Supreme Court : ಬೇರೆಯವರು ವ್ಯಕ್ತಪಡಿಸಿದ ವಿಚಾರಗಳು ಇಷ್ಟವಾಗದಿದ್ದರೂ, ಆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು ! – ಸುಪ್ರೀಂ ಕೋರ್ಟ್

ಕಾಂಗ್ರೆಸ್ ಸಂಸದರ ವಿರುದ್ಧದ ಪ್ರಕರಣ ರದ್ದು

ನವದೆಹಲಿ – ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ, ವ್ಯಕ್ತಿ ಅಥವಾ ಗುಂಪು ವ್ಯಕ್ತಪಡಿಸಿದ ವಿಚಾರಗಳನ್ನು ವಿರೋಧಿಸಲು ಬೇರೆ ದೃಷ್ಟಿಕೋನವನ್ನು ಮಂಡಿಸಬೇಕು. ಬಹುಸಂಖ್ಯಾತ ಜನರಿಗೆ ಬೇರೆಯವರು ವ್ಯಕ್ತಪಡಿಸಿದ ವಿಚಾರಗಳು ಇಷ್ಟವಾಗದಿದ್ದರೂ, ಆ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಗೌರವಿಸಬೇಕು. ಆರೋಗ್ಯಕರ ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಬೇಕು. ಕವನ, ನಾಟಕ, ಚಲನಚಿತ್ರ, ವ್ಯಂಗ್ಯಚಿತ್ರ, ಕಲೆ ಸೇರಿದಂತೆ ಸಾಹಿತ್ಯವು ಮಾನವ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ. ಈ ಮಾಧ್ಯಮಗಳ ಮೂಲಕ ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವು ನಾಗರಿಕರಿಗೆ ಇರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕವಿ ಮತ್ತು ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಅವರ ವಿರುದ್ಧ ಗುಜರಾತ್ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ‘ವಿಚಾರ ಮತ್ತು ವಿಚಾರಗಳ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ, ಸಂವಿಧಾನದ 21 ನೇ ಕಲಂ ಅಡಿಯಲ್ಲಿ ಖಾತರಿಪಡಿಸಿದ ಗೌರವಯುತ ಜೀವನವನ್ನು ನಡೆಸುವುದು ಅಸಾಧ್ಯ’ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಇಮ್ರಾನ್ ಪ್ರತಾಪ್‌ಗಢಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ‘ಏ ಖೂನ್ ಕೆ ಪ್ಯಾಸೆ, ಬಾತ್ ಸುನೋ’ ಎಂಬ ಕವನವನ್ನು ಪ್ರಸಾರ ಮಾಡಿದ್ದರು. ಇದರ ಆಧಾರದ ಮೇಲೆ ಗುಜರಾತ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.