Kerala HC on Waqf : ಕೇರಳ ಹೈಕೋರ್ಟ್‌ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ

ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಮತ್ತು ಶಿಯಾ ಸದಸ್ಯರನ್ನು ಸೇರಿಸದ ಪ್ರಕರಣ

ತಿರುವನಂತಪುರಂ (ಕೇರಳ) – ನ್ಯಾಯಾಲಯದ ಸ್ಪಷ್ಟ ಅನುಮತಿಯಿಲ್ಲದೆ ಯಾವುದೇ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅಥವಾ ಬಂಡವಾಳ ವೆಚ್ಚ ಮಾಡದಂತೆ ಕೇರಳ ಹೈಕೋರ್ಟ್ ರಾಜ್ಯ ವಕ್ಫ್ ಮಂಡಳಿಗೆ ತಾತ್ಕಾಲಿಕ ತಡೆ ನೀಡಿದೆ. ‘ವಕ್ಫ್ ಕಾಯ್ದೆ, 1995’ ರ ಸೆಕ್ಷನ್ 14 ರ ಅಡಿಯಲ್ಲಿ ಮಂಡಳಿಯನ್ನು ಪುನರ್ರಚಿಸುವವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಮಂಡಳಿಯು ಶಾಸನಬದ್ಧ ಆದೇಶಗಳನ್ನು ಪಾಲಿಸುತ್ತಿಲ್ಲ; ಏಕೆಂದರೆ ಆ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಮತ್ತು ಶಿಯಾ ಸಮುದಾಯದ ಒಬ್ಬ ಪ್ರತಿನಿಧಿಯನ್ನು ಸೇರಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಧ್ಯಂತರ ವ್ಯವಸ್ಥೆಯಾಗಿ, ರಾಜ್ಯ ಸರಕಾರದ ವಕ್ಫ್ ಇಲಾಖೆಯ ವ್ಯವಹಾರಗಳನ್ನು ನೋಡಿಕೊಳ್ಳುವ ಜಂಟಿ ಕಾರ್ಯದರ್ಶಿಗಳ ಮೇಲ್ವಿಚಾರಣೆಯಲ್ಲಿ ಈ ಮಂಡಳಿ ಕೆಲಸ ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.