‘ಭಾರತೀಯ ಕಾಲಗಣನೆಯ ಪದ್ಧತಿ ಯಲ್ಲಿ ‘ತಿಥಿ’ಗೆ ಮಹತ್ವವಿದೆ; ಆದರೆ ಈಗಿನ ‘ಗ್ರೆಗೋರಿಯನ’ (ಯುರೋಪಿಯನ) ಕಾಲಗಣನೆ ಯಿಂದ ಭಾರತದಲ್ಲಿ ತಿಥಿಯನ್ನು ವ್ಯವಹಾರದಲ್ಲಿ ಉಪಯೋಗಿಸದೇ ಕೇವಲ ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ಪ್ರಸ್ತುತ ಲೇಖನದ ಮೂಲಕ ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿ ಖಚಿತ ಮಾಡಿಕೊಳ್ಳುವ ಪದ್ಧತಿ ತಿಳಿದುಕೊಳ್ಳೋಣ.
೧. ತಿಥಿ ಎಂದರೇನು ?
ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಅನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನ ಮುಂದೆ ಹೋಗ ಲಾರಂಭಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಚಂದ್ರ ಇವರಲ್ಲಿ ೧೨ ಅಂಶದ ಅಂತರವಾದ ಮೇಲೆ ೧ ತಿಥಿ ಪೂರ್ಣ ವಾಗುತ್ತದೆ ಮತ್ತು ೨೪ ಅಂಶದ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ. ಉತ್ತರೋತ್ತರ ಇದೇ ರೀತಿಯಾಗಿ ಅಮಾವಾಸ್ಯೆಯ ತನಕ ಒಟ್ಟು ೩೦ ತಿಥಿಗಳಾಗುತ್ತವೆ.
೨. ಹಿಂದೂ ಧರ್ಮದಲ್ಲಿ ತಿಥಿಗೆ ಮಹತ್ವವಿರುವುದರ ಕಾರಣ ಭಾರತೀಯ ಕಾಲಗಣನೆ ಪದ್ಧತಿಯಲ್ಲಿ ಮಾಸವು (ತಿಂಗಳು)
ಚಂದ್ರನಿಂದ ಎಣಿಸಲ್ಪಡುತ್ತದೆ. ಅಮಾವಾಸ್ಯಾಂತ ಮಾಸವು (ಅಮಾವಾಸ್ಯೆಯಂದು ಮುಗಿಯುವ) ಅಥವಾ ಹುಣ್ಣಿಮಾಂತ ಮಾಸವು (ಹುಣ್ಣಿಮೆಯಂದು ಮುಗಿಯುವ) ಎಂದು ಮಾಸ (ತಿಂಗಳು)ದ ಲೆಕ್ಕವನ್ನು ಮಾಡಲಾಗುತ್ತದೆ. ನಮ್ಮ ಹೆಚ್ಚಿನ ಹಬ್ಬಗಳು, ಉತ್ಸವಗಳು, ದೇವತೆಗಳ ಜಯಂತಿ ಇತ್ಯಾದಿಗಳು ಚಾಂದ್ರಮಾಸಕ್ಕನುಸಾರವಾಗಿ ಅಂದರೆ ತಿಥಿಗನುಸಾರವಾಗಿ ಆಚರಿಸಲ್ಪಡುತ್ತವೆ. ಇದಕ್ಕೆ ಕಾರಣವೇನೆಂದರೆ ಸೂರ್ಯನ ಪರಿಣಾಮವು ಹೆಚ್ಚಾಗಿ ಸ್ಥೂಲ ಸೃಷ್ಟಿಯ ಮೇಲೆ ಮತ್ತು ಸ್ಥೂಲ ದೇಹದ ಮೇಲೆ ಆಗುತ್ತದೆ, ಆದರೆ ಚಂದ್ರನ ಪರಿಣಾಮ ಸೂಕ್ಷ್ಮ ಸೃಷ್ಟಿಯ ಮೇಲೆ ಮತ್ತು ಸೂಕ್ಷ್ಮ ದೇಹದ ಮೇಲೆ ಆಗುತ್ತದೆ. ಸ್ಥೂಲ ಉರ್ಜೆಗಿಂತ ಸೂಕ್ಷ್ಮ ಉರ್ಜೆಯು ಹೆಚ್ಚು ಪ್ರಭಾವಶಾಲಿ ಯಾಗಿರುತ್ತದೆ. ಶಾರೀರಿಕ ಬಲಕ್ಕಿಂತ ಮಾನಸಿಕ ಬಲ ಹೆಚ್ಚು ಮಹತ್ವದಾಗಿರುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಯ ತಿಥಿಗಳು ಸೂರ್ಯ ಮತ್ತು ಚಂದ್ರರಿಂದ ಸಂಯುಕ್ತವಾಗಿ ಪೃಥ್ವಿಯ ಮೇಲೆ ಪರಿಣಾಮವಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ತಾರೀಖಿನ ಬದಲಾಗಿ ಚಂದ್ರನ ತಿಥಿಗೆ ಮಹತ್ವ ಕೊಡಲಾಗಿದೆ.
೩. ಜನ್ಮತಿಥಿಯ ಮಹತ್ವ
ವ್ಯಕ್ತಿಯ ಜನ್ಮದ ಸಮಯದಲ್ಲಿ ಯಾವ ತಿಥಿ ಇದೆಯೋ ಆ ತಿಥಿಗೆ ‘ಜನ್ಮತಿಥಿ’ ಎನ್ನುತ್ತಾರೆ. ವಿಶಿಷ್ಟಮಾಸ, ತಿಥಿ ಮತ್ತು ನಕ್ಷತ್ರ ಇವುಗಳು ಯಾವಾಗಲೂ ಒಟ್ಟಿಗಿರುತ್ತವೆ. ಉದಾ. ಮಾರ್ಗಶಿರ ಹುಣ್ಣಿಮೆಯಂದು ಚಂದ್ರನು ಮೃಗ ನಕ್ಷತ್ರದಲ್ಲಿ ಅಥವಾ ಮೃಗ ನಕ್ಷತ್ರದ ಹತ್ತಿರದಲ್ಲಿರುವ ನಕ್ಷತ್ರದಲ್ಲಿರುತ್ತಾನೆ. ಜನಿಸುವ ಸಮಯದಲ್ಲಿರುವ ತಿಥಿ ಮತ್ತು ನಕ್ಷತ್ರಗಳ ಪರಿಣಾಮವು ವ್ಯಕ್ತಿಯ ಮನಸ್ಸಿನ ಮೇಲಾಗಿ ಅವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ಹಿಂದೂ ಧರ್ಮದಲ್ಲಿ ಹೇಳಿದ ಪ್ರಕಾರ ಹುಟ್ಟುಹಬ್ಬವನ್ನು ಜನ್ಮತಿಥಿಯಂದು ಆಚರಿಸಿದರೆ, ಆರತಿ ಬೆಳಗುವುದು, ಸ್ತೋತ್ರ ಪಠಣ, ಹಿರಿಯರ ಆಶೀರ್ವಾದ ಪಡೆಯುವುದು ಮುಂತಾದ ಕೃತಿಗಳಿಂದ ವ್ಯಕ್ತಿಯ ಸೂಕ್ಷ್ಮ ದೇಹದ (ಮನಸ್ಸಿನ) ಸಾತ್ತ್ವಿಕತೆಯು ಹೆಚ್ಚಾಗುತ್ತದೆ, ಇದಕ್ಕೆ ವಿರುದ್ಧವಾಗಿ ಹುಟ್ಟುಹಬ್ಬವನ್ನು ಜನ್ಮ ದಿನಾಂಕಕ್ಕನುಸಾರ ಆಚರಿಸಿದರೆ ಕೇವಲ ಸ್ಥೂಲ ದೇಹಕ್ಕೆ ಸ್ವಲ್ಪ ಮಟ್ಟಿಗೆ ಲಾಭವಾಗುತ್ತದೆ. ಹುಟ್ಟುಹಬ್ಬವನ್ನು ಪಾಶ್ಚಾತ್ಯ ಪದ್ಧತಿಯಂತೆ ಮೇಣದಬತ್ತಿ ಆರಿಸಿ ಮತ್ತು ಕೇಕ್ ಕತ್ತರಿಸಿ ಮಾಡಿದರೆ ಯಾವುದೇ ಅಧ್ಯಾತ್ಮಿಕ ಲಾಭವು ಆಗುವುದಿಲ್ಲ.
೪. ಜನ್ಮದ ಕ್ಷಣದಲ್ಲಿ ಯಾವ ತಿಥಿ ಇರುತ್ತದೆಯೋ, ಆದೇ ತಿಥಿಯು ವ್ಯಕ್ತಿಯ ‘ಜನ್ಮತಿಥಿ’ಯಾಗಿರುತ್ತದೆ
ನಾವು ಪ್ರತಿದಿನ ಬಳಸುವ ಸ್ಥಳೀಯ ದಿನದರ್ಶಿಕೆಯಲ್ಲಿ ದಿನಾಂಕದ ಹತ್ತಿರ ತಿಥಿ ಬರೆದಿರುತ್ತಾರೆ. ಆ ತಿಥಿಯು ಅಂದು ಸೂರ್ಯೋದಯದಂದು ಸ್ಪರ್ಶಿಸುವ ತಿಥಿಯಾಗಿರುತ್ತದೆ. ಸೂರ್ಯೋದಯದ ಸಮಯದಲ್ಲಿರುವ ತಿಥಿಯೇ ಅಂದು ದಿನವಿಡೀ ಇರುತ್ತದೆ ಎಂದೇನಿಲ್ಲ. ಆದುದರಿಂದ ಜನ್ಮತಿಥಿಯನ್ನು ನಿರ್ಧರಿಸುವಾಗ ‘ಮಗುವಿನ ಜನ್ಮದ ಕ್ಷಣದಲ್ಲಿ ಯಾವ ತಿಥಿ ಇರುತ್ತದೆಯೋ ಆ ತಿಥಿಯನ್ನೇ ಜನ್ಮತಿಥಿ ಎಂದು ತೆಗೆದುಕೊಳ್ಳ ಬೇಕು. ಉದಾಹರಣೆಗೆ, ‘ನವಮಿ’ ಈ ತಿಥಿಯು ಒಂದೊಮ್ಮೆ ಮಧ್ಯಾಹ್ನ ೧ ಗಂಟೆ ವರೆಗೆ ಇದ್ದು ಮಗುವಿನ ಜನ್ಮ ಅಂದು ಮಧ್ಯಾಹ್ನ ೧ ರ ನಂತರ ಆದರೆ ಅದರ ಜನ್ಮ ತಿಥಿಯು ‘ದಶಮಿ’ ಯಾಗಿರುತ್ತದೆ. ತಿಥಿಗಳ ಸಮಾಪ್ತಿಯ ಸಮಯವನ್ನು ಆಯಾ ವರ್ಷದ ಪಂಚಾಂಗದಲ್ಲಿ ಅಥವಾ ಸ್ಥಳೀಯ ದಿನದರ್ಶಿಕೆಯ ಹಿಂದಿನ ಪುಟದಲ್ಲಿ ಕೊಟ್ಟಿರುತ್ತಾರೆ. ತಿಥಿಯ ಸಂದರ್ಭದಲ್ಲಿ ಏನಾದರು ಸಂದೇಹವಿದ್ದರೆ ಜ್ಯೋತಿಷಿಗಳಿಂದ ನಮ್ಮ ಜನ್ಮತಿಥಿಯು ಯೋಗ್ಯವಾಗಿದೆ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು.’
– ಶ್ರೀ. ರಾಜ ಧನಂಜಯ ಕರ್ವೆ, ಜ್ಯೋತಿಷ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧೧.೨೦೨೨)