Chhatrapati Sambhaji Nagar Theft Attempt : ಛತ್ರಪತಿ ಸಂಭಾಜಿ ನಗರದಲ್ಲಿ ಹನುಮಾನ್ ಮಂದಿರದಲ್ಲಿ ಕಳ್ಳತನದ ಪ್ರಯತ್ನ: ಮೂರ್ತಿ ವಿರೂಪ!

ಪೊಲೀಸರಿಂದ ಪರಿಶೀಲನೆ, ನಾಗರಿಕರಿಂದ ಮೂರ್ತಿಯ ಪುನಃ ಪ್ರತಿಷ್ಠಾಪನೆ!

ಛತ್ರಪತಿ ಸಂಭಾಜಿ ನಗರ – ಇಡೀ ನಗರದಲ್ಲಿ ಹನುಮ ಜಯಂತಿಯ ಭರದ ಸಿದ್ಧತೆಗಳು ನಡೆಯುತ್ತಿರುವಾಗ, ಭಾವಸಿಂಗ್ಪುರ ಪ್ರದೇಶದ ಪಾಟೀಲ ಖೋರಾದ ಚಿರಿಖಾನ ಹನುಮಾನ್ ಮಂದಿರದಲ್ಲಿ ಕಳ್ಳತನದ ಪ್ರಯತ್ನ ನಡೆದಿದೆ ಹಾಗೂ ಕಳ್ಳನು ಹನುಮಂತನ ಮೂರ್ತಿಯನ್ನು ವಿರೂಪಗೊಳಿಸಿದ್ದಾನೆ. ಪೂಜಾರಿಯಿಂದ ಘಟನೆಯ ಮಾಹಿತಿ ತಿಳಿದ ತಕ್ಷಣ ಈ ಭಾಗದ ನಾಗರಿಕರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅವರು ಶ್ರೀ ಹನುಮಂತನ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿ ಆರತಿ ಮಾಡಿದರು. ಛಾವಣಿ ಪೊಲೀಸ್ ಠಾಣೆಯಲ್ಲಿ ಈ ಘಟನೆಯನ್ನು ದಾಖಲಿಸಲಾಗಿದೆ. ಈ ಘಟನೆ ಏಪ್ರಿಲ್ ೧೧ ರಂದು ನಡೆದಿದೆ.

ಏಪ್ರಿಲ್ ೧೨ ರಂದು ಹನುಮ ಜಯಂತಿಯ ನಿಮಿತ್ತ ಈ ಮಂದಿರದಲ್ಲಿ ದೊಡ್ಡ ಉತ್ಸವ ಮತ್ತು ಮಹಾಪ್ರಸಾದದ ಆಯೋಜನೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಈ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿರುವಾಗ ವಿಷಯ ಬೆಳಕಿಗೆ ಬಂದಿದೆ. ನಡೆದ ಘಟನೆಯು ಮೂರ್ತಿಯ ಬೆಳ್ಳಿಯ ಕಣ್ಣುಗಳನ್ನು ಕದಿಯುವ ಉದ್ದೇಶದಿಂದ ಆಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಮಂದಿರದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ವಿಧಾನ ಪರಿಷತ್ತಿನ ನೂತನ ಶಾಸಕ ಸಂಜಯ ಕೆಣೆಕರ್ ಅವರು ಮಂದಿರಕ್ಕೆ ಭೇಟಿ ನೀಡಿದರು. ಅವರ ಸಮ್ಮುಖದಲ್ಲಿ ಏಪ್ರಿಲ್ ೧೨ ರಂದು ಮಹಾರತಿ ನೆರವೇರಿಸಲಾಯಿತು.

ಸಂಪಾದಕೀಯ ನಿಲುವು

ಪೊಲೀಸರ ಕಾರ್ಯಕ್ಷಮತೆ ಇಲ್ಲದಿರುವುದರಿಂದ ಹಿಂದೂಗಳ ದೇವಾಲಯಗಳಲ್ಲಿ ಕಳ್ಳತನ ಹಾಗೂ ಮೂರ್ತಿಗಳ ವಿರೂಪದಂತಹ ಘಟನೆಗಳು ನಡೆಯುವುದು ನಾಚಿಕೆಗೇಡಿನ ಸಂಗತಿ!