಕಿನ ಪಾಲಕನಾಗಿದ್ದಾನೆ. ಚಂಚಲತೆ, ಅಸ್ಥಿರತೆ, ಗತಿಶೀಲತೆ ಮತ್ತು ಕಾರ್ಯತತ್ಪರತೆ ಇವು ಅವನ ವೈಶಿಷ್ಟ್ಯಗಳಾಗಿವೆ. ಈ ದಿಕ್ಕು ಶುಭ ಮತ್ತು ನಿರ್ದೋಷವಾಗಿದ್ದರೆ ಮನೆಯಲ್ಲಿ ಶುದ್ಧ ವಾತಾವರಣವನ್ನು ನಿರ್ಮಿಸುತ್ತದೆ. ಉಸಿರುಗಟ್ಟುವ ವಾತಾವರಣವನ್ನು ಹೋಗಲಾಡಿಸಿ ಪ್ರಸನ್ನತೆಯನ್ನು ತರುತ್ತದೆ. ಈ ದಿಕ್ಕಿನಲ್ಲಿ ದೋಷ ಅಥವಾ ಪ್ರವೇಶದ್ವಾರವಿದ್ದರೆ, ಮನುಷ್ಯನ ಮನಸ್ಸಿನಲ್ಲಿ ಗೊಂದಲವನ್ನು ನಿರ್ಮಾಣ ಮಾಡುತ್ತದೆ. ವಾಯುವ್ಯ ದಿಕ್ಕಿನಲ್ಲಿ ಮಲಗುವ ಜಾಗವಿದ್ದರೆ, ಮನುಷ್ಯನು ಏಕಕಾಲದಲ್ಲಿ ಅನೇಕ ವಿಷಯಗಳ ಬಗ್ಗೆ ವಿಚಾರ ಮಾಡುತ್ತಾನೆ; ಆದರೆ ಅವು ಕೃತಿಯಲ್ಲಿ ಬರುವುದಿಲ್ಲ, ಎಂಬಂತಹ ಅವಸ್ಥೆ ಬರುತ್ತದೆ.

ಇ. ಪತ್ನಿ, ನಗರ ಮತ್ತು ವಾಹನ : ಅಂಜನಾ ಇವಳು ಈ ದಿಕ್ಕಿನ ಪಾಲಕನ ಪತ್ನಿಯಾಗಿದ್ದಾಳೆ ಮತ್ತು ಗಂಧವತಿ ಎಂಬುದು ನಗರವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಸುಗಂಧಿತ ವಸ್ತುಗಳನ್ನು ಇಟ್ಟರೆ ವಾಸ್ತುವಿಗೆ ಸಕಾರಾತ್ಮಕತೆ ಪ್ರಾಪ್ತವಾಗುತ್ತದೆ. ದಿಕ್ಪಾಲಕನ ವಾಹನ ಜಿಂಕೆಯಾಗಿದ್ದು, ಇದು ಸತತ ಕಾರ್ಯಮಗ್ನತೆಯನ್ನು ದರ್ಶಿಸುತ್ತದೆ.

ಈ. ಲಾಭ : ಇದು ವಿಜಯಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕು ಶುಭವಾಗಿದ್ದರೆ ಶತ್ರುಗಳ ಮೇಲೆ ವಿಜಯ ತಂದುಕೊಡುತ್ತದೆ. ಸಾಕುಪ್ರಾಣಿಗಳ ಕೊಟ್ಟಿಗೆಗೆ ಈ ದಿಕ್ಕು ಲಾಭದಾಯಕವಾಗಿದೆ.

ಈ ದಿಕ್ಕಿನಲ್ಲಿ ಉತ್ತರ-ವಾಯವ್ಯ ದಿಕ್ಕು ತೆರೆದಿದ್ದರೆ ನಡೆಯುತ್ತದೆ; ಆದರೆ ಪಶ್ಚಿಮ-ವಾಯವ್ಯ ದಿಕ್ಕನ್ನು ತೆರೆದಿಡುವುದನ್ನು ತಪ್ಪಿಸಬೇಕು.

೭. ಉತ್ತರ ದಿಕ್ಕು

ಅ. ದೇವತೆ : ಇದು ಅತ್ಯಂತ ಶುಭ ದಿಕ್ಕಾಗಿದ್ದು ಹಣ, ಸಂಪನ್ನತೆ ಮತ್ತು ಸಮೃದ್ಧಿ ಈ ದಿಕ್ಕಿನ ಕಾರಕತ್ವಗಳಾಗಿವೆ. ಈ ದಿಕ್ಕಿನ ದೇವತೆ ಬುಧ. ಕುಬೇರನು ದಿಕ್ಪಾಲಕನಾಗಿರುವುದರಿಂದ ಈ ದಿಕ್ಕನ್ನು ಸಾಧ್ಯವಾದಷ್ಟು ತೆರೆದಿಟ್ಟರೆ ಅದು ಸಮೃದ್ಧಿಯನ್ನು ನೀಡುತ್ತದೆ. ಅರ್ಥ (ಸಂಪತ್ತು) ಎಂಬ ಪುರುಷಾರ್ಥವು ಈ ದಿಕ್ಕಿನಲ್ಲಿದೆ. ಆದ್ದರಿಂದ ಇದು ಸಮೃದ್ಧಿಯನ್ನು ನೀಡುವ ದಿಕ್ಕಾಗಿದೆ.

ಆ. ಪಾಲಕ, ಪತ್ನಿ, ನಗರ, ವಾಹನ, ಆಯುಧ : ಕುಬೇರನು ಪಾಲಕನಾಗಿರುವುದರಿಂದ ಧನಪ್ರಾಪ್ತಿ ಮತ್ತು ಸಂಚಯ (ಉಳಿತಾಯ) ಈ ಎರಡಕ್ಕೂ ಈ ದಿಕ್ಕು ಶುಭವಾಗಿದೆ. ಚಿತ್ರಲೇಖಾ ಇವನ ಪತ್ನಿಯಾಗಿದ್ದಾಳೆ ಮತ್ತು ಅಲಂಕಾಪುರಿ ಎಂಬುದು ನಗರವಾಗಿದೆ. ಈ ನಗರವು ಎಂದರೆ ಇಂದ್ರಾದಿ ದೇವತೆಗಳ ಧನಸಂಗ್ರಹದ ಸ್ಥಳವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಮಾಡಿದ ಧನಸಂಗ್ರಹವು ದೀರ್ಘಕಾಲ ಉಳಿಯುತ್ತದೆ. ಬಿಳಿ ಕುದುರೆಯು ಕುಬೇರನ ವಾಹನವಾಗಿದ್ದು ಇದು ಶ್ರೀಮಂತಿಕೆಯ ಲಕ್ಷಣವಾಗಿದೆ. ಖಡ್ಗವು ಆಯುಧವಾಗಿದ್ದು ಇದು ನೇರ ಮತ್ತು ಸ್ಥಿರವಾದ ಏಟು ನೀಡುವಂತಹುದ್ದಾಗಿದ್ದರಿಂದ ಉತ್ತರ ದಿಕ್ಕಿನಿಂದ ವಿಜಯ ಪ್ರಾಪ್ತವಾಗುತ್ತದೆ. ಇದು ಧನಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕಿನ ದೋಷವನ್ನು ದೂರ ಮಾಡಲು ಈ ದಿಕ್ಕಿಗೆ ಧನಲಕ್ಷ್ಮಿಯ ಚಿತ್ರವನ್ನು ಹಚ್ಚಲಾಗುತ್ತದೆ.

ಇ. ಲಾಭ : ಇದು ಬುಧನ ದಿಕ್ಕಾಗಿರುವುದರಿಂದ ಇದು ಶುಭವಾಗಿದ್ದರೆ ಬುದ್ಧಿಯ ವಿಕಾಸವು ಚೆನ್ನಾಗಿ ಆಗುತ್ತದೆ. ಬುಧನು ವ್ಯಾಪಾರದ ಕಾರಕನಾಗಿರುವುದರಿಂದ ಅದಕ್ಕಾಗಿ ಸಹ ಈ ದಿಕ್ಕು ಲಾಭದಾಯಕವಾಗಿದೆ.

೮. ಈಶಾನ್ಯ ದಿಕ್ಕು

ಅ. ದೇವತೆ : ಎಂಟೂ ದಿಕ್ಕುಗಳಲ್ಲಿ ಇದು ಅತ್ಯಂತ ಶುಭ ದಿಕ್ಕಾಗಿದೆ. ವಿದ್ಯೆ, ಆರೋಗ್ಯ, ಬೌದ್ಧಿಕ ಕ್ಷಮತೆ, ಸಮೃದ್ಧಿ, ಸಂತಾನ ಇತ್ಯಾದಿ ಎಲ್ಲ ವಿಷಯಗಳ ಕಾರಕ ದಿಕ್ಕು ಇದಾಗಿದೆ. ಗುರು ಈ ದಿಕ್ಕಿನ ದೇವತೆಯಾಗಿದ್ದಾರೆ. ಇದು ಈಶ್ವರೀ ತತ್ತ್ವದ ದಿಕ್ಕಾಗಿದ್ದು, ಈಶಾನನು ಇದರ ದಿಕ್ಪಾಲಕನಾಗಿದ್ದಾನೆ.

ಆ. ಪತ್ನಿ, ನಗರ, ವಾಹನ ಮತ್ತು ಆಯುಧ : ಈ ಸ್ಥಳದಲ್ಲಿ ಶಿವನ ಅಧಿಷ್ಠಾನವಿದ್ದು ಪಾರ್ವತಿಯು ಶಿವನ ಪತ್ನಿಯಾಗಿದ್ದಾಳೆ. ಶಿವ-ಶಕ್ತಿಯ ಸಂಗಮವು ಈ ದಿಕ್ಕಿನಲ್ಲಿ ಇರುವುದರಿಂದ ಭೌತಿಕ ಮತ್ತು ಆಧ್ಯಾತ್ಮಿಕ ಈ ಎರಡೂ ದೃಷ್ಟಿಯಿಂದ ಈ ದಿಕ್ಕು ಲಾಭದಾಯಕವಾಗಿದೆ. ಕೈಲಾಸವು ನಗರವಾಗಿದ್ದು, ಮನುಷ್ಯನಿಗೆ ತನ್ನ ಕರ್ತವ್ಯದ ಅರಿವು ಮಾಡಿಕೊಡುತ್ತದೆ. ವೃಷಭವು (ಎತ್ತು) ವಾಹನವಾಗಿದ್ದು, ಇದು ಶಾಂತಿ ಮತ್ತು ಕಠಿಣ ಪರಿಶ್ರಮ ಈ ಎರಡರ ಸಂಕೇತವಾಗಿದೆ. ತ್ರಿಶೂಲವು ಆಯುಧವಾಗಿದ್ದು, ಇದು ತ್ರಿವಿಧ ತಾಪಗಳಿಂದ ಮುಕ್ತಿ ನೀಡುತ್ತದೆ ಮತ್ತು ಮೂರು ಗುಣಗಳ (ಸತ್ತ್ವ, ರಜ, ತಮ) ಸಮತೋಲನವನ್ನು ಕಾಪಾಡುತ್ತದೆ.

ಇ. ಲಾಭ : ಅಷ್ಟಲಕ್ಷಿಯರ ಪೈಕಿ ಇದು ‘ಸಂತಾನಲಕ್ಷ್ಮಿ’ಯ ದಿಕ್ಕಾಗಿದೆ. ಈ ದಿಕ್ಕು ನಿರ್ದೋಷ ಮತ್ತು ಶುಭವಾಗಿದ್ದರೆ ಸಂತಾನ ಭಾಗ್ಯಕ್ಕೆ ಲಾಭದಾಯಕವಾಗಿರುತ್ತದೆ. ಇದು ಜಲತತ್ತ್ವದ ದಿಕ್ಕಾಗಿರುವುದರಿಂದ ಭೂಮಿಯ ಅಡಿಯಲ್ಲಿ ನೀರಿನ ಸಂಗ್ರಹವನ್ನು (ಉದಾಹರಣೆಗೆ ಟ್ಯಾಂಕ್ ಅಥವಾ ಬಾವಿ) ಈ ದಿಕ್ಕಿನಲ್ಲಿ ಮಾಡಬೇಕು. ಈ ದಿಕ್ಕಿನಲ್ಲಿ ದೋಷ ಉಂಟಾದರೆ ಆರೋಗ್ಯದ ಸಮಸ್ಯೆಗಳಾಗುತ್ತವೆ.

ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ.(೨೩.೧೨.೨೦೨೫)