ಮುಂಬಯಿ ಪೊಲೀಸರ ಲಭ್ಯ ಅಂಕಿಅಂಶಗಳಿನುಸಾರ ೨೦೨೨ ರಿಂದ ಇಷ್ಟರ ವರೆಗೆ (ಮೂರು ವರ್ಷಗಳಲ್ಲಿ) ಕರ್ತವ್ಯದಲ್ಲಿರು ವಾಗ ೩೭೯ ಪೊಲೀಸರು ಸಾವನ್ನಪ್ಪಿದ್ದಾರೆ. ೩೭೯ ರಲ್ಲಿ ೩೩೪ ಪೊಲೀಸರು ನೈಸರ್ಗಿಕ ವಾಗಿ, ೨೩ ಜನರು ಅಪಘಾತದಲ್ಲಿ ಹಾಗೂ ೨೨ ಜನರು ಆತ್ಮಹತ್ಯೆ ಮಾಡಿಕೊಂಡಿರುವ ದಾಖಲೆಯಿದೆ. ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳ ಹೊರತು ಮುಂಬಯಿ ವಿದ್ಯಾಪೀಠದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದು ಇದರಲ್ಲಿನ ಪ್ರತಿಯೊಂದು ಘಟನೆಯ ಹಿನ್ನೆಲೆ ಮತ್ತು ಕಾರಣಗಳ ಚಿಕಿತ್ಸೆಯನ್ನು ಮಾಡುವ ಅವಶ್ಯಕತೆಯಿದೆ. ಇಂತಹ ಘಟನೆಗಳು ಇನ್ನಿತರ ಭಾಗಗಳಲ್ಲಿಯೂ ಸತತವಾಗಿ ನಡೆಯುತ್ತಿರುತ್ತವೆ.
೧. ಪೊಲೀಸರ ಕರ್ತವ್ಯ, ಅದರಲ್ಲಾಗುವ ರಾಜಕೀಯ ಹಸ್ತಕ್ಷೇಪ ಹಾಗೂ ಅದರಿಂದಾಗುವ ಮಾನಹಾನಿ, ಧೈರ್ಯಗುಂದುವಿಕೆ ಇತ್ಯಾದಿ
ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿರಬೇಕು, ಶಾಂತಿ ಇರಬೇಕು ಹಾಗೂ ಅದರಿಂದ ಜನಸಾಮಾನ್ಯರಿಗೆ ತಮ್ಮ ಹಾಗೂ ರಾಷ್ಟ್ರದ ವಿಕಾಸವನ್ನು ಮಾಡಲು ಸಾಧ್ಯವಾಗಬೇಕು, ಎಂಬ ಉದ್ದೇಶದಿಂದ ಆಡಳಿತವು ಪೊಲೀಸ್ ದಳವನ್ನು ರಚಿಸಿದೆ; ಆದರೆ ಪ್ರತಿಯೊಂದು ಸಮಾಜದಲ್ಲಿ ಅನೇಕ ಕಾರಣಗಳಿಂದ ಅಪರಾಧ ಮಾಡುವವರು, ಸಮಾಜದಲ್ಲಿ ಧರ್ಮ, ಜಾತಿ, ಪ್ರಾಂತ, ಭಾಷೆ, ಲಿಂಗ ಇಂತಹ ಅನೇಕ ಕಾರಣಗಳಿಂದ ಅಸಂತೋಷ ಸೃಷ್ಟಿಸುವವರು, ಗಲಭೆ ಎಬ್ಬಿಸುವವರು ಮತ್ತು ಅದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು ಅನೇಕರು ಇರುತ್ತಾರೆ. ಇಂತಹ ಈ ಸಮಾಜಘಾತಕ, ರಾಷ್ಟ್ರದ್ರೋಹಿ ವ್ಯಕ್ತಿಗಳಿಗೆ ಸಮಾಜದಲ್ಲಿನ ಜನಸಾಮಾನ್ಯರು ಹೆಚ್ಚೇನೂ ವಿರೋಧ ಮಾಡಲು ಸಾಧ್ಯವಿಲ್ಲ. ಅವರನ್ನು ಸಂಘಟಿತರಾಗಿ, ಕಾನೂನಿನ ಆಧಾರದಲ್ಲಿ, ಅವರು ಹೊದ್ದುಕೊಂಡಿರುವ ಸಭ್ಯತೆಯ ಹೊದಿಕೆ ಯನ್ನು ಬದಿಗೆ ಸರಿಸಿ ನ್ಯಾಯಾಲಯದ ಮುಂದೆ ನಿಲ್ಲಿಸುವವರು ಮತ್ತು ಅವರಿಗೆ ನ್ಯಾಯಾಲಯದ ಮೂಲಕ ಶಿಕ್ಷೆ ವಿಧಿಸುವ ಪೊಲೀಸ್ ದಳದ ಅವಶ್ಯಕತೆಯಿದೆ ಹಾಗೂ ಅದು ಪೊಲೀಸರ ಆದ್ಯಕರ್ತವ್ಯವಾಗಿದೆ, ಆದರೂ ಪೊಲೀಸರ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವುದು, ಅಪರಾಧಿಗಳನ್ನು ಮತ್ತು ಸಮಾಜದ್ರೋಹಿಗಳನ್ನು ಬಂಧಿಸಲು ಬಿಡದಿರುವುದು, ಬಂಧಿಸಿದರೂ ಅವರನ್ನು ಬಿಡುವಂತೆ ಮಾಡುವುದು, ಅಪರಾಧಿಗಳಿಗೆ ಕಾನೂನಿನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಹುಡುಕಿ ಶಿಕ್ಷೆಯಾಗದಂತೆ ನೋಡಿಕೊಳ್ಳಲು ಸಮಾಜದಲ್ಲಿ ಅನೇಕ ಘಟಕಗಳು ಉತ್ಸಾಹದಿಂದ ಪ್ರಯತ್ನಿಸು ತ್ತಿರುವುದು ಕಾಣಿಸುತ್ತದೆ. ಪೊಲೀಸರ ಮನೋಬಲ ಕುಗ್ಗಿಸುವುದು, ಅವರು ಮಾಡಿದ ಕರ್ತವ್ಯದಿಂದ ಅವರನ್ನು ಕೆಲಸದಿಂದ ಹೊರದಬ್ಬುವುದು (ವಜಾ ಮಾಡುವುದು), ಅವರಿಗೆ ಪದೋನ್ನತಿ ಸಿಗದಂತೆ ಮಾಡಲು ಅನೇಕ ಜನರು ಪ್ರಯತ್ನಿಸುತ್ತಿರುತ್ತಾರೆ. ತನಗಿಷ್ಟವಿದ್ದಂತೆ ವರ್ತಿಸಲು ಸಾಧ್ಯವಾಗಬೇಕೆಂದು ತನ್ನ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಅಧಿಕಾರಿಗಳನ್ನು ತನ್ನ ಸಮೀಪದ ಪೊಲೀಸ್ ಠಾಣೆಯ ಪ್ರಮುಖ ಹುದ್ದೆಗೆ ನೇಮಕ ಮಾಡಲು ತಮ್ಮನ್ನು ಜನಪ್ರತಿನಿಧಿಯೆಂದು ಹೇಳಿಸಿಕೊಳ್ಳುವ ಅನೇಕ ವ್ಯಕ್ತಿಗಳು ಕಾರ್ಯ ಮಾಡುತ್ತಾರೆ. ತಾನು ಮಾಡಿದ ಅಪರಾಧಗಳನ್ನು ದುರ್ಲಕ್ಷಿಸಬೇಕು ಹಾಗೂ ತನ್ನ ರಾಜಕೀಯ ವಿರೋಧಿಗಳಿಗೆ ಕಾನೂನಿನ ಮೂಲಕ ತೊಂದರೆ ಕೊಡಲು ಸಾಧ್ಯವಾಗಬೇಕೆಂದು ಈ ಪೊಲೀಸ್ ಅಧಿಕಾರಿಗಳನ್ನು ಉಪಯೋಗಿಸಲಾಗುತ್ತದೆ. ತನ್ನ ಮನಸ್ಸಿನ ವಿರುದ್ಧ ಹಾಗೂ ಕಾನೂನು ಪ್ರಕಾರ ವರ್ತಿಸುವ ಅಧಿಕಾರಿಗಳನ್ನು ಪದೇ ಪದೇ ಬದಲಾಯಿಸಿ ಅವರನ್ನು ಕೆಳಹುದ್ದೆಗೆ ವರ್ಗಾವಣೆ ಮಾಡಲಾಗುತ್ತದೆ. ಪೊಲೀಸರ ಮನೋಬಲವನ್ನು ಕುಗ್ಗಿಸಲು ವರ್ಗಾವಣೆ (ಟ್ರಾನ್ಸಫರ್) ಅಥವಾ ವಜಾಗೊಳಿಸುವುದು (ಸಸ್ಪೆಂಡ್) ಇವೆರಡು ಶಸ್ತ್ರಗಳನ್ನು ಪ್ರಾಮುಖ್ಯವಾಗಿ ಉಪಯೋಗಿಸ ಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ‘ಎಲ್ಲ ಸಿಬ್ಬಂದಿಗಳು ನಮ್ಮ ಸಹಾಯಕರಾಗಿದ್ದಾರೆ’, ಎನ್ನುವ ಹಾಗೆ ಅವರೊಂದಿಗೆ ವರ್ತಿಸಬೇಕಾಗುತ್ತದೆ. ಚಿಕ್ಕಪುಟ್ಟ ಕಾರಣಗಳಿಗೆ ಅವರಿಗೆ ಶಿಕ್ಷೆ ನೀಡುವುದು, ಅವಮಾನಿಸುವುದು, ಇದು ಶಿಸ್ತುಬದ್ಧ ವಿಭಾಗಕ್ಕೆ ನಾಚಿಕೆಗೇಡಾಗುತ್ತದೆ.

ಇದರ ಹೊರತು ಸಾರಿಗೆಯ ನಿಯಮಗಳನ್ನು ಪಾಲನೆ ಮಾಡಲು ಹೇಳುವ ಪೊಲೀಸರ ಮೇಲೆ ಸಮಾಜದಲ್ಲಿನ ಅಪರಾಧಿ ವ್ಯಕ್ತಿಗಳು ಹಲ್ಲೆ ಮಾಡುತ್ತಾರೆ. ಅಪರಾಧಿಗಳನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಅವರನ್ನು ಓಡಿಸಲಾಗುತ್ತದೆ ಅಥವಾ ಅವರ ಹತ್ಯೆ ಮಾಡಲಾಗುತ್ತದೆ. ಅನೇಕ ಅಪರಾಧಿಗಳು ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣದಿಂದ ಅನೇಕ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ, ಅವುಗಳಲ್ಲಿ ಪೊಲೀಸರನ್ನು ವಿದೂಷಿ, ತಿಳಿಗೇಡಿ, ಲಂಚಕೋರ, ನಿರ್ಗತಿಕ ಈ ರೀತಿ ವರ್ಣಿಸಲಾಗುತ್ತದೆ. ಇವೆಲ್ಲದರ ಹಿಂದೆ ಪೊಲೀಸರ ಮನೋಬಲ ಕುಗ್ಗಬೇಕು ಎಂಬ ಉದ್ದೇಶವಿರುತ್ತದೆ.
೨. ಪೊಲೀಸರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಕೆಲವು ಉಪಾಯಗಳು
ಪೊಲೀಸರಿಗೆ ಆವಶ್ಯಕವಿರುವ ಎಲ್ಲ ಸೌಲಭ್ಯಗಳಿರುವ ಸರಕಾರಿ ಮನೆಗಳನ್ನು ನಿರ್ಮಾಣ ಮಾಡಲು ನಿಧಿ ಉಪಲಬ್ಧ ಮಾಡಿಕೊಡದಿರುವುದು, ಇರುವ ಮನೆಗಳನ್ನು ದುರಸ್ತಿ ಮಾಡದಿರುವುದರಿಂದ ಮುಂಬಯಿ, ಠಾಣೆ, ಪುಣೆಯಂತಹ ಮಹಾನಗರಗಳಲ್ಲಿನ ಪೊಲೀಸರು ಮತ್ತು ಅವರ ಕುಟುಂಬದವರು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಜೀವಿಸಬೇಕಾಗುತ್ತದೆ. ಪ್ರತಿದಿನ ೧೨ ಗಂಟೆ ಕೆಲಸ, ರಜೆ ಸಿಗುವ ಸಾಧ್ಯತೆ ಕಡಿಮೆಯಿರುವುದರಿಂದ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೊಳಗಾಗುತ್ತದೆ ಹಾಗೂ ಅವರು ವ್ಯಸನಾಧೀನರಾಗುತ್ತಾರೆ. ಸಮಯಕ್ಕನುಸಾರ ಊಟ ಸಿಗದಿರುವುದು, ಶಾಂತನಿದ್ರೆ ಇಲ್ಲದಿರುವುದು, ವ್ಯಾಯಾಮ ಮಾಡುವ ಸೌಲಭ್ಯ ಇಲ್ಲದಿರುವುದು, ಇತ್ಯಾದಿಗಳ ಪರಿಣಾಮದಿಂದ ಪೊಲೀಸರು ಸತತ ಒತ್ತಡದಲ್ಲಿರಬೇಕಾಗುತ್ತದೆ.
ಇದಕ್ಕೆ ಉಪಾಯವೆಂದು ಪೊಲೀಸರ ಕೆಲಸದ ಸಮಯವನ್ನು ಕಡಿಮೆ ಮಾಡುವುದು, ಕೆಲಸದ ಸ್ಥಳದಲ್ಲಿಯೆ ಅವರ ನಿವಾಸದ, ವ್ಯಾಯಾಮದ, ಮಲಗುವ ಸೌಲಭ್ಯ ಮಾಡು ವುದು, ಪೌಷ್ಟಿಕ ಆಹಾರ ಪದಾರ್ಥಗಳನ್ನು ಕೈಗೆಟಕುವ ಬೆಲೆಯಲ್ಲಿ ದೊರಕಿಸಿಕೊಡುವುದು, ಅವರ ಕುಟುಂಬದವರಿಗಾಗಿ ಸುರಕ್ಷಿತ ಸ್ಥಳದಲ್ಲಿ ಆವಶ್ಯಕವಿರುವ ಸೌಲಭ್ಯಗಳೊಂದಿಗೆ ಮನೆಗಳನ್ನು ನಿರ್ಮಿಸುವುದು ಆವಶ್ಯಕವಾಗಿದೆ. ಸಲಹೆಗಾರರ ಸಹಾಯ ಪಡೆದು ಮಾನಸಿಕವಾಗಿ ದುರ್ಬಲರಾಗಿರುವ ಪೊಲೀಸರಿಗೆ ಸಮಯಕ್ಕೆ ವೈದ್ಯಕೀಯ ಸಹಾಯ ನೀಡುವುದರ ಅವಶ್ಯಕತೆಯಿದೆ. ಎಲ್ಲ ಪೊಲೀಸ್ ಸಿಬ್ಬಂದಿಗಳು ಅಥವಾ ಅಧಿಕಾರಿಗಳು ಯಾವಾಗಲೂ ಸಮೂಹದಲ್ಲಿರುವ ಹಾಗೆ ಗಮನಹರಿಸಬೇಕು. ‘ಆತ್ಮಹತ್ಯೆ ಪ್ರತಿಬಂಧಕ ‘ಹೆಲ್ಪ್‌ಲೈನ್ ನಂಬರ್ ೧೦೫೬’ರ ಮಾಹಿತಿ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಹಚ್ಚಬೇಕು. ತರಬೇತಿಯ ಅವಧಿಯಲ್ಲಿ ಹಾಗೂ ಸಮಯ ಸಿಕ್ಕಿದಾಗ ರಾಮಾಯಣ, ಭಾಗವತದಂತಹ ಗ್ರಂಥಗಳ ಅಧ್ಯಯನ ಮಾಡಲು ಆಧ್ಯಾತ್ಮಿಕ ಗುರುಗಳ ಸಹಾಯದಿಂದ ಪ್ರೋತ್ಸಾಹಿಸಬೇಕು. ಹಿಂದಿನ ಕಾಲದಲ್ಲಿ ಈ ವಿಷಯ ಸಹಜವಾಗಿ ಸಿಗುತ್ತಿತ್ತು. ಅದರಿಂದ ಬಹುದೊಡ್ಡ ಆಧ್ಯಾತ್ಮಿಕ ಸಹಾಯ ಸಿಗುತ್ತಿತ್ತು ಹಾಗೂ ಅದರಿಂದ ವ್ಯಕ್ತಿಯ ಮಾನಸಿಕ ಶಕ್ತಿ ಸುದೃಢವಾಗುತ್ತಿತ್ತು.
೩. ಸಮಾಜವು ‘ಪೊಲೀಸ್ ಮಿತ್ರ’ನೆಂದು ಪೊಲೀಸರಿಗೆ ಸಹಕರಿಸುವುದು ಮಹತ್ವದ್ದಾಗಿದೆ !
ಇದರ ಹೊರತು ಪೊಲೀಸರ ಮೇಲೆ ಟೀಕೆ-ಟಿಪ್ಪಣಿ ಮಾಡುವ ಚಲನಚಿತ್ರಗಳಿಗೆ ಸಮಾಜವು ಸಾರ್ವಜನಿಕವಾಗಿ ಬಹಿಷ್ಕಾರ ಹಾಕುವುದು, ಪೊಲೀಸರಿಗೆ ಅವರ ಕೆಲಸದಲ್ಲಿ ಸಹಾಯ ಮಾಡಲು ಪ್ರತಿಯೊಬ್ಬ ಸಕ್ಷಮ ಸ್ತ್ರೀ-ಪುರುಷರು ಮುಂದೆ ಬಂದು ‘ಪೊಲೀಸ್ ಮಿತ್ರ’ನೆಂದು ಕೆಲಸ ಮಾಡುವ ಅವಶ್ಯಕತೆಯಿದೆ. ಗಣೇಶೋತ್ಸವ, ಮೋಹ್ರಮ್, ನವರಾತ್ರಿ ಇಂತಹ ಉತ್ಸವಗಳಿಗಾಗಿ ಪೊಲೀಸರು ಕೂಡ ಪೊಲೀಸ್ ಮಿತ್ರರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಬೇಕು. ಜನರು ಕೂಡ ಅದರಲ್ಲಿ ಚಾತುರ್ಯ ತೋರಿಸುವ ಅವಶ್ಯಕತೆಯಿದೆ. ರಾಜಕೀಯ ನೇತೃತ್ವ ಕೂಡ ಪೊಲೀಸರ ಕಾನೂನು ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡದಿರುವುದು, ಪೊಲೀಸರ ವರ್ಗಾವಣೆ ಅಥವಾ ವಜಾಗೊಳಿಸುವುದನ್ನು ಒತ್ತಡ ಹೇರಿ ಮಾಡದಿರುವುದು ಅತ್ಯಂತ ಆವಶ್ಯಕವಾಗಿದೆ. ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವಾಗ ಪೊಲೀಸರು ನಿಯಮಕ್ಕನುಸಾರ ಕ್ರಮ ತೆಗೆದುಕೊಂಡರೂ ಅವರನ್ನು ವಜಾಗೊಳಿಸುವುದು ಎಷ್ಟರಮಟ್ಟಿಗೆ ಯೋಗ್ಯವಾಗಿದೆ, ಇದರ ಬಗ್ಗೆ ಧರ್ಮ, ಜಾತಿ, ಪಕ್ಷಗಳ ಆಚೆಗೆ ಹೋಗಿ ವಿಚಾರ ಮಾಡುವುದರ ಅವಶ್ಯಕತೆಯಿದೆ. ಅದರಿಂದ ಪೊಲೀಸರಿಗೆ ಸಹಾಯವಾಗುತ್ತದೆ, ಮಾತ್ರವಲ್ಲ, ಸಮಾಜ ಮತ್ತು ದೇಶವನ್ನೂ ‘ವಿಕಾಸ’ ಗೊಳಿಸಲು ಸಾಧ್ಯವಾಗುವುದು.
– ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ್ ಮಹಾಸಂಚಾಲಕರು, ಮುಂಬಯಿ. (೧೬೨.೨೦೨೫)