ಸದ್ಯದ ದಿಶಾಹೀನ ಸಮಾಜದಲ್ಲಿ ಯೋಗ್ಯ ಅಭ್ಯಾಸಗಳು ಮೈಗೂಡಲು ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು ಆವಶ್ಯಕ !

ವಕೀಲೆ ಪ್ರೀತಿ ಪಾಟೀಲ

‘ಜನರಿಂದ, ಜನರಿಗಾಗಿ, ಜನರ ಸರಕಾರ, ಅಂದರೆ ಪ್ರಜಾಪ್ರಭುತ್ವ’, ಈ ವ್ಯಾಖ್ಯೆಯನ್ನು ಅಮೇರಿಕಾದ ಹಿಂದಿನ ರಾಷ್ಟ್ರಾಧ್ಯಕ್ಷ ಅಬ್ರಾಹಮ್ ಲಿಂಕನ್ ಇವರು ೧೮೬೩ ರಲ್ಲಿ ಮಾಡಿದ್ದರು. ಇಂದು ಈ ಪ್ರಜಾಪ್ರಭುತ್ವದ ಸ್ವರೂಪವನ್ನು ನೋಡಿದರೆ, ‘ಜನರಿಂದ ಜನರಿಗಾಗಿರುವ ರಾಜ್ಯ ಇದೇನಾ ?’, ಎಂಬ ಪ್ರಶ್ನೆ ಎದುರಾಗುತ್ತದೆ. 

೧. ಮಾನಸಿಕ ಸ್ತರದಲ್ಲಿ ಮಾಡಿದ ನಿಯಮಗಳ ಪರಿಣಾಮ ತಾತ್ಕಾಲಿಕವಾಗಿರುತ್ತದೆ

ಸಾಮಾಜಿಕ ಅನ್ಯೋನ್ಯತೆಯನ್ನು ಕಾಪಾಡಲು ಕೆಲವು ನಿಯಮಗಳು ಆವಶ್ಯಕವಾಗಿರುತ್ತವೆ. ನಿಯಮಗಳನ್ನು ಮಾಡುವವರು ಮಾನಸಿಕ ಸ್ತರದಲ್ಲಿ ವಿಚಾರ ಮಾಡಿ ನಿಯಮಗಳನ್ನು ಮಾಡಿದರೆ, ಅವುಗಳ ಪರಿಣಾಮ ತಾತ್ಕಾಲಿಕವಾಗಿರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಂದಿನವರೆಗೆ ಅನೇಕ ಸಮಸ್ಯೆಗಳು ಉದ್ಭವವಾದವು. ಅವುಗಳನ್ನು ನಿವಾರಿಸಲು ವಿವಿಧ ಕಾನೂನುಗಳನ್ನು ರೂಪಿಸಲಾಯಿತು. ಇದರಲ್ಲಿನ ಕೆಲವು ಕಾನೂನುಗಳಿಂದ ಸಮಾಜದ ಮೇಲೆಯೇ ದುಷ್ಪರಿಣಾಮವಾಗತೊಡಗಿತು, ಉದಾ. ಮಹಿಳೆಯರ ಮೇಲಾಗುವ ಕೌಟುಂಬಿಕ ಅತ್ಯಾಚಾರಗಳ ವಿರುದ್ಧ ‘ಕೌಟುಂಬಿಕ ಹಿಂಸಾಚಾರ ವಿರೋಧಿ ಕಾನೂನ’ನ್ನು ೨೦೦೫ ರಲ್ಲಿ ಮಾಡಲಾಯಿತು. ಈ ಕಾನೂನಿಗನುಸಾರ ಪೀಡಿತ ಮಹಿಳೆ ತನ್ನ ಮಾವನ ಮನೆಯಲ್ಲಿನ ಎಲ್ಲ ವ್ಯಕ್ತಿಗಳ ವಿರುದ್ಧ ದೂರು ನೀಡಬಹುದಾಗಿತ್ತು. ಇದರಿಂದ ಮಾವನ ಮನೆಯಲ್ಲಿನ ಯಾವ ವ್ಯಕ್ತಿ ಅಪರಾಧದಲ್ಲಿ ಸಹಭಾಗಿ ಇಲ್ಲವೋ, ಆ ವ್ಯಕ್ತಿಯ ವಿರುದ್ಧವೂ ದೂರನ್ನು ದಾಖಲಿಸಲಾಗುತ್ತಿತ್ತು. ಕಾಲಾಂತರದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಇಂತಹ ಕೆಲವು ಪ್ರಕರಣಗಳು ಹೋದವು. ಅನಂತರ ಕಾನೂನಿನಲ್ಲಿ ಕೆಲವು ಬದಲಾಣೆಗಳನ್ನು ಮಾಡಲಾಯಿತು.

೨. ಆಧ್ಯಾತ್ಮಿಕ ಜ್ಞಾನದ ಅಡಿಪಾಯವಿರುವ ನ್ಯಾಯಾಧೀಶರಿಂದ ನಿಷ್ಪಕ್ಷ ನಿರ್ಣಯ ಸಾಧ್ಯ

ಹಿಂದಿನ ಕಾಲದಲ್ಲಿ ಧರ್ಮಸಂಸತ್ತಿರುತ್ತಿತ್ತು. ಯಾವುದಾದರೊಂದು ವಿಷಯದ ಮೇಲೆ ಭಿನ್ನಾಭಿಪ್ರಾಯ ಉಂಟಾದರೆ ಯೋಗ್ಯ ಯಾವುದು ? ಧರ್ಮ ಏನು ಹೇಳುತ್ತದೆ ? ಪ್ರಸ್ತುತ ಪರಿಸ್ಥಿತಿ ಹೇಗಿದೆ ? ಇತ್ಯಾದಿ ವಿಷಯಗಳ ಚರ್ಚೆಯನ್ನು ಮಾಡಿ ನಿರ್ಣಯವನ್ನು ಕೊಡಲಾಗುತ್ತಿತ್ತು. ಆ ಸಮಯದಲ್ಲಿ ನಿರ್ಣಯಗಳನ್ನು ಕೊಡುವವರು ಆಧ್ಯಾತ್ಮಿಕ ಜ್ಞಾನವಿರುವವರಾಗಿರುತ್ತಿದ್ದರು. ಆದ್ದರಿಂದ ಅವರು ನೀಡಿದ ನಿರ್ಣಯದಿಂದ ಯಾವುದೇ ದುಷ್ಪರಿಣಾಮವಾಗುತ್ತಿರಲಿಲ್ಲ. ಆದ್ದರಿಂದ ನ್ಯಾಯ ನೀಡುವವರು ಯೋಗ್ಯ ನಿರ್ಣಯದ ವರೆಗೆ ಬರಬೇಕಾಗಿದ್ದರೆ, ಅವರು ಆಧ್ಯಾತ್ಮಿಕ ಸ್ತರದ ಉಚ್ಚಮಟ್ಟವನ್ನು ಸಾಧಿಸಿರಬೇಕು. ಆಧ್ಯಾತ್ಮಿಕ ಜ್ಞಾನವಿದ್ದರೆ ಮಾತ್ರ ವ್ಯಕ್ತಿ ತನ್ನಲ್ಲಿನ ಸ್ವಾರ್ಥ, ದೋಷ ಮತ್ತು ಅಹಂಕಾರವನ್ನು ಬದಿಗಿಟ್ಟು ತತ್ವನಿಷ್ಠೆಯಿಂದ ಯೋಗ್ಯ ನಿರ್ಣಯವನ್ನು ಕೊಡಬಹುದು. ಇಂತಹ ನಿರ್ಣಯಗಳೇ ಸಮಾಜದಲ್ಲಿ ಶಿಸ್ತನ್ನು ನಿರ್ಮಿಸಬಹುದು. ಕೇವಲ ಮೇಲುಮೇಲಿನ ಉಪಾಯಗಳನ್ನು ಮಾಡಿದರೆ ಅಡಚಣೆಗಳ ನಿವಾರಣೆ ಆಗುವುದಿಲ್ಲ. ತದ್ವಿರುದ್ಧ ಇಂತಹ ನಿರ್ಣಯಗಳಿಂದ ಮುಂದೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

೩. ಕಾನೂನುಗಳ ದುರುಪಯೋಗದಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುವುದು

ಭಾರತವು ಕೃಷಿಪ್ರಧಾನ ದೇಶವಾಗಿದ್ದು ಅದರ ಕೇಂದ್ರ ಬಿಂದು ರೈತನಾಗಿದ್ದಾನೆ. ರೈತರನ್ನು ಸಾಹುಕಾರರ (ಮಾಲಿಕರ) ಹಿಡಿತದಿಂದ ಮುಕ್ತಗೊಳಿಸಲು ಸಹಕಾರ ಸಂಸ್ಥೆಗಳ ಉಗಮವಾಯಿತು. ಅನಂತರ ೧೯೦೪ ರಲ್ಲಿ ಮೊತ್ತಮೊದಲು ಸಹಕಾರ ಕಾನೂನು ಅಸ್ತಿತ್ವಕ್ಕೆ ಬಂದಿತು. ಸಹಕಾರ ಚಳುವಳಿಯಿಂದ ಸಾಮಾಜಿಕ ಸಂಬಂಧ ಕಾಪಾಡಬೇಕೆಂದು ಅನೇಕ ನಿಯಮಗಳನ್ನು ಮಾಡಲಾಯಿತು. ಕಾಲ ಕಳೆದಂತೆ ಈ ಕಾನೂನುಗಳಿಂದಲೂ ದುಷ್ಪರಿಣಾಮಗಳ ಅರಿವಾಗತೊಡಗಿತು. ಇತ್ತೀಚೆಗೆ ಇದರ ಒಂದು ಉದಾಹರಣೆ ನೋಡಲು ಸಿಕ್ಕಿತು.

ಮಲಾಡ್‌ನಲ್ಲಿ (ಮುಂಬಯಿ) ಒಂದು ಸಹಕಾರಿ ಗೃಹ ನಿರ್ಮಾಣ ಸಂಸ್ಥೆಯಲ್ಲಿನ (ಹೌಸಿಂಗ ಸೋಸಾಯಿಟಿ) ಓರ್ವ ಸದಸ್ಯರು ಮದ್ಯಪಾನ ಮಾಡಿ ಬಲವಂತದಿಂದ ಅಧ್ಯಕ್ಷರ ಮನೆಗೆ ನುಗ್ಗಿದರು. ಆಗ ಅಧ್ಯಕ್ಷರ ಪತ್ನಿ ಮತ್ತು ಚಿಕ್ಕ ಮಗ ಮಾತ್ರ ಮನೆಯಲ್ಲಿದ್ದರು. ಆಗ ಅಕ್ಕಪಕ್ಕದವರು ತಕ್ಷಣ ಹಸ್ತಕ್ಷೇಪ ಮಾಡಿದರು. ಅದರಿಂದ ಯಾವುದೇ ಅನುಚಿತ ಘಟನೆಗಳಾಲಿಲ್ಲ; ಆದರೆ ಈ ಘಟನೆಯನ್ನು ಸಹಕಾರಿ ಗೃಹ ನಿರ್ಮಾಣ ಸಂಸ್ಥೆಯು (ಹೌಸಿಂಗ ಸೋಸಾಯಿಟಿಯು) ಕಠೋರವಾಗಿ ವಿರೋಧಿಸಿತು. ಕೊನೆಗೆ ಅವರ ಸಾಮಾನ್ಯ ಸಭೆಯಲ್ಲಿ ಸಂಬಂಧಪಟ್ಟ ಸದಸ್ಯರ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು. ಅನಂತರ ನಿರ್ಣಯದ ಪ್ರತಿಯನ್ನು ಸಂಸ್ಥೆಯ ಎಲ್ಲ ಸದಸ್ಯರಿಗೆ ಕಳುಹಿಸಲಾಯಿತು. ಅದೇ ರೀತಿ ಈ ಪ್ರತಿಯನ್ನು ಸಂಸ್ಥೆಯ ಸೂಚನೆಯ ಫಲಕದ ಮೇಲೆಯೂ ಹಾಕಲಾಯಿತು. ಈ ಸಂಸ್ಥೆಯು ಇಷ್ಟಕ್ಕೆ ನಿಲ್ಲದೆ ಈ ಠರಾವಿನ ಪ್ರತಿಯನ್ನು ಸ್ಥಳೀಯ ವರ್ತಮಾನ ಪತ್ರಿಕೆಗಳಲ್ಲಿ ಪ್ರಸಿದ್ಧಪಡಿಸಿತು. ಇದರಿಂದ ತನ್ನ ಮಾನಹಾನಿಯಾಗಿದೆ ಎಂದು ಸಂಬಂಧಪಟ್ಟ ಮಧ್ಯಪಿ ಸದಸ್ಯರು ನ್ಯಾಯಾಲಯಕ್ಕೆ ಹೋದರು. ಈ ಖಟ್ಲೆಯ ನಿರ್ಣಯ ಗೃಹನಿರ್ಮಾಣ ಸಂಸ್ಥೆಯ ಪರವಾಗಿ ಬಂದಿತು, ಆದರೆ ಇದರಿಂದ ಎರಡೂ ಪಕ್ಷಕಾರರಿಗೆ ಮನಸ್ತಾಪ ಸಹಿಸಬೇಕಾಯಿತು.

ಸಹಕಾರಿ ಗೃಹನಿರ್ಮಾಣ ಸಂಸ್ಥೆಯ ಚಟುವಟಿಕೆಗಳು ಆ ಸಂಸ್ಥೆಯ ನಿಯಮಗಳಿಗನುಸಾರ ನಡೆಯುತ್ತವೆ. ಅದರಲ್ಲಿ ಯಾವುದಾದರೊಬ್ಬ ಸದಸ್ಯನು ನಿರ್ವಹಣೆಯ (ಮೆಂಟೇನನ್ಸ) ಹಣವನ್ನು ತುಂಬದಿದ್ದರೆ ಅಥವಾ ಯಾವುದಾದರೊಬ್ಬ ಸದಸ್ಯನು ಅಯೋಗ್ಯ ವರ್ತನೆಯನ್ನು ಮಾಡುತ್ತಿದ್ದರೆ, ಸಂಬಂಧ ಪಟ್ಟ ಸದಸ್ಯನ ವಿರುದ್ಧ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಠರಾವ್ ಮಂಡಿಸಲಾಗುತ್ತದೆ ಮತ್ತು ಅದಕ್ಕೆ ಬಹುಮತದಿಂದ ಮನ್ನಣೆಯನ್ನು ಪಡೆದು ಯೋಗ್ಯ ಕ್ರಮವನ್ನು ತೆಗೆದು ಕೊಳ್ಳಲಾಗುತ್ತದೆ. ಈ ಠರಾವಿನ ವಿರುದ್ಧ ಸಂಬಂಧಪಟ್ಟ ಸದಸ್ಯರು ಸಹಕಾರ ಕ್ಷೇತ್ರದಲ್ಲಿನ ಅಧಿಕಾರಿ, ಅಂದರೆ ಉಪನಿಬಂಧಕ ಅಥವಾ ಅದಕ್ಕಿಂತ ಮೇಲಿನ ಅಧಿಕಾರಿಗಳಲ್ಲಿ ನ್ಯಾಯವನ್ನು ಕೇಳಬಹುದು. ಹೀಗಿರುವಾಗ ಈ ಸದಸ್ಯರು ಮಾನಹಾನಿಯ ವಿರುದ್ಧ ನ್ಯಾಯಾಲಯಕ್ಕೆ ಹೋದರು. ಮೂಲತಃ ತಾನು ಮದ್ಯಪಾನ ಮಾಡಿ ಇತರ ಕುಟುಂಬದವರ ಮನೆಯೊಳಗೆ ಪ್ರವೇಶ ಮಾಡಿದೆನು, ಎಂಬುದರ ಖೇದ (ಕೆಡಕು) ಅವರಲ್ಲಿರಲಿಲ್ಲ ಮತ್ತು ಎದುರಿನ ವ್ಯಕ್ತಿ ತಪ್ಪು ಮಾಡಿದನೆಂದು ಅವನ ದುಷ್ಕೃತ್ಯವನ್ನು ವರ್ತಮಾನಪತ್ರಿಕೆಗಳಲ್ಲಿ ಮುದ್ರಿಸುವ ವಿಚಾರ ಮಾಡುವ ಸಂಬಂಧಪಟ್ಟ ಪದಾಧಿಕಾರಿಗಳ ಕೃತಿಯೂ ಅಯೋಗ್ಯವಾಗಿತ್ತು. ದೋಷಗಳ ವಶವಾಗಿರುವವರು ನ್ಯಾಯಾಲಯಕ್ಕೆ ಹೋದುದರಿಂದ ನ್ಯಾಯವ್ಯವಸ್ಥೆಯ ಮಹತ್ವಪೂರ್ಣ ಸಮಯವನ್ನು ಈ ವಿಷಯಕ್ಕಾಗಿ ಕೊಡಬೇಕಾಯಿತು. ಮದ್ಯಪಾನ ಮಾಡಿದ ಸದಸ್ಯರ ಕೃತ್ಯವನ್ನು ದಿನಪತ್ರಿಕೆಗಳಲ್ಲಿ ಮುದ್ರಿಸುವುದು ತಪ್ಪಾಗಿದೆ ಎಂಬುದನ್ನು ನ್ಯಾಯಾಲಯ ಆ ಪದಾಧಿಕಾರಿಗಳಿಗೆ ಅರಿವು ಮಾಡಿಕೊಡಬೇಕಾಯಿತು. ಇಲ್ಲಿ ಮಹತ್ವದ ವಿಷಯವೆಂದರೆ, ಯಾರಿಗೂ ನೈತಿಕತೆಯ ಗೊಡವೆಯಿಲ್ಲ. ‘ನನಗೆ ಏನಿಸುತ್ತದೆಯೊ, ಅದನ್ನು ನಾನು ಮಾಡುವೆನು’, ಎಂಬ ಸ್ವೇಚ್ಛಾಚಾರೀ ವೃತ್ತಿಯಿಂದ ಇಂತಹ ಘಟನೆಗಳು ಆಗಾಗ ಘಟಿಸುವುದು ಕಾಣಿಸುತ್ತದೆ.

೪. ಹಿಂದೂ ಧರ್ಮದ ಕಲಿಕೆಯನ್ನು ಮರೆತಿರುವುದರಿಂದ ದಿಶಾಹೀನವಾಗಿರುವ ಸಮಾಜ

ಭಾರತವನ್ನು ಜಾತ್ಯತೀತ (ಧರ್ಮನಿರಪೇಕ್ಷ) ದೇಶವೆಂದು ಘೋಷಿಸಲಾಗಿದೆ. ಆದ್ದರಿಂದ ಹಿಂದೂ ಧರ್ಮದ ಕಲಿಕೆಯನ್ನು ಮರೆಯುತ್ತಾ ಹೋಗುತ್ತಿರುವ ಹಿಂದೂ ಸಮಾಜ ದಿಶಾಹೀನವಾಗುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಷಡ್ರಿಪುಗಳನ್ನು ಹೇಗೆ ನಿಯಂತ್ರಿಸಬೇಕು, ಎಂಬುದನ್ನು ಇಂದು ಯಾರೂ ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ. ‘ಅಧ್ಯಾತ್ಮವು ಮುಪ್ಪಿನಲ್ಲಿ ಸಮಯ ಕಳೆಯುವ ಸಾಧನವಾಗಿದೆ’, ಎಂಬ ವಿಚಾರ ಮಾಡದೆ ದೈನಂದಿನ ಜೀವನವನ್ನು ಆನಂದದಾಯಕವನ್ನಾಗಿ ಮಾಡುವ ಪ್ರಕ್ರಿಯೆ ಎಂಬ ದೃಷ್ಟಿಕೋನವನ್ನಿಟ್ಟು ಇಂದಿನಿಂದಲೆ ಪ್ರಯತ್ನ ಮಾಡಿದರೆ, ಸಮಾಧಾನದ ವೃತ್ತಿ ಹೆಚ್ಚಾಗಲು ನಿಶ್ಚಿತವಾಗಿ ಸಹಾಯವಾಗುವುದು. ಹೀಗಾದರೆ ಶೀಘ್ರದಲ್ಲಿಯೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬಹುದು.’

– ವಕೀಲೆ ಪ್ರೀತಿ ಪಾಟೀಲ, ಸಾಂಗ್ಲಿ (೧೫.೧೧.೨೦೨೨)