ಪಾಕಿಸ್ತಾನದಲ್ಲಿ ತರಕಾರಿ ಖರೀದಿಸಲು ಹಣವಿಲ್ಲ!

ಕರಾಚಿ – ಪಾಕಿಸ್ತಾನ ಸರಕಾರವು ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ‘ದೇಶವನ್ನು ಕಾಡುತ್ತಿರುವ ಆಹಾರಪೂರೈಕೆ ಸಮಸ್ಯೆಯನ್ನು ಪರಿಹರಿಸುವುದೋ ಅಥವಾ ವಿದೇಶಿ ವಿನಿಮಯ ಮೀಸಲು ಉಳಿಸುವುದೋ ಎಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಆದ್ದರಿಂದ, ತರಕಾರಿ ತುಂಬಿದ ನೂರಾರು ಕಂಟೈನರ್‌ಗಳು ಕರಾಚಿ ಬಂದರಿನಲ್ಲಿ ಬಿದ್ದಿವೆ.

ಪಾಕಿಸ್ತಾನದ ‘ದಿ ಎಕ್ಸ್‌ಪ್ರೆಸ ಟ್ರಿಬ್ಯೂನ’ ವರದಿಯ ಪ್ರಕಾರ, 1 ಕೋಟಿ 70 ಲಕ್ಷ ಡಾಲರ್ (380 ಕೋಟಿ 80 ಲಕ್ಷದ 44 ಸಾವಿರ ಪಾಕಿಸ್ತಾನಿ ರೂಪಾಯಿಗಳು)ಮೌಲ್ಯದ ಈರುಳ್ಳಿಯ 250 ಕಂಟೈನರ್ ಗಳು, 8 ಲಕ್ಷ  16 ಸಾವಿರ ಡಾಲರ್ (18 ಕೋಟಿ 27ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ರೂಪಾಯಿಗಳು) ಮೌಲ್ಯದ ಶುಂಠಿ  ಮತ್ತು 25 ಲಕ್ಷ ಡಾಲರ್ (56 ಕೋಟಿ ರೂಪಾಯಿಗಳು) ಮೌಲ್ಯದ ಬೆಳ್ಳುಳ್ಳಿ ತುಂಬಿದ ಕಂಟೈನರ್‌ಗಳು ಬಂದರಿನಲ್ಲಿ ಬಿದ್ದಿವೆ. ಅಲ್ಲದೆ 6 ಲಕ್ಷ ಟನ್ ಸೋಯಾಬೀನ್ ಕೂಡ ಸಿಲುಕಿಕೊಂಡಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದಾಗಿ ದೇಶದ ಬ್ಯಾಂಕುಗಳು ಸಾಲದ ಪತ್ರಗಳನ್ನು (ಲೆಟರ್ ಆಫ್ ಕ್ರೆಡಿಟ್) ನೀಡಲು ಸಾಧ್ಯವಿಲ್ಲ. ಹಾಗಾಗಿ ತರಕಾರಿ ತುಂಬಿದ ಕಂಟೈನರ್ ಗಳು ಹಾಗೆಯೇ ಬಿದ್ದಿವೆ.

‘ಪಾಕಿಸ್ತಾನದ ಫ್ರೂಟ್ ಅಂಡ್ ವೆಜಿಟೇಬಲ್ ಎಕ್ಸ್ಪೋರ್ಟರ್ಸ್ ಇಂಪೋರ್ಟರ್ಸ್ ಆಂಡ್ ಮರ್ಚಂಟ್ ಅಸೋಸಿಯೇಶನ್’ ನ ಸದಸ್ಯ ವಾಹೀನ ಅಹ್ಮದ ಅವರ ಪ್ರಕಾರ, ಸಾಲ ಪತ್ರ (ಲೆಟರ್ ಆಫ್ ಕ್ರೆಡಿಟ್) ನೀಡಲು ವಿಳಂಬವಾಗಿರುವುದರಿಂದ ತರಕಾರಿಗಳ ಬೆಲೆಯ ಮೇಲೆ ಪರಿಣಾಮವಾಗುತ್ತಿದೆ.

ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ಕಿಲೋಗೆ 175 ರೂ., ಚಿಲ್ಲರೆ ಮಾರುಕಟ್ಟೆಯಲ್ಲಿ ಕಿಲೋಗೆ 250 ರಿಂದ 300 ರೂ.ಗೆ ಮಾರಾಟವಾಗುತ್ತಿದೆ. ‘ಫೆಡರೇಶನ್ ಆಫ್ ಪಾಕಿಸ್ತಾನ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರ’ ಯ ಹಂಗಾಮಿ ಅಧ್ಯಕ್ಷ ಸುಲೇಮಾನ ಚಾವ್ಲಾ ಅವರು ‘ತರಕಾರಿಗಳು ಕೂಡ ಸಾಮಾನ್ಯ ಜನರಿಗೆ ಎಟುಕದಂತಾಗುವುದು’ ಎಂಬ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.