ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಆಗಸ್ಟ್ ೯ ರಂದು ಕರಸೇವೆ ಮಾಡಲು ಸಂತರು ಘೋಷಣೆ ಮಾಡಿ ಪ್ರಕರಣ

ಸ್ವಾಮಿ ಆನಂದ್ ಸ್ವರೂಪ್, ಕಾಳಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ

ಹರಿದ್ವಾರ (ಉತ್ತರಾಖಂಡ) – ದೇಶದಲ್ಲಿ ಆಗಸ್ಟ್ ೯ ನ್ನು ‘ಕ್ರಾಂತಿ ದಿನ’ ಎಂದು ಆಚರಿಸಲಾಗುತ್ತದೆ. ಶ್ರೀಕೃಷ್ಣ ಜನ್ಮಭೂಮಿಗಾಗಿ ಸಂತರ ನೇತೃತ್ವದಲ್ಲಿ ಯಾವುದೇ ಕ್ರಾಂತಿ ನಡೆದರೆ, ಎಲ್ಲಾ ಸಂತರು ಒಟ್ಟಾಗಿ ಅದಕ್ಕೆ ಬೆಂಬಲ ನೀಡಬೇಕು. ನಾವು ಕೂಡ ಕರಸೇವೆಯಲ್ಲಿ ಭಾಗವಹಿಸುತ್ತೇವೆ. ಒಂದು ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ. ಒಂದು ವೇಳೆ ಹಾಗೆ ಆಗದಿದ್ದರೆ, ಸಂತರು ಸಾಂಕೇತಿಕ ಕರಸೇವೆ ಮಾಡಿ ಸಂದೇಶ ನೀಡಲಿದ್ದಾರೆ, ಎಂದು ಕಾಳಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಆನಂದ ಸ್ವರೂಪ ಅವರು ಇಲ್ಲಿ ಹೇಳಿದರು. ಹರಿದ್ವಾರದ ನಿರಂಜನಿ ಅಖಾಡದಲ್ಲಿ ನಡೆದ ಸಭೆಯಲ್ಲಿ ಸಂತರು ಅಭಿಯಾನದ ಕಾರ್ಯತಂತ್ರವನ್ನು ರೂಪಿಸಿದರು ಮತ್ತು ದೇಶಾದ್ಯಂತದ ಸಾಧು-ಸಂತರಿಗೆ ಇದರಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಕರಸೇವೆಯಲ್ಲಿ ರಾಹುಲ ಗಾಂಧಿ ಮತ್ತು ಅಖಿಲೇಶ ಯಾದವ ಅವರನ್ನೂ ಆಹ್ವಾನಿಸಲಾಗುವುದು ಎಂದು ಸಂತರು ತಿಳಿಸಿದರು.

ಮುಸಲ್ಮಾನ ಸಮಾಜದ ಒಂದು ವರ್ಗವೂ ‘ಶ್ರೀಕೃಷ್ಣ ಮಂದಿರದ ನಿರ್ಮಾಣವಾಗಲಿ’ ಎಂದು ಬಯಸುತ್ತದೆ, ಇದರಿಂದಾಗಿ ದೀರ್ಘಕಾಲದಿಂದ ನಡೆಯುತ್ತಿರುವ ವಿವಾದವು ಕೊನೆಗೊಂಡು ದೇಶದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆ ಬಲಗೊಳ್ಳಲಿದೆ ಎಂದೂ ಸ್ವಾಮಿ ಆನಂದ ಸ್ವರೂಪ ಹೇಳಿದರು.

ಕಾವಡಿ ಯಾತ್ರೆ ಮುಗಿದ ನಂತರ ಕರಸೇವೆಯ ದಿನಾಂಕ ಘೋಷಿಸಲಾಗುವುದು ! – ಅಖಿಲ ಭಾರತ ಅಖಾಡ ಪರಿಷತ್ತಿನ ಅಧ್ಯಕ್ಷ ಶ್ರೀ ಮಹಂತ ರವೀಂದ್ರಪುರಿ ಮಹಾರಾಜರು

ಅಖಿಲ ಭಾರತ ಅಖಾಡ ಪರಿಷತ್ತಿನ ಅಧ್ಯಕ್ಷ ಶ್ರೀ ಮಹಂತ ರವೀಂದ್ರಪುರಿ ಮಹಾರಾಜರು ಮಾತನಾಡಿ, ಎಲ್ಲಾ ಸಂತರು ‘ಚಲೋ ಮಥುರಾ ಚಲೇಂ’ (ಮಥುರಾಗೆ ಹೋಗೋಣ) ಎಂದು ಕರೆ ನೀಡಿದ್ದಾರೆ. ಅಯೋಧ್ಯೆಗೆ ಸಾಧು-ಸಂತರು ಮತ್ತು ಮಹಾತ್ಮರು ದೊಡ್ಡ ಸಂಖ್ಯೆಯಲ್ಲಿ ತಲುಪಿದಂತೆಯೇ, ಈಗ ಮಥುರೆಗೂ ಎಲ್ಲಾ ಸಂತ-ಮಹಾತ್ಮರು ಮತ್ತು ಭಕ್ತರು ತಲುಪಲಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಮಂದಿರದ ನಿರ್ಮಾಣವು ಆದಷ್ಟು ಬೇಗ ಆಗಬೇಕು ಎಂಬುದು ಎಲ್ಲರ ಏಕೈಕ ಬೇಡಿಕೆಯಾಗಿದೆ. ಶ್ರೀಕೃಷ್ಣ ಜನ್ಮಭೂಮಿಯ ಮೇಲೆ ಯಾರಿಗೆ ಶ್ರದ್ಧೆ ಇದೆಯೋ, ಅವರೆಲ್ಲರೂ ಅಲ್ಲಿಗೆ ತಲುಪಲಿದ್ದಾರೆ. ಮಂದಿರ ನಿರ್ಮಾಣದ ಕೆಲಸವು ಶೀಘ್ರದಲ್ಲೇ ಪ್ರಾರಂಭವಾಗಬೇಕು ಎನ್ನುವುದು ನಮ್ಮ ಪ್ರಯತ್ನವಾಗಿದೆ. ಈ ಕರೆಯು ಕೇವಲ ಕೆಲವು ಸಂತರದ್ದಲ್ಲ, ಬದಲಿಗೆ ಇಡೀ ಸನಾತನ ಸಮಾಜದ್ದಾಗಿದೆ. ಕಾವಡಿ ಯಾತ್ರೆಯ ನಂತರ ಕರಸೇವೆ ಕಾರ್ಯಕ್ರಮದ ಔಪಚಾರಿಕ ಘೋಷಣೆಯನ್ನು ಮಾಡಲಾಗುವುದು. ಇದರಲ್ಲಿ ವಿವಿಧ ಅಖಾಡಗಳ ಆಚಾರ್ಯರು, ಮಹಾಮಂಡಲೇಶ್ವರರು, ಸಂತರು ಮತ್ತು ಮಹಂತರು ಭಾಗವಹಿಸಲಿದ್ದಾರೆ.