Tirupati Darshan Stampede : ತಿರುಪತಿ ದೇವಸ್ಥಾನದ ಹೊರಗೆ ಕಾಲ್ತುಳಿತ; 6 ಜನರ ಸಾವು

ತಿರುಪತಿ (ಆಂಧ್ರಪ್ರದೇಶ) – ಇಲ್ಲಿ ಜನವರಿ 8 ರಂದು ರಾತ್ರಿ 9:30 ಗಂಟೆಗೆ ಶ್ರೀ ತಿರುಪತಿ ದೇವಸ್ಥಾನದ ವೈಕುಂಠ ದ್ವಾರ ದರ್ಶನ ಟಿಕೆಟ್ ಕೌಂಟರ್ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಜನರು ಸಾವನ್ನಪ್ಪಿ, 40 ಜನರು ಗಾಯಗೊಂಡರು. ಜನವರಿ 10 ರಿಂದ ಪ್ರಾರಂಭವಾಗಿ 10 ದಿನಗಳ ಕಾಲ ನಡೆಯಲಿರುವ ವಿಶೇಷ ವೈಕುಂಠ ದ್ವಾರ ದರ್ಶನದ ಟಿಕೆಟ್‌ಗಳ ವಿತರಣೆ ನಡೆಯುತ್ತಿದೆ. ಇದಕ್ಕಾಗಿ ದೇವಸ್ಥಾನ ಸಮಿತಿಯು 91 ಟಿಕೆಟ್ ಕೌಂಟರ್‍‌ಗಳನ್ನು ತೆರೆದಿತ್ತು. ಘಟನೆ ನಡೆದ ಸಮಯದಲ್ಲಿ, ಇಲ್ಲಿ 4 ಸಾವಿರಕ್ಕೂ ಹೆಚ್ಚು ಭಕ್ತರು ಸೇರಿದ್ದರು. ಆ ಸಮಯದಲ್ಲಿ, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.

ದೇವಸ್ಥಾನ ಸಮಿತಿಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಟಿಕೆಟ್ ಖರೀದಿಸಲು ವೈಕುಂಠ ದ್ವಾರದಲ್ಲಿ ಜನಸಂದಣಿ ಸೇರಿತ್ತು. ಪೊಲೀಸರು ಬೈರಾಗಿ ಪಟ್ಟಿಡಾ ಉದ್ಯಾನವನದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವಂತೆ ಕೇಳಿಕೊಂಡರು. ಜನಸಮೂಹ ವೈಕುಂಠ ದ್ವಾರದ ಹೊರಗಿನಿಂದ ಉದ್ಯಾನದ ಕಡೆಗೆ ಓಡಿದರು. ಆಗ ಎಲ್ಲರೂ ಒಂದೇ ಸಮನೆ ಓಡಲು ಪ್ರಾರಂಭಿಸಿದರು. ಜನರು ಒಬ್ಬರ ಮೇಲೆ ಒಬ್ಬರು ಬಿದ್ದರು. ಇದರಿಂದ ಅನೇಕ ಜನರ ಉಸಿರುಗಟ್ಟಿತು. ಮಲ್ಲಿಕಾ ಎಂಬ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರು.

ಸಂಪಾದಕೀಯ ನಿಲುವು

ದೇವಸ್ಥಾನದ ಸ್ಥಳಗಳಲ್ಲಿ ನಡೆಯುತ್ತಿರುವ ಇಂತಹ ಘಟನೆಗಳನ್ನು ತಡೆಯಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಮಾಡುವುದು ಅಗತ್ಯವಾಗಿದೆ !