ಹಿಂದೂಗಳ ಸ್ಮಶಾನಭೂಮಿಯ ಬಗ್ಗೆ ಸ್ಥಳೀಯ ಆಡಳಿತದ ಉದಾಸೀನತೆ !

ಜುಲೈ ತಿಂಗಳ ಮೊದಲ ವಾರದಲ್ಲಿ ನಾನು ಒಂದು ಪತ್ರಿಕೆಯಲ್ಲಿ ಒಂದು ಸುದ್ದಿಯನ್ನು ಓದಿದ್ದೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಒಂದು ಊರಲ್ಲಿ ನದಿಗೆ ಪ್ರವಾಹ ಬಂದ ಕಾರಣ ಗ್ರಾಮಸ್ಥರು ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ನದಿ ದಾಟಿ ಓರ್ವ ವ್ಯಕ್ತಿಯ ಅಂತಿಮ ಸಂಸ್ಕಾರನ್ನು ಮಾಡಬೇಕಾಯಿತು. ಏಕೆಂದರೆ ಆ ಊರಲ್ಲಿ ಸ್ಮಶಾನಭೂಮಿಯ ಸಮಸ್ಯೆ ಬಹಳ ಕಾಲದಿಂದ ಬಗೆಹರಿಯದೆ ಉಳಿದಿದೆ. ಹಳ್ಳಿಯಲ್ಲಿ ಯಾರಾದರೂ ನಿಧನರಾದರೆ ಗ್ರಾಮಸ್ಥರು ನದಿಯನ್ನು ದಾಟಿ ಇನ್ನೊಂದು ದಡಕ್ಕೆ ಅಂತ್ಯಸಂಸ್ಕಾರ ಮಾಡಲು ಹೋಗಬೇಕಾಗುತ್ತದೆ. ಪ್ರತಿಯೊಂದು ಊರಲ್ಲೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸ್ಮಶಾನಕ್ಕೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳಿವೆ. ಮುಖ್ಯವಾಗಿ ಹಿಂದೂ ಸ್ಮಶಾನಭೂಮಿಯ ಬಗ್ಗೆ ಸ್ಥಳೀಯ ಆಡಳಿತದವರು (ಉದಾ : ಪಂಚಾಯಿತಿ, ಗ್ರಾಮಪಂಚಾಯಿತಿ, ನಗರಪಾಲಿಕೆ ಇತ್ಯಾದಿ)ನಿರ್ಲಕ್ಷಿಸುವುದು ಕಂಡು ಬರುತ್ತದೆ. ಈ ಬಗ್ಗೆ ಕೆಲವು ಸಮಸ್ಯೆಗಳ ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ನಿಶ್ಚಿತವಾಗಿಯೂ ಎದುರಿಸಿರಬಹುದು. ಈ ಕಡೆಗೆ ಹಿಂದೂಗಳು ಗಮನಹರಿಸಿ, ಸ್ಮಶಾನಭೂಮಿಯಲ್ಲಿನ ಈ ತೊಂದರೆಗಳನ್ನು ನಿವಾರಿಸಲು ಸ್ಥಳೀಯ ಆಡಳಿತದ ಮೇಲೆ ಒತ್ತಡ ಹೇರಬೇಕು.

೧. ಸ್ಮಶಾನಭೂಮಿ ೨೪ ಗಂಟೆ ತೆರೆದಿರುವುದಿಲ್ಲ !

ಅನೇಕ ಸ್ಮಶಾನಭೂಮಿಗಳಿಗೆ ನಿರ್ದಿಷ್ಟ ಕೆಲಸದ ಸಮಯವಿರುತ್ತದೆ. ಉದಾಹರಣೆಗೆ ಗೋವಾದ ಫೋಂಡಾದಲ್ಲಿರುವ ಸ್ಮಶಾನಭೂಮಿ ಸಾಯಂಕಾಲ ೬ ಗಂಟೆಯ ನಂತರ ಮುಚ್ಚುತ್ತದೆ. ಆದ್ದರಿಂದ ಯಾರಾದರೂ ಸಾಯಂಕಾಲ ೬ ಗಂಟೆಯ ನಂತರ ಮರಣ ಹೊಂದಿದರೆ ಅಂತ್ಯಸಂಸ್ಕಾರವನ್ನು ಮರುದಿನದ ವರೆಗೆ ಮುಂದೂಡಬೇಕಾಗುತ್ತದೆ. ಕೆಲವೊಮ್ಮೆ ಸ್ಮಶಾನದಲ್ಲಿ ಹೆಚ್ಚು ಜನಸಂದಣಿ ಇದ್ದರೆ, ಅಂತ್ಯಸಂಸ್ಕಾರಕ್ಕೆ ಸ್ಥಳ ಅಥವಾ ಮುಂದಿನ ಸಮಯ ಸಿಗುವುದು ಕಷ್ಟವಾಗುತ್ತದೆ. ಕೊರೋನಾ ಸಾಂಕ್ರಾಮಿಕದ ಕಾಲದಲ್ಲಿ, ಹಗಲು-ರಾತ್ರಿ ಅನೇಕ ಜನರು ಮರಣ ಹೊಂದುತ್ತಿದ್ದಾಗ, ಅಂತ್ಯಸಂಸ್ಕಾರಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತಿತ್ತು ಎಂಬುದನ್ನು ನಾವೆಲ್ಲರೂ ಅನುಭವಿಸಿದ್ದೇವೆ.

೨. ಸ್ಮಶಾನಭೂಮಿಯಲ್ಲಿ ಸಾಕಷ್ಟು ಶೆಡ್‌ಗಳು ಲಭ್ಯವಿರುವುದಿಲ್ಲ !

ಕೆಲವು ಸ್ಥಳಗಳಲ್ಲಿ ಸ್ಮಶಾನದಲ್ಲಿ ಕೇವಲ ಒಂದೇ ಶೆಡ್ ಇರುತ್ತದೆ. ಆದ್ದರಿಂದ ಒಂದೇ ಸಮಯದಲ್ಲಿ ಎರಡು ಶವಗಳು ಅಂತ್ಯಸಂಸ್ಕಾರಕ್ಕಾಗಿ ಬಂದರೆ ಒಂದು ಶವದ ಅಂತ್ಯಸಂಸ್ಕಾರವನ್ನು ಶೆಡ್‌ನ ಹೊರಗೆ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ನಿರಂತರ ಮಳೆ ಸುರಿಯುತ್ತಿದ್ದರೆ ಶೆಡ್‌ನ ಹೊರಗೆ ಅಂತ್ಯಸಂಸ್ಕಾರ ಮಾಡಲು ಕಷ್ಟವಾಗುತ್ತದೆ. ಕೆಲವೊಂದು ಸ್ಥಳಗಳಲ್ಲಿ ಮೇಲಿನ ಮೇಲ್ಛಾವಣಿಯ ತಗಡುಗಳು ತುಕ್ಕು ಹಿಡಿದ ಕಾರಣ ಮಳೆಗಾಲದಲ್ಲಿ ನೀರು ಸೋರುತ್ತದೆ.

೩. ಸ್ಮಶಾನಭೂಮಿಗೆ ಸುತ್ತಲಿನ ಗೋಡೆಗಳು ಇರುವುದಿಲ್ಲ  !

ಅನೇಕ ಊರುಗಳಲ್ಲಿ ಸ್ಮಶಾನಭೂಮಿಗಳಿಗೆ ತಡೆಗೋಡೆಗಳು ಇಲ್ಲದಿರುವುದರಿಂದ ಬೀದಿ ನಾಯಿಗಳು ಮತ್ತು ನರಿಗಳು ಸ್ಮಶಾನ ಪ್ರದೇಶದಲ್ಲಿ ಓಡಾಡುತ್ತಿರುತ್ತವೆ. ಕೆಲವು ಜನರು ಅಂತ್ಯಸಂಸ್ಕಾರದ ನಂತರ ಶವವು ಸಂಪೂರ್ಣ ಸುಡಲು ಕಾಯದೆ ತಕ್ಷಣವೇ ಹೊರಟು ಹೋಗುತ್ತಾರೆ. ಇದರ ಪರಿಣಾಮದಿಂದ, ನಾಯಿಗಳು ಅಥವಾ ನರಿಗಳು ಶವವನ್ನು ತುಂಡು ಮಾಡಿದ ಘಟನೆಗಳೂ ನಡೆದಿವೆ.

೪. ಸ್ಮಶಾನಭೂಮಿಯ ಪರಿಸರ ಅಸ್ವಚ್ಛವಾಗಿರುತ್ತದೆ !

ಸ್ಮಶಾನಭೂಮಿಯ ಪರಿಸರದಲ್ಲಿ ಕೊಳಕು ಮತ್ತು ಕೆಸರು ಸಾಮಾನ್ಯ ಸಂಗತಿಯಾಗಿದೆ. ಸ್ಮಶಾನದ ಸ್ವಚ್ಛತೆಯ ಬಗ್ಗೆ ಆಡಳಿತವು ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಅನೇಕ ಸ್ಮಶಾನಗಳ ಸುತ್ತಮುತ್ತ ಹುಲ್ಲು ಮತ್ತು ಗಿಡಗಳು ಬೆಳೆದಿರುತ್ತವೆ. ಸ್ಮಶಾನಕ್ಕೆ ಹೋಗಲು ಉತ್ತಮವಾದ ದಾರಿಯೂ ಇರುವುದಿಲ್ಲ. ಕೆಲವು ಬಾರಿ, ಮೃತರ ಸಂಬಂಧಿಕರು ಸ್ಮಶಾನದ ನೌಕರರಿಗೆ ಹೆಚ್ಚುವರಿ ಹಣ ನೀಡಿ ಸ್ವಚ್ಛತೆ ಮಾಡಿಸಿಕೊಳ್ಳಬೇಕಾಗುತ್ತದೆ.

ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಮೃತರ ಅಂತ್ಯಸಂಸ್ಕಾರವು ಒಂದು ಧಾರ್ಮಿಕ ವಿಧಿಯ ಭಾಗವಾಗಿದೆ. ಆದ್ದರಿಂದ, ಆ ಪ್ರದೇಶದಲ್ಲಿ ಆ ಸಂಸ್ಕಾರಕ್ಕೆ ಸಂಬಂಧಿಸಿದ ದೇವತೆಗಳನ್ನು ಆಹ್ವಾನಿಸಲಾಗುತ್ತದೆ. ಆದ್ದರಿಂದ, ಈ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ಅಚ್ಚುಕಟ್ಟಾದ ಪರಿಸರ ಇರುವುದು ಅವಶ್ಯಕ.

೫. ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರುವುದಿಲ್ಲ !

ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಬರುವ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಇರುವ ಜಾಗ ಕೊಳಕಾಗಿರುವುದರಿಂದ ಜನರಿಗೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಅಂತ್ಯಸಂಸ್ಕಾರದ ವಿಧಿ ಪೂರ್ಣಗೊಳ್ಳುವವರೆಗೆ ಸುಮಾರು ಒಂದು ಗಂಟೆಯ ವರೆಗೆ ನಿಲ್ಲಬೇಕಾಗುತ್ತದೆ. ಜನರಲ್ಲಿ ವಯಸ್ಸಾದವರು ಇದ್ದರೆ, ಅವರಿಗೆ ಇದು ತೊಂದರೆದಾಯಕವಾಗುತ್ತದೆ.

೬. ಕಟ್ಟಿಗೆಗಳು ಒದ್ದೆಯಾಗಿದ್ದರೆ ಇತರ ಜ್ವಲನಶೀಲ ವಸ್ತುಗಳು ಸಿಗುವುದಿಲ್ಲ !

ಕೆಲವೊಂದು ಸಲ, ಅಂತ್ಯಸಂಸ್ಕಾರಕ್ಕಾಗಿ ತಂದ ಕಟ್ಟಿಗೆಗಳು ಒದ್ದೆಯಾಗಿರುವುದರಿಂದ ಹಸಿ ಇದ್ದರೆ ಶವ ಸರಿಯಾಗಿ ಉರಿಯುವುದಿಲ್ಲ. ಇಂತಹ ಸಮಯದಲ್ಲಿ, ಒಣಗಿದ ಕಟ್ಟಿಗೆಗಳು ಅಥವಾ ಇತರ ಜ್ವಲನಶೀಲ ವಸ್ತುಗಳು ಅಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ, ಅವುಗಳನ್ನು ತರಲು ಸಂಬಂಧಿಕರು ಮತ್ತೆ ಸ್ಮಶಾನದಿಂದ ದೂರವಿರುವ ಊರಿಗೆ ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ಸ್ಮಶಾನದಲ್ಲಿಯೇ ಕೆಲವು ಜ್ವಲನಶೀಲ ವಸ್ತುಗಳನ್ನು (ಉದಾ : ಪೆಟ್ರೋಲ, ಕೆರೋಸಿನ್ ಇತ್ಯಾದಿ) ಮತ್ತು ಹೆಚ್ಚುವರಿ ಒಣ ಕಟ್ಟಿಗೆಗಳನ್ನು ಇಟ್ಟರೆ, ಸಂಬಂಧಿಕರಿಗೆ ತಕ್ಷಣ ಸಹಾಯ ಸಿಗುತ್ತದೆ.

೭. ದಾರಿತಪ್ಪಿಸುವ ಫಲಕಗಳನ್ನು ಹಾಕದೆ ಧರ್ಮಶಿಕ್ಷಣ ನೀಡುವ ಫಲಕಗಳನ್ನು ಹಾಕಬೇಕು !

ಕೆಲವು ಸ್ಮಶಾನಗಳಲ್ಲಿ ಧರ್ಮದ್ರೋಹಿಗಳು ಅವಯವಗಳನ್ನು ದಾನ ಮಾಡಲು ಪ್ರೇರೇಪಿಸುವ ಫಲಕಗಳನ್ನು ಹಾಕುತ್ತಾರೆ ಅಥವಾ ಗೋಡೆಗಳ ಮೇಲೆ ಅಂತಹ ಬರಹಗಳನ್ನು ಬರೆಯುತ್ತಾರೆ. ಇದರಿಂದ ಜನರ ಮನಸ್ಸು ಕೆಡುತ್ತದೆ. ವಿಜ್ಞಾನವಾದಿ ಬುದ್ಧಿಜೀವಿಗಳಿಗೆ ಇದು ಸರಿ ಕಂಡರೂ, ಧರ್ಮಶಾಸ್ತ್ರದ ಪ್ರಕಾರ ಅವಯವಗಳನ್ನು ದಾನ ಮಾಡುವುದು ತಪ್ಪು, ಆದ್ದರಿಂದ ಇಂತಹ ಫಲಕಗಳನ್ನು ಸ್ಮಶಾನದಲ್ಲಿ ಹಾಕುವುದನ್ನು ನಿಷೇಧಿಸಬೇಕು. ಇದಕ್ಕೆ ವಿರುದ್ಧ, ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ? ಅದರ ಆಧ್ಯಾತ್ಮಿಕ ಮಹತ್ವವೇನು ? ಎಂಬ ಧರ್ಮಶಿಕ್ಷಣ ನೀಡುವ ಫಲಕಗಳನ್ನು ಸ್ಮಶಾನದ ಪರಿಸರದಲ್ಲಿ ಹಾಕಬೇಕು. ಇದರ ಜೊತೆಗೆ, ಭಗವದ್ಗೀತೆಯಲ್ಲಿ ಹೇಳಿರುವಂತೆ ‘ಆತ್ಮವು ಸಾಯುವುದಿಲ್ಲ, ಅದು ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಧರಿಸುತ್ತದೆ ಎಂಬ ಶಾಸ್ತ್ರವನ್ನು ತಿಳಿಸುವ ಫಲಕಗಳನ್ನು ಸ್ಮಶಾನಭೂಮಿಯಲ್ಲಿ ಹಾಕಿದರೆ, ದುಃಖದಲ್ಲಿರುವ ಸಂಬಂಧಿಕರು ಧರ್ಮಶಾಸ್ತ್ರದ ಮೂಲಕ ತಮ್ಮ ದುಃಖವನ್ನು ನಿವಾರಿಸಿಕೊಳ್ಳಲು ಸಹಾಯವಾಗುತ್ತದೆ.

೮. ಮೃತರ ಶೋಕದಲ್ಲಿರುವ ಸಂಬಂಧಿಕರಿಗೆ ಅಂತ್ಯಸಂಸ್ಕಾರದ ಒಟ್ಟಾರೆ ಪ್ರಕ್ರಿಯೆ ಸುಲಭವಾಗಿಲ್ಲ, ಬದಲಿಗೆ ಕಷ್ಟಕರವಾಗಿದೆ ಎಂದು ಅನಿಸುತ್ತದೆ !

ಕೇವಲ ಸ್ಮಶಾನಭೂಮಿಗೆ ಸಂಬಂಧಿಸಿದ ಸಮಸ್ಯೆಗಳಿವೆ, ಎಂದೇನಿಲ್ಲ, ಒಟ್ಟಾರೆ ಮೃತರ ಅಂತ್ಯಸಂಸ್ಕಾರ ಮಾಡುವ ಪ್ರಕ್ರಿಯೆಯೇ ಶೋಕದಲ್ಲಿರುವ ವ್ಯಕ್ತಿಯ ದೃಷ್ಟಿಯಿಂದ ಕಷ್ಟಕರವಾಗಿದೆ. ಕೆಲವು ಸ್ಥಳಗಳಲ್ಲಿ ಮರಣದ ಪ್ರಮಾಣಪತ್ರವು (Death certificate) ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಅಂತ್ಯಸಂಸ್ಕಾರ ಮಾಡಲು ಅನುಮತಿ ಪಡೆಯುವಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಬರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ದುರ್ಗಮ ಸ್ಥಳಗಳಲ್ಲಿ ಶವವಾಹಿನಿ (Hearse van) ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಕೆಲವು ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಅಥವಾ ಸ್ಮಶಾನದಲ್ಲಿನ ನೌಕರರು ಸಹಕರಿಸುವುದಿಲ್ಲ. ಅಲ್ಲಿ ಅವರ ಆರ್ಥಿಕ ವ್ಯವಹಾರಗಳು ನಡೆಯುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಅಂತ್ಯಸಂಸ್ಕಾರ ಮಾಡುವ ಬಗ್ಗೆ ವ್ಯಾವಹಾರಿಕ ಮತ್ತು ಧಾರ್ಮಿಕ ಶಿಕ್ಷಣ ಎಲ್ಲೂ ನೀಡಲಾಗುವುದಿಲ್ಲ ಮತ್ತು ಅದರ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿಲ್ಲದಿರುವುದರಿಂದ, ಇಂತಹ ದುಃಖದ ಸಂದರ್ಭಗಳು ಸಂಭವಿಸಿದಾಗ ಸಂಬಂಧಿಕರಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ, ಈ ಬಗ್ಗೆ ವ್ಯಾವಹಾರಿಕ ಮತ್ತು ಧಾರ್ಮಿಕ ಶಿಕ್ಷಣದ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಎಲ್ಲರಿಗೂ ಕಲಿಸಬೇಕು.

– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ ಪ್ರಸಾರ ಮಾಧ್ಯಮ.