ಕೋಲಕಾತಾ ನಗರದಲ್ಲಿ ‘ಡೇಟಿಂಗ್ ಸರ್ವಿಸ್’ ಒದಗಿಸುವ ಒಂದು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ಜಾಲತಾಣಗಳ ಮೂಲಕ ಹಲವು ಯುವತಿಯರ ಚಿತ್ರಗಳನ್ನು ಜನರಿಗೆ ಕಳುಹಿಸುತ್ತಿದ್ದರು. ನಂತರ ಅವರನ್ನು ವಂಚಿಸಿ 5 ರಿಂದ 15 ಸಾವಿರ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು. ಇದೊಂದು ಕೇವಲ ಪ್ರಾತಿನಿಧಿಕ ಪ್ರಕರಣವಾಗಿದ್ದು, ಅನೇಕ ಜನರು ‘ಹೆಸರು ಬಯಲಾದರೆ ತೇಜೋವಧೆಯಾಗಬಹುದು’ ಎಂಬ ಭಯದಿಂದ ದೂರು ದಾಖಲಿಸುವುದಿಲ್ಲ. ಕಳೆದ ಕೆಲವು ವರ್ಷಗಳಿಂದ, ’ಆನ್‌ಲೈನ್ ಡೇಟಿಂಗ್ ಆ್ಯಪ್’ ಹೆಸರಿನ ಒಂದು ಪ್ರಕರಣವು ತೀವ್ರವಾಗಿ ಬೆಳೆದಿದೆ ಮತ್ತು ಕೋಟಿಗಟ್ಟಲೆ ಜನರು ಅದನ್ನು ಉಪಯೋಗಿಸುತ್ತಾರೆ. ಅನೇಕ ಜನರು ’ಇದರಿಂದ ತಮಗೆ ಒಳ್ಳೆಯ ಜೊತೆಗಾರ/ಜೊತೆಗಾರತಿ ಸಿಗಬಹುದು’ ಎನ್ನುವ ನಿರೀಕ್ಷೆಯೊಂದಿಗೆ ಆ್ಯಪ್ ಗೆ ಬಲಿಯಾಗುತ್ತಾರೆ. ಬಹುತೇಕ ಜನರಿಗೆ ಲಕ್ಷಗಟ್ಟಲೆ ರೂಪಾಯಿಗಳ ವಂಚನೆಯಾದ ಬಳಿಕವೇ ಅದರ ಸುಳಿಗೆ ಸಿಲುಕಿರುವುದು ಗಮನಕ್ಕೆ ಬರುತ್ತದೆ. ಈ ‘ಆ್ಯಪ್’ ಮಾಧ್ಯಮದಿಂದ ದೈಹಿಕ, ಮಾನಸಿಕ ಮತ್ತು ಆರ್ಥಿಕ ಹೀಗೆ ಎಲ್ಲ ರೀತಿಯ ವಂಚನೆಗಳು ಆಗುತ್ತಿರುವ ಅನೇಕ ಕೃತ್ಯಗಳು ಪ್ರಸ್ತುತ ಬಯಲಾಗುತ್ತಿವೆ. ದುರದೃಷ್ಟವಶಾತ್, ‘ಗೂಗಲ್ ಪ್ಲೇ ಸ್ಟೋರ‍್’ ನಲ್ಲಿ ಸಾವಿರಾರು ’ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳು’ ಲಭ್ಯವಿದ್ದು, ಸಧ್ಯಕ್ಕೆ ಅವುಗಳನ್ನು ನಿಗ್ರಹಿಸಲು ಭಾರತದಲ್ಲಿ ಯಾವುದೇ ಪರಿಣಾಮಕಾರಿ ಕಾನೂನು ಇಲ್ಲ.
’ಡೇಟಿಂಗ್ ಆ್ಯಪ್ ’ನ ವಿಕೃತಿ!
ಇಂದಿನ ಯುವ ಪೀಳಿಗೆ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಿದೆ. ಇದರಿಂದ ಒಂಟಿತನದ ಭಾವನೆಯು ಹೆಚ್ಚಾಗುತ್ತದೆ. ಇದನ್ನೇ ಗಮನಿಸಿ ಪ್ರಾರಂಭದಲ್ಲಿ ವಿದೇಶದಲ್ಲಿ ‘ಡೇಟಿಂಗ್ ಆಪ್’ ನ ವಿಕೃತಿಯು ಪ್ರಾರಂಭವಾಯಿತು. ಈ ’ಆ್ಯಪ್’ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆಯೆಂದರೆ, ಅದರಲ್ಲಿ ನೀವೇ ನಿಮ್ಮ ಮಾಹಿತಿಯನ್ನು ನೀಡಿ ನಿಮಗೆ ಅಪೇಕ್ಷಿತವಿರುವ ಜೊತೆಗಾರರನ್ನು ಹುಡುಕಬಹುದು ಅಥವಾ ಅವರೊಂದಿಗೆ ಸ್ನೇಹ ಬೆಳೆಸಬಹುದು. ಭಾರತೀಯ ಸಂಸ್ಕೃತಿಯಲ್ಲಿ ’ಇಂದು ಈ ಸಂಗಾತಿ, ನಾಳೆ ಆ ಸಂಗಾತಿ, ಇಂದು ಈ ಸ್ನೇಹಿತ, ನಾಳೆ ಆ ಸ್ನೇಹಿತ’ ಎಂಬ ಪರಿಕಲ್ಪನೆ ಇಲ್ಲ; ಆದರೆ ‘ಡೇಟಿಂಗ್ ಆ್ಯಪ್’ ಮೂಲಕ ಯುವಕರಷ್ಟೇ ಅಲ್ಲ, ಹಿರಿಯರೂ ಈಗ ಇದರೆಡೆಗೆ ಆಕರ್ಷಿತರಾಗುತ್ತಿದ್ದು, ಅವರು ಈ ಷಡ್ಯಂತ್ರದಲ್ಲಿ ಸಿಲುಕುತ್ತಿದ್ದಾರೆ.
ಅನೇಕ ಜನರು ಇಂತಹ ಜಾಲತಾಣಗಳಿಗೆ ಹೋಗಿ ತಮಗೆ ಇಷ್ಟವಾಗುವ ಸ್ನೇಹಿತ-ಜೊತೆಗಾರನನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಇದರಲ್ಲಿ ಬಹಳಷ್ಟು ’ಪ್ರೊಫೈಲ್’ಗಳು (ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ) ನಕಲಿ ಇರುತ್ತವೆ. ಇಂತಹ ‘ಆ್ಯಪ್’ಗಳ ದುರ್ಲಾಭ ಪಡೆಯುವವರು ಯಾವಾಗಲೂ ‘ಬೇಟೆಯ’ ಹುಡುಕಾಟದಲ್ಲಿರುತ್ತಾರೆ. ಅನೇಕ ಜನರು ತಮ್ಮೆಲ್ಲ ಮಾಹಿತಿಗಳನ್ನು ಇಂತಹ ‘ಆ್ಯಪ್’ಗೆ ಕಳುಹಿಸುತ್ತಾರೆ. ಮುಂದೆ ಅದು ವಿವಿಧ ಕಾರಣಗಳಿಗೆ ದುರ್ಬಳಕೆಯಾಗುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರು ನೋಯ್ಡಾದಿಂದ ವಿವಿಧ ‘ಡೇಟಿಂಗ್ ಆ್ಯಪ್’ಗಳ ಮೂಲಕ ಯುವತಿಯರನ್ನು ವಂಚಿಸುತ್ತಿದ್ದ ಒಂದು ಅಂತಾರಾಷ್ಟ್ರೀಯ ತಂಡವನ್ನು ಬಂಧಿಸಿದ್ದಾರೆ. ಅದರಲ್ಲಿ 300 ಕ್ಕೂ ಹೆಚ್ಚು ಯುವತಿಯರಿಗೆ ಕೋಟ್ಯಂತರ ರೂಪಾಯಿಗಳ ವಂಚನೆಯಾಗಿತ್ತು. ಬಂಧಿಸಲಾಗಿರುವ ತಂಡದಲ್ಲಿ 5 ನೈಜೀರಿಯಾ ಯುವಕರು ಮತ್ತು ಭೂತಾನಿನ ಓರ್ವ ಯುವತಿ ಇದ್ದರು. ಈ ತಂಡದವರು ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ಶಸ್ತ್ರಚಿಕಿತ್ಸಕರು ಮುಂತಾದ ಉಚ್ಚ ಪದವಿಗಳನ್ನು ಹೊಂದಿರುವುದಾಗಿ ಅನೇಕ ನಕಲಿ ಪ್ರೊಫೈಲ್‌ಗಳನ್ನು ರಚಿಸುತ್ತಿತ್ತು. ಬಳಿಕ ಕೇವಲ ಭಾರತೀಯರಷ್ಟೇ ಅಲ್ಲ, ಪೋರ್ಚುಗಲ್, ಸ್ವೀಡನ್, ನೆದರ್ ಲ್ಯಾಂಡ್ ಸೇರಿದಂತೆ ವಿದೇಶದ ಯುವತಿಯರೊಂದಿಗೆ ಸ್ನೇಹ ಬೆಳೆಸುತ್ತಾರೆ. ಆರಂಭದಲ್ಲಿ ಯುವತಿಯರಿಗೆ ದುಬಾರಿ ಉಡುಗೊರೆಗಳನ್ನು ಕಳುಹಿಸುತ್ತಾರೆ. ಇದಾದ ಬಳಿಕ ಅವರನ್ನು ಭಾರತಕ್ಕೆ ಕರೆಸುತ್ತಾರೆ. ಅಲ್ಲಿ ನಕಲಿ ಕಸ್ಟಮ್ಸ್ ಅಧಿಕಾರಿಗಳಾಗಿ ಭೇಟಿ ನೀಡುವ ಯುವಕ-ಯುವತಿಯರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಇನ್ನೊಂದು ಪ್ರಕರಣದಲ್ಲಿ ಒಬ್ಬ ಮಹಿಳಾ ಪೈಲಟ್ ‘ಡೇಟಿಂಗ್ ಆ್ಯಪ್’ ಮೂಲಕ ಮತ್ತೊಬ್ಬ ಪೈಲಟ್ ನನ್ನು ಭೇಟಿಯಾಗಿದ್ದಾಳೆ. ಕೆಲವು ದಿನಗಳ ಬಳಿಕ ಈ ಪೈಲಟ್ ಆಕೆಯ ಮನೆಗೆ ಬಂದನು ಮತ್ತು ಅವಳು ಅವನ ದೌರ್ಜನ್ಯಕ್ಕೆ ಬಲಿಯಾದಳು. ಇಷ್ಟು ದೊಡ್ಡ ವಂಚನೆಯ ನಂತರ ಆಕೆಗೆ ‘ಅವನು ನೀಡಿರುವ ಮಾಹಿತಿ ಸುಳ್ಳು’ ಎಂದು ಗಮನಕ್ಕೆ ಬಂದಿತು. ಇದರಿಂದ ಗಮನಕ್ಕೆ ಬರುವುದೇನೆಂದರೆ, ಅನೇಕ ಮಹಿಳೆಯರು ಮತ್ತು ಯುವತಿಯರು ‘ಡೇಟಿಂಗ್ ಆ್ಯಪ್’ನಲ್ಲಿರುವ ಮಾಹಿತಿಯನ್ನು ನಂಬುತ್ತಾರೆ. ಅವರಿಗೆ ‘ತಾವು ಮೋಸ ಹೋಗಿದ್ದೇವೆ’ ಎಂದು ತಿಳಿಯುವಷ್ಟರಲ್ಲಿ ಸಮಯ ಕಳೆದು ಹೋಗಿರುತ್ತದೆ.
ಮದುವೆಯನ್ನು ಹೊಂದಿಸಿ ಕೊಡುವ ನಕಲಿ ’ವೆಬ್‌ಸೈಟ್’ಗಳು ಮತ್ತು ’ಆ್ಯಪ್’ಗಳು!
ನಕಲಿ ಮಾಹಿತಿ ನೀಡಿ ವಂಚಿಸುವ ’ಡೇಟಿಂಗ್ ಆ್ಯಪ್’ಗಳು ಇರುವಂತೆಯೇ, ವಿವಾಹವನ್ನು ಹೊಂದಿಸಿ ಕೊಡುವ ಹೆಸರಿನಡಿಯಲ್ಲಿ ನಕಲಿ ಮಾಹಿತಿಯನ್ನು ನೀಡಿ ದೊಡ್ಡ ವಂಚನೆ ಮಾಡುವ ’ವೆಬ್‌ಸೈಟ್’ಗಳು ಮತ್ತು ಇತರ ’ ಆ್ಯಪ್ ’ ಗಳು ಕಾರ್ಯನಿರ್ವಹಿಸುತ್ತಿವೆ. ಇಂದಿನ ದಿನಗಳಲ್ಲಿ ಅನೇಕ ಹೆಸರಾಂತ ಸಂಸ್ಥೆಗಳು ವಿವಾಹವನ್ನು ಹೊಂದಿಸಿ ಕೊಡುವ ’ವೆಬ್‌ಸೈಟ್‌ಗಳು’ ಮತ್ತು ಇನ್ನಿತರೆ ‘ಆ್ಯಪ್’ಗಳು ಕಾರ್ಯನಿರತವಾಗಿವೆ; ಆದರೆ, ಇದರ ದುರುಪಯೋಗ ಪಡೆದುಕೊಂಡು ಹಣವನ್ನು ಸುಲಿಗೆ ಮಾಡುವ ಒಂದು ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಇಂತಹ ಜಾಲತಾಣಗಳ ಮೂಲಕ ಬರುವ ಸ್ಥಳಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತವೆ. ತದನಂತರ, ಈ ತಂಡದ ಜನರು ಕೆಲವು ದುಬಾರಿ ವಸ್ತುಗಳನ್ನು ಭಾರತೀಯ ಹುಡುಗಿಯರಿಗೆ ಕಳುಹಿಸುತ್ತಾರೆ ಮತ್ತು ಅವರ ನಂಬಿಕೆಯನ್ನು ಗಳಿಸುತ್ತಾರೆ. ಒಂದು ದಿನ ಆ ತಂಡದ ವ್ಯಕ್ತಿ ಕರೆ ಮಾಡಿ ’ನಾನು ಭಾರತಕ್ಕೆ ಬಹಳ ದುಬಾರಿ ಉಡುಗೊರೆಯೊಂದಿಗೆ ಬರುತ್ತಿದ್ದೇನೆ’ ಎಂದು ಹೇಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಲು ಕರೆಯುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ನನ್ನನ್ನು ‘ಕಸ್ಟಮ್ಸ್’ ಅಧಿಕಾರಿಗಳು ಬಂಧಿಸಿದ್ದು, ಬಿಡುಗಡೆಯಾಗಲು ಇಷ್ಟು ಹಣ ಬೇಕು’ ಎಂದು ಮಹಿಳೆಯರು ಅಥವಾ ಪುರುಷರಿಂದ ಲಕ್ಷಗಟ್ಟಲೆ ಹಣವನ್ನು ಸುಲಿಗೆ ಮಾಡುತ್ತಾರೆ.
’ಡೇಟಿಂಗ್ ಆಪ್’ ನಿಂದಾಗಿ ಭಾರತದಲ್ಲಿ ವಿವಾಹೇತರ ಸಂಬಂಧಗಳಲ್ಲಿ ಹೆಚ್ಚಳವಾಗಿದ್ದು, ಇಂತಹ ’ಆ್ಯಪ್’ ಗಳೆಂದರೆ, ಭಾರತೀಯ ಸಂಸ್ಕೃತಿಯ ಮೇಲೆ ದೊಡ್ಡ ದಾಳಿಯಾಗಿದೆ. ಇದರಲ್ಲಿ ಅನೇಕ ‘ಆ್ಯಪ್ಸ್’ ವಿದೇಶದಿಂದ ಕಾರ್ಯನಿರ್ವಹಿಸುತ್ತವೆ ಮತ್ತು ಆ ಮೂಲಕ ಅಪರಾಧ, ನೈತಿಕತೆಯ ಉಲ್ಲಂಘನೆ ಮತ್ತು ಇತರ ಅನೇಕ ದುಷ್ಕೃತ್ಯಗಳಿಗೆ ಉತ್ತೇಜನ ಸಿಗುತ್ತದೆ. ಹಲವು ’ಆ್ಯಪ್’ಗಳು ಸದಸ್ಯರಾಗಿ ನೋಂದಾಯಿಸಲು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಶುಲ್ಕವನ್ನು ವಿಧಿಸುತ್ತವೆ. ಇದರಿಂದ ಭಾರತೀಯ ಕರೆನ್ಸಿಯ ಲೂಟಿಗೂ ಕಾರಣವಾಗುತ್ತದೆ. ಯುವಕ-ಯುವತಿಯರು ಇಂತಹ ‘ಆ್ಯಪ್’ ಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ಅಮೂಲ್ಯ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಾರೆ. ಭಾರತದ ಯುವ ಪೀಳಿಗೆಯೇ ಭಾರತದ ಭವಿಷ್ಯ. ಇಂತಹ ’ಆ್ಯಪ್’ಗಳಿಂದ ಅವರ ಆಯುಷ್ಯ ಧ್ವಂಸಗೊಳ್ಳುವುದು, ಭಾರತದ ಉನ್ನತಿಗೆ ಅಪಾಯಕಾರಿಯಾಗಿದೆ. ಪಬ್ಜಿಯಂತಹ ಆಟಗಳನ್ನು ನಿಷೇಧಿಸುವ ಮೂಲಕ ಭಾರತ ಸರ್ಕಾರ ಅನೇಕ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ರಕ್ಷಿಸಿದ ರೀತಿಯಲ್ಲಿಯೇ ’ಡೇಟಿಂಗ ಆ್ಯಪ್’ಗಳನ್ನು ನಿಷೇಧಿಸುವುದು ಅತ್ಯಾವಶ್ಯಕವಾಗಿದೆ. ಹೀಗಾದರೆ ಮಾತ್ರ ಈ ಮಾಧ್ಯಮಗಳಿಂದಾಗುವ ವಂಚನೆ ಮತ್ತು ಅನೈತಿಕತೆಯೆಡೆಗಿನ ಒಲವು ತೋರುವ ಕೆಲವು ವಿಷಯಗಳನ್ನು ತಡೆಗಟ್ಟಬಹುದು. ರಾಷ್ಟ್ರಪ್ರೇಮಿ ನಾಗರಿಕರು ಕೂಡ ವಿವಿಧ ಮಾಧ್ಯಮಗಳ ಮೂಲಕ ಇಂತಹ ’ಆ್ಯಪ್’ಗಳನ್ನು ನಿಷೇಧಿಸುವಂತೆ ಒತ್ತಾಯಿಸಬೇಕು.
ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ಮಾಡುವ ’ಡೇಟಿಂಗ್ ಆಪ್’ ನಂತಹ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವುದು ಆವಶ್ಯಕ !