ನವ ದೆಹಲಿ – ಉತ್ತರಪ್ರದೇಶದ ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯು ಹಿಂದಿನ ಹರಿಹರ ದೇವಸ್ಥಾನವಾಗಿದೆ, ಎಂದು ಹೇಳುತ್ತಾ ಹಿಂದೂ ಪಕ್ಷವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ನ್ಯಾಯಾಲಯವು ಮಸೀದಿಯ ಸಮೀಕ್ಷೆಗೆ ಆದೇಶಿಸಿದಾಗಿನಿಂದ, ಮುಸ್ಲಿಮರಿಂದ ಹಿಂಸಾತ್ಮಕ ವಿರೋಧ ವ್ಯಕ್ತವಾಗಿದೆ. 1 ಸಾವಿರ ವರ್ಷಗಳ ಹಿಂದೆ ಮುಸ್ಲಿಂ ದಾಳಿಕೋರರು ಸಾವಿರಾರು ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಗಳನ್ನು ನಿರ್ಮಿಸಿದ್ದರು. ಇದರಲ್ಲಿ ಕಾಶಿ, ಮಥುರಾ ಮತ್ತು ಅಯೋಧ್ಯೆಯ ಪ್ರಮುಖ ದೇವಸ್ಥಾನಗಳು ಒಳಗೊಂಡಿದೆ. ಅವುಗಳಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯನ್ನು ಹಿಂದೂಗಳು ಮುಕ್ತಗೊಳಿಸಿದ್ದು, ಕಾಶಿ ಮತ್ತು ಮಥುರಾ ವಿವಾದ ನ್ಯಾಯಾಲಯದಲ್ಲಿದೆ. ಈಗ ಹಿಂದೂಗಳಲ್ಲಿ ಜಾಗೃತಿ ಮೂಡಿದ್ದು, ದೇಶದಲ್ಲಿ ಈ ರೀತಿ ಕೆಲವು ಮಹತ್ವದ ದೇವಸ್ಥಾನಗಳ ಸಂದರ್ಭದಲ್ಲಿ ಹಿಂದೂಗಳು ನ್ಯಾಯಾಲಯದಲ್ಲಿ ಹೋರಾಟ ಪ್ರಾರಂಭಿಸಿದ್ದಾರೆ. ದೇಶದಲ್ಲಿ 16 ಪ್ರಮುಖ ವಿವಾದಗಳು ನಡೆಯುತ್ತಿದ್ದು, ಅವುಗಳಲ್ಲಿ 9 ಪ್ರಕರಣಗಳು ಹೊಸದಾಗಿವೆ. ಈ ಪೈಕಿ 8 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ಕೆಲವು ವಿವಾದಗಳು ಇನ್ನೂ ನ್ಯಾಯಾಲಯಕ್ಕೆ ಬಂದಿಲ್ಲ. ಇವುಗಳಲ್ಲಿ ದೆಹಲಿಯ ಜಾಮಾ ಮಸೀದಿ, ಮಧ್ಯಪ್ರದೇಶದ ವಿದಿಶಾದಲ್ಲಿನ ಬಿಜ್ ಮಂಡಲ್ ಹಾಗೆಯೇ ತೆಲಂಗಾಣದ ಚಾರ್ಮಿನಾರ್ ಮತ್ತು ವೇಮುಲವಾಡಾ ದೇವಸ್ಥಾನಗಳು ಸೇರಿವೆ.
ಈ ದೇವಸ್ಥಾನಗಳ ವಿಮೋಚನೆಯಲ್ಲಿ ‘ಪೂಜಾಸ್ಥಳ ಕಾನೂನು 1991’ ಒಂದು ದೊಡ್ಡ ಅಡಚಣೆಯಾಗಿದೆ. ಈ ಕಾನೂನನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ 6 ಅರ್ಜಿಗಳು ದಾಖಲಾಗಿವೆ. ಇವುಗಳ ಮೇಲೆ ಸದ್ಯ ವಿಚಾರಣೆ ನಡೆಯುತ್ತಿದೆ. ಈ ಕಾಯಿದೆಯ ಕಲಂ 4(1) ರಲ್ಲಿ ಉಲ್ಲೇಖಿಸಲಾದ ಪೂಜಾ ಸ್ಥಳದ ಧಾರ್ಮಿಕ ವೈಶಿಷ್ಟ್ಯಗಳು ಆಗಸ್ಟ್ 15, 1947 ರಂದು ಇರುವಂತೆ ಯಥಾಸ್ಥಿತಿಯಲ್ಲಿರಬೇಕು; ಯಾರಾದರೂ ಇದನ್ನು ಉಲ್ಲಂಘಿಸಲು ಪ್ರಯತ್ನಿಸುವವರಿಗೆ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.
ಕೆಲವು ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ
1. ಭೋಜಶಾಲಾ (ಧಾರ್, ಮಧ್ಯಪ್ರದೇಶ): ಇಲ್ಲಿ ವಾಗ್ದೇವಿಯ (ಸರಸ್ವತಿ ದೇವಿ) ದೇವಸ್ಥಾನವಿದೆ. ಮುಸ್ಲಿಮರು ಅದನ್ನು ಕಮಲ್ ಮೌಲಾ ಮಸೀದಿ ಎಂದು ಕರೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಆದೇಶದ ಪ್ರಕಾರ ಸಮೀಕ್ಷೆ ವೇಳೆ 94 ವಿಗ್ರಹಗಳು, ಪ್ರಾಣಿಗಳ ಆಕೃತಿಗಳು, 31 ನಾಣ್ಯಗಳು ಪತ್ತೆಯಾಗಿವೆ. ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದೆ.
2. ಅಜ್ಮೇರ ಶರೀಫ ದರ್ಗಾ (ರಾಜಸ್ಥಾನ) : ಈ ದರ್ಗಾದ ಬಗ್ಗೆ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಇವರು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಅಲ್ಲಿ ಈ ಹಿಂದೆ ಶಿವಮಂದಿರವಿತ್ತು ಮತ್ತು ಅದನ್ನು ಕೆಡವಿ ದರ್ಗಾ ನಿರ್ಮಿಸಲಾಗಿದೆ. ಇದರ ಸರ್ವೇಕ್ಷಣೆಯನ್ನು ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ನ್ಯಾಯಾಲಯ ವಿಚಾರಣೆ ನಡೆಸಲಿದೆ.
3. ಜಾಮಾ ಮಸೀದಿ (ಫತೇಪುರ್ ಸಿಕ್ರಿ, ಉತ್ತರ ಪ್ರದೇಶ) : ಇಲ್ಲಿ ಕಾಮಾಖ್ಯ ದೇವಿಯ ದೇವಸ್ಥಾನವಿತ್ತು ಅದನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು. ಈ ಮಸೀದಿಯ ಕೆಳಗೆ ದೇವರ ವಿಗ್ರಹವಿದೆ. ಈ ಪ್ರಕರಣ ನಡೆಯುತ್ತಿದೆ.
4. ಜಾಮಾ ಮಸೀದಿ (ಸಂಬಲ್, ಉತ್ತರ ಪ್ರದೇಶ): ಶ್ರೀ ಹರಿಹರ ದೇವಸ್ಥಾನವನ್ನು ಕೆಡವಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಇದರ ಸಮೀಕ್ಷೆ ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಇದರ ವರದಿ ಸಲ್ಲಿಸಲಾಗುವುದು. ಸಮೀಕ್ಷೆ ವೇಳೆ ನಡೆದ ಹಿಂಸಾಚಾರದಲ್ಲಿ 5 ಮಂದಿ ಮುಸ್ಲಿಮರು ಸಾವನ್ನಪ್ಪಿದ್ದಾರೆ.
5. ಅಟಾಲಾ ಮಸೀದಿ (ಜೌನಪುರ, ಉತ್ತರ ಪ್ರದೇಶ): ಅಟಾಲಾ ದೇವಿ ದೇವಸ್ಥಾನವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
6. ಶಮ್ಸಿ ಜಾಮಾ ಮಸೀದಿ (ಬದಾಯು, ಉತ್ತರ ಪ್ರದೇಶ) : ಇಲ್ಲಿ ನೀಲಕಂಠ ಮಹಾದೇವನ ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
7. ಜುಮ್ಮಾ ಮಸೀದಿ (ಮಂಗಳೂರು, ಕರ್ನಾಟಕ): ಹಿಂದೆ ಇದು ದೇವಸ್ಥಾನವಾಗಿತ್ತು. ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಮಸೀದಿಯ ಕೆಳಗೆ ಸಮೀಕ್ಷೆ ನಡೆಸಿದರೆ ದೇವಸ್ಥಾನದ ಅವಶೇಷಗಳು ಪತ್ತೆಯಾಗಲಿವೆ ಎನ್ನಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.
8. ಶಾಹಿ ಈದ್ಗಾ ಮಸೀದಿ (ಮಥುರಾ, ಉತ್ತರ ಪ್ರದೇಶ): ಈ ಮಸೀದಿಯನ್ನು ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
9. ಕುತುಬ್ ಮಿನಾರ್ (ದೆಹಲಿ): ಇಲ್ಲಿನ ಕುವ್ವತ-ಉಲ್-ಮಶೀದ್ 27 ಜೈನ ಮತ್ತು ಹಿಂದೂ ದೇವಸ್ಥಾನಗಳನ್ನು ಕೆಡವಿ ನಿರ್ಮಿಸಲಾಗಿದೆ. ನ್ಯಾಯಾಲಯವು 2021ರಲ್ಲಿ ಈ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿತ್ತು.
ಸಂಪಾದಕೀಯ ನಿಲುವುದೇಶದಲ್ಲಿ ಮುಸ್ಲಿಂ ದಾಳಿಕೋರರು ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ ಸಾವಿರಾರು ಘಟನೆಗಳಿವೆ. ಅವುಗಳಲ್ಲಿ 1 ಸಾವಿರದ 800 ಘಟನೆಗಳ ಬಗ್ಗೆ ಮಾಹಿತಿಯನ್ನು ಪೂ. ಸೀತಾರಾಮ ಗೋಯಲ್ ಅವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಎಲ್ಲಾ ಸ್ಥಳಗಳನ್ನು ಹಿಂದೂಗಳಿಗೆ ಮರಳಿ ಪಡೆಯಲು ಪ್ರತ್ಯೇಕ ತಂಡವನ್ನು ಸ್ಥಾಪಿಸಬೇಕು ! |