Sanatan Prabhat Exclusive : ಮಹಾಕುಂಭ ಕ್ಷೇತ್ರ: ವಿದ್ಯುತ್ ವ್ಯತ್ಯಯವಾದರೆ ಕೇವಲ 5 ಸೆಕೆಂಡುಗಳಲ್ಲಿ ಸೌರ ವಿದ್ಯುತ್ ಆರಂಭ !

ಪ್ರಯಾಗರಾಜ್ ಕುಂಭ ಮೇಳ 2025

  • ಸೌರಶಕ್ತಿಯಿಂದ ನಡೆಯುವ 16 ಸಾವಿರ ದೀಪಗಳ ವ್ಯವಸ್ಥೆ !

  • ಭಮೇಳ ಕ್ಷೇತ್ರದಲ್ಲಿ 67 ಸಾವಿರ ವಿದ್ಯುತ್ ಕಂಬಗಳ ಮೂಲಕ ನಾಲ್ಕೂವರೆ ಲಕ್ಷ ವಿದ್ಯುತ್ ಸಂಪರ್ಕ !

ಶ್ರೀ. ಗಿರೀಶ ಪೂಜಾರಿ, ಪ್ರತಿನಿಧಿ

ಪ್ರಯಾಗರಾಜ, ಜನವರಿ 9 (ಸುದ್ದಿ) – ಮಹಾಕುಂಭ ಮೇಳದ ವೇಳೆ ಏನಾದರೂ ಸಾವು-ನೋವು ಸಂಭವಿಸಿದರೆ ಅಥವಾ ದುರ್ಘಟನೆಯಿಂದ ವಿದ್ಯುತ್ ಕಡಿತಗೊಂಡರೆ ಕೇವಲ 5 ಸೆಕೆಂಡುಗಳಲ್ಲಿ ಪರ್ಯಾಯ ವಿದ್ಯುತ್ ಸರಬರಾಜು ಒದಗಿಸಲು ಸೌರಶಕ್ತಿ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಸೌರಶಕ್ತಿಯ ಮೂಲಕ ಮಹಾಕುಂಭದಲ್ಲಿ ಎಲ್ಲಾ ರಸ್ತೆಗಳು ಮತ್ತು ಘಾಟ್‌ಗಳಿಗೆ ಕೇವಲ 5 ಸೆಕೆಂಡುಗಳಲ್ಲಿ ವಿದ್ಯುತ್ ಒದಗಿಸಲಾಗುವುದು ಎಂಬ ಮಾಹಿತಿಯನ್ನು ಉತ್ತರ ಪ್ರದೇಶ ಸರಕಾರದ ವ್ಯಾಪ್ತಿಗೆ ಬರುವ ‘ಪೂರ್ವಾಂಚಲ ವಿದ್ಯುತ್ ವಿತರಣ ನಿಗಮ ನಿಯಮಿತ’ ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೋಜ್ ಗುಪ್ತಾ, ಅವರು ‘ಸನಾತನ ಪ್ರಭಾತ’ ಗೆ ಮಾಹಿತಿ ನೀಡಿದರು.

ಮನೋಜ ಗುಪ್ತಾ ಮಾತನಾಡಿ, “ಮಹಾ ಕುಂಭದಲ್ಲಿ ತ್ರಿವೇಣಿ ಸಂಗಮ ಕ್ಷೇತ್ರದ ಮೂರು ದಂಡೆಗಳಲ್ಲಿ 32 ಚದರ ಕಿಲೋಮೀಟರ್ ಪ್ರದೇಶದಲ್ಲಿ ಕುಂಭ ಮೇಳವು ವ್ಯಾಪಿಸಿದೆ” ಎಂದು ಹೇಳಿದರು. ಈ ಇಡೀ ಕುಂಭ ಪ್ರದೇಶದಲ್ಲಿ 67 ಸಾವಿರ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ ಮತ್ತು 4 ಲಕ್ಷ 50 ಸಾವಿರ ವಿದ್ಯುತ್ ಸಂಪರ್ಕಗಳನ್ನು ಒದಗಿಸಲಾಗಿದೆ. ಸಂಪೂರ್ಣ ಕುಂಭ ಮೇಳದಲ್ಲಿ 14 ಕಿಲೋಮೀಟರ್ ಉದ್ದದ ವಿದ್ಯುತ್ ತಂತಿಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕಳೆದ 2 ತಿಂಗಳಿನಿಂದ ಕುಂಭ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಕುಂಭ ಮೇಳಕ್ಕೆ ಪ್ರತಿದಿನಕ್ಕೆ 30 ಸಾವಿರ ಕಿಲೋವ್ಯಾಟ್ ವಿದ್ಯುತ್ ಅಗತ್ಯವಿದೆ. ಕುಂಭ ಮೇಳದಲ್ಲಿ ಒಟ್ಟು 14 ಮುಖ್ಯ ಕೇಂದ್ರಗಳು ಮತ್ತು 50 ಉಪ ಕೇಂದ್ರಗಳನ್ನು ತೆರೆಯಲಾಗಿವೆ. ಕುಂಭ ಪ್ರದೇಶದಲ್ಲಿ ವಿದ್ಯುತ್ ಸೌಕರ್ಯ ಒದಗಿಸುವುದಕ್ಕಾಗಿ 33 ಸರಕಾರಿ ಅಧಿಕಾರಿಗಳು ಮತ್ತು 5 ಸಾವಿರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯುತ್ ವ್ಯತ್ಯಯವಾದರೆ ವಿದ್ಯುತ್ ಸರಬರಾಜು ಹೀಗೆ!

ವಿದ್ಯುತ್ ವ್ಯತ್ಯಯವಾದರೆ ಪರ್ಯಾಯ ವಿದ್ಯುತ್ ಒದಗಿಸಲು 125 ಕಿಲೋವ್ಯಾಟ್‌ನ 85 ಜನರೇಟರ್‌ಗಳಿವೆ. ಈ ಜನರೇಟರ್‌ಗಳ ಮೂಲಕ 20 ಸೆಕೆಂಡುಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗುತ್ತದೆ. ಮುಖ್ಯ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾದರೆ, ಜನರೇಟರ್‌ನಿಂದ ವಿದ್ಯುತ್ ಸರಬರಾಜು ಸ್ವಯಂಚಾಲಿತವಾಗಿ ಪ್ರಾರಂಭವಾಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ಸರಕಾರಿ ಕಚೇರಿಗಳು ಮತ್ತು ಮುಖ್ಯ ರಸ್ತೆಗಳಿಗೆ ಜನರೇಟರ್‌ಗಳ ಮೂಲಕ ವಿದ್ಯುತ್ ಸರಬರಾಜು.ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಮುಖ್ಯ ರಸ್ತೆಗಳು ಜನರೇಟರ್‌ಗಳಿಂದ ವಿದ್ಯುತ್ ಪಡೆಯಲಿವೆ. ಜನರೇಟರ್ ಕೆಲಸ ಮಾಡಲು ಪ್ರಾರಂಭಿಸಲು ತೆಗೆದುಕೊಳ್ಳುವ 20 ಸೆಕೆಂಡುಗಳನ್ನು ಸರಿದೂಗಿಸಲು ಸೌರಶಕ್ತಿ ವ್ಯವಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಈ ವ್ಯವಸ್ಥೆಯು 5 ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಕುಂಭ ಕ್ಷೇತ್ರ ಪ್ರದೇಶದಲ್ಲಿ ಒಟ್ಟು 16 ಸಾವಿರ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಘಾಟ್‌ಗಳು ಮತ್ತು ಜನದಟ್ಟಣೆ ಇರುವ ಸ್ಥಳಗಳಲ್ಲಿ ಸೌರಶಕ್ತಿಯ ಮೂಲಕ ವಿದ್ಯುತ್ ಒದಗಿಸಲಾಗುವುದು ಎನ್ನುವ ಮಾಹಿತಿಯನ್ನು ಗುಪ್ತಾ ನೀಡಿದರು.

ಎರಡೂವರೆ ಲಕ್ಷ ವಿದ್ಯುತ್ ಸಂಪರ್ಕಗಳು ಇನ್ನೂ ಬಾಕಿ ಇವೆ!

2019 ರಲ್ಲಿ ನಡೆದ ಅರ್ಧ ಕುಂಭಮೇಳದ ವೇಳೆ ಮೂರುವರೆ ಲಕ್ಷ ವಿದ್ಯುತ್ ಸಂಪರ್ಕಗಳನ್ನು ಒದಗಿಸಲಾಗಿತ್ತು. ಇನ್ನೂ ಕೆಲವು ಆಖಾಡಾಗಳಿಗೆ ಟೆಂಟ್ ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ಟೆಂಟ್ ಹಾಕಿದ ನಂತರ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇನ್ನೂ ಎರಡೂವರೆ ಲಕ್ಷ ವಿದ್ಯುತ್ ಸಂಪರ್ಕಗಳು ಬಾಕಿ ಇವೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ಗುಪ್ತಾ ಹೇಳಿದರು.

ವಿದ್ಯುತ್ ಕಂಬಗಳ ಮೇಲಿನ QR ಕೋಡ್‌ಗಳ ಮೂಲಕ ದೂರು ಸಲ್ಲಿಸಬಹುದು!

ವಿಶೇಷವೆಂದರೆ ಈ ಕುಂಭ ಮೇಳದಲ್ಲಿ ಪ್ರತಿಯೊಂದು ವಿದ್ಯುತ್ ಕಂಬವು ಕ್ಯೂ ಆರ್ ಕೋಡ್ ಅನ್ನು ಹೊಂದಿರಲಿದೆ. ಈ ‘ಕೋಡ್’ ಅನ್ನು ಸ್ಮಾರ್ಟ್‌ಫೋನ್‌ನ ಕ್ಯಾಮೆರಾದೊಂದಿಗೆ ಸ್ಕ್ಯಾನ್ ಮಾಡುವುದರಿಂದ ಮೊಬೈಲ್ ಫೋನ್‌ನಲ್ಲಿ ದೂರು ದಾಖಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಕುಂಭ ಮೇಳದ ಯಾವುದೇ ಭಾಗದಿಂದ ಬರುವ ವಿದ್ಯುತ್ ದೂರುಗಳನ್ನು ಕೂಡಲೇ ಬಗೆಹರಿಸಲು ಅನುವು ಮಾಡಿಕೊಡುತ್ತದೆ. ಈ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಪ್ರತ್ಯೇಕ ‘ಪೋರ್ಟಲ್’ ಅನ್ನು ಸ್ಥಾಪಿಸಲಾಗಿದ್ದು, ವಿದ್ಯುತ್ ಇಲಾಖೆಯ ಇಂಜಿನೀಯರ್ ಗಳು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯುತ್ ಕಂಬದ ಮೇಲಿನ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ವಿದ್ಯುತ್ ಇಲಾಖೆಗೆ ಆ ಸ್ಥಳದ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ, ಕುಂಭ ಮೇಳದ ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿದೆ ಎಂಬುದನ್ನು ನಿಖರವಾಗಿ ತಿಳಿಯಲು ಸುಲಭವಾಗುತ್ತದೆ.

ವಿದ್ಯುತ್ ಸಂಪರ್ಕ ಕಲ್ಪಿಸುವ ನೌಕರರಿಂದ ಅಕ್ರಮ ಹಣ ಬೇಡಿಕೆ!

ಅಖಾಡಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೆಲವು ನೌಕರರು ಹಣ ಕೇಳುತ್ತಿದ್ದಾರೆಂದು ಆಖಾಡಾಗಳಿಂದ ಸನಾತನ ಪ್ರಭಾತಕ್ಕೆ ತಿಳಿದು ಬಂತು. ಈ ಬಗ್ಗೆ ಗುಪ್ತಾ ಅವರಿಗೆ ಕೇಳಿದಾಗ, “ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸುತ್ತಿರುವ ಕೆಲ ಗುತ್ತಿಗೆ ಕಾರ್ಮಿಕರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ” ಎಂದು ಹೇಳಿದರು. ಇದು ಅನಧಿಕೃತವಾಗಿದೆ. ಈ ಬಗ್ಗೆ ನಮಗೆ ಕೆಲವು ದೂರುಗಳು ಸಹ ಬಂದಿವೆ. ಈ ಸಂಬಂಧ ಸಾಕ್ಷ್ಯಗಳನ್ನು ಸಲ್ಲಿಸುವಂತೆ ಅಖಾಡಗಳ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು‌.