ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister

ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಕೃಷಿ ಸಚಿವರ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸುವ ಹೇಳಿಕೆ

(ಡಿ.ಎನ್.ಎ. ಎಂದರೆ ಡಿಆಕ್ಸಿರೈಬೋ ನ್ಯೂಕ್ಲಿಕ್ ಆಸಿಡ್, ಅಂದರೆ ವ್ಯಕ್ತಿಯ ಮೂಲ ಗುರುತನ್ನು ತಿಳಿಸುವ ದೇಹದ ಅಂಶ)

ನವದೆಹಲಿ – ಭಾರತಕ್ಕೆ ಬಂದಿಳಿದ ಮೊದಲ ದಿನದಿಂದಲೇ ಭಾರತ ಸರಕಾರ, ವಿದೇಶಾಂಗ ಸಚಿವಾಲಯ ಮತ್ತು ಭೇಟಿಯಾದ ಪ್ರತಿಯೊಬ್ಬರೂ ಅತ್ಯಂತ ಉತ್ಸಾಹದಿಂದ ಸ್ವಾಗತಿಸಿದ್ದಾರೆ. ನಾನು ನನ್ನದೇ ದೇಶದಲ್ಲಿದ್ದೇನೆ ಎಂಬ ಭಾವನೆ ನನಗೆ ಮೂಡಿತು. ಭಾರತ ಮತ್ತು ಅಫ್ಘಾನಿಸ್ತಾನದ ಡಿಎನ್ಎ ಒಂದೇ ಆಗಿದೆ ಎಂದು ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರದ ಕೃಷಿ, ನೀರಾವರಿ ಮತ್ತು ಪಶುಸಂಗೋಪನೆ ಸಚಿವ ಮೌಲವಿ ಅತಾವುಲ್ಲಾ ಒಮರಿ ಹೇಳಿದ್ದಾರೆ. ಅವರು ಇಲ್ಲಿ ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಇಂಡಿಯಾ-ಅಫ್ಘಾನಿಸ್ತಾನ್ ಟ್ರೇಡ್ ಅಪೋರ್ಚುನಿಟೀಸ್ ಇಂಡಸ್ಟ್ರಿ ಇಂಟರಾಕ್ಟಿವ್ ಸೆಷನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಭಾರತೀಯ ಉದ್ಯಮ ರಂಗಕ್ಕೆ ಹೂಡಿಕೆ, ಕೃಷಿ ತಂತ್ರಜ್ಞಾನ, ಆಹಾರ ಸಂಸ್ಕರಣೆ, ನೀರಾವರಿ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ಸಹಕರಿಸುವಂತೆ ಕರೆ ನೀಡಿದರು.

ಒಮರಿ ಅವರು, ಇದು ನನ್ನ ಮೊದಲ ಭಾರತ ಪ್ರವಾಸವಾಗಿದ್ದು, ಇಲ್ಲಿ ದೊರೆತ ಗೌರವ ಮತ್ತು ಪ್ರೀತಿ ನನ್ನ ಹೃದಯ ಗೆದ್ದಿದೆ. ನಮ್ಮ ನಡುವಿನ ಸಂಬಂಧವು ಕೇವಲ ರಾಜತಾಂತ್ರಿಕತೆಯಲ್ಲ, ಬದಲಿಗೆ ಹಂಚಿಕೊಂಡ ಇತಿಹಾಸ ಮತ್ತು ಸಂಸ್ಕೃತಿಯದ್ದಾಗಿದೆ. ಭಾರತದಲ್ಲಿ ಸಿಕ್ಕ ಗೌರವವು ಅಫ್ಘಾನಿಸ್ತಾನದ ಜನರ ಉಜ್ವಲ ಭವಿಷ್ಯದ ಭರವಸೆಯಾಗಿದೆ. ನಮ್ಮ ಸರಿಸುಮಾರು ಶೇಕಡಾ 80 ರಷ್ಟು ಸಮಾಜವು ಕೃಷಿ, ನೀರಾವರಿ ಮತ್ತು ಪಶುಸಂಗೋಪನೆಯನ್ನು ಅವಲಂಬಿಸಿದೆ. ಈಗ ಈ ಕ್ಷೇತ್ರಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ಸಮಯ ಬಂದಿದೆ ಮತ್ತು ಭಾರತವು ಈ ನಿಟ್ಟಿನಲ್ಲಿ ಪ್ರಮುಖ ಪಾಲುದಾರನಾಗಬಹುದು. ಅಫ್ಘಾನಿಸ್ತಾನವು ಆರ್ಥಿಕ ಅಭಿವೃದ್ಧಿಗಾಗಿ ವಿಶ್ವದ ವಿವಿಧ ದೇಶಗಳೊಂದಿಗೆ ಸಹಕಾರವನ್ನು ಹೆಚ್ಚಿಸಲು ಬಯಸುತ್ತದೆ ಎಂದು ಹೇಳಿದರು.