(ಟಿಪ್ಪಣಿ : ವಸ್ತ್ರಸಂಹಿತೆ, ಅಂದರೆ ದೇವಸ್ಥಾನಗಳಲ್ಲಿ ಪ್ರವೇಶ ಮಾಡುವಾಗ ಧರಿಸುವ ವಸ್ತ್ರಗಳಿಗೆ ಸಂಬಂಧಿಸಿದ ನಿಯಮಗಳು)
ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಆಧಾರಸ್ಥಂಭಗಳಾಗಿವೆ, ಹಿಂದೂ ಧರ್ಮದ ಅಡಿಪಾಯವಾಗಿವೆ, ನಮ್ಮ ಸಂಸ್ಕೃತಿಯಾಗಿವೆ. ಆದ್ದರಿಂದ ಅನೇಕ ಪೀಳಿಗೆಗಳಿಂದ ಹಿಂದೂ ದೇವಸ್ಥಾನಗಳನ್ನು ಕಾಪಾಡಿಕೊಂಡು ಅವುಗಳ ಸಂವರ್ಧನೆ ಮಾಡುವ ಕಾರ್ಯವನ್ನು ರಾಜ-ಮಹಾರಾಜರು ಮಾಡುತ್ತಿದ್ದರು. ದೇವಸ್ಥಾನಗಳ ಮೂಲಕವೇ ಸನಾತನ ಹಿಂದೂ ಧರ್ಮದ ರಕ್ಷಣೆಯಾಗುತ್ತಿತ್ತು. ದೇವಸ್ಥಾನಗಳ ಮೂಲಕ ಕಲೆ, ಶಿಕ್ಷಣ, ನ್ಯಾಯವನ್ನು ಸಮಾಜಕ್ಕೆ ಕೊಡುತ್ತಿರುವುದರಿಂದ ದೇವಸ್ಥಾನಗಳು ಹಿಂದೂ ಧರ್ಮದ ಕೇಂದ್ರಬಿಂದುಗಳಾಗಿದ್ದವು, ಆದರೆ ಇಂದು ಮಾತ್ರ ಈ ದೇವಸ್ಥಾನಗಳು ಪ್ರವಾಸಿಕೇಂದ್ರಗಳಾಗುತ್ತಿವೆ.
೧. ವಸ್ತ್ರಸಂಹಿತೆಗೆ ದೇವಸ್ಥಾನಗಳಿಂದ ಅತ್ಯುತ್ತಮ ಸ್ಪಂದನ
ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಹಾಗೂ ಹೆಚ್ಚು ಸಾತ್ತ್ವಿಕತೆಯನ್ನು ಗ್ರಹಿಸಲು ದೇವಸ್ಥಾನಗಳಿಗೆ ಬರುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಬೇಕು. ದೇವಸ್ಥಾನಗಳು ತಮ್ಮ ದೇವಸ್ಥಾನಗಳ ಮುಂದೆ ವಸ್ತ್ರಸಂಹಿತೆಯ ಫಲಕವನ್ನು ಅಳವಡಿಸಬೇಕು. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಈ ರಾಜ್ಯಗಳಲ್ಲಿ ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ದೇವಸ್ಥಾನ ಅಧಿವೇಶನಗಳು ನೆರವೇರಿದವು. ಈ ಅಧಿವೇಶನಗಳ ಮೂಲಕ ವಸ್ತ್ರಸಂಹಿತೆ ಅಭಿಯಾನಕ್ಕೆ ಹೆಚ್ಚು ಚಾಲನೆ ಸಿಕ್ಕಿತು. ದೇವಸ್ಥಾನ ಮಹಾಸಂಘದ ವತಿಯಿಂದ ವಸ್ತ್ರಸಂಹಿತೆಯ ‘ಫಲಕ’ಗಳನ್ನು ತಯಾರಿಸಿ ಎಲ್ಲ ದೇವಸ್ಥಾನಗಳಿಗೆ ತಲುಪಿಸಲಾಯಿತು. ಅದರ ಪರಿಣಾಮದಿಂದ ಕಳೆದ ೬ ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಒಟ್ಟು ೬೭೫ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಿಸಲಾಗಿದೆ. ಇದೆಲ್ಲವೂ ಕೇವಲ ಹಿಂದುತ್ವನಿಷ್ಠರ ಸಂಘಟಿತ ಪ್ರಯತ್ನದ ಫಲವಾಗಿದೆ. ಇದರಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದಾ ಪೀಠ, ಸುಪ್ರಸಿದ್ಧ ಶ್ರೀ ಕ್ಷೇತ್ರ ಹಂಪಿ ವಿರೂಪಾಕ್ಷ ದೇವಸ್ಥಾನ, ಪುರಿಯ ಜಗನ್ನಾಥ ದೇವಸ್ಥಾನ, ಉಜ್ಜೈನ್‌ನಲ್ಲಿನ ಮಹಾಕಾಳೇಶ್ವರ ದೇವಸ್ಥಾನ, ೬ ನೇ ಜ್ಯೋತಿರ್ಲಿಂಗ ಆಗಿರುವ ಮಹಾರಾಷ್ಟ್ರದ ಶ್ರೀ ಭೀಮಾಶಂಕರ ದೇವಸ್ಥಾನ, ಅಷ್ಟವಿನಾಯಕನ ದೇವಸ್ಥಾನಗಳು, ಇಂತಹ ದೇವಸ್ಥಾನಗಳ ಸಮಾವೇಶವಿದೆ. ಅಯೋಧ್ಯೆಯಲ್ಲಿನ ಶ್ರೀರಾಮದೇವಸ್ಥಾನದಲ್ಲಿಯೂ ಈಗ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸುವ ವಿಚಾರ ನಡೆಯುತ್ತಿದೆ.
೨. ವಸ್ತ್ರಸಂಹಿತೆ ಅಭಿಯಾನದಲ್ಲಿನ ಮಹತ್ವದ ಘಟಕ
ಈ ಅಭಿಯಾನದಲ್ಲಿ ೬ ಘಟಕಗಳ ಸಹಭಾಗ ಅತ್ಯಂತ ಆವಶ್ಯಕವಾಗಿದೆ – ದೇವಸ್ಥಾನಗಳ ವಿಶ್ವಸ್ಥರು (ಟ್ರಸ್ಟಿ), ಅರ್ಚಕರು, ಪುರೋಹಿತರು, ಭಕ್ತರು, ಸ್ಥಳೀಯರು, ಪ್ರಸಿದ್ಧಿಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು !
ಈ ೬ ಘಟಕಗಳು ಒಟ್ಟಾದರೆ, ಕೇವಲ ೭೦೦-೮೦೦ ಅಲ್ಲ, ಸಾವಿರಾರು ದೇವಸ್ಥಾನಗಳಲ್ಲಿ ಹಾಗೂ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅನ್ವಯವಾಗಬಹುದು.
ಈ ಅಭಿಯಾನದ ಮೂಲಕ ಕೇವಲ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸುವುದಷ್ಟೇ ಅಲ್ಲ, ಸಂಚಾರಿವಾಣಿ, ‘ಸೆಲ್ಫೀ’ಗೆ (ತಾನೇ ತನ್ನ ಛಾಯಾಚಿತ್ರ ತೆಗೆದುಕೊಳ್ಳುವುದು) ಕೂಡ ನಿರ್ಬಂಧ ಹೇರುವುದು, ಮದ್ಯ-ಮಾಂಸ ಇತ್ಯಾದಿಗಳನ್ನು ೧೦೦ ಮೀಟರ್ ದೂರದ ವರೆಗೆ ನಿರ್ಬಂಧ ಹೇರುವುದು, ಇಂತಹ ಪ್ರಯತ್ನವೂ ಅನೇಕ ದೇವಸ್ಥಾನಗಳು ಮಾಡುತ್ತಿವೆ. ವಿಶೇಷವೆಂದರೆ, ಶೇ. ೯೯ ರಷ್ಟು ಮಾಧ್ಯಮಗಳು ಈ ಅಭಿಯಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿವೆ. ಮಾಧ್ಯಮ ಕ್ಷೇತ್ರದಲ್ಲಿನ ಪತ್ರಕರ್ತರು ಸಮಾಜದಲ್ಲಿ ವಸ್ತ್ರಸಂಹಿತೆಯ ಪರ-ವಿರುದ್ಧ ಇದರ ಸಮೀಕ್ಷೆ ನಡೆಸಿದಾಗ ಹಿಂದೂಗಳಿಂದ ಬಂದ ಉತ್ತರವೆಂದರೆ, ‘ವಸ್ತ್ರಸಂಹಿತೆ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ! ಇದು ಆಗಲೇ ಬೇಕು !’
೩. ವಸ್ತ್ರಸಂಹಿತೆಗೆ ವಿರೋಧಿಸುವ ಘಟಕ
ಆದರೂ, ಕೆಲವು ಧರ್ಮವಿರೋಧಿಗಳು, ನಾಸ್ತಿಕರು ವಸ್ತ್ರಸಂಹಿತೆಯನ್ನು ವಿರೋಧಿಸುತ್ತಾರೆ.
೩ ಅ. ಸಮಾಜದಲ್ಲಿನ ಸಾಮ್ಯವಾದಿಗಳ ‘ಇಕೋಸಿಸ್ಟಮ್’ : ಸಾಮ್ಯವಾದಿ ವಿಚಾರದವರು (ಬುದ್ಧಿವಾದಿಗಳೆಂದು ಹೇಳಿಸಿಕೊಳ್ಳುವವರು) ವಸ್ತ್ರಸಂಹಿತೆಯನ್ನು ವಿರೋಧಿಸುತ್ತಿದ್ದಾರೆ. ಅನಾವಶ್ಯಕ ಟೀಕೆ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವರು ವಿರೋಧಿಸುತ್ತಾರೆ. ಅವರು ಗಮನದಲ್ಲಿಡಬೇಕಾದ ಅಂಶವೆಂದರೆ, ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ಪರಂಪರೆಯನ್ನು ಕೆಡಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಓಡಾಡು ವಾಗ ಸಮಾಜದ ನೀತಿನಿಯಮಗಳಿಗನುಸಾರ ವರ್ತಿಸಬೇಕು.
೩ ಆ. ಹಿಂದೂವಿರೋಧಿ ಆಡಳಿತದವರು/ರಾಜಕಾರಣಿಗಳು : ಕೆಲವು ಹಿಂದೂವಿರೋಧಿ ರಾಜಕಾರಣಿಗಳು ಅವರ ರಾಜಕೀಯ ಸ್ವಾರ್ಥಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ವಸ್ತ್ರಸಂಹಿತೆಯ ವಿರುದ್ಧ ಮಾತಾನಾಡುತ್ತಾರೆ. ಇಡೀ ಕರ್ನಾಟಕ ರಾಜ್ಯದಲ್ಲಿ ವಸ್ತ್ರಸಂಹಿತೆಯ ವಿಷಯದಲ್ಲಿ ಚರ್ಚೆ ಆರಂಭವಾದಾಗ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ಧರಾಮಯ್ಯಾ ಇವರು ‘ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸುವುದು ಸ್ವೀಕಾರಾರ್ಹವಲ್ಲ’, ಎಂದು ಹೇಳಿದ್ದರು. ‘ವಿಶಿಷ್ಟ ‘ಡ್ರೆಸ್‌ಕೋಡ್’ಗಿಂತಲೂ (ವಸ್ತ್ರಸಂಹಿತೆಗಿಂತಲೂ) ಭಕ್ತಿ ಮಹತ್ವದ್ದಾಗಿದೆ’, ಎಂದು ಹೇಳಿಕೆ ನೀಡಿದರು. ಭಕ್ತರು ಮಾತ್ರ ವಸ್ತ್ರಸಂಹಿತೆಯ ಅಂಶವನ್ನು ಎತ್ತಿಹಿಡಿದರು ಹಾಗೂ ಹೆಚ್ಚೆಚ್ಚು ದೇವಸ್ಥಾನಗಳು ತಮ್ಮ ದೇವಸ್ಥಾನ ಗಳಲ್ಲಿ ವಸ್ತ್ರಸಂಹಿತೆಯ ಫಲಕಗಳನ್ನು ಹಚ್ಚಿ ಮುಖ್ಯಮಂತ್ರಿಗಳ ಪ್ರತಿಕ್ರಿಯೆಗೆ ಯೋಗ್ಯವಾದ ಉತ್ತರವನ್ನು ನೀಡಿದರು. ಇದರಿಂದ ವಸ್ತ್ರಸಂಹಿತೆಯ ವಿಷಯದಲ್ಲಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಜಾಗೃತಿಯಾಗಿದೆ, ಎಂಬುದು ತಿಳಿಯುತ್ತದೆ.
೪. ವಸ್ತ್ರಸಂಹಿತೆಯನ್ನು ಅನ್ವಯಿಸಲು ಹೇಗೆ ಪ್ರಯತ್ನಿಸಬೇಕು ?
ನಿಮಗೆ ನಿಮ್ಮ ಕ್ಷೇತ್ರದಲ್ಲಿನ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅನ್ವಯಿಸಲಿಕ್ಕಿದ್ದರೆ,
೪ ಅ. ಎಲ್ಲ ದೇವಸ್ಥಾನಗಳಿಗೆ ಸಂಬಂಧಿಸಿದ ವಿಶ್ವಸ್ತರನ್ನು ಒಟ್ಟುಗೂಡಿಸಿ ಅವರ ಸಭೆ (ಮೀಟಿಂಗ) ಕರೆದು ಅಲ್ಲಿ ವಸ್ತ್ರಸಂಹಿತೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು.
೪ ಆ. ವಸ್ತ್ರಸಂಹಿತೆ ಅನ್ವಯಿಸುವ ೪ ದಿನ ಮೊದಲು ಆ ವಿಷಯವನ್ನು ಘೋಷಣೆ ಮಾಡಬೇಕು. ವಸ್ತ್ರಸಂಹಿತೆಯ ನಿರ್ಣಯವನ್ನು ಸಮಾಜಕ್ಕೆ ತಲಪಿಸಲು ‘ಪ್ರೆಸ್‌ನೋಟ್’ ಹೊರಡಿಸಬೇಕು ಅಥವಾ ಪತ್ರಕರ್ತರ ಪರಿಷತ್ತು ನಡೆಸಬೇಕು.
೪ ಇ. ಈ ವಿಷಯ ತಿಳಿಯದೆ ಯಾರಾದರೂ ಭಕ್ತರು ದೇವಸ್ಥಾನಕ್ಕೆ ಬಂದಾಗ ಅವರಿಗೆ ತೊಂದರೆಯಾಗಬಾರದೆಂದು ದೇವಸ್ಥಾನದಲ್ಲಿ ಪುರುಷರಿಗಾಗಿ ಪಂಚೆ ಹಾಗೂ ಮಹಿಳೆಯರಿಗೆ ಸೀರೆಯನ್ನು ಒದಗಿಸಿಕೊಡಬೇಕು.
೫. ಕರೆ
ಈ ಲೇಖನದ ಮೂಲಕ ಕರೆ ನೀಡುವುದೇನೆಂದರೆ,
೫ ಅ. ಎಲ್ಲ ವಿಶ್ವಸ್ಥರು ತಮ್ಮ ತಮ್ಮ ದೇವಸ್ಥಾನದಲ್ಲಿ ವಸ್ತ್ರಸಂಹಿತೆಯ ಫಲಕ ಅಳವಡಿಸಲು ಹೇಳಿ ಈ ಅಭಿಯಾನದಲ್ಲಿ ಭಾಗವಹಿಸಬೇಕು.
೫ ಆ. ಕೇವಲ ಖಾಸಗಿ ದೇವಸ್ಥಾನಗಳು ಮಾತ್ರವಲ್ಲ, ಸರಕಾರೀಕರಣವಾಗಿರುವ ದೇವಸ್ಥಾನಗಳಲ್ಲಿಯೂ ವಸ್ತ್ರಸಂಹಿತೆ ಅನ್ವಯಿಸಬೇಕು. ಅದಕ್ಕಾಗಿ ಸಂಬಂಧಪಟ್ಟ ಎಲ್ಲ ಕ್ಷೇತ್ರಗಳಲ್ಲಿನ ಅಧಿಕಾರಿಗಳಿಗೆ ಮನವಿಪತ್ರ ನೀಡಲು ಎಲ್ಲ ಭಕ್ತರು ಒಗ್ಗಟ್ಟಾಗಿ ಪ್ರಯತ್ನಿಸಬೇಕು. ‘ದೇವಸ್ಥಾನಗಳ ರಕ್ಷಣೆಯೆ ಧರ್ಮರಕ್ಷಣೆ ಯಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ಅದಕ್ಕಾಗಿ ನಾವೆಲ್ಲರೂ ಪ್ರಯತ್ನಿಸೋಣ.
– ಶ್ರೀ. ಗುರುಪ್ರಸಾದ ಗೌಡ, ಕರ್ನಾಟಕ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ.