ಆಸ್ಟ್ರೇಲಿಯಾವು ೧೬ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು (ಸೋಶಿಯಲ್ ಮೀಡಿಯಾ) ಬಳಸಲು ನಿಷೇಧಿಸುವ ಮಹತ್ವದ ನಿರ್ಣಯವನ್ನು ತೆಗೆದು ಕೊಂಡಿದೆ. ನವೆಂಬರ್ ೨೮ ರಂದು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ‘ದಿ ಸೋಶಿಯಲ್ ಮೀಡಿಯಾ ಮಿನಿಮಮ್ ಏಜ್ ಬಿಲ್’ ಎಂಬ ಕಾನೂನು ಅಂಗೀಕರಿಸಲಾಯಿತು. ಈ ಕಾನೂನಿನಂತೆ, ಫೇಸ್‌ಬುಕ್, ಇನ್ಸ್ಟಾಗ್ರಾಂ, ಟಿಕ್‌ಟಾಕ್, ಸ್ನ್ಯಾಪ್‌ಚಾಟ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ೧೬ ವರ್ಷದ ಒಳಗಿನ ಮಕ್ಕಳು ಬಳಸಲು ನಿಷೇಧಿಸಿದೆ. ಆಸ್ಟ್ರೇಲಿಯಾದಲ್ಲಿ ೨೦೨೫ ರಿಂದ ಈ ಕಾನೂನು ಜಾರಿಗೆ ಬರಲಿದೆ. ವಿಶೇಷವೆಂದರೆ ಈ ಕಾನೂನಿನ ಪ್ರಯೋಗಕ್ಕಾಗಿ ಆಸ್ಟ್ರೇಲಿಯಾ ಸರಕಾರವು ೧ ಸಾವಿರದ ೨೦೦ ತಜ್ಞರನ್ನು ನೇಮಿಸಲಿದೆ. ಇದರ ಪರಿಶೀಲನೆಯನ್ನು ಈ ತಜ್ಞರಿಂದ ೨೦೨೫ ರ ಜನವರಿ-ಮಾರ್ಚ್ ಅವಧಿಯಲ್ಲಿ ನಡೆಯಲಿದೆ. ೧೬ ವರ್ಷಕ್ಕಿಂತ ಕೆಳಗಿನ ಮಕ್ಕಳು ಆಸ್ಟ್ರೇಲಿಯಾದಲ್ಲಿ ಈ ಸಾಮಾಜಿಕ ಮಾಧ್ಯಮಗಳನ್ನು ಬಳಸಬಾರದೆಂಬುದರ ಜವಾಬ್ದಾರಿ ಈ ಸಾಮಾಜಿಕ ಮಾಧ್ಯಮಗಳತ್ತ ಇರುತ್ತದೆ. ಈ ಕಾನೂನು ಉಲ್ಲಂಘಿಸಿದರೆ, ಸಂಬಂಧಿಸಿದ ಸಾಮಾಜಿಕ ಮಾಧ್ಯಮಗಳ ಮೇಲೆ ೨೭೫ ಕೋಟಿ ದಂಡ ವಿಧಿಸಲಾಗುವುದು. ಆಸ್ಟ್ರೇಲಿಯಾ ಅಥವಾ ಭಾರತದಲ್ಲಿ ಮಾತ್ರವಲ್ಲ, ಸಾಮಾಜಿಕ ಮಾಧ್ಯಮಗಳ ಅತಿ ಬಳಕೆಯು ಇಡೀ ಜಗತ್ತಿಗೇ ಚಿಂತೆಯ ವಿಷಯವಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ಅಪರಾಧಗಳು ವೇಗವಾಗಿ ಹರಡುತ್ತಿರುವುದನ್ನು ಗಮನಿಸಿದರೆ, ಮುಂದಿನ ಕೆಲವು ವರ್ಷಗಳಲ್ಲಿ ಇದು ಒಂದು ಜಾಗತಿಕ ಸಮಸ್ಯೆಯಾಗಬಹುದು. ಆಸ್ಟ್ರೇಲಿಯಾ ಈ ಬಗ್ಗೆ ಕಾನೂನು ರೂಪಿಸಿದ ಪ್ರಥಮ ದೇಶವಾದರೂ, ಮುಂದಿನ ಕಾಲದಲ್ಲಿ ಹಲವು ದೇಶಗಳಿಗೆ ಇದೇ ತೀರ್ಮಾನ ತೆಗೆದುಕೊಳ್ಳಬೇಕಾಗುವುದು.
ಅಶ್ಲೀಲತೆ, ವ್ಯಭಿಚಾರ, ಅಪರಾಧಗಳಿಗೆ ಉತ್ತೇಜನ !
ಆಸ್ಟ್ರೇಲಿಯಾದಂತೆ, ಭಾರತ, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ನಾರ್ವೇ ಇತ್ಯಾದಿ ದೇಶಗಳು ಸಹ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿವೆ. ಈ ನಿರ್ಧಾರಕ್ಕೆ ಕಾರಣವೆಂದರೆ ಈಗ ಸಾಮಾಜಿಕ ಮಾಧ್ಯಮಗಳ ಅತಿಬಳಕೆಯು ಕೇವಲ ವೈಯಕ್ತಿಕ ವಿಷಯವಾಗಿಲ್ಲ, ಅದರಿಂದ ಸಮಾಜ ಹಾಗೂ ರಾಷ್ಟ್ರಕ್ಕೆ ಹಾನಿಕರ ಪರಿಣಾಮಗಳು ಗಮನಕ್ಕೆ ಬರುತ್ತಿದೆ. ಹಾಗಾಗಿ ಈ ದೇಶಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಬಂಧನಗಳನ್ನು ಹಾಕಿವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಜೀವನೋಪಯೋಗಿ ಹಾಗೂ ವಿವಿಧ ಕ್ಷೇತ್ರಗಳ ಜ್ಞಾನವರ್ಧಕ ಮಾಹಿತಿ ಲಭ್ಯವಾಗುವುದರ ಜೊತೆಗೆ, ಅಪರಾಧ, ಅಶ್ಲೀಲತೆ ಇತ್ಯಾದಿ ಸಮಾಜವಿಘಾತಕ ಮಾಹಿತಿಯೂ ಸುಲಭವಾಗಿ ಹಂಚಲಾಗುತ್ತದೆ. ಬಾಂಬ್ ಹೇಗೆ ತಯಾರಿಸಬೇಕು ?, ಹೇಗೆ ಕೊಲೆ ಮಾಡಬೇಕು ?, ಇದರೊಂದಿಗೆ ಅಶ್ಲೀಲ-ವ್ಯಭಿಚಾರ ಹಬ್ಬಿಸುವ ವೀಡಿಯೊ ಮತ್ತು ಆ ಕುರಿತಾದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬಿತ್ತರವಾಗುತ್ತಿದೆ. ಇತ್ತೀಚೆಗೆ ‘ರೀಲ್ಸ್’ ಹೆಸರಿನಲ್ಲಿ ಅಶ್ಲೀಲತೆ ಹಾಗೂ ನಿರರ್ಥಕ ವೀಡಿಯೊಗಳನ್ನು ಪ್ರಸಾರ ಮಾಡುವ ಸ್ಪರ್ಧೆ ನಡೆಯುತ್ತಿದೆ. ಕೇವಲ ೧ ನಿಮಿಷದ ‘ರೀಲ್ಸ್’ ವೀಡಿಯೊಗಳನ್ನು ಲಕ್ಷಾಂತರ ಜನರು ನೋಡುತ್ತಾರೆ. ಒಳ್ಳೆಯ ವೀಡಿಯೊಗಳಿಗಿಂತ ಅಶ್ಲೀಲ ವೀಡಿಯೊಗಳು ‘ರೀಲ್ಸ್’ ಮಾಧ್ಯಮದಿಂದ ವೇಗವಾಗಿ ಹರಡುತ್ತಿದೆ. ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಇವು ಬಡವರಿಂದ ಹಿಡಿದು ಶ್ರೀಮಂತರ ವರೆಗೆ ಹಾಗೂ ಮಕ್ಕಳಿಂದ ವಯಸ್ಸಾದವರ ವರೆಗೂ ಸಹಜ ಲಭ್ಯವಾಗಿದೆ. ವಿಶೇಷವಾಗಿ ಯುವಜನರನ್ನು ಆಕರ್ಷಿಸುವ ಅಶ್ಲೀಲತೆ, ಬಲಾತ್ಕಾರ, ವ್ಯಭಿಚಾರ, ಹಿಂಸಾಚಾರವನ್ನು ಉತ್ತೇಜಿಸುವ ಸಾಮಾಜಿಕ ಮಾಧ್ಯಮದಲ್ಲಿನ ಈ ವೀಡಿಯೋಗಳಿಂದಾಗಿ ಕಳೆದ ಹಲವು ವರ್ಷಗಳಿಂದ ಜಗತ್ತಿನ ಅಪರಾಧಗಳಲ್ಲಿ ಭಾರೀ ಹೆಚ್ಚಳವಾಗಿದೆ.
ಸಮಾಜ ಮತ್ತು ರಾಷ್ಟ್ರವಿಘಾತಕ !
‘ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್’ ಎಂಬ ಆಸ್ಟ್ರೇಲಿಯದ ಸರಕಾರಿ ಸಂಸ್ಥೆಯು ಜೂನ್ ೨೦೨೩ ರಲ್ಲಿ ಮಾಡಿದ ಸಮೀಕ್ಷೆಯಲ್ಲಿ, ‘ಮಕ್ಕಳು ಮಾಡಿದ ಅಪರಾಧಗಳಲ್ಲಿ ಶೇ. ೭೭ ರಷ್ಟು ಅಪರಾಧಗಳು ಸಾಮಾಜಿಕ ಮಾಧ್ಯಮಗಳ ಪ್ರೇರಣೆಯಿಂದ ಮಾಡಿದ್ದಾರೆ’ ಎಂದು ವರದಿ ಮಾಡಿದೆ. ದೇಶದ ಭವಿಷ್ಯವಾದ ಯುವಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಅಪರಾಧದೆಡೆ ಸೆಳೆಯಲ್ಪಡುವುದು ದೇಶಕ್ಕೆ ಅಪಾಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾವು ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ನಿಷೇಧ ಹಾಕಲು ತೀರ್ಮಾನಿಸಿದೆ. ಭಾರತದಲ್ಲಿಯೂ ೨೦೨೧ ರಲ್ಲಿ ‘ರಾಷ್ಟ್ರೀಯ ಮಕ್ಕಳ ಅಧಿಕಾರ ರಕ್ಷಣಾ ಆಯೋಗ’ ನಡೆಸಿದ ಸಮೀಕ್ಷೆಯ ಪ್ರಕಾರ, ೧೦ ರಿಂದ ೧೪ ವರ್ಷದ ಶೇ. ೩೭ ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುತ್ತಿದ್ದಾರೆಂದು ತಿಳಿದುಬಂದಿದೆ. ೨೦೨೩ ರಲ್ಲಿ ಭಾರತದಲ್ಲಿಯೂ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನವೂ ೭ ಗಂಟೆಗಳ ಕಾಲ ಕಳೆಯುವುದು ಗಮನಕ್ಕೆ ಬಂದಿದೆ. ಆಸ್ಟ್ರೇಲಿಯಾದಂತೆ, ಭಾರತದಲ್ಲಿಯೂ ಅದೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಿಲುಕಿದ ಯುವವರ್ಗವು ಅಪರಾಧದೆಡೆಗೆ ಹೊರಳುವ ಅಪಾಯ ಹೆಚ್ಚಿದೆ.
ಭಾರತದಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್ ಆಟಗಳನ್ನು ಆಡಲು ಸಂಚಾರವಾಣಿ ಕೊಡದ ಕಾರಣ ಮಕ್ಕಳು ತಮ್ಮ ಹೆತ್ತವರನ್ನು ಕೊಂದ ಆಘಾತಕಾರಿ ಪ್ರಕರಣಗಳು ನಡೆದಿವೆ. ಕೆಲವು ವರ್ಷಗಳ ಹಿಂದೆ ‘ಬ್ಲೂ ವೇಲ್’ ಆನ್‌ಲೈನ್ ಆಟದಿಂದ ಭಾರತ ಸೇರಿದಂತೆ ವಿಶ್ವದ ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳು ಗಣನೀಯವಾಗಿ ಹೆಚ್ಚಿವೆ. ಇದಕ್ಕೆ ಕಾರಣ ‘ಸಾಮಾಜಿಕ ಜಾಲತಾಣಗಳ ಮೂಲಕ ಅಶ್ಲೀಲತೆಯ ಪ್ರಸಾರ.’ ಪೋಷಕರ ಬೈಗುಳದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವಿನ ಜಗಳದಿಂದ ಕೊಲೆಗಳಾಗುವುದು ಇವು ಸಾಮಾಜಿಕ ಮಾಧ್ಯಮಗಳ ಪರಿಣಾಮವಾಗಿದೆ. ಸಾಮಾಜಿಕ ಮಾಧ್ಯಮ ಗಳಿಂದ ಹೊರಾಂಗಣ ಕ್ರೀಡೆಗಳಲ್ಲಿ ತೀವ್ರ ಕುಸಿತಕ್ಕೆ ಕಾರಣ ವಾಗಿದೆ. ಮಕ್ಕಳಿಂದ ಹಿಡಿದು ಯುವಕರವರೆಗೂ ಎಲ್ಲರೂ ಹೊರಾಂಗಣ ಕ್ರೀಡೆಗಳಿಗಿಂತ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ. ನಿರಂತರವಾಗಿ ವೀಡಿಯೋ ನೋಡುವುದು, ಆಡಿಯೋ ಕೇಳುವುದು ಇವೆಲ್ಲವೂ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಮಾಧ್ಯಮಗಳು ತಮ್ಮ ಸ್ವಂತ ಆರ್ಥಿಕ ಲಾಭಕ್ಕಾಗಿ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತದ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ ಖ್ಯಾತಿ ಮತ್ತು ಹಣವನ್ನು ಗಳಿಸುವ ಸಾಧನವಾಗಿ ಮಾರ್ಪಟ್ಟಿವೆ. ಈ ಮಾಧ್ಯಮದ ಮೂಲಕ ಆರ್ಥಿಕ ಲಾಭ ಪಡೆಯಲು ಸಮಾಜ ದಲ್ಲಿ ಅಶ್ಲೀಲತೆ, ಭಯಾನಕತೆ ಮತ್ತು ಹಿಂಸಾಚಾರವನ್ನು ಚಿತ್ರಿಸಲು ಸ್ಪರ್ಧೆ ಏರ್ಪಟ್ಟಿದೆ. ಭಾರತದಲ್ಲಿ ಡಿಸೆಂಬರ್ ೨೦೧೮ ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಸಾಮಾಜಿಕ ಮಾಧ್ಯಮದ ಅನುಚಿತ ರೂಪಗಳನ್ನು ನಿಗ್ರಹಿಸಲು ೧೦ ಕೇಂದ್ರೀಯ ಏಜೆನ್ಸಿಗಳನ್ನು ನೇಮಿಸಿತು; ಆದರೆ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿರುವ ಸಮಾಜವಿರೋಧಿ ಮಾಹಿತಿ ಹಾಗೂ ವೀಡಿಯೋ ನಿಯಂತ್ರಣಕ್ಕೆ ಯಾವುದೇ ವಿಶೇಷ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ಭಾರತವು ಆಸ್ಟ್ರೇಲಿಯಾದಂತಹ ಸಮರ್ಥ ಕಾನೂನನ್ನು ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕಾನೂನನ್ನು ರೂಪಿಸಬೇಕಾಗಿದೆ; ಆದರೆ ಕಾನೂನು ಮಾತ್ರ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಮರೀಚಿಕೆಯಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದು ಸರಿ ಮತ್ತು ತಪ್ಪು ? ಇದನ್ನು ಅರ್ಥ ಮಾಡಿಕೊಳ್ಳುವ ಸಮಾಜ ನಿರ್ಮಾಣವಾಗಬೇಕಿದೆ. ಅಂತಹ ಪ್ರತಿಭಾನ್ವಿತ ಸಮಾಜವನ್ನು ರಚಿಸಲು ಕುಟುಂಬ ಮತ್ತು ಸಮಾಜ ದಲ್ಲಿ ಅಂತಹ ಸಂಸ್ಕೃತಿಯನ್ನು ತುಂಬುವುದು ಅವಶ್ಯಕ. ವಿದ್ಯಾರ್ಥಿ ಗಳನ್ನು ಮಾಹಿತಿ ಜ್ಞಾನದೊಂದಿಗೆ ಸಜ್ಜುಗೊಳಿಸುವುದು ಇದಕ್ಕೆ ಪರಿಣಾಮಕಾರಿ ಪರಿಹಾರವಾಗಿದೆ.