ತೈಮೂರ್ ಅತ್ಯಾಚಾರಿ ಆಗಿದ್ದರೇ ಔರಂಗಜೇಬ್ ಅತ್ಯಂತ ಕೆಟ್ಟ ವ್ಯಕ್ತಿ ! – ಪಾಕಿಸ್ತಾನಿ ಲೇಖಕ ಸಲ್ಮಾನ್ ರಶೀದ್

  • ಮುಸಲ್ಮಾನರಿಗೆ ಮಾತಿನಲ್ಲೇ ತಿವಿದ ಪಾಕಿಸ್ತಾನಿ ಲೇಖಕ ಸಲ್ಮಾನ್ ರಶೀದ್

  • ಮೊಘಲರು, ಖಿಲ್ಜಿ, ತೈಮೂರ್, ಘಜ್ನಿ ಅವರನ್ನು ಆದರ್ಶವಾಗಿ ಪರಿಗಣಿಸುವ ಪಾಕಿಸ್ತಾನಿ ಜನರ ಮೇಲೆ ಟೀಕೆ !

ಇಸ್ಲಾಮಾಬಾದ್ – ಭಾರತದ ಹಲವು ಭಾಗಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ, ಇತ್ತೀಚೆಗೆ ಮೊಘಲ್ ಬಾದಶಾಹ ಔರಂಗಜೇಬ್ ಬಗ್ಗೆ ವಿವಾದ ಉಂಟಾಗಿದೆ. ಭಾರತದಲ್ಲಿ ‘ಛಾವಾ’ ಚಿತ್ರದಲ್ಲಿ ಔರಂಗಜೇಬ್‌ನ ದುಷ್ಕೃತ್ಯಗಳನ್ನು ತೋರಿಸಿದ ನಂತರ, ಭಾರತದಲ್ಲಿ ಅವನ ಗೋರಿಯನ್ನು ಅಗೆಯುವಂತೆ ಒತ್ತಾಯಿಸಲಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಈ ಚರ್ಚೆಗೆ ಪಾಕಿಸ್ತಾನದಲ್ಲಿಯೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ವಿಷಯದ ಬಗ್ಗೆ ಲೇಖಕ ಸಲ್ಮಾನ್ ರಶೀದ್ ಮಾತನಾಡಿದ್ದಾರೆ. ಪತ್ರಕರ್ತ ಅರ್ಜು ಕಾಜ್ಮಿ ಅವರೊಂದಿಗೆ ಮಾತನಾಡಿದ ಸಲ್ಮಾನ್ ರಶೀದ್, ಮೊಘಲರು, ಖಿಲ್ಜಿ, ತೈಮೂರ್, ಘಜ್ನಿ ಇವರೆಲ್ಲರೂ ಭಾರತೀಯರಲ್ಲ. ಈ ಜನರು ಅಫ್ಘಾನಿಸ್ತಾನ, ಇರಾನ್ ಮತ್ತು ಅರೇಬಿಯಾದಿಂದ ಬಂದವರು. ಈ ಜನರ ದೃಷ್ಟಿ ಭಾರತದ ಸಂಪತ್ತಿನ ಮೇಲಿತ್ತು. ಭಾರತವನ್ನು ಲೂಟಿ ಮಾಡುವುದನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಉದ್ದೇಶವಿರಲಿಲ್ಲ. ಈ ಆಕ್ರಮಣಕಾರರನ್ನು ಆದರ್ಶವಾಗಿ ಪರಿಗಣಿಸುವ ಪಾಕಿಸ್ತಾನಿ ಜನರನ್ನೂ ಅವರು ಟೀಕಿಸಿದರು. ಸಲ್ಮಾನ್ ರಶೀದ್, ನಮ್ಮ ನಾಯಕರು ನಮ್ಮದೇ ನೆಲದವರಾಗಿರಬೇಕು ಎಂದರು. ತೈಮೂರ್ ಬಗ್ಗೆ ಮಾತನಾಡಿದ ಸಲ್ಮಾನ್ ರಶೀದ್, ಅವನು ಅತ್ಯಾಚಾರಿ. ಅವನು ಅನೇಕ ಜನರನ್ನು ಕೊಂದನು. ತೈಮೂರ್‌ನ ಮಗ ಕೂಡ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ. ಅವರು ಬಹಳ ಕ್ರೂರ ಜನರಾಗಿದ್ದರು, ಎಂದು ಹೇಳಿದರು.

ಸಲ್ಮಾನ್ ರಶೀದ್ ಮಂಡಿಸಿದ ಇತರ ಅಂಶಗಳು

1. ಮೊಘಲರು ಎಷ್ಟು ದೇವಾಲಯಗಳನ್ನು ಕೆಡವಿದರು ಎಂಬುದರ ನಿಖರವಾದ ಮಾಹಿತಿ ಲಭ್ಯವಿಲ್ಲ. ತಾಜ್ ಮಹಲ್ ಕೂಡ ಒಂದು ದೇವಾಲಯ ಎಂದು ಹೇಳಲಾಗುತ್ತದೆ. ಔರಂಗಜೇಬ್ ಆಳ್ವಿಕೆಯಲ್ಲಿ ಜಝಿಯಾ ತೆರಿಗೆ ವಿಧಿಸುವಂತಹ ಘಟನೆಗಳು ನಡೆದವು.

2. 80 ರ ದಶಕದಲ್ಲಿ ಪಾಕಿಸ್ತಾನದಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಜಿಯಾ ಉಲ್ ಹಕ್ ಏನು ಮಾಡಿದರೋ ಅದೇ ಕೆಲಸವನ್ನು ಔರಂಗಜೇಬ್ ಆ ಸಮಯದಲ್ಲಿ ಮಾಡಿದ್ದ. ಔರಂಗಜೇಬ್ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡಿದ್ದು ಬಹಳ ಕೆಟ್ಟದ್ದಾಗಿತ್ತು. ಔರಂಗಜೇಬ್‌ನಲ್ಲಿ ಶ್ಲಾಘನೀಯವಾದದ್ದು ಏನೂ ಇರಲಿಲ್ಲ.

3. ಮುಸಲ್ಮಾನರು ಔರಂಗಜೇಬ್‌ನನ್ನು ತಮ್ಮ ನಾಯಕ ಎಂದು ಪರಿಗಣಿಸಬಾರದು. ಪಂಜಾಬ್ ಮತ್ತು ಸಿಂಧ್ ಭೂಮಿಗಾಗಿ ಹೋರಾಡಿದ ಜನರನ್ನು ನಾವು ಮರೆತಿದ್ದೇವೆ.

ಸಂಪಾದಕೀಯ ನಿಲುವು

ಮೊಘಲ್ ಮತ್ತು ಮುಸ್ಲಿಂ ಆಕ್ರಮಣಕಾರರ ಬಗ್ಗೆ ಪಾಕಿಸ್ತಾನಿ ಲೇಖಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಭಾರತದ ಮುಸಲ್ಮಾನರು ಏನು ಹೇಳಲು ಬಯಸುತ್ತಾರೆ ?