ಸಂಸತ್ ಭವನದ ಪ್ರವೇಶದ್ವಾರದಲ್ಲಿ ಭಾಜಪ ಮತ್ತು ಕಾಂಗ್ರೆಸ ಸಂಸದರು ಪರಸ್ಪರ ತಳ್ಳಾಟ

2 ಭಾಜಪ ಸಂಸದರು ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲು

ನವ ದೆಹಲಿ – ಸಂಸದ ಭವನ ಪ್ರದೇಶದಲ್ಲಿ ಡಿಸೆಂಬರ್ 19 ರಂದು ಬೆಳಿಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ನಡೆದ ಗಲಾಟೆಯಲ್ಲಿ ಭಾಜಪ ಸಂಸದರಾದ ಪ್ರತಾಮ ಸಿಂಗ್ ಸಾರಂಗಿ ಮತ್ತು ಮುಖೇಶ ರಜಪೂತ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದ ರಜಪೂತ್ ಅವರನ್ನು ಮೊಬೈಲ್ ಮೂಲಕ ಮಾತನಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಸಂಸದ ಸಾರಂಗಿ ಅವರು `ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನನ್ನನ್ನು ತಳ್ಳಿದ್ದರಿಂದ ನಾನು ಕೆಳಗೆ ಬಿದ್ದೆನು ಮತ್ತು ನನ್ನ ತಲೆಗೆ ಪೆಟ್ಟು ಬಿದ್ದಿತು’, ಎಂದು ಆರೋಪಿಸಿದರು. ಈ ಆರೋಪವನ್ನು ತಳ್ಳಿಹಾಕಿದ ರಾಹುಲ್ ಗಾಂಧಿ, ‘ಸಂಸತ್ತಿನ ಮಕರ ದ್ವಾರದಿಂದ ಪ್ರವೇಶಿಸದಂತೆ ಭಾಜಪ ಸಂಸದರೇ ನನ್ನನ್ನು ತಳ್ಳಿದರು’, ಎಂದು ಆರೋಪಿಸಿದರು. ಮತ್ತೊಂದೆಡೆ, ಈ ಘಟನೆಯಿಂದಾಗಿ ಉಭಯ ಸದನಗಳಲ್ಲಿ ಗದ್ದಲ ಉಂಟಾದ ಕಾರಣ ಸಂಸತ್ತಿನ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಈ ಪ್ರಕರಣದಲ್ಲಿ ಭಾಜಪವು ರಾಹುಲ್ ಗಾಂಧಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದೆ. ಮತ್ತೊಂದೆಡೆ ಕಾಂಗ್ರೆಸ್ ಲೋಕಸಭೆ ಅಧ್ಯಕ್ಷರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದೆ. ಹಾಗೆಯೇ ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆಯೂ ಒತ್ತಾಯಿಸಿದ್ದಾರೆ. ಭಾಜಪ ಸಂಸದರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾಡ್ರಾ ಅವರನ್ನು ತಳ್ಳಿದ್ದಾರೆ’, ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಈಗ ‘ಸಂಸತ್ತು ಕುಸ್ತಿ ಅಖಾಡ’ ಎಂದು ಹೇಳಿದರೆ ತಪ್ಪಾಗಲಾರದು. ಇಂತಹ ಸಂಸದರು ಜನರ ಮುಂದೆ ಎಂತಹ ಆದರ್ಶಗಳನ್ನು ಇಡುತ್ತಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ !