ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆದರಿಸಲಾಗುತ್ತಿದೆ! – ಅಮಿತ್ ಶಾ

ವಕ್ಫ್ ಸುಧಾರಣಾ ಮಸೂದೆ ಕುರಿತು ಲೋಕಸಭೆಯಲ್ಲಿ ತಡರಾತ್ರಿಯವರೆಗೆ ಚರ್ಚೆ

ನವದೆಹಲಿ – ಕೇಂದ್ರ ಸರಕಾರವು ಏಪ್ರಿಲ್ 2 ರಂದು ವಕ್ಫ್ ಸುಧಾರಣಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು. ಮಧ್ಯಾಹ್ನ 12 ಗಂಟೆಯಿಂದ ತಡರಾತ್ರಿಯವರೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಕ್ಫ್‌ನಲ್ಲಿ ಇಸ್ಲಾಮೇತರ ವಿಷಯಗಳಿಗೆ ಅವಕಾಶ ನೀಡಲಾಗುವುದಿಲ್ಲ. ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆದರಿಸಲಾಗುತ್ತಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗುವವರೆಗೆ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದಿಲ್ಲ. ಯೋಜನೆಯ ಪ್ರಕಾರ, ನಾಳೆ, ಏಪ್ರಿಲ್ 3 ರಂದು ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುವುದು. ಎರಡೂ ಕಡೆಯಿಂದ ಚರ್ಚೆಯ ನಂತರ ಮತದಾನ ನಡೆಯಲಿದೆ.

ಇದಕ್ಕೂ ಮೊದಲು, ಬೆಳಿಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. ನಂತರ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಇದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್‌ನಿಂದ ಗೌರವ್ ಗೊಗೊಯ್, ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್‌ನಿಂದ ಕಲ್ಯಾಣ್ ಬ್ಯಾನರ್ಜಿ, ಶಿವಸೇನೆ (ಠಾಕ್ರೆ) ಪಕ್ಷದಿಂದ ಅರವಿಂದ್ ಸಾವಂತ್ ಮುಂತಾದವರು ವಿರೋಧ ವ್ಯಕ್ತಪಡಿಸಿದರು ಹಾಗೂ ಭಾಜಪದಿಂದ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜನತಾ ದಳ (ಯುನೈಟೆಡ್) ನಿಂದ ಲಲ್ಲನ್ ಸಿಂಗ್, ಶಿವಸೇನೆ (ಶಿಂದೆ) ಪಕ್ಷದ ಶ್ರೀಕಾಂತ್ ಶಿಂದೆ ಮುಂತಾದವರು ಬೆಂಬಲ ವ್ಯಕ್ತಪಡಿಸಿದರು.

ವಕ್ಫ್ ಮಂಡಳಿಯನ್ನು ಜಾತ್ಯತೀತಗೊಳಿಸಬೇಕು! – ಕಿರೆನ್ ರಿಜಿಜು

ಬೆಳಿಗ್ಗೆ ಕೇಂದ್ರ ಸಂಸದೀಯ ಸಚಿವ ಕಿರೆನ್ ರಿಜಿಜು ಅವರು ಮಸೂದೆಯನ್ನು ಮಂಡಿಸಿದ ನಂತರ, ವಕ್ಫ್ ಮಂಡಳಿಯನ್ನು ಜಾತ್ಯತೀತಗೊಳಿಸಬೇಕು ಎಂದು ಹೇಳಿದರು. ಈಗ ವಕ್ಫ್‌ನಲ್ಲಿ ಶಿಯಾ, ಸುನ್ನಿ, ಬೋಹ್ರಾ, ಹಿಂದುಳಿದ ಮುಸ್ಲಿಂ ವರ್ಗ, ಮುಸ್ಲಿಮೇತರ ತಜ್ಞರು ಮತ್ತು ಮಹಿಳೆಯರು ಇರುತ್ತಾರೆ. ವಕ್ಫ್ ಮಂಡಳಿಯಲ್ಲಿ 4 ಮುಸ್ಲಿಮೇತರ ಸದಸ್ಯರು ಇರಬಹುದು ಮತ್ತು ಅವರಲ್ಲಿ 2 ಮಹಿಳೆಯರು ಇರಬೇಕು. ನಾವು ಈ ಮಸೂದೆಯನ್ನು ತರದಿದ್ದರೆ, ವಕ್ಫ್ ಸಂಸತ್ತಿನ ಮೇಲೆಯೂ ಹಕ್ಕು ಸಾಧಿಸುತ್ತಿತ್ತು.

ವಕ್ಫ್ ಮಸೂದೆಯ ಮೂಲಕ ಸರಕಾರ ಯಾವುದೇ ಧರ್ಮದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ಮಸೂದೆ ಕೇವಲ ಆಸ್ತಿ ನಿರ್ವಹಣೆಗೆ ಸಂಬಂಧಿಸಿದೆ ಮತ್ತು ದೇವಾಲಯ, ಮಸೀದಿ ಅಥವಾ ಯಾವುದೇ ಧಾರ್ಮಿಕ ಸ್ಥಳದ ನಿರ್ವಹಣೆಗೆ ಯಾವುದೇ ಸಂಬಂಧವಿಲ್ಲ. ಈ ಮೂಲಭೂತ ವ್ಯತ್ಯಾಸವನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ಅರ್ಥಮಾಡಿಕೊಳ್ಳಲು ಬಯಸದಿದ್ದರೆ, ನನ್ನ ಬಳಿ ಅದಕ್ಕೆ ಯಾವುದೇ ಪರಿಹಾರವಿಲ್ಲ, ಎಂದು ಹೇಳಿದರು.

ಕೇಂದ್ರ ಸಚಿವ ಅಮಿತ್ ಶಾ ವಿರೋಧ ಪಕ್ಷಗಳ ವಂಶಾಡಳಿತವನ್ನು ಟೀಕಿಸಿದರು!

ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ ಅಖಿಲೇಶ್ ಯಾದವ್ ಅವರು, ಭಾಜಪ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತದೆ, ಆದರೆ ಇನ್ನೂ ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ’, ಎಂದು ಟೀಕಿಸಿದರು.

ಇದಕ್ಕೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮ್ಮ ಪಕ್ಷದಲ್ಲಿ 12-13 ಕೋಟಿ ಸದಸ್ಯರು ಇರುವುದರಿಂದ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕೆಲವು ಪಕ್ಷಗಳಲ್ಲಿ ಒಂದೇ ಕುಟುಂಬದ 5 ಸದಸ್ಯರು ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿಮ್ಮ ಪಕ್ಷದಲ್ಲಿ ನೀವೇ ನಿರ್ಧಾರ ತೆಗೆದುಕೊಳ್ಳುತ್ತೀರಿ. ಮುಂದಿನ 25 ವರ್ಷಗಳ ಕಾಲ ನೀವೇ ಅಧ್ಯಕ್ಷರಾಗಿರುತ್ತೀರಿ ಎಂದು ನಾನು ಈಗಲೇ ಹೇಳುತ್ತೇನೆ, ಎಂದು ಹೇಳಿದರು.