ಪ್ರಯಾಗರಾಜ ಮಹಾಕುಂಭಮೇಳ 2025
ಪ್ರಯಾಗರಾಜ, ಡಿಸೆಂಬರ 14 (ಸುದ್ದಿ.) – ಇಲ್ಲಿ ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ ಮೇಳಕ್ಕೆ ಶ್ರೀಪಂಚದಶನಾಮ ಜುನಾ ಆಖಾಡದ ಸಾವಿರಾರು ಸಾಧು-ಸಂತರು ಡಿಸೆಂಬರ್ 14 ರಂದು ಭವ್ಯ ಮೆರವಣಿಗೆಯ ಮೂಲಕ (ಪೇಶವಾಯಿ ಮೂಲಕ) ನಗರವನ್ನು ಪ್ರವೇಶಿಸಿ ನಂತರ ಆಖಾಡವನ್ನು ಪ್ರವೇಶಿಸಿದರು. ಈ ಸಂದರ್ಭದಲ್ಲಿ ಆಖಾಡಾಕ್ಕೆ ಸಂಬಂಧಿಸಿದ ಸಾವಿರಾರು ಮಠ, ಮಂದಿರಗಳ ಸಾಧು, ಸಂತರು, ಮಹಾಂತರು, ಭಕ್ತರು ಉಪಸ್ಥಿತರಿದ್ದರು. ಈ ಮೆರವಣಿಗೆಯಲ್ಲಿ ನಾಗಾ ಸಾಧುಗಳ ವಿಶೇಷ ಉಪಸ್ಥಿತಿ ಇತ್ತು.
ದತ್ತ ಜಯಂತಿಯ ಮಹೂರ್ತದಲ್ಲಿ ಜುನಾ ಆಖಾಡಾದಿಂದ ಶ್ರೀ ದತ್ತಾತ್ರೇಯರ ಪಾದುಕೆಯನ್ನು ತೆಗೆದುಕೊಂಡು ಸಂಗಮ ಮಾರ್ಗದ ಮೂಲಕ ನಗರವನ್ನು ಪ್ರವೇಶಿಸಿದರು. ಈ ಮೆರವಣಿಗೆಯಲ್ಲಿ 100ಕ್ಕೂ ಹೆಚ್ಚು ರಥಗಳು ಸೇರಿದ್ದವು. ಎಲ್ಲಾ ರಥಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಎಲ್ಲರಿಗಿಂತ ಮುಂದೆ ನಾಗಾ ಸಾಧುಗಳು ಆಖಾಡಾದ ಧ್ವಜ ಹಿಡಿದಿದ್ದರು. ಇದರೊಂದಿಗೆ ಆಖಾಡದ ದೊಡ್ಡ ಧ್ವಜಗಳನ್ನೂ ಹಿಡಿದುಕೊಂಡಿದ್ದರು.
ಅವರ ಹಿಂದೆ ಶ್ರೀಪಂಚದಶನಾಮ ಜುನಾ ಆಖಾಡಾದ ಆಚಾರ್ಯ ಮಹಾಮಂಡಲೇಶ್ವರ ಅನಂತವಿದ್ಯಾ ವಿಭೂಷಿತ ಶ್ರೀ ಸ್ವಾಮಿ ಅವಧೇಶಾನಂದ ಗಿರಿಜಿ ಮಹಾರಾಜರ ಮಯೂರ ರಥ ಇತ್ತು. ಅವರ ಹಿಂದೆ ಶ್ರೀ ಮಹಂತ, ಮಹಾಮಂಡಲೇಶ್ವರ, ಸಾಧು ಮೊದಲಾದವರ ರಥಗಳು ಇದ್ದವು. ಈ ಮೇರವಣಿಗೆ ತ್ರಿವೇಣಿ ಮಾರ್ಗದ ಜುನಾ ಆಖಾಡದ ಬಳಿ ಬಂದಾಗ ಸ್ವಾಮಿ ಅವಧೇಶಾನಂದ ಗಿರಿಜಿ ಮಹಾರಾಜರು ಸಿದ್ಧ ಸಮಾಧಿಬಾಬಾ ಶಿವಚೇತನ ಪುರಿಜಿ ಮಹಾರಾಜರ ಸಮಾಧಿಯ ದರ್ಶನ ಪಡೆದರು. ಈ ಮೆರವಣಿಗೆಯು ಸಾಂಪ್ರದಾಯಿಕ ವಾದ್ಯಗಳೊಂದಿಗೆ ಡೊಳ್ಳು, ತಾಳಗಳ ನಾದದೊಂದಿಗೆ ನಗರವನ್ನು ಪ್ರವೇಶಿಸಿದರು ಮತ್ತು ಆಖಾಡವನ್ನು ಪ್ರವೇಶಿಸಿದರು. ಈ ಮೆರವಣಿಗೆಯಲ್ಲಿ ನಾಗಾ ಸಾಧುಗಳು ಖಡ್ಗ ಮತ್ತು ಇತರ ಆಯುಧಗಳನ್ನು ಪ್ರದರ್ಶಿಸಿದರು. ಮುಖ್ಯ ರಥದ ಮುಂದೆ ಅನೇಕ ಆಖಾಡಗಳಿಗೆ ಸೇರಿದ ಹಲವಾರು ಸಾಧ್ವಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಆಡಳಿತದ ವತಿಯಿಂದ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಜೀ ಮಹಾರಾಜ ಅವರ ಸತ್ಕಾರ ಮಾಡಿದರು. ಅಲ್ಲದೆ ರಥಗಳ ಮೇಲೆ ವಿವಿಧೆಡೆ ಪುಷ್ಪವೃಷ್ಟಿ ಮಾಡಲಾಯಿತು.