ಮಹಾಕುಂಭ ಮೇಳ 2025
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಂದ ಕುಂಭನಗರಿಯಲ್ಲಿ ಕಲಾಕುಂಭವನ್ನು ಉದ್ಘಾಟನೆ !
ಪ್ರಯಾಗ್‌ರಾಜ್, ಜನವರಿ 10 (ಸುದ್ದಿ) – ಮಹಾ ಕುಂಭಮೇಳ ಆಯೋಜನೆಯ ಭಾಗವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಂಭನಗರದ ಸೆಕ್ಟರ್ 7 ರಲ್ಲಿ ‘ಕಲಾ ಕುಂಭ’ ಎಂಬ ಭವ್ಯ ಪ್ರದರ್ಶನ ಸಭಾಂಗಣವನ್ನು ಉದ್ಘಾಟಿಸಿದರು. ಇದರೊಂದಿಗೆ, ‘ಉತ್ತರ ಪ್ರದೇಶ ದರ್ಶನ ಮಂಟಪ’ ಈ ಪ್ರದರ್ಶನವನ್ನು ಅವರ ಶುಭ ಹಸ್ತಗಳಿಂದ ಉದ್ಘಾಟಿಸಲಾಯಿತು. ಪ್ರಸ್ತುತ ಕುಂಭನಗರಿಯ ಸಿದ್ಧತೆಯ ಪರಿಶೀಲನೆಗಾಗಿ ಮುಖ್ಯಮಂತ್ರಿಯವರ ಪ್ರವಾಸ ನಡೆಯುತ್ತಿದೆ. ಅವರು ಆಗಮಿಸಿದಾಗ, ಸ್ಥಳೀಯ ಕಲಾವಿದರಿಂದ ಉತ್ತರ ಪ್ರದೇಶದ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಈ ಎರಡೂ ಪ್ರದರ್ಶನಗಳು ಮಹಾಕುಂಭಕ್ಕೆ ಬರುವ ಭಕ್ತರಿಗೆ ಆಕರ್ಷಣೆಯ ಕೇಂದ್ರಗಳಾಗಲಿವೆ.
‘ಉತ್ತರ ಪ್ರದೇಶ ದರ್ಶನ ಮಂಟಪ’ದಲ್ಲಿ, ಉತ್ತರ ಪ್ರದೇಶದ ವಿವಿಧ ಧಾರ್ಮಿಕ ಸ್ಥಳಗಳಾದ ಅಯೋಧ್ಯೆ, ಮಥುರಾ, ಕಾಶಿ ಮುಂತಾದ ಪ್ರಸಿದ್ಧ ದೇವಾಲಯಗಳ ಸಣ್ಣ ಪ್ರಮಾಣದ ಪ್ರತಿಕೃತಿಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದರೊಂದಿಗೆ, ‘ರಾಮಾಯಣ ಸರ್ಕಿಟ್’, ‘ಮಹಾಭಾರತ ಸರ್ಕಿಟ್’, ‘ಕೃಷ್ಣ ಸರ್ಕಿಟ್’ ನಂತಹ ಧಾರ್ಮಿಕ ಸ್ಥಳಗಳಲ್ಲಿನ ದೇವಾಲಯಗಳ ಬಗ್ಗೆ ಛಾಯಾಚಿತ್ರಗಳು ಮತ್ತು ಮಾಹಿತಿಯ ಪ್ರದರ್ಶನಗಳನ್ನು ವಿವಿಧ ಕಕ್ಷೆಗಳಲ್ಲಿ ಇರಿಸಲಾಗಿದೆ.
‘ಕಲಾಕುಂಭ’ವು ಉತ್ತರ ಪ್ರದೇಶದ ಸಂಸ್ಕೃತಿಯನ್ನು ಪ್ರದರ್ಶಿಸುವ ಭವ್ಯವಾದ ವರ್ಣಚಿತ್ರಗಳು ಮತ್ತು ಶಿಲ್ಪಗಳ ಪ್ರದರ್ಶನವಾಗಿದೆ. ಇದರಲ್ಲಿ, 1840 ರಿಂದ ಕುಂಭಮೇಳದ ಆಯೋಜನೆಯ ಇತಿಹಾಸವನ್ನು ಬ್ರಿಟಿಷ್ ಯುಗದ ದಾಖಲೆಗಳ ಛಾಯಾಚಿತ್ರಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಕುಂಭಮೇಳದಲ್ಲಿನ ವಿವಿಧ ವ್ಯವಸ್ಥೆಗಳು ಹೇಗೆ ವಿಕಸನಗೊಂಡವು? ಇದನ್ನು ಈ ಛಾಯಾಚಿತ್ರಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಇದರೊಂದಿಗೆ, ಉತ್ತರ ಪ್ರದೇಶದ ದೇವಾಲಯ ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ ಮತ್ತು ಸಂಗೀತ ಕಲೆ ಇವುಗಳ ಸಾಕ್ಷ್ಯ ಚಿತ್ರಗಳು ಹಾಗೂ ಮೂರ್ತಿಗಳ ರೂಪದಲ್ಲಿ ಭವ್ಯವಾದ ಪ್ರದರ್ಶನ ಸಭಾಂಗಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮುಖ್ಯವೆಂದರೆ ಈ ಸಭಾಂಗಣದಲ್ಲಿ, ‘ಓಂ’ ಮತ್ತು ‘ಸ್ವಸ್ತಿಕ್’ ಆಕಾರಗಳನ್ನು ಛಾವಣಿಯಿಂದ ನೇತುಹಾಕಲಾಗುತ್ತದೆ ಮತ್ತು ಅವುಗಳಿಗೆ ದೀಪಗಳನ್ನು ಜೋಡಿಸಲಾಗುತ್ತದೆ. ಪ್ರದರ್ಶನದ ಆರಂಭಿಕ ಪ್ರದೇಶದಲ್ಲಿ ಸಮುದ್ರ ಮಂಥನದ ಭವ್ಯ ಶಿಲ್ಪ ಮತ್ತು ದೇವತೆಗಳ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಈ ಇಡೀ ಪ್ರದೇಶವು 5 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.