ಸರಸ್ವತಿದೇವಿ ಮತ್ತು ಸರಸ್ವತಿ ನದಿಯ ಮಹತ್ವ !

ಸನಾತನ ರಚಿತ ಶ್ರೀ ಸರಸ್ವತಿದೇವಿಯ ಚಿತ್ರ

‘ಯಾ ಕುನ್ದೇನ್ದುತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ

ಯಾ ವೀಣಾವರದಣ್ಡಮಣ್ಡಿತಕರಾ ಯಾ ಶ್ವೇತಪದ್ಮಾಸನಾ |

ಯಾ ಬ್ರಹ್ಮಾಚ್ಯುತಶಙ್ಕರಪ್ರಭೃತಿಭಿರ್ದೇವೈಃ ಸದಾ ವನ್ದಿತಾ

ಸಾ ಮಾಂ ಪಾತು ಸರಸ್ವತೀ ಭಗವತೀ ನಿಃಶೇಷಜಾಡ್ಯಾಪಹಾ ||

ಅರ್ಥ : ಯಾರು ಕಾಕಡಾ ಹೂವು, ಚಂದ್ರ, ಮಂಜುಹನಿ ಅಥವಾ ಮುತ್ತಿನ ಮಾಲೆಯಂತೆ ಗೌರವರ್ಣದವಳಾಗಿದ್ದಾಳೆಯೋ; ಯಾರು ಶ್ವೇತವಸ್ತ್ರಗಳನ್ನು ಧರಿಸಿದ್ದಾಳೆಯೋ, ವೀಣೆಯಿಂದ ಯಾರ ಕೈಗಳು ಶೋಭಿಸುತ್ತವೆಯೋ, ಯಾರು ಶ್ವೇತ ಕಮಲದ ಆಸನದ ಮೇಲೆ ವಿರಾಜಮಾನವಾಗಿದ್ದಾಳೆಯೋ; ಬ್ರಹ್ಮ, ವಿಷ್ಣು, ಮಹೇಶ ಇತ್ಯಾದಿ ದೇವತೆಗಳು ನಿರಂತರವಾಗಿ ಯಾರನ್ನು ಸ್ತುತಿಸುತ್ತಾರೆಯೋ, ಎಲ್ಲಾ ರೀತಿಯ ಜಡತ್ವವನ್ನು (ಅಜ್ಞಾನವನ್ನು) ದೂರಗೊಳಿಸುವ ಆ ಭಗವತಿ, ಶ್ರೀ ಸರಸ್ವತಿದೇವಿಯು ನನ್ನ ರಕ್ಷಣೆಯನ್ನು ಮಾಡಲಿ.

ಈ ಧ್ಯಾನ ಶ್ಲೋಕದಲ್ಲಿ ದೇವಿ ಸರಸ್ವತಿಯ ಸಗುಣ ರೂಪವನ್ನು ವರ್ಣಿಸಲಾಗಿದೆ. ವೇದಕಾಲದಲ್ಲಿನ ಋಷಿಗಳಿಗೆ ‘ಸರಸ್ವತಿ’ಯು ಗೊತ್ತಿದ್ದಳು; ಆದರೆ ಅವಳು ‘ದೇವಿ‘ ಎಂದಷ್ಟೇ ಅಲ್ಲದೇ ಒಂದು ಪವಿತ್ರ ನದಿಯೂ ಆಗಿದ್ದಾಳೆ ! ದೇವಿ ಸರಸ್ವತಿಯ ಇಂದಿನ ಸಗುಣ ರೂಪವು ವೇದಕಾಲದಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ.

೧. ಆರ್ಯರ ಸಂಸ್ಕೃತಿಯ ಪ್ರತೀಕವಾಗಿರುವ ಸರಸ್ವತಿ ನದಿ !

ಸರಸ್ವತಿ ನದಿಯ ಸಂಗ್ರಹಿತ ಛಾಯಾಚಿತ್ರ

ಸರಸ್ವತಿ ನದಿಯ ತೀರದಲ್ಲಿಯೇ ವೇದಗಳಲ್ಲಿನ ಅನೇಕ ಋಚೆಗಳ ಜನ್ಮವಾಯಿತು. ಅಲ್ಲಿಯೇ ಆರ್ಯರ ಸಣ್ಣ-ಪುಟ್ಟ ಯಜ್ಞಗಳು ನಿರ್ವಿಘ್ನವಾಗಿ ನೆರವೇರತೊಡಗಿದವು. ವೇದ ಮತ್ತು ಯಜ್ಞಗಳ ಸಹಾಯದಿಂದ ಸರಸ್ವತಿ ನದಿಯು ಆರ್ಯರಿಗೆ ಪೂಜನೀಯಳಾದಳು. ಸರಸ್ವತಿ ನದಿಯು ಆರ್ಯರ ಸಂಸ್ಕೃತಿಯ ತೇಜೋಮಯ ಮತ್ತು ಸೌಂದರ್ಯಮಯ ಪ್ರತೀಕವಾಗಿದೆ.

ಮೇರು ಪರ್ವತದಲ್ಲಿ ಸರಸ್ವತಿ ನದಿಯ ಉಗಮವಾಗಿತ್ತು. ಮುಂದೆ ಅವಳು ‘ಬ್ರಹ್ಮಾವರ್ತ’ ಮತ್ತು ‘ಆರ್ಯಾವರ್ತ’ ಈ ಪ್ರದೇಶಗಳಲ್ಲಿ ಹರಿಯುತ್ತ ಪ್ರಯಾಗದ ಹತ್ತಿರ (ಉತ್ತರಪ್ರದೇಶ) ಗಂಗಾ-ಯಮುನಾ ಇವರ ಸಂಗಮವಾಗುವಲ್ಲಿಯೇ ಗಂಗಾ ನದಿಯಲ್ಲಿ ಸೇರಿದ್ದಳು. ‘ಸತತವಾಗಿ ಮುಂದೆ ಸಾಗಿ…. ಮುಂದೆ ಸಾಗಿ…ಮತ್ತು ತನಗಾಗಿ ಅಲ್ಲ, ಇತರರಿಗಾಗಿ ಬದುಕಿರಿ’, ಎಂದು ಸತತವಾಗಿ ಆರ್ಯರಿಗೆ ಅವಳು ಸಂದೇಶ ನೀಡುತ್ತಿದ್ದಳು !

‘ಕಾಲಾಂತರ ಸೃಷ್ಟಿಯ ಪರಿವರ್ತನೆಯಲ್ಲಿ ಈ ನದಿಯು ಕಣ್ಮರೆಯಾಯಿತು; ಆದರೆ ಅದು ಪ್ರಯಾಗದ ಹತ್ತಿರ ಗುಪ್ತವಾಗಿ ಗಂಗಾ ನದಿಯಲ್ಲಿ ಸೇರುತ್ತದೆ’, ಎಂದು ಹಿಂದೂಗಳಲ್ಲಿ ಇಂದಿಗೂ ಶ್ರದ್ಧೆಯಿದೆ; ವಾಸ್ತವದಲ್ಲಿ ಒಂದು ವೇಳೆ ಗಂಗಾ-ಯಮುನಾ ಈ ೨ ನದಿಗಳ ಸಂಗಮವಾಗಿದ್ದರೂ, ಅದಕ್ಕೆ ‘ತ್ರಿವೇಣಿ ಸಂಗಮ’ ಎಂದೇ ಕರೆಯಲಾಗುತ್ತದೆ.

೨. ‘ಬ್ರಹ್ಮಾವರ್ತ’ ಪ್ರದೇಶ ಮತ್ತು ಆರ್ಯರ ಪವಿತ್ರ ಗ್ರಂಥ

ಸರಸ್ವತಿ ಮತ್ತು ದೃಶದ್ವತಿ ಈ ೨ ನದಿಗಳ ಪ್ರದೇಶಕ್ಕೆ ‘ಬ್ರಹ್ಮಾವರ್ತ’, ಎಂಬ ಹೆಸರಿತ್ತು. ಈ ಫಲವತ್ತಾದ ಪ್ರದೇಶದಲ್ಲಿ ಆರ್ಯರು ನೆಲೆಸಿದರು. ತಮ್ಮ ಹಸುಗಳನ್ನು ಕರೆದುಕೊಂಡು ಜಾನುವಾರುಗಳಿಗೆ ಮೇವು ಸಿಗುವ ಸ್ಥಳಕ್ಕೆ ಕೊಂಡೊಯ್ಯುವುದು, ಇದು ಆರ್ಯರ ಜೀವನಪದ್ಧತಿಯಾಗಿತ್ತು. ಬ್ರಹ್ಮಾವರ್ತಾದಲ್ಲಿ ಆರ್ಯರು ಕೆಲವು ಕಾಲದ ವರೆಗೆ ನೆಲೆಸಿ ಕೃಷಿ ಮಾಡತೊಡಗಿದರು. ಯಜ್ಞ-ಯಾಗಗಳನ್ನು ಮಾಡತೊಡಗಿದರು. ಆರ್ಯ ಸಂಸ್ಕೃತಿಯ ಅಭಿವೃದ್ಧಿಯಾಗತೊಡಗಿತು.

ಆ ಕಾಲದಲ್ಲಿ ಆರ್ಯರ ಸಮಾಜದಲ್ಲಿ ವೇದ ಮತ್ತು ಯಜ್ಞ ಈ ಎರಡು ವಿಷಯಗಳು ಮುಖ್ಯವಾಗಿದ್ದವು. ಯಜ್ಞವು ಕೇವಲ ಧಾರ್ಮಿಕ ಆಚಾರವಾಗಿರದೇ, ಅದು ಒಂದು ದೊಡ್ಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಘಟನೆಯಾಗಿತ್ತು. ಭಾರತೀಯ ತತ್ತ್ವಜ್ಞಾನದ ಉಗಮವು ವೇದಗಳಲ್ಲಿ ಸಿಗುತ್ತದೆ. ವೇದಗಳಲ್ಲಿ ಭಾರತೀಯ ಋಷಿಗಳ ಕೇವಲ ಕಲ್ಪನೆ-ವಿಲಾಸವೇ ಅಲ್ಲ, ಅವರ ಆತ್ಮಾನುಭವ ಮತ್ತು ಅವರ ಆಧ್ಯಾತ್ಮಿಕ ಜ್ಞಾನ ಇವುಗಳ ಅವಿಷ್ಕಾರವೂ ಆಗುತ್ತದೆ. ವೇದಗಳು ಈಶ್ವರನ ಉಸಿರಾಗಿವೆ ಎಂದು ನಂಬಲಾಗುತ್ತದೆ; ಆದ್ದರಿಂದ ಈ ವೇದಗಳು ಅಪೌರುಷೇಯವಾಗಿವೆ. ಈ ವೇದಗಳೇ ಆರ್ಯರ ಪವಿತ್ರ ಧರ್ಮಗ್ರಂಥಗಳಾಗಿವೆ.

೩. ಆರ್ಯರ ಪ್ರತಿಜ್ಞೆ

ಒಂದೇ ಸ್ಥಳದಲ್ಲಿರುವುದು ಆರ್ಯರ ಸ್ವಭಾವವೇ ಆಗಿರಲಿಲ್ಲ.

‘ಕೃಣ್ವನ್ತೊ ವಿಶ್ವಮಾರ್ಯಮ್‌ |’ (ಋಗ್ವೇದ, ಮಣ್ಡಲ ೯, ಸೂಕ್ತ ೬೩, ಋಚಾ ೫ )

ಅರ್ಥ : ಇಡೀ ಜಗತ್ತನ್ನು ಆರ್ಯ (ಸುಸಂಸ್ಕ್ರತರನ್ನಾಗಿ) ಮಾಡುತ್ತೇವೆ, ಎಂಬುದು ಅವರ ಪ್ರತಿಜ್ಞೆಯಾಗಿತ್ತು, ಆದ್ದರಿಂದ ಅವರು ಬ್ರಹ್ಮಾವರ್ತದಲ್ಲಿ ಶಾಶ್ವತವಾಗಿ ನೆಲೆಸಲಿಲ್ಲ. ಗಂಗಾ-ಯುಮುನೆಯ ಪ್ರದೇಶಕ್ಕೆ ‘ಆರ್ಯಾವರ್ತ’ ಎನ್ನುತ್ತಾರೆ. ಬ್ರಹ್ಮಾವರ್ತದಿಂದ ಆರ್ಯರು ಆರ್ಯಾವರ್ತಕ್ಕೆ ಹೋದರು ಮತ್ತು ಕಾಲಾಂತರದಲ್ಲಿ ಅವರು ಎಲ್ಲವನ್ನು ಆರ್ಯಾವರ್ತವನ್ನು ವ್ಯಾಪಿಸಿಬಿಟ್ಟರು.

ಹೊಸ ವಸಾಹತುಗಳನ್ನು ಸಿದ್ಧಪಡಿಸುವಾಗ ಆರ್ಯರಿಗೆ ಅಸುರರಿಂದ ಅಂದರೆ ಅನಾರ್ಯರಿಂದ ತುಂಬಾ ವಿರೋಧವಾಯಿತು. ಆರ್ಯರ ಮತ್ತು ಅನಾರ್ಯರ ನಡುವೆ ಯುದ್ಧವಾಯಿತು. ಕೆಲವು ಅನಾರ್ಯ ಜಾತಿಗಳಲ್ಲಿ ಸುಧಾರಣೆಯಾಗಿತ್ತು. ಆದ್ದರಿಂದ ಅವರ ಪ್ರತಿರೋಧವೂ ಭಯಂಕರವಾಗಿತ್ತು. ವೇದಗಳಲ್ಲಿ ಇಂತಹ ಅನೇಕ ಯುದ್ಧಗಳ ವರ್ಣನೆಯಿದೆ. ಸರಸ್ವತಿ ನದಿಯಿಂದ ಆರ್ಯರ ಮುಂದಿನ ಪೀಳಿಗೆಯು ಎಷ್ಟು ದೂರ ಹೋದರೂ, ಸರಸ್ವತಿ ನದಿಯು ಸ್ವಲ್ಪ ಮಟ್ಟಿಗೆ ಗುಪ್ತವಾಗಿದ್ದರೂ, ಆರ್ಯರ ಮನಸ್ಸಿನಲ್ಲಿ ಸರಸ್ವತಿ ನದಿಯ ಬಗೆಗಿನ ಪೂಜನೀಯ ಭಾವವು ಸ್ವಲ್ಪವೂ ಕಡಿಮೆಯಾಗಿರಲಿಲ್ಲ.

೪. ಆರ್ಯರ ದೇವತೆಗಳು

‘ಈಶಾವಾಸ್ಯಮಿದಂ ಸರ್ವಂ ಯತ್ಕಿಞ್ಚ ಜಗತ್ಯಾಂ ಜಗತ್‌ |’ (ಈಶಾವಾಸ್ಯೋಪನಿಷದ್, ಮಂತ್ರ ೧),

ಅಂದರೆ ‘ಈ ಜಗತ್ತಿನಲ್ಲಿನ ಪ್ರತಿಯೊಂದು ಅಣು-ರೇಣುವಿನಲ್ಲಿ ಈಶ್ವರನ ಅಸ್ತಿತ್ವವಿದೆ.’ ‘ಜಗತ್ತಿನ ಎಲ್ಲ ಜೀವಗಳು ಈಶ್ವರನಿಂದ ರಚಿಸಲ್ಪಟ್ಟಿವೆ, ಅವನು ಸರ್ವಶಕ್ತಿಶಾಲಿಯಾಗಿದ್ದಾನೆ. ಅವನೇ ಜಗತ್ತಿನ ನಿರ್ಮಾಪಕ, ಪಾಲನಕರ್ತಾ ಮತ್ತು ವಿನಾಶಕನೂ ಆಗಿದ್ದಾನೆ’, ಈ ವಿಚಾರಗಳು ವೈದಿಕ ಋಷಿಗಳಿಗೆ ಹೊಸದಾಗಿರಲಿಲ್ಲ. ಇಂದಿಗೂ ಈ ವಿಚಾರಗಳು ನಮಗೆ ಪೂರ್ಣಪರಿಚಿತವಾಗಿವೆ. ಆದರೂ ನಾವು ಅನೇಕ ದೇವತೆಗಳನ್ನು ನಂಬುತ್ತೇವೆ ಮತ್ತು ಅವರ ಪೂಜೆ ಮಾಡುತ್ತೇವೆ.

ವೇದಕಾಲದಲ್ಲಿ ಅಗ್ನಿ, ವರುಣ, ರುದ್ರ, ವಾಯು ಮತ್ತು ಆದಿತ್ಯ ಇವರು ಆರ್ಯರ ದೇವತೆಗಳಾಗಿದ್ದರು. ನಿಜ ಹೇಳುವುದಾದರೆ ಇವು ನಿಸರ್ಗದ ವಿವಿಧ ಶಕ್ತಿಗಳಾಗಿವೆ; ಆದರೆ ಆರ್ಯರು ಅವರನ್ನೇ ದೇವರೆಂದು ನಂಬಿದ್ದರು. ಈ ವಿಚಾರಕ್ಕೆ ಅನುಸರಿಸಿಯೇ ಮುಂದೆ ಹಿಮಾಲಯ, ಗಂಗಾ-ಸರಸ್ವತಿ-ಯಮುನಾ ಇತ್ಯಾದಿ ನದಿಗಳು ಇಂತಹ ನಿಸರ್ಗದಲ್ಲಿನ ಭವ್ಯ ಮತ್ತು ಉದಾತ್ತ ವಾಸ್ತುಗಳಿಗೆ ದೇವತೆಗಳ ರೂಪ ದೊರಕಿತು. ಇದರಿಂದ ಸರಸ್ವತಿ ನದಿಯ ಮಹಿಮೆಯು ವಿಶೇಷವೇ ಆಗಿತ್ತು. ಪೌರಾಣಿಕ ಕಾಲದಲ್ಲಿ ನದಿ ಸರಸ್ವತಿಯೂ ದೇವಿ ಸರಸ್ವತಿಯಾದಳು.

೫. ಸರಸ್ವತಿದೇವಿ ಮತ್ತು ಅವಳ ವಾಹನ ಹಂಸ ಇವರ ಬಗೆಗಿನ ವಿಶಿಷ್ಟ ಮಾಹಿತಿ

ಸರಸ್ವತಿಗೆ ‘ಶಾರದಾ’, ‘ವಾಕ್‌’, ‘ವಾಣಿ’, ‘ಭಾರತಿ’, ಈ ರೀತಿ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳಿಂದ ದೇವಿ ಸರಸ್ವತಿಯು ವಾಙ್ಮಯಕ್ಕೆ ಸಂಬಂಧಿಸಿದ್ದಾಳೆ, ಎಂದು ಕಂಡುಬರುತ್ತದೆ. ಸರಸ್ವತಿಯು ವಿದ್ಯೆ, ಕಲೆ, ಸಾಹಿತ್ಯ, ಜ್ಞಾನ ಮತ್ತು ಪಾವಿತ್ರ್ಯತೆಯ ದೇವತೆಯಾಗಿದ್ದಾಳೆ. ‘ಹಂಸ’ವನ್ನು ಸರಸ್ವತಿಯ ವಾಹನವೆಂದು ನಂಬಲಾಗಿದೆ. ‘ಹಂಸ’ ಈ ಶಬ್ದಕ್ಕೆ ಇತರ ಅರ್ಥಗಳೂ ಇವೆ. ‘ಹಂಸ’ ಅಂದರೆ ಪ್ರಾಣ, ಆತ್ಮಾ. ಯೋಗಶಾಸ್ತ್ರದಲ್ಲಿ ‘ಹಂಸ’ ಈ ಶಬ್ದವನ್ನು ‘ಪ್ರಾಣ ಮತ್ತು ಆತ್ಮಾ’, ಈ ಎರಡು ಅರ್ಥಗಳಿಂದ ಬಳಸಲಾಗುತ್ತದೆ. ಹಂಸ ಇದರ ಇನ್ನೊಂದು ಅರ್ಥವಿದೆ. ಹಂಸ ಎಂದರೆ ‘ಶುದ್ಧ ಜ್ಞಾನ’ರೂಪಿ ಹಂಸ ಪಕ್ಷಿಯು ವಿದ್ಯೆಯ ದೇವತೆಯ ವಾಹನವಾಗಿದೆ, ಇದು ಯೋಗ್ಯವೇ ಆಗಿದೆ.

೬. ಸರಸ್ವತಿದೇವಿಯ ಸಗುಣ ರೂಪದ ಧ್ಯಾನಮಂತ್ರ

ಒಂದು ಸಂಸ್ಕೃತ ಸ್ತೋತ್ರದಲ್ಲಿ ದೇವಿ ಸರಸ್ವತಿಯ ಸಗುಣ ರೂಪಕ್ಕೆ ಧ್ಯಾನವೆಂದು ವರ್ಣಿಸಲಾಗಿದೆ.

ಶ್ವೇತಪದ್ಮಾಸನಾ ದೇವೀ ಶ್ವೇತಪುಷ್ಪೋಪಶೋಭಿತಾ |

ಶ್ವೇತಾಮ್ಬರಧರಾ ನಿತ್ಯಾ ಶ್ವೇತಗನ್ಧಾನುಲೇಪನಾ ||

ಅರ್ಥ : ಶ್ವೇತ ಪದ್ಮಾಸನದ ಮೇಲೆ ಆಸೀನರಾದ ದೇವಿ ಸರಸ್ವತಿಯು ಶ್ವೇತ ಹೂವುಗಳಿಂದ ಸುಶೋಭಿತಳಾಗಿದ್ದಾಳೆ, ಅವಳು ಶ್ವೇತ ವಸ್ತ್ರ ಧರಿಸಿದ್ದಾಳೆ ಮತ್ತು ಶ್ವೇತ ಗಂಧವನ್ನು ಲೇಪಿಸಿಕೊಂಡಿದ್ದಾಳೆ.

ಶ್ವೇತಾಕ್ಷೀ ಸೂತ್ರಹಸ್ತಾ ಚ ಶ್ವೇತಚನ್ದನಚರ್ಚಿತಾ |

ಶ್ವೇತವೀಣಾಧರಾ ಶುಭ್ರಾ ಶ್ವೇತಾಲಙõಕಾರಭೂಷಿತಾ ||

ಅರ್ಥ : ದೇವಿ ಸರಸ್ವತಿಯ ಕೈಯಲ್ಲಿ ಶ್ವೇತ ರುದ್ರಾಕ್ಷಿಗಳ ಮಾಲೆ ಇದೆ, ಅವಳು ಶ್ವೇತ ಗಂಧವನ್ನು  ಹಚ್ಚಿಕೊಂಡಿದ್ದಾಳೆ, ಅವಳು ಶ್ವೇತ ವೀಣೆಯನ್ನು ಹಿಡಿದಿದ್ದಾಳೆ, ಹಾಗೆಯೇ ಅವಳು ಶ್ವೇತ ಅಲಂಕಾರಗಳಿಂದ ಸುಶೋಭಿತಳಾಗಿದ್ದಾಳೆ.

೭. ಸರಸ್ವತಿದೇವಿಯ ವರ್ಣನೆಯಲ್ಲಿ ಬಿಳಿ ಬಣ್ಣಕ್ಕಿರುವ ಮಹತ್ವ

ದೇವಿ ಸರಸ್ವತಿಯ ವರ್ಣನೆಯಲ್ಲಿ ‘ಬಿಳಿ’ ಅಥವಾ ‘ಶ್ವೇತ’ ಈ ಬಣ್ಣಕ್ಕೆ ಇಷ್ಟೊಂದು ಮಹತ್ವ ಏಕೆ ? ಜ್ಞಾನ ಅಥವಾ ಪ್ರಕಾಶ ಇವುಗಳ ಬಣ್ಣ ಶುಭ್ರವೆಂದು (ಬಿಳಿಬಣ್ಣ) ನಂಬಲಾಗುತ್ತದೆ. ತದ್ವಿರುದ್ಧ ಅಜ್ಞಾನಕ್ಕೆ ಕಪ್ಪು ಅಂಧಃಕಾರ ಎಂದು ಹೇಳಲಾಗುತ್ತದೆ. ಸರಸ್ವತಿಯು ವಿದ್ಯೆಯ, ಜ್ಞಾನದ ದೇವತೆ ! ಹಾಗಾದರೆ ಅವಳ ಸಗುಣ ರೂಪದ ವರ್ಣನೆಯಲ್ಲಿ ಬಿಳಿಬಣ್ಣಕ್ಕೆ ಆದ್ಯತೆ ನೀಡುವುದು ಇದು ತರ್ಕಶುದ್ಧವೇ ಆಗಿದೆ. ಅವಳು ‘ವೀಣಾಧಾರಿಣಿ’ಯಾಗಿದ್ದಾಳೆ. ಅವಳು ಸಂಗೀತ ಕಲೆಗಳ ಅಧಿದೇವತೆ ಎಂದು ಸೂಚಿಸುತ್ತದೆ. ಒಂದು ಶ್ಲೋಕದಲ್ಲಿ ಅವಳು ‘ವೀಣಾ-ಪುಸ್ತಕ-ಧಾರಿಣಿ’ ಆಗಿದ್ದಾಳೆ, ಹೀಗೆ ಅವಳ ವರ್ಣನೆಯಾಗಿದೆ. ಅವಳ ಕೈಯಲ್ಲಿ ಪುಸ್ತಕವಿದೆ. ಈ ಸಂಕೇತದ ಅರ್ಥವನ್ನು ವಿವರಿಸುವ ಅಗತ್ಯವೇನು ? ‘ಮಾಘ ಶುಕ್ಲ ಪಂಚಮಿ’ ಅಥವಾ ‘ವಸಂತಪಂಚಮಿ’ ಇದು ಸರಸ್ವತಿಯ ಉತ್ಸಾಹದ ದಿನವೆಂದು ನಂಬಲಾಗುತ್ತದೆ. ಈ ದಿನ ಆಸೇತುಹಿಮಾಚಲ ಅಖಿಲ ಭಾರತದ ಅನೇಕ ಸ್ಥಳಗಳಲ್ಲಿ ದೇವಿ ಸರಸ್ವತಿಯ ಉತ್ಸವವು ನೆರವೇರುತ್ತದೆ.’

– ರಾ. ಗ. ಕುಂಭೋಜಕರ (ಆಧಾರ : ಮಾಸಿಕ ‘ಜ್ಞಾನದೂತ’, ದೀಪಾವಳಿ ಸಂಚಿಕೆ ೧೯೭೯)