ವಾಷಿಂಗ್ಟನ (ಅಮೇರಿಕಾ) – ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವಾರು ದೇಶಗಳಿಗೆ ಹೊಸ ತೆರಿಗೆಗಳನ್ನು ವಿಧಿಸಿದ್ದಾರೆ. ಇದರಲ್ಲಿ ಭಾರತವೂ ಸೇರಿದ್ದು, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ.26 ಪರಸ್ಪರ ವ್ಯಾಪಾರ ತೆರಿಗೆ (ರೆಸಿಪ್ರೊಕಲ್ ಟ್ಯಾರಿಫ್) ವಿಧಿಸಲಾಗಿದೆ. ಟ್ರಂಪ್ ಆಡಳಿತವು ಏಪ್ರಿಲ್ 2 ರಿಂದ ಹೊಸ ವ್ಯಾಪಾರ ತೆರಿಗೆಗಳನ್ನು ಜಾರಿಗೆ ತರುವ ಸೂಚನೆ ನೀಡಿತ್ತು. ಅದರಂತೆ ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಹೊಸ ತೆರಿಗೆಗಳನ್ನು ಘೋಷಿಸಿದರು.
ಚೀನಾ, ವಿಯೆಟ್ನಾಂ ಮತ್ತು ತೈವಾನ್ ಗಿಂತ ಭಾರತದ ಮೇಲೆ ಕಡಿಮೆ ತೆರಿಗೆ!
ಏಷ್ಯಾಖಂಡದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲಿನ ತೆರಿಗೆ ಸ್ವಲ್ಪ ಕಡಿಮೆ ಇದ್ದರೂ, ಅನೇಕ ಏಷ್ಯಾದ ದೇಶಗಳಿಗಿಂತ ಇದು ಹೆಚ್ಚೇ ಆಗಿದೆ. ಚೀನಾದ ಮೇಲೆ ಶೇ. 34, ವಿಯೆಟ್ನಾಂ ಮೇಲೆ ಶೇ. 46, ಥೈಲ್ಯಾಂಡ್ ಮೇಲೆ ಶೇ. 36, ಇಂಡೋನೇಷ್ಯಾ ಮೇಲೆ ಶೇ. 32, ಪಾಕಿಸ್ತಾನದ ಮೇಲೆ ಶೇ.29 ತೆರಿಗೆ ವಿಧಿಸಲಾಗಿದೆ. ಅದೇ ಸಮಯದಲ್ಲಿ, ಏಷ್ಯಾದ ಜಪಾನ್ ಮೇಲೆ ಶೇ. 24, ದಕ್ಷಿಣ ಕೊರಿಯಾದ ಮೇಲೆ ಶೇ.25, ತೈವಾನ್ ಶೇ.32 ಮತ್ತು ಮಲೇಷ್ಯಾ ಮೇಲೆ ಶೇ. 24 ತೆರಿಗೆ ವಿಧಿಸಲಾಗಿದೆ. ಯುರೋಪಿಯನ ಒಕ್ಕೂಟದ ಮೇಲೆ ಶೇ.20 ಮತ್ತು ಬ್ರಿಟನ್ ಮೇಲೆ ಶೇ.32 ತೆರಿಗೆ ವಿಧಿಸಿದೆ.
ಭಾರತಕ್ಕೂ ಲಾಭ!
ಭಾರತವು ಅಮೆರಿಕದ ಮಾರುಕಟ್ಟೆಯಲ್ಲಿ ಚೀನಾ ಮತ್ತು ವಿಯೆಟ್ನಾಂ ಎರಡರಿಂದಲೂ ಗಮನಾರ್ಹ ಸ್ಪರ್ಧೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದು ಭಾರತಕ್ಕೆ ಒಂದು ರೀತಿಯಲ್ಲಿ ಲಾಭದಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ಮೋದಿ ಉತ್ತಮ ಸ್ನೇಹಿತರಾಗಿದ್ದರೂ ಭಾರತ ನಮಗೆ ಶೇ. 52 ರಷ್ಟು ವ್ಯಾಪಾರ ತೆರಿಗೆ ವಿಧಿಸುತ್ತದೆ! – ಟ್ರಂಪ್
ಡೊನಾಲ್ಡ್ ಟ್ರಂಪ್ ಇವರು, ಭಾರತದ ಪ್ರಧಾನಿಗಳ ಭೇಟಿ ಇದೀಗಷ್ಟೇ ಮುಕ್ತಾಯವಾಯಿತು. ಅವರು ನನ್ನ ಬಹಳ ಉತ್ತಮ ಸ್ನೇಹಿತರು; ಆದರೆ ನಾನು ಅವರಿಗೆ ಹೇಳಿದೆ, ‘ನೀವು ಉತ್ತಮ ಸ್ನೇಹಿತರಾಗಿದ್ದೀರಿ; ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ.’ ಅವರು ನಮ್ಮ ಮೇಲೆ ಶೇ. 52 ರಷ್ಟು ವ್ಯಾಪಾರ ತೆರಿಗೆ ವಿಧಿಸುತ್ತಾರೆ; ಆದರೆ ನಾವು ಕಳೆದ ಹಲವು ವರ್ಷಗಳಿಂದ ಅವರ ಮೇಲೆ ಸರಿ ಸುಮಾರು ಶೂನ್ಯ ತೆರಿಗೆ ವಿಧಿಸಿದ್ದೇವೆ, ಎಂದು ಹೇಳಿದರು.
ವ್ಯಾಪಾರ ತೆರಿಗೆಯಿಂದ ಯಾವ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ?
ಅಮೇರಿಕವು ಹೆಚ್ಚಿಸಿದ ವ್ಯಾಪಾರ ತೆರಿಗೆಯ ನಂತರವೂ ಅಲ್ಲಿ ಭಾರತೀಯ ಬಟ್ಟೆಗಳು ಮತ್ತು ಚಪ್ಪಲಿಗಳು ಇತರ ದೇಶಗಳಿಗಿಂತ ಅಗ್ಗವಾಗಿರುತ್ತವೆ, ಇದರಿಂದ ಅವುಗಳ ಮಾರಾಟ ಹೆಚ್ಚಾಗಬಹುದು. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳ ಮೇಲೆ ವ್ಯಾಪಾರ ತೆರಿಗೆಯ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ಆಟೋ ಬಿಡಿಭಾಗಗಳು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ವ್ಯಾಪಾರ ತೆರಿಗೆ ಅನ್ವಯಿಸುವುದಿಲ್ಲ.
ಭಾರತ ಮೊದಲು ಶುಲ್ಕವನ್ನು ವಿಶ್ಲೇಷಿಸುತ್ತದೆ ! – ಕೇಂದ್ರ ಸರಕಾರ
ಭಾರತದ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ ಚೌಧರಿ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಡೊನಾಲ್ಡ ಟ್ರಂಪ್ ಅವರಿಗೆ ಅಮೇರಿಕ ಮೊದಲು ಮತ್ತು ಮೋದಿಗೂ ಭಾರತ ಮೊದಲು ಆಗಿದೆ. ನಾವು ಮೊದಲು ತೆರಿಗೆಯನ್ನು ವಿಶ್ಲೇಷಿಸುತ್ತೇವೆ, ನಂತರ ಅದರ ಪರಿಣಾಮ ಏನಾಗಬಹುದು? ಎಂದು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದನ್ನು ಹೇಗೆ ಎದುರಿಸುವುದು ಎನ್ನುವುದನ್ನು ನೋಡೋಣ’, ಎಂದು ಹೇಳಿದೆ.