ಸದ್ಯ ಚೀನಾ, ಅಮೇರಿಕಾ, ಜಪಾನ್, ಇಟಲಿ ಇತ್ಯಾದಿ ದೇಶಗಳಲ್ಲಿ ಕೊರೊನಾ ಈ ಮಾರಕ ವಿಷಾಣು ಮತ್ತೊಮ್ಮೆ ತನ್ನ ತಲೆ ಎತ್ತಿದೆ. ಚೀನಾದ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಲು ಜಾಗ ಲಭ್ಯವಿಲ್ಲ ಮತ್ತು ಸ್ಮಶಾನಭೂಮಿಯಲ್ಲಿ ಉದ್ದುದ್ದ ಸಾಲುಗಳೇ ನಿರ್ಮಾಣವಾಗಿವೆ. ಇಂತಹದರಲ್ಲಿ ಭಾರತದಲ್ಲಿಯೂ ಎಚ್ಚರಿಕೆಯೆಂದು ಮತ್ತೊಮ್ಮೆ ಮುಖಪಟ್ಟಿಯ (ಮಾಸ್ಕ್) ಬಳಕೆ ಕಡ್ಡಾಯವಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿದೆ. ಇದರೊಂದಿಗೆ ಜನಸಂದಣಿಯಲ್ಲಿ ಹೋಗುವುದನ್ನು ತಪ್ಪಿಸುವುದು ಇತ್ಯಾದಿ ಮಾರ್ಗಸೂಚಿಗಳನ್ನು ಸಹ ನಾಗರಿಕರಿಗೆ ನೀಡಲಾಗಿದೆ. ಕೇಂದ್ರಗಳು ಎಲ್ಲ ರಾಜ್ಯಗಳಿಗೆ ಕೊರೊನಾ ರೋಗಿಗಳ ಪರೀಕ್ಷಣೆಗಳ ಮಾದರಿಗಳನ್ನು ಮುಂದಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆಯೂ ಆದೇಶವನ್ನು ನೀಡಿದೆ. ಇದರಿಂದ ಕೊರೊನಾದ ಸೋಂಕು ಯಾವ ರೀತಿಯಲ್ಲಿ ಹೆಚ್ಚುತ್ತಿದೆ ಎಂದು ತಿಳಿಯಬಹುದು. ಒಂದೆಡೆ ಈ ಎಲ್ಲವೂ ನಡೆದಿರುವಾಗ ಇನ್ನೊಂದೆಡೆ ಸತತ ‘ಬ್ರೆಕಿಂಗ್ ನ್ಯೂಸ್’ನ ಹುಡುಕಾಟದಲ್ಲಿರುವ ಮಾಧ್ಯಮಗಳಿಗೆ ಈ ತಯಾರಿ ಸುದ್ದಿಯೇ ಸಿಕ್ಕಿದೆ. ಎಂದಿನಂತೆ ಮಾಧ್ಯಮಗಳು ಈ ಬಗ್ಗೆ ಸುದ್ದಿಯನ್ನು ಬಿತ್ತರಿಸಲು ಪ್ರಾರಂಭಿಸಿವೆ ಮತ್ತು ತಮ್ಮ ಅಜ್ಞಾನವನ್ನು ವ್ಯಕ್ತಪಡಿಸುತ್ತಿವೆ.
ಕೊರೊನಾದ ಈ ಹೊಸ ತಳಿ ಎಷ್ಟು ಅಪಾಯಕಾರಿಯಾಗಿದೆ ? ಭಾರತದಲ್ಲಿ ಅದು ವೇಗದಿಂದ ಹರಡಬಹುದೇ ? ಪುನಃ ಸಾರಿಗೆ ನಿಷೇಧ ಜಾರಿಯಾಗುವುದೇ ? ತಜ್ಞರನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳಲ್ಲಿ ಪ್ರತಿದಿನ ವಿಭಿನ್ನ ಮಾಹಿತಿಗಳನ್ನು ನೀಡಲಾಗುತ್ತಿದೆ. ಇವೆಲ್ಲವುಗಳಲ್ಲಿ ಸಾಮಾನ್ಯ ನಾಗರಿಕರು ಬಹಳ ಗೊಂದಲಕ್ಕೀಡಾಗುತ್ತಾರೆ; ಏಕೆಂದರೆ ಇವುಗಳಲ್ಲಿ ಯಾವ ಮಾಹಿತಿಯನ್ನು ನಿಜವೆಂದು ತಿಳಿಯಬೇಕು ? ಎಂಬಂತಹ ದೊಡ್ಡ ಪ್ರಶ್ನೆಯು ಅವರೆದುರು ಉದ್ಭವಿಸುತ್ತದೆ. ಈ ಹಿಂದಿನ ಕೊರೊನಾ ಕಾಲದಲ್ಲಿಯೂ ಮಾಧ್ಯಮಗಳ ಇಂತಹ ವಾರ್ತೆಗಳಿಂದ ನಾಗರಿಕರು ಬಹಳ ಗಾಬರಿಗೊಂಡಿರುವ ದೃಶ್ಯವಿತ್ತು. ಇದರಿಂದಾಗಿ ಆಗ ಅನೇಕ ಆಧುನಿಕ ವೈದ್ಯರು ತಮ್ಮ ಬಳಿಗೆ ತಪಾಸಣೆಗೆ ಬರುವ ರೋಗಿಗಳಿಗೆ ಸ್ವಲ್ಪ ಸಮಯದ ವರೆಗೆ ದೂರಚಿತ್ರವಾಣಿಯನ್ನು ನೋಡಬಾರದು ಅಥವಾ ದಿನಪತ್ರಿಕೆಗಳನ್ನು ಓದಬಾರದೆಂಬ ಸಲಹೆಯನ್ನು ನೀಡಿದ್ದರು. ಮಾಧ್ಯಮಗಳಿಗೆ ಇದಕ್ಕಿಂತಲೂ ನಾಚಿಕೆ ಪಡುವಂತಹ ವಿಷಯ ಇನ್ನೇನಾದರೂ ಇರಬಹುದೇ ? ಅಂದರೆ ಕೆಲವು ಮಾಧ್ಯಮಗಳು ಇದಕ್ಕೆ ನಿರ್ದಿಷ್ಟ ಅಪವಾದಗಳಾಗಿವೆ; ಆದರೆ ಅವುಗಳ ಸಂಖ್ಯೆ ಅತಿ ಕಡಿಮೆಯಿದೆ. ಮೂಲತಃ ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಹೀಗಿರುವಾಗ ಮಾಧ್ಯಮಗಳು ಜನಸಾಮಾನ್ಯರನ್ನು ಗೊಂದಲಕ್ಕೀಡು ಮಾಡುವ ಅಥವಾ ಭಯಭೀತರನ್ನಾಗಿಸುವ ಸುದ್ದಿಗಳನ್ನು ಪ್ರಸಾರ ಮಾಡಿ ತಮ್ಮ ಅಳಿದುಳಿದ ಪ್ರತಿಷ್ಠೆಯನ್ನೂ ಹಾಳು ಮಾಡುತ್ತಿರುವುದು ಅವುಗಳ ಗಮನಕ್ಕೆ ಬರುವುದೇ ? ಅವರ ‘ಕೊರೊನಾ ವೃತ್ತಿ’ ನಿಜವಾಗಿ ಕೊರೊನಾ ವಿಷಾಣುವಿನಷ್ಟೇ ಅಪಾಯಕಾರಿಯಾಗಿದೆ.
ಸಮಾಜಕ್ಕೆ ಅನುಕೂಲಕರವಾದ ಪತ್ರಿಕೋದ್ಯಮವನ್ನು ನಡೆಸುವುದೇ ನಿಜವಾದ ಪತ್ರಿಕೆಯಾಗಿರುತ್ತದೆ; ಆದರೆ ಅದರಲ್ಲಿರುವ ಬರವಣಿಗೆ ಜನರ ಜೀವಕ್ಕೆ ಅಪಾಯ ತರುತ್ತಿದ್ದರೆ ಅವರಿಗಾಗಿ ಅದು ಪತ್ರಿಕೆಯಲ್ಲದೇ, ಅದು ಮೃತ್ಯುಪತ್ರವಾಗುತ್ತದೆ. ಇದಕ್ಕೆ ಉಪಾಯವೆಂದು ಈಗ ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡುವುದು ಆವಶ್ಯಕವಾಗಿದೆ. ಸರಕಾರವು ಮಾಧ್ಯಮಗಳಿಗೆ ಸಹ ಸ್ವತಂತ್ರ ಮಾರ್ಗದರ್ಶಕ ತತ್ತ್ವಗಳನ್ನು ಜಾರಿಗೆ ತರಬೇಕು. ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು. ಇದರಿಂದ ತಾನಾಗಿಯೇ ಮಾಧ್ಯಮಗಳ ನಡುವೆ (ಓದುಗರಿಗೆ ಮಾರಕವೆಂದು ಸಿದ್ಧವಾಗುವ) ಸ್ಪರ್ಧೆಯು ಕಡಿಮೆಯಾಗುವುದು.