Supreme Court Rejects Petition : ಪೂಜಾ ಸ್ಥಳಗಳ ಕಾಯ್ದೆಗೆ ಆಕ್ಷೇಪಣೆ ಸಲ್ಲಿಸಿದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ವಜಾ

ಇದೇ ವಿಷಯಕ್ಕೆ ಸಂಬಂಧಿಸಿದಂತೆ 7 ಅರ್ಜಿಗಳು ಬಾಕಿ ಇದೆ.

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಏಪ್ರಿಲ್ 1 ರಂದು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991 ರ ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದೆ. ‘ಈಗಿನ ಅರ್ಜಿ ಬಾಕಿ ಇರುವ ಆಕ್ಷೇಪಣಾ ಅರ್ಜಿಗೆ ಭಿನ್ನವಾಗಿಲ್ಲ’ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು. ಆದಾಗ್ಯೂ, ಅರ್ಜಿದಾರರಾದ ವಕೀಲ ಶ್ರೀ. ಅಶ್ವಿನಿ ಕುಮಾರ ಉಪಾಧ್ಯಾಯ ಅವರಿಗೆ ಕಾಯ್ದೆಯನ್ನು ಪ್ರಶ್ನಿಸಿ ಬಾಕಿ ಇರುವ ಅರ್ಜಿಯನ್ನು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಈ ಹಿಂದೆ ಫೆಬ್ರವರಿ 17 ರಂದು ಸರ್ವೋಚ್ಚ ನ್ಯಾಯಾಲಯ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ 7 ಅರ್ಜಿಗಳ ವಿಚಾರಣೆಯನ್ನು ಮುಂದೂಡಿತ್ತು.

ವಕೀಲ ಉಪಾಧ್ಯಾಯ ಅವರ ಅರ್ಜಿಯಲ್ಲಿ ಪೂಜಾ ಸ್ಥಳಗಳ ಕಾಯ್ದೆ (ವಿಶೇಷ ನಿಬಂಧನೆಗಳು, 1991)ಯ ಸೆಕ್ಷನ್ 4(2) ಅನ್ನು ಪ್ರಶ್ನಿಸಲಾಗಿತ್ತು. ಇದು ಯಾವುದೇ ಸ್ಥಳದ (ಮಂದಿರ-ತೀರ್ಥಕ್ಷೇತ್ರ ಅಥವಾ ಇತರ ಧಾರ್ಮಿಕ ಸ್ಥಳ) ಧಾರ್ಮಿಕ ಸ್ವರೂಪವನ್ನು ಬದಲಾಯಿಸುವ ಯಾವುದೇ ಕ್ರಿಯೆಯನ್ನು ನಿರ್ಬಂಧಿಸುತ್ತದೆ. ಅಲ್ಲದೆ, ಈ ಕುರಿತಂತೆ ಹೊಸ ಪ್ರಕರಣಗಳನ್ನು ದಾಖಲಿಸುವುದನ್ನು ನಿಷೇಧಿಸುತ್ತದೆ.

ಹಿಂದೂಗಳ ಪರವಾಗಿ ನ್ಯಾಯವಾದಿ ಶ್ರೀ. ಅಶ್ವಿನಿ ಕುಮಾರ ಉಪಾಧ್ಯಾಯ, ಡಾ. ಸುಬ್ರಮಣ್ಯಂ ಸ್ವಾಮಿ, ಕಥಾವಾಚಕ ದೇವಕೀನಂದನ ಠಾಕೂರ, ಕಾಶಿಯ ರಾಜಕುಮಾರಿ ಕೃಷ್ಣಾ ಪ್ರಿಯಾ, ಸ್ವಾಮಿ ಜಿತೇಂದ್ರಾನಂದ ಸರಸ್ವತಿ, ನಿವೃತ್ತ ಸೈನ್ಯಾಧಿಕಾರಿ ಅನಿಲ ಕಬೋತ್ರ, ನ್ಯಾಯವಾದಿ ಚಂದ್ರಶೇಖರ, ರುದ್ರ ವಿಕ್ರಮ ಸಿಂಗ, ವಾರಣಾಸಿ ಮತ್ತು ಇತರ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರು ಪೂಜಾ ಸ್ಥಳಗಳ ಕಾಯ್ದೆ-1991 ಅನ್ನು ಸಂವಿಧಾನ ವಿರೋಧಿ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಮುಸ್ಲಿಮರ ಪರವಾಗಿ ಜಮಿಯತ್ ಉಲಾಮಾ-ಎ-ಹಿಂದ್, ಇಂಡಿಯನ್ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಜ್ಞಾನವಾಪಿಯ ನಿರ್ವಹಣಾ ಸಂಸ್ಥೆ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ, ರಾಷ್ಟ್ರೀಯ ಜನತಾದಳದ ಸಂಸದ ಮನೋಜ ಝಾ ಮತ್ತು ಸಂಸದ ಅಸಾದುದ್ದೀನ ಓವೈಸಿ ಕೂಡ ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ಕಾಯ್ದೆಯ ವಿರುದ್ಧದ ಅರ್ಜಿಗಳನ್ನು ಪರಿಗಣಿಸಿದರೆ ದೇಶಾದ್ಯಂತ ಮಸೀದಿಗಳ ವಿರುದ್ಧ ಪ್ರಕರಣಗಳ ಪ್ರವಾಹವೇ ಬರಲಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಂಪಾದಕೀಯ ನಿಲುವು

ಮೂಲತಃ ಈ ಕಾಯ್ದೆಯನ್ನು ರದ್ದುಗೊಳಿಸಲು ಹಿಂದೂಗಳು ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತಿದೆ? ಬಹುಮತದಲ್ಲಿರುವ ಕೇಂದ್ರ ಸರಕಾರವೇ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿ ಈ ಕಾಯ್ದೆಯನ್ನು ರದ್ದುಗೊಳಿಸುವುದು ನಿರೀಕ್ಷಿತವಾಗಿದೆ; ಏಕೆಂದರೆ ಕಾಂಗ್ರೆಸ್ ಬಹುಮತದಲ್ಲಿದ್ದಾಗ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿತು ಎಂಬುದನ್ನು ಗಮನಿಸಬೇಕು!