Shankhnad Mahotsav Delhi : ಹಿಂದೂಗಳೇ, ರಾಮರಾಜ್ಯದ ಸ್ಥಾಪನೆಗಾಗಿ ನಿಮ್ಮ ಸಾಮರ್ಥ್ಯಕ್ಕನುಸಾರ ಹೆಚ್ಚೆಚ್ಚು ಕೊಡುಗೆಯನ್ನು ನೀಡಿರಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಮಾರ್ಗದರ್ಶಕ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂ ಧರ್ಮಬಂಧುಗಳೇ ಮತ್ತು ಭಗಿನಿಯರೇ,

ಇಂದು ನಾವೆಲ್ಲರೂ ಇಲ್ಲಿ (ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ) ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸೇರಿದ್ದೇವೆ. ಇದು ಕೇವಲ ಒಂದು ಸಮಾರಂಭವಲ್ಲ, ಬದಲಿಗೆ ಇದು ಸನಾತನ ರಾಷ್ಟ್ರದ ‘ಶಂಖನಾದ’ವಾಗಿದೆ. ಶಂಖನಾದವನ್ನು ಯುದ್ಧದ ಮೊದಲು ಅಥವಾ ಶುಭಕಾರ್ಯದ ಆರಂಭದಲ್ಲಿ ಮಾಡಲಾಗುತ್ತದೆ. ಇಂದಿನ ಈ ಶಂಖನಾದವು ಒಂದು ದೊಡ್ಡ ಪರಿವರ್ತನೆಯ ನಾಂದಿ ಹಾಡಲಿದೆ.

೧. ಹಿಂದೂಗಳ ಲಜ್ಜಾಸ್ಪದ ವರ್ತಮಾನ ಸ್ಥಿತಿಯನ್ನು ಬದಲಾಯಿಸಬೇಕು ! : ಇಂದು ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ನಮಗೆ ನಮ್ಮದೇ ದೇಶದಲ್ಲಿ, ನಮ್ಮದೇ ಧರ್ಮವನ್ನು ಪಾಲಿಸುವಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ. ಯಾವ ಭೂಮಿಯ ಮೇಲೆ ಪ್ರಭು ಶ್ರೀರಾಮನು ಆದರ್ಶ ರಾಜ್ಯವನ್ನು ಮಾಡಿದನೋ, ಅಲ್ಲಿ ಇಂದು ‘ರಾಮರಾಜ್ಯ’ ಇರಲಿ; ಭಾರತದ ಕಾಶ್ಮೀರ, ಕೇರಳ, ಬಂಗಾಳ ಮೊದಲಾದ ಅನೇಕ ರಾಜ್ಯಗಳಲ್ಲಿ ಹಿಂದೂಗಳಿಗೆ ಸಾಧಾರಣ ಸುರಕ್ಷಿತ ಮತ್ತು ಗೌರವಯುತ ಜೀವನವನ್ನು ನಡೆಸುವುದು ಸಹ ಕಷ್ಟಕರವಾಗುತ್ತಿದೆ. ಇದು ನಮ್ಮೆಲ್ಲರಿಗೂ ಲಜ್ಜಾಸ್ಪದ ವಿಷಯವಾಗಿದೆ. ಈ ಚಿತ್ರಣವನ್ನು ಈಗ ನಾವು ಬದಲಾಯಿಸಬೇಕಿದೆ.

೨. ರಾಮರಾಜ್ಯವೇ ನಮ್ಮ ಗುರಿ : ನಮ್ಮ ಗುರಿ ಏನು ? ಕೇವಲ ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ನಮ್ಮ ಅಂತಿಮ ಗುರಿಯಲ್ಲ. ‘ಹಿಂದೂ ರಾಷ್ಟ್ರ’ವು ಒಂದು ಶರೀರವಾಗಿದ್ದರೆ, ‘ರಾಮರಾಜ್ಯ’ವು ಅದರ ಆತ್ಮವಾಗಿದೆ. ನಾವು ಭಾರತದಲ್ಲಿ ಮತ್ತೊಮ್ಮೆ ‘ರಾಮರಾಜ್ಯ’ವನ್ನು ಸ್ಥಾಪಿಸಬೇಕು.

೩. ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಆದರ್ಶ ! : ನಮ್ಮ ಮುಂದೆ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವಿದೆ. ಪ್ರತಿಕೂಲ ಪರಿಸ್ಥಿತಿ ಮತ್ತು ಮೊಘಲರ ಸಾಮ್ರಾಜ್ಯವಿದ್ದರೂ ಮಹಾರಾಜರು ಮುಷ್ಟಿಯಷ್ಟು ಮಾವಳರನ್ನು ಜೊತೆಗೂಡಿಸಿ ‘ಹಿಂದವಿ ಸ್ವರಾಜ್ಯ’ವನ್ನು ಸ್ಥಾಪಿಸಿದರು. ಅದು ಕೇವಲ ರಾಜ್ಯವಾಗಿರಲಿಲ್ಲ, ಅದು ಪ್ರಜೆಗಳ ಕಲ್ಯಾಣಕ್ಕಾಗಿದ್ದ ‘ರಾಮರಾಜ್ಯ’ವಾಗಿತ್ತು. ಮಹಾರಾಜರು ಅದನ್ನು ಆ ಕಾಲದಲ್ಲಿ ಮಾಡಿ ತೋರಿಸಿದ್ದರೆ, ಇಂದು ನಾವು ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೂ ಅದನ್ನು ಏಕೆ ಮಾಡಲು ಸಾಧ್ಯವಿಲ್ಲ? ನಾವು ಖಂಡಿತವಾಗಿಯೂ ಮಾಡಬಹುದು! ಶ್ರೀರಾಮ ಮತ್ತು ಸಂತರಿಂದ ಆಶೀರ್ವಾದದೊಂದಿಗೆ ನಾವು ಖಂಡಿತವಾಗಿಯೂ ಆ ದಿಶೆಯಲ್ಲಿ ಸಾಗಬಹುದು.

೪. ಕೃತಿಯ ದಿಕ್ಕು : ರಾಮರಾಜ್ಯದ ಸ್ಥಾಪನೆ ಕೇವಲ ಭಾಷಣಗಳಿಂದ ಆಗುವುದಿಲ್ಲ. ಅದಕ್ಕಾಗಿ ನಾವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ ಮೂರೂ ಸ್ತರಗಳಲ್ಲಿ ಕೃತಿ ಮಾಡಬೇಕಾಗುತ್ತದೆ.

೪ ಅ. ದೈಹಿಕ ಸ್ತರ : ಎಲ್ಲಿ ಧರ್ಮದ ಮೇಲೆ ಆಘಾತವಾಗುವುದೋ, ಅಲ್ಲಿ ಕಾನೂನಾತ್ಮಕ ಮಾರ್ಗದಿಂದ ಮತ್ತು ಸಂಘಟಿತರಾಗಿ ವಿರೋಧಿಸುವುದು.

೪ ಆ. ಮಾನಸಿಕ-ವೈಚಾರಿಕ ಸ್ತರ : ಸನಾತನ ಧರ್ಮ ಮತ್ತು ರಾಷ್ಟ್ರದ ಮೇಲಿನ ಸಂಕಟಗಳ ಕುರಿತು ನಿರಂತರ ಜಾಗೃತಿ ಮೂಡಿಸುವುದು.

೪ ಇ. ಆಧ್ಯಾತ್ಮಿಕ ಸ್ತರ : ಇದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಸಂಘರ್ಷದಲ್ಲಿ ಗೆಲ್ಲಲು ಈಶ್ವರೀ ಅಧಿಷ್ಠಾನ ಬೇಕಾಗುತ್ತದೆ.

೫. ರಾಮರಾಜ್ಯದ ಸಂಕಲ್ಪನೆ ಮತ್ತು ಆಡಳಿತಾತ್ಮಕ ಸುಧಾರಣೆ : ರಾಮರಾಜ್ಯಕ್ಕಾಗಿ ಆದರ್ಶ ಆಡಳಿತವನ್ನು (Good Governance) ನಿರ್ಮಿಸಬೇಕಾಗುತ್ತದೆ. ಅದಕ್ಕಾಗಿ ನಾವು ವರ್ತಮಾನ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಾಗುತ್ತದೆ. ಇಂದು ನಾವು ನೋಡುತ್ತೇವೆ, ಸರಕಾರಿ ಕಚೇರಿಗಳಲ್ಲಿ ಸಾಮಾನ್ಯ ಮನುಷ್ಯನಿಗೆ ಅನೇಕ ಬಾರಿ ಕೆಟ್ಟ ವರ್ತನೆ ದೊರೆಯುತ್ತದೆ, ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಭ್ರಷ್ಟಾಚಾರ ಮತ್ತು ಅರಾಜಕತೆ ರಾಮರಾಜ್ಯದಲ್ಲಿ ನಡೆಯುವುದಿಲ್ಲ.
ಆದ್ದರಿಂದಲೇ ಇಲ್ಲಿ ಸೇರಿರುವ ಪ್ರತಿಯೊಬ್ಬರಿಗೂ ನನ್ನ ಮನವಿ ಇದೆ, ನಾವು ಕಾನೂನಿನ ಚೌಕಟ್ಟಿನಲ್ಲಿ ಇದ್ದು ಈ ಭ್ರಷ್ಟಾಚಾರವನ್ನು ಎದುರಿಸಬೇಕು. ನಿಮಗೆ ಯಾವುದೇ ಸರಕಾರಿ ಕಚೇರಿಯಲ್ಲಿ ಅಥವಾ ನೌಕರನಿಂದ ಅಯೋಗ್ಯ ವರ್ತನೆ ದೊರೆತರೆ, ಲಂಚ ಕೇಳಿದರೆ ಅಥವಾ ಕೆಲಸ ತಡೆದು ಹಾಕಿದರೆ, ಹೆದರಬೇಡಿ. ಆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ. ನಿಮ್ಮ ಈ ಅನುಭವಗಳನ್ನು ಬರೆದು ನಮಗೆ ಕಳುಹಿಸಿ. ನಾವು ಅದನ್ನು ವೃತ್ತಪತ್ರಿಕೆಗಳಿಂದ ಮತ್ತು ‘ಸನಾತನ ಪ್ರಭಾತ’ದಿಂದ ಪ್ರಕಟಿಸುತ್ತೇವೆ. ಆಡಳಿತದಲ್ಲಿನ ದೋಷಗಳ ಕುರಿತು ನಾವು ಭಾಷಣಗಳಿಂದ ಮತ್ತು ಮಾಧ್ಯಮಗಳಿಂದ ಜನಜಾಗೃತಿ ಮಾಡುತ್ತೇವೆ. ಈ ರೀತಿಯ ಜಾಗೃತಿ ಮಾಡುವುದು ಒಂದು ಸಂವಿಧಾನಾತ್ಮಕ ಕರ್ತವ್ಯವಾಗಿದೆ ಮತ್ತು ರಾಮರಾಜ್ಯ ಸ್ಥಾಪನೆಯ ದಿಶೆಯಲ್ಲಿ ಇಟ್ಟ ದೊಡ್ಡ ಹೆಜ್ಜೆಯಾಗಿದೆ.

೬. ರಾಮರಾಜ್ಯ ತರಲು ಸಾಧನೆ ಮಾಡಿ ! : ಕೇವಲ ಆಡಳಿತದಲ್ಲಿ ಸುಧಾರಣೆ ಮಾಡಿದರೆ ಸಾಲದು. ‘ಯಥಾ ರಾಜಾ, ತಥಾ ಪ್ರಜಾ’ ಎಂದು ಹೇಳಲಾಗುತ್ತದೆ; ಆದರೆ ಪ್ರಜಾಪ್ರಭುತ್ವದಲ್ಲಿ ‘ಯಥಾ ಪ್ರಜಾ, ತಥಾ ರಾಜಾ’ ಇರುತ್ತದೆ. ರಾಮರಾಜ್ಯದಲ್ಲಿ ಪ್ರತಿಯೊಬ್ಬ ನಾಗರಿಕನು ಸಾತ್ತ್ವಿಕನಾಗಿದ್ದನು, ಧರ್ಮಾಚರಣೆ ಮಾಡುವವನಾಗಿದ್ದನು, ಆದುದರಿಂದಲೇ ಅಲ್ಲಿ ರಾಮರಾಜ್ಯವಿತ್ತು.

ಇಲ್ಲಿಯವರೆಗೂ ಅನೇಕ ಆಳ್ವಿಕೆಗಳು ಬಂದವು; ಆದರೆ ಯಾರೂ ನಮಗೆ ‘ರಾಮರಾಜ್ಯ’ವನ್ನು ನೀಡಲು ಸಾಧ್ಯವಾಗಲಿಲ್ಲ; ಏಕೆಂದರೆ ಸಮಾಜ ಮತ್ತು ಆಳುವವರು ಸಾಧನೆ ಮಾಡುವವರಾಗಿರಲಿಲ್ಲ. ರಾಮರಾಜ್ಯ ಬೇಕಿದ್ದರೆ, ಮೊದಲು ನಾವು ‘ರಾಮಭಕ್ತ’ರಾಗಬೇಕು. ಈಗಿನ ಕಾಲದಲ್ಲಿ ರಾಮರಾಜ್ಯದ ಕಾರ್ಯದಲ್ಲಿ ಈಶ್ವರೀ ಬಲವನ್ನು ಪಡೆಯಲು ಪ್ರತಿಯೊಬ್ಬರೂ ಪ್ರತಿದಿನ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ಜಪವನ್ನು ಕನಿಷ್ಠ ಅರ್ಧ ಗಂಟೆಯಾದರೂ ಮಾಡಬೇಕು. ಅದರಿಂದ ನಾವು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಬಹುದು. ಎಷ್ಟು ನಮ್ಮ ಸಾಧನೆ ಹೆಚ್ಚಾಗುವುದೋ, ಅಷ್ಟು ನಮ್ಮಲ್ಲಿನ ಸಾತ್ತ್ವಿಕತೆ ಹೆಚ್ಚಾಗುತ್ತದೆ. ರಾಮರಾಜ್ಯ ಎಂದರೆ ಸಾತ್ತ್ವಿಕ ಜನರ ರಾಷ್ಟ್ರವಾಗಿರುತ್ತದೆ; ಆದ್ದರಿಂದ ಪ್ರತಿಯೊಬ್ಬರೂ ಸಾತ್ತ್ವಿಕರಾಗಲು ಪ್ರಯತ್ನಿಸುವುದು ಅವಶ್ಯಕವಾಗಿದೆ.

೭. ರಾಮರಾಜ್ಯಕ್ಕಾಗಿ ಕೊಡುಗೆ ನೀಡಿ ! : ‘ಸನಾತನ ರಾಷ್ಟ್ರ’, ಅಂದರೆ ರಾಮರಾಜ್ಯದ ಈ ಕಾರ್ಯವು ಈಶ್ವರನದ್ದಾಗಿದೆ ಮತ್ತು ಅದು ಆಗಿಯೇ ತೀರುತ್ತದೆ. ಪ್ರಶ್ನೆ ಇಷ್ಟೇ ಇದೆ, ಇದರಲ್ಲಿ ನಮ್ಮ ಸಹಭಾಗಿತ್ವ ಏನು? ಯಾರಿಗೆ ಹೇಗೆ ಸಾಧ್ಯವೋ, ಹಾಗೆ ಈ ಕಾರ್ಯದಲ್ಲಿ ಭಾಗವಹಿಸಿ. ಕೆಲವರಿಗೆ ಬರವಣಿಗೆಯ ಮೂಲಕ ಸಾಧ್ಯವಾಗಬಹುದು, ಕೆಲವರಿಗೆ ಕಾನೂನಾತ್ಮಕ ಹೋರಾಟದ ಮೂಲಕ, ಕೆಲವರಿಗೆ ಅರ್ಪಣೆ ನೀಡಿ, ಮತ್ತೆ ಕೆಲವರಿಗೆ ಪ್ರತ್ಯಕ್ಷ ಕಾರ್ಯ ಮಾಡಿ ಸಾಧ್ಯವಾಗಬಹುದು. ರಾಮರಾಜ್ಯಕ್ಕಾಗಿ ನಿಮ್ಮ ಸಾಮರ್ಥ್ಯಕ್ಕನುಸಾರ ಹೆಚ್ಚೆಚ್ಚು ಕೊಡುಗೆಯನ್ನು ನೀಡಿರಿ !

ಇಂದಿನಿಂದಲೇ ನಾವು ನಮ್ಮಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡೋಣ. ‘ನಮಗೆ ಈ ರಾಮರಾಜ್ಯದ ಸ್ಥಾಪನೆಯ ಶಿವಧನುಸ್ಸನ್ನು ಎತ್ತುವ ಸಾಮರ್ಥ್ಯವನ್ನು ನೀಡು !’, ಎಂದು ಶ್ರೀರಾಮನ ಚರಣಗಳಲ್ಲಿ ಪ್ರಾರ್ಥನೆ ಮಾಡೋಣ.

ಜಯತು ಜಯತು ಹಿಂದೂರಾಷ್ಟ್ರಮ್ ! ಜೈ ಶ್ರೀರಾಮ್ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ