Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ತೀಸ್ತಾ ನದಿ ಯೋಜನೆಯಲ್ಲಿ ಭಾರತದ ಹೂಡಿಕೆಯ ಪ್ರಸ್ತಾಪವನ್ನು ತಿರಸ್ಕರಿಸಿ, ಚೀನಾಕ್ಕೆ ಹಸ್ತಾಂತರಿಸಿದ್ದಾರೆ. ಸುಮಾರು ೯ ಸಾವಿರ ಕೋಟಿ ರೂಪಾಯಿಗಳ ‘ತೀಸ್ತಾ ನದಿ ನಿರ್ವಹಣಾ ಯೋಜನೆ’ಗಾಗಿ (Teesta River Management Project) ಚೀನಾ ೭ ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಲಿದ್ದು, ಬಾಂಗ್ಲಾದೇಶ ೫೦ ವರ್ಷಗಳಲ್ಲಿ ಈ ಹಣ ಮರುಪಾವತಿಸಬೇಕಾಗಿದೆ. ಭಾರತವು ಚೀನಾವನ್ನು ದೂರವಿಡುವ ಉದ್ದೇಶದಿಂದ ೨೦೨೪ ರಲ್ಲಿ ಅಂದಿನ ಶೇಖ್ ಹಸೀನಾ ಸರ್ಕಾರಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪವನ್ನು ಕಳುಹಿಸಿತ್ತು; ಆದರೆ ಶೇಖ್ ಹಸೀನಾ ಸರ್ಕಾರ ಪತನಗೊಂಡಿದ್ದರಿಂದ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಸಿಲಿಗುಡಿ ಕಾರಿಡಾರ್‌ನಿಂದ ಕೇವಲ ೨೨ ಕಿಲೋಮೀಟರ್ ದೂರದಲ್ಲಿರಲಿದೆ ಚೀನಾ!

೪೧೪ ಕಿಲೋಮೀಟರ್ ಉದ್ದದ ತೀಸ್ತಾ ನದಿಯು ಹಿಮಾಲಯದಿಂದ ಹೊರಟು ಸಿಕ್ಕಿಂ ಮತ್ತು ಬಂಗಾಳದ ಮೂಲಕ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. ೨೦೧೧ ರ ತಾತ್ಕಾಲಿಕ ನೀರು ಹಂಚಿಕೆ ಒಪ್ಪಂದದ ಪ್ರಕಾರ ಶೇ. ೩೭.೫% ರಷ್ಟು ನೀರು ಬಾಂಗ್ಲಾದೇಶಕ್ಕೆ ಸಿಗಬೇಕಿತ್ತು. ಆದರೆ ಬಂಗಾಳ ಸರ್ಕಾರವು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಈ ನೀರು ಹಂಚಿಕೆ ಒಪ್ಪಂದ ನನೆಗುದಿಗೆ ಬಿದ್ದಿತ್ತು. ಈಗ ಚೀನಾ ಕೈಗೆತ್ತಿಕೊಳ್ಳಲಿರುವ ಈ ಯೋಜನೆ ಪ್ರದೇಶವು ಭಾರತದ ಗಡಿಯಿಂದ ಕೇವಲ ೧೦ ರಿಂದ ೧೨ ಕಿ.ಮೀ. ಮತ್ತು ಸಿಲಿಗುಡಿ ಕಾರಿಡಾರ್ ಅಂದರೆ ‘ಚಿಕನ್ ನೆಕ್’ನಿಂದ ಕೇವಲ ೨೨ ಕಿ.ಮೀ. ದೂರದಲ್ಲಿದೆ.

‘ಚಿಕನ್ ನೆಕ್’ ಎಂದರೇನು?

ಬಂಗಾಳದಲ್ಲಿರುವ ಸುಮಾರು ೨೨ ಕಿಲೋಮೀಟರ್ ಉದ್ದದ ಅತ್ಯಂತ ಕಿರಿದಾದ ಭೂಭಾಗವಾಗಿದೆ. ಈಶಾನ್ಯ ಭಾರತದ ೭ ರಾಜ್ಯಗಳನ್ನು ಉಳಿದ ಭಾರತದೊಂದಿಗೆ ಸಂಪರ್ಕಿಸುವ ಏಕೈಕ ಭೂಮಾರ್ಗ ಇದಾಗಿದೆ.

‘ಪವರ್ ಚೈನಾ’ ಕಂಪನಿಯ ಮೂಲಕ ಈ ಕಾಮಗಾರಿ ಮಾಡಲಾಗುತ್ತಿದ್ದು, ಈ ಕಂಪನಿ ಸ್ವತಂತ್ರ ವಾಣಿಜ್ಯ ಸಂಸ್ಥೆಯಾಗಿರದೆ, ಚೀನಾ ಸೇನೆಯೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಇದರ ಬೆನ್ನಲ್ಲೇ ನೂರಾರು ಚೀನೀ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರು ಭಾರತದ ಈಶಾನ್ಯ ಭಾಗದ ಅತ್ಯಂತ ಸೂಕ್ಷ್ಮ ಗಡಿಯಲ್ಲಿ ದೀರ್ಘಕಾಲದವರೆಗೆ ಬೀಡುಬಿಡಲಿದ್ದಾರೆ. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಬಹುದೊಡ್ಡ ಸವಾಲಾಗಲಿದೆ ಎಂದು ರಕ್ಷಣಾ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಯುದ್ಧ ವಿಮಾನಗಳನ್ನು ನೀಡಲು ಚೀನಾ ಜೊತೆ ಚರ್ಚೆ!

ಮೂಲಗಳ ಪ್ರಕಾರ, ಪ್ರಧಾನಿ ತಾರಿಕ್ ರೆಹಮಾನ್ ಅವರ ರಕ್ಷಣಾ ಸಲಹೆಗಾರರಾದ ಬ್ರಿಗೇಡಿಯರ್ ಜನರಲ್ ಶಂಶುಲ್ ಇಸ್ಲಾಂ ಅವರು ಇತ್ತೀಚೆಗೆ ಚೀನಾದ ರಾಯಭಾರಿಯನ್ನು ಭೇಟಿ ಮಾಡಿದ್ದರು. ಈ ರಹಸ್ಯ ಭೇಟಿಯಲ್ಲಿ ಬಾಂಗ್ಲಾದೇಶಕ್ಕೆ ಚೀನಾದಿಂದ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಪೂರೈಸುವ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶವು ಮೊದಲು ಅಮೆರಿಕ ಮತ್ತು ಈಗ ಚೀನಾದ ಮಾಧ್ಯಮಗಳ ಮೂಲಕ ಭಾರತವನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದೆ ಮತ್ತು ಭಾರತವು ಅಸಹಾಯಕವಾಗಿ ನೋಡುತ್ತಿದೆ ಎಂಬ ಚಿತ್ರಣ ಜನರಿಗೆ ಕಾಣಿಸುತ್ತಿದೆ!