ಹನುಮಾನ ಜಯಂತಿ (ಏಪ್ರಿಲ್‌ ೧೨)

ತಿಥಿ

ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.

ಮಹತ್ವ

ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಯಂದು ‘ಶ್ರೀ ಹನುಮತೇ ನಮಃ |’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ

ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ.

ಹನುಮಂತ ಜಯಂತಿಯಂದು ಹನುಮಂತನ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವ್ವಿಕ ರಂಗೋಲಿಗಳನ್ನು ಬಿಡಿಸಬೇಕು.

ಹನುಮಂತತತ್ತ್ವದ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ರಂಗೋಲಿಗಳಲ್ಲಿ ಸಾತ್ತ್ವಿಕ ಬಣ್ಣಗಳನ್ನು ತುಂಬಿಸಬೇಕು. (ಹೆಚ್ಚಿನ ಮಾಹಿತಿಗಾಗಿ ಓದಿ – ಸನಾತನದ ಕಿರುಗ್ರಂಥ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ‘ಸಾತ್ತ್ವಿಕ ರಂಗೋಲಿಗಳು’)

(ಹನುಮಂತನ ಬಗೆಗಿನ ಅಧ್ಯಾತ್ಮ ಶಾಸ್ತ್ರೀಯ ಮಾಹಿತಿಯನ್ನು ‘ಮಾರುತಿ’ ಕಿರುಗ್ರಂಥದಲ್ಲಿ ಕೊಡಲಾಗಿದೆ.)