American Women Raising Kids : ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ; ಮಕ್ಕಳನ್ನು ಭಾರತದಲ್ಲಿ ಬೆಳೆಸುವ ನಿರ್ಧಾರ ಕೈಗೊಂಡ ಅಮೇರಿಕನ್ ಮಹಿಳೆ !

ಕ್ರಿಸ್ಟನ್ ಫಿಷರ್ ಮತ್ತು ಅವರ ಮಕ್ಕಳು

ನವದೆಹಲಿ – ತಮ್ಮ ಮಕ್ಕಳಿಗೆ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳು ಸಿಗಬೇಕು ಹಾಗೆಯೇ ಅವರ ಉಜ್ಜ್ವಲ ಭವಿಷ್ಯಕ್ಕಾಗಿ ಅನೇಕ ಭಾರತೀಯರು ಅಮೇರಿಕಾದಲ್ಲಿ ನೆಲೆಸುತ್ತಿರುವುದು ಕಂಡು ಬರುತ್ತಿದೆ. ಸದ್ಯ ಇಂತಹ ಚಿತ್ರಣವಿದ್ದರೂ, ಮೂಲ ಅಮೇರಿಕನ್ ಜನರಿಗೆ ಮಾತ್ರ ಭಾರತದ ಬಗ್ಗೆ ಆಕರ್ಷಣೆ ಇದೆ. ಅವರಲ್ಲಿ ಕ್ರಿಸ್ಟೆನ್ ಒಬ್ಬರು. ಕ್ರಿಸ್ಟೆನ್ ಕೆಲವು ವರ್ಷಗಳ ಹಿಂದೆ ದೆಹಲಿಗೆ ಬಂದರು ಮತ್ತು ಅವರು ಭಾರತದ ಪ್ರೀತಿಗೆ ಮನಸೋತರು. ಈಗ ಅವರಿಗೆ ಮಕ್ಕಳಾಗಿದ್ದರೂ, ಅವರನ್ನು ಅಮೇರಿಕಾಗೆ ಕರೆದುಕೊಂಡು ಹೋಗಲು ಇಷ್ಟವಿಲ್ಲ. ಅವರ ಮಕ್ಕಳು ಭಾರತದಲ್ಲಿಯೇ ಬಾಲ್ಯವನ್ನು ಕಳೆಯಬೇಕು ಎಂದು ಅವರಿಗೆ ಅನಿಸುತ್ತದೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ಅವರ ಮಕ್ಕಳು ಭಾರತದಲ್ಲಿ ನಿಜವಾದ ಬಾಲ್ಯದ ಸಂತೋಷವನ್ನು ಅನುಭವಿಸುತ್ತಿದ್ದಾರೆ. ನೀವು ಅಮೇರಿಕಾದಲ್ಲಿ ಪಡೆಯಲು ಸಾಧ್ಯವಿಲ್ಲದಂತಹ ಕೆಲವು ವಿಷಯಗಳು ಭಾರತದಲ್ಲಿದೆ, ಎಂದು ಅವರು ಹೇಳಿದ್ದಾರೆ.

1. ಕ್ರಿಸ್ಟೆನ್ ಅವರ ಪ್ರಕಾರ ಭಾರತದಲ್ಲಿ ಸಂಸ್ಕೃತಿ, ಭಾಷೆ ಮತ್ತು ಸಂಪ್ರದಾಯಗಳ ಬಗ್ಗೆ ಬಹಳ ವೈವಿಧ್ಯವಿದೆ. ಮಕ್ಕಳು ಚಿಕ್ಕಂದಿನಲ್ಲಿಯೇ ಇವೆಲ್ಲವನ್ನೂ ಅನುಭವಿಸುವುದರಿಂದ, ಅವರು ವಿಭಿನ್ನ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲು, ಅವುಗಳನ್ನು ಗೌರವಿಸಲು ಮತ್ತು ಸ್ವೀಕರಿಸಲು ಕಲಿಯುತ್ತಿದ್ದಾರೆ.

2. ಭಾರತದಲ್ಲಿ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ನನ್ನ ಮಕ್ಕಳಿಗೆ ಹಿಂದಿ ಬರುತ್ತದೆ ಮತ್ತು ಇತರ ಅನೇಕ ಭಾಷೆಗಳು ಅವರ ಕಿವಿಗೆ ಬೀಳುತ್ತವೆ. ಇದರಿಂದ ಅವರ ಸಂವಹನ ಕೌಶಲ್ಯ ಮತ್ತು ಗ್ರಹಣ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಭವಿಷ್ಯದಲ್ಲಿ ಅವರಿಗೆ ಖಂಡಿತವಾಗಿಯೂ ಉಪಯುಕ್ತವಾಗಲಿದೆ.

3. ಇಲ್ಲಿ ವಾಸಿಸುವುದರಿಂದ, ಅವರು ಜಗತ್ತನ್ನು ನೋಡುವ ಹೊಸ ಮತ್ತು ವಿಸ್ತಾರವಾದ ದೃಷ್ಟಿಕೋನವನ್ನು ಪಡೆಯುತ್ತಿದ್ದಾರೆ. ಇಲ್ಲಿನ ಸ್ಥಳೀಯ ಸಮಸ್ಯೆಗಳಿಂದ ಹಿಡಿದು ಜಾಗತಿಕ ಮಟ್ಟದ ಸಮಸ್ಯೆಗಳವರೆಗೆ ಅನೇಕ ವಿಷಯಗಳ ಅನುಭವ ಅವರಿಗೆ ಸಿಗುತ್ತದೆ.

4. ಭಾರತದ ಕುಟುಂಬ ವ್ಯವಸ್ಥೆಯನ್ನು ನೋಡಿ ಮಕ್ಕಳಿಗೆ ‘ಕುಟುಂಬ ಎಂದರೇನು?’ ಎಂದು ತಿಳಿಯುತ್ತದೆ. ಅವರ ಕುಟುಂಬದ ಸದಸ್ಯರೊಂದಿಗಿನ ಭಾವನಾತ್ಮಕ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

5. ಭಾರತದಲ್ಲಿ ಆರ್ಥಿಕ ಮಟ್ಟದಲ್ಲಿ ಬಹಳ ಭಿನ್ನತೆ ಕಂಡುಬರುತ್ತದೆ. ಆದ್ದರಿಂದ ಮಕ್ಕಳು ತಾವಾಗಿಯೇ ಸರಳ ಜೀವನಶೈಲಿ, ಹಣದ ಮೌಲ್ಯವನ್ನು ಅರಿತುಕೊಳ್ಳುವುದು ಮತ್ತು ತಮಗೆ ಏನು ಸಿಕ್ಕಿದೆಯೋ ಅದರ ಬಗ್ಗೆ ಕೃತಜ್ಞರಾಗಿರುವುದು ಮುಂತಾದ ವಿಷಯಗಳನ್ನು ಕಲಿಯುತ್ತಾರೆ.

ಸಂಪಾದಕೀಯ ನಿಲುವು

ಎಲ್ಲಿ ಮಕ್ಕಳ ಬಾಲ್ಯ ಸಮೃದ್ಧವಾಗಿರಬೇಕೆಂದು ಅವರನ್ನು ಭಾರತದಲ್ಲಿ ಬೆಳೆಸಲು ನಿರ್ಧರಿಸಿದ ಅಮೇರಿಕನ್ ಮಹಿಳೆ ಮತ್ತು ಎಲ್ಲಿ ಮಕ್ಕಳ ಉಜ್ಜ್ವಲ ಭವಿಷ್ಯದ ಹೆಸರಿನಲ್ಲಿ ಅವರನ್ನು ಅಮೇರಿಕಾದಲ್ಲಿ ಬೆಳೆಸಲು ನಿರ್ಧರಿಸುವ ಭಾರತೀಯ ಪೋಷಕರು!